ಕನ್ನಡ ನಮ್ಮ ಜೀವನದ ಉಸಿರಾಗಬೇಕು. ಬೇರೆ ಭಾಷೆಗಳನ್ನು ಬದುಕಿಗಾಗಿ ಕಲಿತರೂ ನಾವು ಎಂದಿಗೂ ಕನ್ನಡತನವನ್ನು ಬಿಡಬಾರದು ಎಂದು ಸಾಹಿತಿ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯ ರಾಮಕುಮಾರ್ ಕರೆ ನೀಡಿದರು.
ಕೆ.ಆರ್.ನಗರದ ಸರ್ಕಾರಿ ಬಾಲಕಿಯರ ಕಿರಿಯ ಕಾಲೇಜಿನಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಕಾಯಕ ವರ್ಷದ ಸಮಾರೋಪ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಪ್ರೌಢಶಾಲಾ ಮಕ್ಕಳ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು, ಕನ್ನಡ ನಾಡು-ನುಡಿ ಬಹು ಪ್ರಾಚೀನವಾದುದು. ಇಂತಹ ಮಹತ್ವದ ಭಾಷೆಯನ್ನು ಬಳಸಿ, ಉಳಿಸಿ,ಬೆಳೆಸಬೇಕಾದ್ದು ಎಲ್ಲ ಕನ್ನಡಿಗರ ಕರ್ತವ್ಯ.ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕು.ಕನ್ನಡೇತರರಿಗೆ ಕನ್ನಡ ಕಲಿಸಬೇಕು.
ಕನ್ನಡದಲ್ಲೇ ಸಹಿ ಹಾಕಬೇಕು. ಕನ್ನಡ ಪುಸ್ತಕಗಳನ್ನು ಹಾಗೂ ಕನ್ನಡ ಪತ್ರಿಕೆಗಳನ್ನು ಓದಬೇಕು. ಕನ್ನಡ ಚಲನಚಿತ್ರ ಗಳನ್ನೇ ನೋಡಬೇಕು. ಕನ್ನಡ ಗೀತೆಗಳನ್ನೇ ಹಾಡಬೇಕು. ಕನ್ನಡದಲ್ಲೇ ದಿನನಿತ್ಯದ ವ್ಯವಹಾರಗಳನ್ನು ಮಾಡಬೇಕು. ವಿದೇಶ ಪ್ರವಾಸ ಮಾಡುವ ಬದಲು ಕನ್ನಡನಾಡಿನ ಪ್ರಸಿದ್ದ ಪ್ರವಾಸಿ ಕ್ಷೇತ್ರಗಳಿಗೆ ಪ್ರವಾಸ ಮಾಡಬೇಕು. ಕನ್ನಡ ನಾಡು-ನುಡಿ ಉಳಿಸಿ ಮುಂದಿನ ತಲೆಮಾರಿಗೂ ನಮ್ಮ ಕೊಡುಗೆ ಯಾಗಿ ನೀಡಬೇಕು ಎಂದು ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ಅವರು ಮಾತನಾಡಿ, ಕನ್ನಡ ಭಾಷೆ ಹೆತ್ತ ತಾಯಿಯಿದ್ದಂತೆ. ಮಕ್ಕಳು ತಾಯಿಯ ಮೇಲೆ ತೋರಿಸುವ ಮಮತೆಯನ್ನು ಕನ್ನಡದ ಬಗ್ಗೆಯೂ ತೋರಿಸಬೇಕು.ಮನೆಯಲ್ಲಿ ಅನಕ್ಷರಸ್ಥ ರಿದ್ದರೆ ಅವರಿಗೆ ಕನ್ನಡ ಕಲಿಸಬೇಕು.ಅಕ್ಕಪಕ್ಕದಲ್ಲಿ ಬೇರೆ ಭಾಷೆ ಮಾತನಾಡುವ ಜನರಿದ್ದರೆ ಅವರಿಗೆ ಮಕ್ಕಳು ಕನ್ನಡ ಕಲಿಸಬೇಕು.ಹಿರಿಯ ಕವಿಗಳ ಕೃತಿಗಳನ್ನು ಓದಬೇಕು.
ಉದ್ಯೋಗಕ್ಕಾಗಿ,ಬದುಕಿಗಾಗಿ ಅನ್ಯ ಭಾಷೆಗಳನ್ನು ಕಲಿತರೂ ಕನ್ನಡ ಭಾಷೆಗೇ ಪ್ರಥಮ ಆದ್ಯತೆ ನೀಡಬೇಕೆಂದು ಕರೆ ನೀಡಿದರು.ಶಿಕ್ಷಣ ಸಂಯೋಜಕರಾದ ಭರತೇಶ್,ವಿವಿಧ ಶಾಲೆಗಳ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಉಪಪ್ರಿನ್ಸಿಪಾಲರಾದ ಚಂದ್ರಶೇಖರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸುಬ್ಬಶೆಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ಶಂಕರೇಗೌಡ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ್ ವಂದಿಸಿದರು.
ಕೆ.ಆರ್.ನಗರ ತಾಲ್ಲೂಕಿನ ಹತ್ತು ವಿವಿಧ ಪ್ರೌಢ ಶಾಲೆಗಳ ಸುಮಾರು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.