ಬೆಂಗಳೂರು- ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್ ನಿಜಲಿಂಗಪ್ಪ ಹಾಗೂ ಕೆಂಗಲ್ ಹನುಮಂತಯ್ಯನವರ ಜೀವನ-ಬದುಕು ಹಾಗೂ ಅವರ ಸಾಧನೆಗಳನ್ನು ರಾಜ್ಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ರೈಲ್ವೇ ಖಾತೆ ಹಾಗೂ ಜಲ ಶಕ್ತಿ ಖಾತೆ ಸಚಿವ ವಿ ಸೋಮಣ್ಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸ್ವಾತಂತ್ರ್ಯ ಚಳವಳಿಯಲ್ಲದೆ ಕರ್ನಾಟಕದ ಏಕೀಕರಣದಲ್ಲೂ ಈ ಇಬ್ಬರು ಮಹನೀಯರು ಮಹತ್ತರ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿಗಳಾಗಿ ಈರ್ವರೂ ರಾಜ್ಯದ ಅಭಿವೃದ್ಧಿಗೆ ನೀಡಿರುವ ಹತ್ತಾರು ಜನಪರ ಯೋಜನೆಗಳು ಅನುಷ್ಠಾನಗೊಂಡಿವೆ.ನಾಡಿನ ಬಗ್ಗೆ ಅವರಿಗಿದ್ದ ದೂರದೃಷ್ಟಿಯ ಫಲವಾಗಿ ಇಂದು ಕರ್ನಾಟಕ ಸಮೃದ್ಧಿಯ ನಾಡಾಗಿ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ಕಾರಣ ಇವರನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳಲು ಮೂರು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಎಸ್ ನಿಜಲಿಂಗಪ್ಪ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕುರಿತ ಪರಿಚಯವಾಗಬೇಕು, ಇಬ್ಬರೂ ಮಹನೀಯರ ಜನ್ಮ ದಿನವನ್ನು ರಾಜ್ಯ ಸರ್ಕಾರ ಆಚರಿಸಬೇಕು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಿಜಲಿಂಗಪ್ಪ ಅವರ ಅಧ್ಯಯನ ಪೀಠ ತೆರೆಯಬೇಕು ಎಂದು ಆಗ್ರಹಿಸಿ ಸೋಮಣ್ಣ ಅವರು ಪತ್ರ ಬರೆದಿದ್ದಾರೆ