ಗಜಲ್ ಗಳು

0
1271

ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ

ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ

ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು
ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ

ಬದುಕು ಅತಂತ್ರಾಗಿ ಎದ್ದು ಬಿದ್ದು ಇನ ಪಾಜಿಗಟ್ಟಿ ಮುಟ್ಟುದೈತಿ
ಕತ್ತು ಹಿಡದು ಬೀದಿಗಿ ನೂಕಿದಮ್ಯಾಲ ಬದುಕಾಕೆಲ್ಲೈತಿ ಜಾಗ

ಬದುಕಿನ ಆಟಕ್ಕ ತೆರಿ ಬೀಳುತನಕ ಬಣ್ಣ ಹಚ್ಚಿ ಜೀವ ತುಂಬುತೀನಿ ಖರೆ
ಬಣ್ಣ ತೊಳಕೊಳ್ಳಾಕೂ ನಿನ್ನ ಅಪ್ಪಣಿ ಸಿಕ್ಕಿಲಂದಮ್ಯಾಲ ಸಾಯಾಕೆಲ್ಲೈತಿ ಜಾಗ

ಪರದೇಸಿ ಅಳು ಅರಣ್ಯರೋಧನ ಆಗೈತಿ ಕೇಳುವರಿಲ್ಲ ತಂದೆ
ಸಾಕಿ ಸಲುಹಿದ ಕೈ ಕೆಟ್ಟಾದಮ್ಯಾಲ ಸೊಗಸಿಗೆಲ್ಲೈತಿ ಜಾಗ

ಏಸು ದಿವಸ ಇದ್ದೀತು ಹಣ್ಣಾದ ಎಲಿ ಮಣ್ಣಾಗಬೇಕಂತೈತಿ
ಈ ಬೇವಾರ್ಸಿಗಿನ್ನೂ ಬುಲಾವ್ ಬಂದಿಲ್ಲಂದಮ್ಯಾಲ ಕಬ್ರಿಗೆಲ್ಲೈತಿ ಜಾಗ

ಯಾರಿಗ್ಯಾರೂ ಇಲ್ಲ ನಿನ್ನಾಟಕ್ಕ ಕೊನಿನ ಇಲ್ಲೇನೊ ಜೀಯಾ
ಅರುಣಾ ನಿನ್ನ ಪಾದ ಗಟ್ಟಿ ಹಿಡಿದಮ್ಯಾಲ ಹುಟ್ಟಿಗೆಲ್ಲೈತಿ ಜಾಗ

ಅರುಣಾ ನರೇಂದ್ರ


ಗಜಲ್

ಗಾಜಿನ ಮನೆಯಲ್ಲಿದ್ದು ಕಲ್ಲು ಒಗೆಯುವುದು ತರವಲ್ಲ
ತನ್ನತನ ತಿಳಿಯದೆ ಪರರ ದೂಷಿಸುವುದು ತರವಲ್ಲ.

ಕಣ್ಣು ಕಣ್ಣಲ್ಲಿ ಧೂಳಿದೆ ಒರೆಸಿಕೊಳ್ಳಬೇಕಿದೆ
ಕನ್ನಡಕವ ಒರೆಸುತ್ತ ದೂರುವುದು ತರವಲ್ಲ.

ಹಸ್ತದ ನಾಲ್ಕು ಬೆರಳುಗಳು ತನ್ನತ್ತಲೇ ತೋರಿಸುತ್ತವೆ
ತೋರು ಬೆರಳು ಮತ್ತೊಬ್ಬರ ಗುರಿಯಾಗಿಸುವುದು ತರವಲ್ಲ.

ಈ ಲೋಕದ ತುಂಬಾ ಬೇಕಾದಷ್ಟು ರೀತಿ ನೀತಿಗಳಿವೆ
ಒಂದಿನಿತು ಅನುಷ್ಠಾನಿಸದೆ ಉಪದೇಶಿಸುವುದು ತರವಲ್ಲ.

ಕಾಮಾಲೆ ಕಣ್ಣಿಗೆ ಯಾವಾಗಲೂ ಲೋಕ ಹಳದಿಯಾಗಿಹುದು
ಪೂರ್ವಾಗ್ರಹ ಕಿತ್ತೊಗೆಯದೆ ಉಪೇಕ್ಷಿಸುವುದು ತರವಲ್ಲ.

ಹೊರಗಿನ ಬೆಳಕನ್ನು ಬೆಳಕಾಗಿ ಕಂಡಿಹರು ಈ ಜಗದವರು
ಅರಿವು ಜ್ಯೋತಿ ಹೊತ್ತಿಸದೆ ಬೆಳಕೆನ್ನುವುದು ತರವಲ್ಲ.

ಅನಸೂಯ ಜಹಗೀರದಾರ
ಕೊಪ್ಪಳ.


ಗಜಲ್

ಕಾತರದಿಂದ ನೋಡುವ ಕಣ್ಗಳಿನ್ನೂ ತಣಿದಿಲ್ಲ ನೀ ಎದ್ದು ಹೋಗದಿರು
ಹೃದಯದ ಪಿಸುಮಾತು
ಇನ್ನೂ ಅರುಹಿಲ್ಲ ನೀ ಎದ್ದು ಹೋಗದಿರು.

ಹೋಗುವ ಅವಸರವಿಟ್ಟುಕೊಂಡು ನನ್ನ ಬಳಿ ಬರದಿರು
ಸುದೀರ್ಘ ಮಾತುಗಳಿನ್ನೂ ಮುಗಿದಿಲ್ಲ ನೀ ಎದ್ದು ಹೋಗದಿರು.

ಮೆಹಫಿಲ್ ಸಜ್ಜಾಗಿದೆ ರಂಗು ರಂಗಿನ ಗೋಡೆಗೆ ನಮ್ಮದೇ ಮಾತುಗಳಿವೆ
ಕನಸಿನ ಕತೆಯಿನ್ನೂ ಶುರುವಾಗಿಲ್ಲ ನೀ ಎದ್ದು ಹೋಗದಿರು.

ಮೊಂಬತ್ತಿ ಉರಿಯುತ್ತ ಸುತ್ತೆಲ್ಲ ಬೆಳಕು ಪಸರಿಸುತ್ತಿದೆ
ಪ್ರಣಯದ ಮೇಣವಿನ್ನೂ ಕರಗಿಲ್ಲ ನೀ ಎದ್ದು ಹೋಗದಿರು.

ಸಮಯದ ಬಂಧಿಯಾಗಿದ್ದಾರೆ ಈ ದುನಿಯಾದ ಜನರು
ನಮ್ಮಿಬ್ಬರ ಕ್ಷಣಗಳಿನ್ನೂ ಸಾಕಾರಗೊಂಡಿಲ್ಲ ನೀ ಎದ್ದು ಹೋಗದಿರು.

ನಿನ್ನೆಗಳು ಬೇಕಿಲ್ಲ ನಾಳೆಗಳ ಅರಿವಿಲ್ಲ ಇಂದು ಮಾತ್ರ ನಮ್ಮದು
ಪ್ರೀತಿಯ ಪಲಕುಗಳ ಮೆಲುಕಿನ್ನೂ ಹಾಕಿಲ್ಲ ನೀ ಎದ್ದು ಹೋಗದಿರು.

ಎಲ್ಲರೂ ಹೋಗುವರೆ ಒಂದಲ್ಲ ಒಂದು ದಿನ ಜಗದ ಸತ್ಯವದು
ಈ ಗಳಿಗೆ ಈ ಸಮಯವಿನ್ನೂ ಪೂರ್ಣಗೊಂಡಿಲ್ಲ ನೀ ಎದ್ದು ಹೋಗದ ಅದ.

ಅನಸೂಯ ಜಹಗೀರದಾರ
ಕೊಪ್ಪಳ.


ಗಜಲ್

ಹಳೆಯ ಆಕೃತಿಯೊಂದು ಧುತ್ತೆಂದು ಪ್ರತ್ಯಕ್ಷವಾಯಿತು ಮತ್ತೊಮ್ಮೆ
ಭೂಮಿ ದುಂಡಗಿದೆ ಎಂಬುದು ಸಾಬೀತಾಯಿತು ಮತ್ತೊಮ್ಮೆ.

ಸ್ಮೃತಿ ಪಟಲದ ಚಿತ್ರವೊಂದು ಮೂಡಿಬಂದಿತು ಮತ್ತೊಮ್ಮೆ
ಗತಕಾಲದ ನೆನಪೊಂದು ಎದುರುಗೊಂಡಿತು ಮತ್ತೊಮ್ಮೆ

ಘಟನೆಗಳು ತೊಯ್ಯಿಸಿದವು ಕಣ್ಣು ಒದ್ದೆಯಾದವು
ಹೀಗೊಂದು ಸಂದರ್ಭ ಕಣ್ತುಂಬಿಕೊಂಡಿತು ಮತ್ತೊಮ್ಮೆ.

ಪ್ರತಿಷ್ಠಾಪನೆಯ ಮೂರ್ತಿಯೊಂದು ಪೂಜೆ ಇಲ್ಲದೆ ಕಲ್ಲಾಗಿತ್ತು
ಒಲವು ಭಕ್ತಿಯ ಪರಾಕಾಷ್ಠೆಗೆ ಸಜ್ಜುಗೊಂಡಿತು ಮತ್ತೊಮ್ಮೆ.

ಎಲ್ಲಿಂದಲೋ ಹರಿದ ಶಬ್ದ ಕಂಪನದ ಅಲೆಗಳವು
ಹರಿದು ನರನಾಡಿಯನ್ನೆಲ್ಲ ಹುರಿಗೊಳಿಸಿತು ಮತ್ತೊಮ್ಮೆ.

ಕೂಡಿಟ್ಟ ಪ್ರಚ್ಛನ್ನ ಶಕ್ತಿಯದು ಜತನವಾಗಿದ್ದ ಪ್ರೇಮವದು
ಹೃದಯ ದ್ರವಿಸಿದ ಗುಪ್ತಗಸಮಿನಿ ಪ್ರಕಟಗೊಂಡಿತ್ತು ಮತ್ತೊಮ್ಮೆ.

ಅನಸೂಯ ಜಹಗೀರದಾರ
ಕೊಪ್ಪಳ.