spot_img
spot_img

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಸಾರಾಂಶ

Must Read

- Advertisement -

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ
ಎಳ್ಳು ಜೀರಿಗೆ ಬೆಳೆಯೋಳ
ಭೂ ತಾಯಿ ಎದ್ದೊಂದು ಘಳಿಗೆ ನೆನೆದೇನ

ಎನ್ನುತ್ತ ಪ್ರತಿ ಹೊಸ ದಿನದ ಬೆಳಗನ್ನು ಸ್ವಾಗತಿಸುವ ರೈತ ಮಹಿಳೆಯ ಬಗ್ಗೆ ಚಿಂತನೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಹಾಗೆ ನೋಡಿದರೆ ಕೃಷಿ ಕ್ಷೇತ್ರ ಮಹಿಳೆಯ ಸುತ್ತಲೂ ಗಿರಕಿ ಹೊಡೆಯುತ್ತದೆ. ಮಾರುಕಟ್ಟೆ ವ್ಯವಸ್ಥೆ,ಬಿತ್ತನೆ,ಬೀಜ,ರಸಗೊಬ್ಬರ ಬಿಟ್ಟು ಇನ್ನುಳಿದ ಎಲ್ಲ ಕಾರ್ಯಗಳಲ್ಲೂ ಆಕೆಯದ್ದೇ ಮೇಲುಗೈ. ಎಷ್ಟೆಲ್ಲ ಬೆವರಿಳಿಸಿದರೂ ಆಕೆ ತಾನು ರೈತ ಮಹಿಳೆಯೆಂದು ಹೇಳಿಕೊಳ್ಳುವ ಮಾನ್ಯತೆ ಇಂದಿಗೂ ದೊರೆತಿಲ್ಲವೆಂಬುದು ಗಮನಾರ್ಹ. ಜ್ಞಾನ ವಿಜ್ಞಾನ ತಂತ್ರಜಾನದಲ್ಲಿ ಜಗತ್ತು ಎಷ್ಟೇ ಸಾಧನೆ ಸಾಧಿಸಿದರೂ, ಇಡೀ ಜಗವೇ ನಮ್ಮ ತೋರು ಬೆರಳಿನಲ್ಲಿದ್ದರೂ, ಬೇಕಾಗಿರುವ ಮಾಹಿತಿಯೆಲ್ಲ ಕ್ಷಣಾರ್ಧದಲ್ಲಿ ಅಂಗೈ ಮೊಬೈಲಿನಲ್ಲೇ ದೊರೆಯುತ್ತಿದ್ದರೂ, ಹಸಿವು ನೀಗಿಸಲು ಅನ್ನವೇ ಬೇಕು. ಅದನ್ನು ಬೆಳೆಯಲು ಅನ್ನದಾತನೇ ಬೇಕು. ಹಸಿವು ನೀಗಿಸುವ ಆಹಾರವನ್ನು ಉತ್ಪತ್ತಿ ಮಾಡಲು ಕೃಷಿಕನಿಗೆ ಸಹಾಯ ಮಾಡುವ ಪತ್ನಿಯಾಗಿ ಇಲ್ಲವೇ ಸ್ವತಃ ತಾನೇ ಕೃಷಿಕ ಮಹಿಳೆಯಾಗಿ ಮಕ್ಕಳ ಲಾಲನೆ, ಪಾಲನೆ, ಅಡುಗೆ ಕಾರ್ಯ, ಕುಟುಂಬದ ನಿರ್ವಹಣೆ ಎಲ್ಲವೂ ಆಕೆಯ ಹೆಗಲ ಮೇಲೆ ಇದೆ ಎಂಬುದು ಸುಳ್ಳಲ್ಲ. ಕಷ್ಟನಷ್ಟದ ಸಮಯದಲ್ಲೂ ಇಡೀ ಕುಟುಂಬ ಆಕೆಯ ಮನೋಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಆಕೆ ಬೆವರಿಳಿಸುವ ಶ್ರಮ ಅನನ್ಯ. ತಾಂತ್ರಿಕತೆ ಬಳಸಿಕೊಂಡು ಕೃಷಿ ಮಾಡುವುದು ಇಂದು ಮುಖ್ಯವಾಗಿದೆ.

- Advertisement -

ದುಡಿಮೆ ಪಾಲು

ರೈತ ಎಂದರೆ ಕೇವಲ ಪುರುಷ ಎನ್ನುವ ಮನಸ್ಥಿತಿ ಸಾಮಾನ್ಯವಾಗಿತ್ತು. ಕಾಲ ಕ್ರಮೇಣ ರೈತಾಪಿ ಚಟುವಟಿಕೆಗಳ ನಿರ್ವಹಣೆಯ ಸ್ವರೂಪ ಬದಲಾಯಿತು. ಆಹಾರದ ಮೂಲವಾದ ಕೃಷಿ ಉದ್ಯಮವಾಗಿ ಬೆಳೆದಿದೆ. ಬದಲಾವಣೆಗೆ ತಕ್ಕಂತೆ ಮಹಿಳೆಯ ಪಾತ್ರ ಅಗಾಧತೆಯನ್ನು ಪಡೆದುಕೊಂಡಿದೆ ಆದರೂ ಆಕೆ ಇಂದಿಗೂ ಕೂಲಿ ಆಳಿನಂತೆ ದುಡಿಯುತ್ತಿದ್ದಾಳೆಯೇ ಹೊರತು ಒಡತಿಯೆಂದು ಕರೆಯಲಾಗುತ್ತಿಲ್ಲ.

ಇದು ನಿಜಕ್ಕೂ ಶೋಚನೀಯ. ಅಧಿಕಾರ ಚಲಾಯಿಸುವುದು ವ್ಯವಹಾರ ಮತ್ತು ಹಣ ಪುರುಷನ ಕೈಯಲ್ಲಿ ಕೆಲಸ ಮಾತ್ರ ಮಹಿಳೆಯ ಕೈಯಲ್ಲಿ ಇಂದಿನ ದಿನದವರೆಗೂ ಚಾಲ್ತಿಯಲ್ಲಿದೆ. ಅಂಕಿ ಅಂಶಗಳ ಪ್ರಕಾರ 1977-78 ರಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಪುರುಷರು ಶೇ 80.06 ರಷ್ಟು ಮಹಿಳೆಯರು ಶೇ 88.01 ರಷ್ಟು. 2017-18ರ ಪ್ರಕಾರ ಕೃಷಿಯಲ್ಲಿ ಪುರುಷರ ಪ್ರಮಾಣ ಶೇ 55ರಷ್ಟಕ್ಕೆ ಇಳಿಮುಖವಾಗಿದ್ದರೆ ಮಹಿಳೆಯರು ಶೇ 73.05 ರಷ್ಟು ಕೃಷಿಯಲ್ಲಿದ್ದಾರೆ. ಆದರೂ ಕೂಡ ಮಹಿಳೆಗೆ ರೈತರು ಎಂಬ ಮಾನ್ಯತೆ ದೊರೆತಿಲ್ಲ. ಭಾರತ ದೇಶದ ಆರ್ಥಿಕತೆಗೆ ಕೃಷಿ ಬೆನ್ನುಲುಬಾದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 75 ರಷ್ಟು ಮಹಿಳೆಯರೇ ಕೃಷಿಗೆ ಬೆನ್ನುಲುಬಾಗಿದ್ದಾರೆ. ಆಕೆಯ ಶ್ರಮವಿಲ್ಲದೇ ವ್ಯವಸಾಯ ನಡೆಯದೇ ಇದ್ದರೂ, ಮಹತ್ವದ್ದೆನಿಸಿದರೂ ದುಡಿಮೆ ಮಾತ್ರ ಮುನ್ನಲೆಗೆ ಬರುವುದಿಲ್ಲ ಮತ್ತು ದಾಖಲು ಆಗುವುದಿಲ್ಲ. ದುಡಿಮೆಯ ಪಾಲು ಆಕೆಯದ್ದು. ಲಾಭಾಂಶ ಮಾತ್ರ ಪುರುಷರ ಕೈಯಲ್ಲಿದೆ.

ಹೆಚ್ಚು ಪರಿಶ್ರಮ

ಒಂದೆಡೆ ಸಂಸಾರದ ಜವಾಬ್ದಾರಿಯ ಹೊರೆಯನ್ನು ಹೊತ್ತು, ಮನೆಯ ಆಗು ಹೋಗುಗಳಿಗೆಲ್ಲ ಗಮನವಿಟ್ಟು ನಿಭಾಯಿಸಿಕೊಂಡು, ಇನ್ನೊಂದೆಡೆ ಕೃಷಿಯ ಕೆಲಸಗಳಲ್ಲಿ ಬಿತ್ತುವ ಕಾರ್ಯದಿಂದ ಹಿಡಿದು ಒಕ್ಕಣೆ ಸೇರಿದಂತೆ ಕೊಯ್ಲೇತ್ತರ ಕೆಲಸ ಕಾರ್ಯಗಳಲ್ಲಿ ನಿಷ್ಠೆಯಿಂದ ಪಾಲ್ಗೊಳ್ಳುವ ಆಕೆ ನಿಜಕ್ಕೂ ಗಟ್ಟಿಗಿತ್ತಿಯೇ ಸರಿ. ಭಾರತ ಕೃಷಿ ಪ್ರಧಾನವಾದ ದೇಶವೆನ್ನುವ ಪರಿಕಲ್ಪನೆಗೆ ವಾಸ್ತವದಲ್ಲಿ ರೈತರಿಗಿಂತ ರೈತ ಮಹಿಳೆಯರ ಪರಿಶ್ರಮ ಹೆಚ್ಚು ಕಾರಣವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಜಾಗತಿಕ ಇತಿಹಾಸದ ಪುಟಗಳಲ್ಲಿ ಮಹಿಳೆಯರ ಕುರಿತು ಎಷ್ಟೋ ಪ್ರಮುಖ ವಿಷಯಗಳು ದಾಖಲಾಗದಿರಬಹುದು. ಆದರೆ ಮಾನವನ ನಾಗರಿಕತೆ ಮತ್ತು ಅದರ ಅಭಿವೃದ್ಧಿಯಲ್ಲಿ ಆಕೆಯ ಪಾತ್ರ ಕಡಿಮೆಯೇನಿಲ್ಲ. ಅಷ್ಟೇ ಅಲ್ಲ, ಕೃಷಿಯನ್ನು ಅನ್ವೇಷಣೆ ಮಾಡಿದ್ದು ಮಹಿಳೆಯೇ ಎಂದು ಸಮಾಜಶಾಸ್ತ್ರಜ್ಞರ ದೃಢ ನಿಲುವನ್ನು ಒಪ್ಪಿಕೊಂಡಿದ್ದರೂ ಆಕೆಯ ಪರಿಶ್ರಮವನ್ನು ಪುರುಷ ಪ್ರಧಾನ ಸಮಾಜ ಒಪ್ಪುವುದಿಲ್ಲ ಎಂಬುದು ನಿಜಕ್ಕೂ ಖೇದಕರ.

- Advertisement -

ಅಂತರಂಗದ ಅನುಭವ

ಎಪ್ಪತ್ತರ ದಶಕದ ನಂತರ ಮಹಿಳೆಯು ವಿವಿಧ ಕ್ಷೇತ್ರಗಳ ಎಲ್ಲ ಪಾತ್ರಗಳನ್ನು ನಿರ್ವಹಿಸುವ ಬಗ್ಗೆ ಮರುಚಿಂತನೆ ಬಳಸಲಾಯಿತು. ಇತ್ತೀಚಿನ ದಿನಮಾನದಲ್ಲಿ ಮಹಿಳೆಯರು, ಎಲ್ಲ ರಂಗಗಳಲ್ಲೂ ಹೆಚ್ಚು ಬಲವುಳ್ಳ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸರ್ವವಿಧಿತ. ಅದರಲ್ಲೂ ಗ್ರಾಮೀಣ ವಿಭಾಗದಲ್ಲಿ ಯಾವುದೇ ಕಸುಬಿರಲಿ ಕೃಷಿಯಿರಲಿ ಆಕೆ ಇಲ್ಲದೇ ನಡೆಯುವುದು ಕಷ್ಟ ಸಾಧ್ಯ ಎನ್ನುವಷ್ಟು ಬೆರೆತು ಹೋಗಿದ್ದಾಳೆ. ವ್ಯವಸಾಯದ ಎಲ್ಲ ಚಟುವಟಿಕೆಗಳನ್ನು ಬಲು ಉತ್ಸಾಹದಿಂದ ಶ್ರದ್ಧೆಯಿಂದ ನಿರ್ವಹಿಸುವುದು ಎಲ್ಲರಿಗೂ ಗೊತ್ತಿದ್ದರೂ ಆಕೆಯ ಕೊಡುಗೆಯನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ಬೆಳಕಿಗೆ ತರುವುದು ತುಂಬಾ ವಿರಳ. ಸಮಕಾಲೀನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಒಟ್ಟಾರೆ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವ ಧೈರ್ಯವನ್ನು ಕೆಲ ಗಟ್ಟಿ ಹೆಣ್ಣು ಮನಗಳು ತೋರಿವೆ. ಹೆಣ್ಣಿನ ಅಂತರಂಗದ ಅನುಭವ ಲೋಕವನ್ನು ವಿನೂತನ ರೀತಿಯಲ್ಲಿ ಅಕ್ಷರದ ರೂಪದಲ್ಲಿ ಇಂದಿನ ಮಹಿಳಾ ಬರಹಗಾರ್ತಿಯರು ತೆರೆದಿಟ್ಟಿದ್ದು ಪ್ರಶಂಸನೀಯ.ಸಮಾಜವನ್ನು ಕಟ್ಟುವ ತಿದ್ದುವ ಕಾರ್ಯದಲ್ಲಿ ಪಾಲ್ಗೊಂಡು ಬದಲಾವಣೆಯ ಮಹಾಪರ್ವಕ್ಕೆ ನಾಂದಿಯಾಗಿದ್ದಾರೆ.

ರಕ್ತದ ಕಲೆ ಛಾಯೆ

ಸರ್ಕಾರ ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ನೀಡಿದರೆ ಸಾಲದು. ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕು. ಮಹಿಳೆಯ ಬದುಕೇ ಬೇರೆ ಅದು ಈ ನೆಲಕ್ಕೆ ಅಂಟಿಕೊಂಡೇ ಇಲ್ಲವೇನೋ ಅನ್ನೋ ತರ ನೋಡಲಾಗುತ್ತದೆ. ಆಕೆ ಅಡುಗೆಯಲ್ಲಿನ ಉಪ್ಪಿದ್ದಂತೆ. ಇದ್ದಾಗ ಬೆಲೆ ಗೊತ್ತಾಗುವುದಿಲ್ಲ. ಇಲ್ಲದಾಗ ಇಲ್ಲದಿರುವ ಭಾವ ಬಹಳ ಕಾಡಿಸುತ್ತದೆ.

ಸ್ತ್ರೀ ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ ಬದುಕಿಗೆ ಪ್ರೀತಿಯ ಗಂಧ ತುಂಬಬಲ್ಲಳು ಆದರೆ ಆಕೆಯ ಮೌಲ್ಯ ಮಾತ್ರ ಹೆಚ್ಚಿಲ್ಲ. ಎರಡನೇ ದರ್ಜೆಯಲ್ಲೇ ಇದೆ. ಕೃಷಿ ಕಾರ್ಯದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾದುದು. ಸಾವಿರಾರು ಮಹಿಳೆಯರು ಸಕ್ರಿಯವಾಗಿ ತೊಡಗಿಕೊಂಡು ಕೃಷಿ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ರಾಷ್ಟ್ರ ಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳಂತೆ ;

ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆಯಿದೆ.
’ಹಸಿರುನುಟ್ಟ ಬೆಟ್ಟಗಳಲ್ಲಿ
ಮೊಲೆ ಹಾಲಿನ ಹೊಳೆಯನಿಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಕಷ್ಟಗಳನ್ನು ನಂಜುಂಡ ಶಿವನಂತೆ ನುಂಗಿಕೊಂಡು ನಗುಮೊಗದಿಂದ ಬದುಕುತ್ತಿದ್ದಾಳೆ. ಇತರರ ಬಾಳನ್ನು ಬೆಳಗುತ್ತಿದ್ದಾಳೆ. ಸರ್ಕಾರ ಕಾನೂನುಗಳನ್ನು ಮಾಡುವಾಗ ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬಹುಸಂಖ್ಯೆಯಲ್ಲಿರುವ ಮಹಿಳಾ ಕೃಷಿಕರ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಸಮೀಕ್ಷೆಗಳು ಚರ್ಚೆಗಳು ನಡೆಯುವುದು ಅವಶ್ಯಕವಿದೆ. ಗಂಡ, ಮನೆ, ಮಕ್ಕಳು, ಸಮಾಜ ಮತ್ತು ಇತರರಿಗಾಗಿ ಜೀವ ಸವೆಸುವ ಜೀವನ ಮಾರ್ಗದರ್ಶಿ ಅನಿಸುವುದಿಲ್ಲವೇ? ಆಕೆಯ ಬದುಕಿಗೆ ಕಟ್ಟಿಕೊಡುವ ಮೆಟ್ಟಿಲುಗಳನ್ನು ಅವಲೋಕಿಸಿದರೆ ಗಾಬರಿಯಾಗುತ್ತದೆ. ಸವಾಲುಗಳನ್ನು ಎದುರಿಸುವ ಆಕೆಯ ಛಾತಿಗೆ ಬದುಕು ಒಂದಿಲ್ಲೊಂದು ದಿನ ಸುಖವನ್ನು ಹಾಸಬಲ್ಲದು ಅದಕ್ಕೆ ನಮ್ಮೆಲ್ಲರ ಸಹಕಾರವೂ ಬೇಕೆಂಬುದನ್ನು ಮರೆಯುವಂತಿಲ್ಲ.


ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group