- ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳದ ಅಧಿಕಾರಿಗಳು
- ಬಡವರ ಮನೆಗಳ ಸಂಪರ್ಕ ಕಡಿತಗೊಳಿಸದಿರಲು ಗಡಾದ ಆಗ್ರಹ
ಮೂಡಲಗಿ – ರಾಜ್ಯದಲ್ಲಿರುವ ಗ್ರಾಮ ಪಂಚಾಯತಿಗಳು/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉಪಯೋಗಿಸುತ್ತಿರುವ ಬೀದಿ ದೀಪಗಳು/ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆ ಮಾಡಲಾದ ವಿದ್ಯುತ್ ಗೆ ಸಂಬಂಧಿಸಿದಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆಯಿಂದ 5332.66ಕೋಟಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 1372.77ಕೋಟಿ ರೂಗಳನ್ನು ಅಂದರೆ ಒಟ್ಟು 6705ಕೋಟಿ 43ಲಕ್ಷ ರೂಗಳನ್ನು ವಿದ್ಯುತ್ ಕಂಪನಿಗಳಿಗೆ ಸರಕಾರ ಬಾಕಿ ಪಾವತಿಸಬೇಕಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.
ವಿವಿಧ ವಿದ್ಯುತ್ ಕಂಪನಿಗಳಿಗೆ ಪಾವತಿಸಬೇಕಾದ ಬಾಕಿ ಮೊತ್ತದ ವಿವರವು ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಯಲ್ಲಿ ಬಹಿರಂಗವಾಗಿದ್ದು ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಜನಸಾಮಾನ್ಯರಿಗೆ ದಂಡ ವಿಧಿಸುವ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ವಿದ್ಯುತ್ ಕಂಪನಿಗಳು ಈ ಇಲಾಖೆಗಳ ವಿದ್ಯುತ್ ಬಾಕಿ ವಸೂಲಿ ಮಾಡದೇ ಇರುವುದು ಅಚ್ಚರಿಯಾಗಿದೆ.
ಗ್ರಾಮೀಣ ಅಭಿವೃದ್ಧಿ, ಪಂಚಾಯತ ರಾಜ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳು ವಿವಿಧ ವಿದ್ಯುತ್ ಕಂಪನಿಗಳಿಗೆ ಪಾವತಿಸಬೇಕಾದ ಒಟ್ಟು ಮೊತ್ತ ಈ ರೀತಿ ಇದೆ:
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ( ಕೋ.ರೂ. ಗಳಲ್ಲಿ)
- 3261.7
- 1139.46
- 4401.22
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ:
- 1222.44
- 105.45
- 1327.89
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ:
- 415.61
- 74.36
- 489.97
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗೆ:
- 328.31
- 31.69
- 360.00
ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ:
- 104.54
- 21.81
ವಿದ್ಯುತ್ ಬಾಕಿ ಹಣದ ಒಟ್ಟು ಮೊತ್ತ ( ಕೋ. ರೂ . ಗಳಲ್ಲಿ)
ಗ್ರಾಮೀಣಾಭಿವೃದ್ಧಿ ಇಲಾಖೆ ರೂ. 5322.66
ಪಂಚಾಯತ ರಾಜ್ ಇಲಾಖೆ ರೂ. 1372.77
ನಗರಾಭಿವೃದ್ಧಿ ಇಲಾಖೆ ರೂ. 6705.43. ಎಂದು ಮಾಹಿತಿ ತಿಳಿದುಬಂದಿದೆ.
ವಿದ್ಯುತ್ ಕಂಪನಿಗಳಿಗೆ ಸರಕಾರದಿಂದ ಹಣಕಾಸಿನ ಯಾವುದೇ ಸಹಾಯ ನೀಡುತ್ತಿಲ್ಲ. ಪ್ರತಿಯೊಂದು ಕಂಪನಿಗಳವರು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾಗುವುದು.
ಈ ಸಾಲವು ನಿಗದಿತ ಅವಧಿಯೊಳಗೆ ಪಾವತಿಯಾಗದಿದ್ದರೆ ಅಂತಹ ಕಂಪನಿಗಳು ಸದರ ಸಾಲಕ್ಕೆ ಹೆಚ್ಚಿನ/ದಂಡದ ಬಡ್ಡಿ ಭರಿಸಬೇಕಾಗುವುದು. ಈ ಹಾನಿಯನ್ನು ಸರಿದೂಗಿಸಿಕೊಳ್ಳಲು ಈ ವಿದ್ಯುತ್ ಕಂಪನಿಗಳು ಗ್ರಾಹಕರು ಬಳಕೆ ಮಾಡುವ ವಿದ್ಯುತ್ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುವುದು. ಗ್ರಾಹಕರ ವಿದ್ಯುತ್ ಶುಲ್ಕಕ್ಕೂ ಕೂಡಾ ಕೆಲವೊಮ್ಮೆ ದಂಡವಿಧಿಸುವ ಪ್ರಸಂಗ ಬರುತ್ತಿರುವುದು ಅನಿವಾರ್ಯವಾಗುವುದು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ಒಬ್ಬ ವ್ಯಕ್ತಿಯು ಸದರ ಸಾಲವನ್ನು ಮರು ಪಾವತಿಸದೇ ಇದ್ದ ಸಮಯದಲ್ಲಿ, ಸರಕಾರದ ಯೋಜನೆಗಳಲ್ಲಿ ಆ ವ್ಯಕ್ತಿಯ ಉಳಿತಾಯ ಖಾತೆಗಳಲ್ಲಿ ಹಣ ಜಮೆಯಾದ ಸಂದರ್ಭದಲ್ಲಿ ಆ ಹಣವನ್ನು ಅವನ ಸಾಲದ ಖಾತೆಗೆ ಜಮೆ ಮಾಡಿಕೊಂಡ ಉದಾಹರಣೆಗಳು ಉಂಟು.
ಆದರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮೂಲ ಭೂತ ಸೌಲಭ್ಯಗಳನ್ನು ದೊರಕಿಸಲು ಸರಕಾರವು ಪ್ರತಿಯೊಂದು ಗ್ರಾಮ ಪಂಚಾಯತಿ/ನಗರ ಪಾಲಿಕೆ/ಪುರಸಭೆ/ಪಟ್ಟಣ ಪಂಚಾಯತಿಗಳಿಗೆ ಕೋಟಿ-ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಈ ಹಣದಲ್ಲಿ ವಿದ್ಯುತ್ ಕಂಪನಿಗಳಿಗೆ ಪಾವತಿಸಬೇಕಾಗಿರುವ ಹಣವನ್ನು ಹಂತ-ಹಂತವಾಗಿ ಕಡಿತಗೊಳಿಸಿ ಕಂಪನಿಗಳಿಗೆ ಪಾವತಿಸಿದರೆ ವಿದ್ಯುತ್ ಕಂಪನಿಗಳು ಹಾನಿಗೊಳಗಾಗುವದಿಲ್ಲ. ಅಲ್ಲದೇ ವಿದ್ಯುತ್ ದರ ಕೂಡಾ ಹೆಚ್ಚಿಸುವ ಅವಶ್ಯಕತೆ ಕೂಡಾ ಬೀಳದೆ ಇರಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸರಕಾರದ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳು, ಚಿಕ್ಕ ವ್ಯಾಪಾರಸ್ಥರು ಮತ್ತು ಸಣ್ಣ ಪುಟ್ಟ ಉದ್ದಿಮೆದಾರರು ಅಲ್ಲದೇ ಕೃಷಿಕ ವರ್ಗದವರು ವಿದ್ಯುತ್ ಇಲಾಖೆಗೆ ಪಾವತಿಸಬೇಕಾದ ಬಾಕಿ ಹಣವನ್ನು ನಿಗದಿತ ಅವಧಿಯಲ್ಲಿ ಪಾವತಿಸದೇ ಇದ್ದರೆ ವಿದ್ಯುತ್ ಕಂಪನಿಗಳ ಅಧಿಕಾರಿಗಳು ಅಂಥ ಮನೆಗಳ/ಘಟಕಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವರು ಅಲ್ಲದೇ ಕೆಲವು ಸಲ ವಿದ್ಯುತ್ ಶುಲ್ಕಕ್ಕೆ ಬಡ್ಡಿ ಕೂಡಾ ಆಕರಣೆ ಮಾಡುವರು. ಆದರೆ ಸ್ಥಳೀಯ ಸಂಸ್ಥೆಗಳಿಂದ ವಿದ್ಯುತ್ ಕಂಪನಿಗಳಿಗೆ ಸುಮಾರು ರೂ. 6700 ಕೋಟಿಗೂ ಅಧಿಕ ಬಾಕಿ ಪಾವತಿಸಬೇಕಾಗಿದ್ದರೂ ಕೂಡಾ ರಾಜಕೀಯ ಒತ್ತಡಕ್ಕೆ ಸಿಲುಕಿದ ಇದೇ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದೇ ಇರುವುದು ಎಷ್ಟು ಸಮಂಜಸ? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿರುವುದು.
ಕಾರಣ ಇನ್ನು ಮೇಲಾದರು ವಿದ್ಯುತ್ ಕಂಪನಿ ಅಧಿಕಾರಿಗಳು ಎಚ್ಚತ್ತುಕೊಂಡು ಸ್ಥಳೀಯ ಸಂಸ್ಥೆಗಳಿಂದ ಬರಬೇಕಾಗಿರುವ ಬಾಕಿ ಹಣ ವಸೂಲಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ವಿದ್ಯುತ್ ಕಂಪನಿಗಳನ್ನು ಸಾಲ ಮುಕ್ತಗೊಳಿಸಬೇಕು ಇಲ್ಲವೇ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರ ವಿದ್ಯುತ್ ಸಂಪರ್ಕಗಳನ್ನು ಕೂಡಾ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.