ಖಾಲಿಯಾಗಿಬಿಟ್ಟಿದೆ
ಮುಗ್ಧಜನರು ಅನುದಿನ
ಉಸಿರುಗಟ್ಟಿ ಸಾಯುವುದ ಕಂಡು,
ಮನಸ್ಸು ಮಮ್ಮಲ ಮರುಗಿದೆ,
ಬದುಕು ಏಕೋ ಖಾಲಿ,ಖಾಲಿ ಅನಿಸತೊಡಗಿದೆ !!!
ಬ್ರಹ್ಮಾಂಡವ ಶೋಧಿಸಿ,
ಚಂದ್ರನ ಮೇಲೆ ಕುಣಿದು ಕುಪ್ಪಳಿಸಿ,
ಮಂಗಳನ ಮೇಲೊಂದು
ಹೊಸ ಬಡಾವಣೆಯ ನಿರ್ಮಿಸುವ
ಕನಸು ಕಟ್ಟಿದ್ದ ಓ ಮನುಜಾ
ವೈರಾಣು ದಾಳಿಗೆ ಮತ್ತೆ
ಸಿಲುಕಿ ಹೈರಾಣಾದೆಯಾ !!!
ಒಮ್ಮೆ ವಿಧಿ ನಿನ್ನ ಎಚ್ಚರಿಸಿತ್ತು,
ಆಟಾಟೋಪವ ಬಿಡು,
ಮನುಜನಾಗಿ ಮಾನವೀಯತೆಯ ಬಾಳು ಬಾಳೆಂದು ಎಚ್ಚರಿಸಿತ್ತು !!
ಕಾಲದ ಸುಳಿಯಲ್ಲಿ
ಸಿಲುಕಿ ಎಲ್ಲವ ಮರೆತೇ ಬಿಟ್ಟೆಯಲ್ಲಾ,
ಮತ್ತೆ ಅಧಿಕಾರ,ಹಣ,ಅಂತಸ್ತುಗಳ
ಬಣ್ಣದಾಟಕೆ ಸಿಲುಕಿಬಿಟ್ಟೆಯಲ್ಲಾ !!!
ಮುಖವಾಡದ ಜೀವನದಿ
ಮುಖಕೆ ಮುಖವಾಡಗಳ
ಧರಿಸುವುದ ಮರೆತೆ,
ಮದುವೆಮುಂಜಿಗಳೆಂದು ಅಬ್ಬರಿಸಿದೆ,
ಮರೆತು ಸರಳ ಜೀವನವ,
ಮತ್ತೆ ಠೇಂಕರಿಸಿದೆ ಅಹಂಕಾರದಲಿ !!!
ಯಾರೋ ಮಾಡಿದ ತಪ್ಪಿಗೆ
ಇನ್ಯಾರಿಗೋ ಶಿಕ್ಷೆ !!
ಮುಖಗವಸು ಮರೆತಿದ್ದಕ್ಕೆ,
ಅಂತರ ಮರೆತು ಮೆರೆದಿದ್ದಕ್ಕೆ,
ಹಾರಿಹೋಗುತಿವೆ ಮುಗ್ಧಜೀವಗಳು !!!
ಮತ್ತದೇ ಆರೋಪ,
ಆಸ್ಪತ್ರೆ ಸಿಗುತ್ತಲ್ಲ,
ಆಮ್ಲಜನಕ ಸಿಗುತ್ತಿಲ್ಲ,
ಅವರು ಸರಿಯಿಲ್ಲ,ಇವರು ಸರಿಯಿಲ್ಲ,
ಯಾರು ಸರಿಯಿಲ್ಲದಿದ್ದರೇನು;
ನೀನು ಸರಿಯಿದ್ದಿದ್ದರೆ,
ಬರಲಿದ್ದ ವೈರಾಣು ಆತಂಕವ
ಒಮ್ಮೆ ಗಮನಿಸಿದ್ದರೆ,
ಅಗುತ್ತಿತ್ತು ವೈರಾಣುವಿನ ನಿರ್ನಾಮ ,
ಈಗ ಉಳಿದಿರುವ ದಾರಿಯೊಂದೇ
ಮನೆಯಲ್ಲೇ ಉಳಿಯುವುದು,
ಮುಗ್ಧಜನರ ಉಳಿಸುವಂತೆ
ದೇವರ ಪ್ರಾರ್ಥಿಸುವುದು
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು,ಪತ್ರಕರ್ತರು
ಮೊ-94496 80583
63631 72368