( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ )
ಮನಿಷಾ! ಮುಂದಿನ ಜನುಮಗಳಲಿ…?
ನಿನ್ನ ದೇಹವು
ಕತ್ತಲೆಯ ಚಾಪೆಯಾಗುತ್ತದೆ
ಎಂದೆನಿಸಿದಾಗ-
ಅವರ ಕೊರಳ ಕೊಳವೆ ಕಡಿಬೇಕಿತ್ತು
ನಿನ್ನ ಚಿತೆಯ ಬೆಂಕಿ
ಕೆನ್ನಾಲಿಗೆ ಚಾಚುತಿದೆ
ಎಂದೆನಿಸಿದಾಗ-
ಕೈಗೆ ಸಿಕ್ಕ ಕಲ್ಲಿನಲಿ
ಹಲ್ಲಿಗೆ ಜಜ್ಜಬೇಕಿತ್ತು
ಮನಿಷಾ!ನಿನ್ನೆದೆಗೂಡನು
ಕುಲುಮೆಯಲಿ ಬೇಯಿಸುತ್ತಾರೆ
ಎಂದೆನಿಸಿದಾಗ-
ಪೆನ್ನನು ಆಯುಧ ಮಾಡಿ,
ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು
ನಿನ್ನ ಜೀವದ ಕಥೆ
ಮುಗಿದೇ ಹೋಯಿತು
ಎಂದೆನಿಸಿದಾಗ-
ಅಬ್ಬಕ್ಕನಂತೆ ಅಬ್ಬರಿಸಿ
ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು
ನಿನ್ನ ಬದುಕಿನ ವಿದಾಯ
ಹರಾಜಾಗುತಿದೆ
ಎಂದೆನಿಸಿದಾಗ-
ಹುರಿಗೊಂಡ ಅವರ
ಅಂಗಗಳನು ಕತ್ತರಿಸಬೇಕಿತ್ತು
ನಿನ್ನ ವಿವೇಕವ ಲೂಟಿ ಮಾಡಿ,ಹತೋಟಿ ತಪ್ಪಿತು
ಎಂದೆನಿಸಿದಾಗ-
ನಾಲಿಗೆ ಉಳಿಸಿಕೊಂಡು,
ಕಾಗದದ ಮೇಲಾದರೂ
ತಗುಲಿ,ಮಲಬೇಕಿತ್ತು
ನಿನ್ನ ಹಣೆ ಬೆವರು
ಕಾವೇರುತಿದೆ
ಎಂದೆನಿಸಿದಾಗ-
ಅವರ ಸಾವಿನ ಬೀಜವಾದರೂ
ಒತ್ತಬೇಕಿತ್ತು
ಮನಿಷಾ…..ಮನಿಷಾ!
ನಿನ್ನ ನಿಶ್ಯಕ್ತಿ ಶರೀರ ಸುಡುತ್ತಾರೆ ಎಂದೆನಿಸಿದಾಗ-
ಕೊನೆಯ ಅಗ್ನಿಯೊಳಗೆಳೆದು
ಒಬ್ಬನನ್ನಾದರೂ ಚಾದರದಂತೆ ಹೊದೆದುಕೊಳ್ಳಬೇಕಿತ್ತು.
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ