ಹೊಸಪುಸ್ತಕ ಓದು: ‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’(ಪಿಎಚ್.ಡಿ. ಮಹಾಪ್ರಬಂಧ)

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’(ಪಿಎಚ್.ಡಿ. ಮಹಾಪ್ರಬಂಧ)

ಲೇಖಕರು: ಡಾ. ಎ.ಬಿ.ಘಾಟಗೆ
ಪ್ರಕಾಶಕರು : ಕನ್ನಡ ಜಾಗೃತಿ ಪುಸ್ತಕ ಮಾಲೆ, ಅಲ್ಲಮಪ್ರಭು ಸಿದ್ಧಸಂಸ್ಥಾನಮಠ, ಚಿಂಚಣಿ, 2020
ಬೆಲೆ: ರೂ. 300
(ಲೇಖಕರ ದೂರವಾಣಿ : 9448863816)


ಡಾ. ಎ.ಬಿ.ಘಾಟಗೆ ಅವರ ‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’ ಎಂಬ ಸಂಶೋಧನ ಮಹಾಪ್ರಬಂಧ ಹಲವು ಕೌತುಕಗಳ ಸಂಗಮವಾಗಿದೆ. ಕೌತುಕವೇಕೆಂದರೆ, ಡಾ. ಎ. ಬಿ. ಘಾಟಗೆ ಅವರು ತಮ್ಮ ಸೇವಾನಿವೃತ್ತಿಯ ಅಂಚಿನಲ್ಲಿರುವಾಗ ಈ ಮಹಾಪ್ರಬಂಧ ಬರೆಯಲು ಪ್ರಾರಂಭ ಮಾಡಿದರು. ವಿಶ್ವವಿದ್ಯಾಲಯದ ಪದವಿಯಿಂದ ಅವರಿಗೆ ಭವಿಷ್ಯದಲ್ಲಿ ವೃತ್ತಿಸಂಬಂಧ ಯಾವ ಪ್ರಯೋಜನವೂ ಇರಲಿಲ್ಲ. ಆದರೂ ಕನ್ನಡ-ಮರಾಠಿ ಭಾಷೆಯ ಸಾಮರಸ್ಯವನ್ನು-ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡಬೇಕೆಂಬ ಕಳಕಳಿ ಅವರಲ್ಲಿದ್ದ ಕಾರಣ, ಇಂಥ ಒಂದು ಮಹತ್ವದ ಮಹಾಪ್ರಬಂಧ ರೂಪುಗೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಕೃತಿಯಲ್ಲಿರುವ ವಿಷಯ ವ್ಯಾಪ್ತಿ, ವಿವೇಚನೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಒಂದು ಮಹಾಪ್ರಬಂಧದಲ್ಲಿ ಇಷ್ಟೆಲ್ಲ ಹೇಳಬಹುದೇ? ಎಂಬ ಕೌತುಕ ಉಳಿದೆ ಉಳಿಯುತ್ತದೆ. ಅಷ್ಟು ವಿಷಯ ಸಂಗ್ರಹ-ವಿವರಣೆ ಈ ಮಹಾಪ್ರಬಂಧದಲ್ಲಿ ಬಂದಿದೆ. ಈ ಮಹಾಪ್ರಬಂಧವನ್ನು ಓದುತ್ತಿದ್ದರೆ, ೧೦ನೇ ಶತಮಾನದಿಂದ ಆಧುನಿಕ ಕಾಲದ ಸಮಗ್ರ ಸಾಂಸ್ಕೃತಿಕ ಚರಿತ್ರೆಯನ್ನು ಅತ್ಯಂತ ವಸ್ತುನಿಷ್ಠವಾಗಿ, ವ್ಯವಸ್ಥಿತವಾಗಿ ಕಟ್ಟಿಕೊಟ್ಟಿರುವುದು ಕಂಡು ಬರುತ್ತದೆ.

ಮೆಡೋಜ್ ಟೇಲರ್ ಎಂಬ ಆಂಗ್ಲ ಅಧಿಕಾರಿ ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶವನ್ನು ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾನೆ. ರತ್ನಾಗಿರಿಯ ಕೆಳಗೆ ವಿಜಯದುರ್ಗ ಎಂಬ ಒಂದು ಪುಟ್ಟ ಬಂದರು ಇದೆ. ಅದು ಕನ್ನಡ ಮಾತನಾಡುವ ಜನರ ಕೊನೆಯ ಸೀಮೆ. ‘ಇಟ್ ಈಸ್ ದಿ ಲಾಸ್ಟ್ ಔಟ್ಪೋಸ್ಟ್ ವ್ಹೆಯರ್ ಕನ್ನಡ ಈಜ್ ಸ್ಪೋಕನ್.’ ಎಂದು ಟೇಲರ ಹೇಳುತ್ತಾನೆ.

- Advertisement -

‘ನೀವು ನಿಮ್ಮೆದುರು ಭಾರತದ ನಕ್ಷೆ ಇರಿಸಿಕೊಂಡು ನಿಮ್ಮ ಪೆನ್ಸಿಲನ್ನು ವಿಜಯದುರ್ಗದ ಮೇಲೆ ಇಡಿರಿ. ಅದು ಮುಂದೆ ಹಾಗೆಯೇ ಕೊಲ್ಲಾಪುರದ ಮೇಲೆ ಹೋಗಲಿ, ಅಲ್ಲಿಂದ ಅದು ಉಸ್ಮಾನಾಬಾದದ ಮೇಲೆ, ಬೀದರದ ಮೇಲೆ ಹೋಗಿ, ಆ ಮೇಲೆ ಪೂರ್ವ ಸಹ್ಯಾದ್ರಿಗುಂಟ ಕೆಳಗೆ ಇಳಿದು, ನೀಲಗಿರಿ ಬೆಟ್ಟ ಏರಿ, ವೈನಾಡಿನ ಮೂಲಕ ಕೆಳಗೆ ಇಳಿದು ಚಂದ್ರಗಿರಿ ನದಿಯ ಮೂಲಕ ಅರಬ್ಬೀ ಸಮುದ್ರ ಸೇರಲಿ, ಇದು ಸ್ಥೂಲವಾಗಿ ಕನ್ನಡ ಮಾತನಾಡುವ ಪ್ರದೇಶದ ವ್ಯಾಪ್ತಿಯನ್ನು ತೋರಿಸುತ್ತದೆ.’ ಎಂಬುದು ಮೆಡೋಜ್ ಟೇಲರ್ನ ವಿವರಣೆಯಾಗಿದೆ. ಟೇಲರ್ನ ಮಾತುಗಳ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಎರಡೂ ಪ್ರದೇಶಗಳು ಒಂದೇ ಆಗಿದ್ದವು. ಇಲ್ಲಿಯ ಭಾಷೆ ಕನ್ನಡವಾಗಿತ್ತು. ಕಾಲಾನಂತರ ಎರಡು ಪ್ರದೇಶಗಳು ಬೇರೆ ಬೇರೆಯಾಗಿ ರೂಪಗೊಂಡವು ಎಂಬ ಐತಿಹಾಸಿಕ ಸತ್ಯವನ್ನು ಡಾ. ಘಾಟಗೆ ಅವರು ತುಂಬ ಅರ್ಥಪೂರ್ಣವಾಗಿ ಶೋಧಿಸಿದ್ದಾರೆ.

ಈ ಮಹಾಪ್ರಬಂಧದಲ್ಲಿ ಎಂಟು ಅಧ್ಯಾಯಗಳಿವೆ. ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿಯನ್ನು ಲೇಖಕರು ತುಂಬ ಔಚಿತ್ಯಪೂರ್ಣವಾಗಿ ವಿವರಿಸಿದ್ದಾರೆ. ಸಾವಿರಾರು ವರ್ಷಗಳ ಒಟ್ಟು ಇತಿಹಾಸವನ್ನು ಒಂದು ಮಹಾಪ್ರಬಂಧದಲ್ಲಿ ಹಿಡಿದಿಡುವುದು ಕಷ್ಟಸಾಧ್ಯವೆಂಬುದರ ಅರಿವು ಅವರಿಗಿದೆ. ಹೀಗಾಗಿ ‘ಸಾವಿರಾರು ವರ್ಷಗಳ ವಿವಿಧ ಬಗೆಯ ವಿಷಯಗಳ ಹುಡುಕಾಟದ ಆಳವನ್ನು ಕಂಡುಹಿಡಿಯುವುದು ಅಂಗೈ ಅಗಲದ ಕೆಲಸವಲ್ಲ. ನನ್ನ ಗ್ರಹಿಕೆಯ ಇತಿಮಿತಿಗಳಲ್ಲಿಯೇ ಈ ಸಂಶೋಧನೆಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ’ ಎಂದು ಪ್ರಾಂಜಲ ಮನಸ್ಸಿನಿಂದ ಹೇಳಿದ್ದಾರೆ.

ಎರಡನೆಯ ಅಧ್ಯಾಯ- ಕರ್ನಾಟಕ- ಮಹಾರಾಷ್ಟ್ರ ಸಂಸ್ಕೃತಿ ಸ್ವರೂಪ ಮತ್ತು ಹಿನ್ನೆಲೆ ಎಂಬುದಾಗಿದೆ. ಕರ್ನಾಟಕದ ಇತಿಹಾಸ ಸುಲಭವಾಗಿ ತಿಳಿದಷ್ಟು ಮಹಾರಾಷ್ಟ್ರದ ಇತಿಹಾಸ ತಿಳಿಯುವುದಿಲ್ಲ. ಕರ್ನಾಟಕ- ಮಹಾರಾಷ್ಟ್ರ ಪ್ರದೇಶಗಳನ್ನು ಆಳಿದ ಶಾತವಾಹನರು, ಚಾಲುಕ್ಯರು, ರಾಷ್ಟçಕೂಟರು, ಕಲ್ಯಾಣಿ ಚಾಲುಕ್ಯರು ಕರ್ನಾಟಕದವರೋ, ಮಹಾರಾಷ್ಟ್ರದವರೋ ಎಂಬ ಜಿಜ್ಞಾಸೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಶಂಬಾ ಜೋಶಿ ಅವರು ಐದು ದಶಕಗಳ ಹಿಂದೆಯೇ ‘ಮರ‍್ಹಾಟಿ ಸಂಸ್ಕೃತಿ ಕಾಂಹೀ ಸಮಸ್ಯಾ’ ಎನ್ನುವ ಪುಸ್ತಕ ಬರೆದು ಈ ನಿಟ್ಟಿನಲ್ಲಿ ಬೆಳಕು ಚೆಲ್ಲಿದ್ದರು. ಈ ಹಿನ್ನೆಲೆಯಲ್ಲಿ ಡಾ. ಎ.ಬಿ.ಘಾಟಗೆ ಅವರು ಉಭಯ ರಾಜ್ಯಗಳ ಸಾಂಸ್ಕೃತಿಕ ಸ್ವರೂಪವನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.

ಮೂರನೆಯ ಅಧ್ಯಾಯದಲ್ಲಿ ಕರ್ನಾಟಕ ಮಹಾರಾಷ್ಟ್ರ ಸಂಸ್ಕೃತಿಯ ನೆಲೆಗಳನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ. ಭಾಷಿಕ, ಧಾರ್ಮಿಕ, ಸಾಹಿತ್ಯಿಕ, ರಾಜಕೀಯ, ಸಾಮಾಜಿಕ ಮೊದಲಾದವುಗಳ ಹಿನ್ನೆಲೆಯಲ್ಲಿ ಸಂಸ್ಕೃತಿಯ ನೆಲೆಗಳು ಹೇಗೆ ಸಾಮ್ಯತೆಯಿಂದ ಕೂಡಿವೆ ಎಂಬುದನ್ನು ವಿಶ್ಲೇಷಿಸಿದ್ದಾರೆ.

ನಾಲ್ಕನೆಯ ಅಧ್ಯಾಯದಲ್ಲಿ ಮಹಾರಾಷ್ಟ್ರ ಸಂಸ್ಕೃತಿಯ ಮೇಲೆ ಕರ್ನಾಟಕ ಸಂಸ್ಕೃತಿಯ ಪ್ರಭಾವಗಳು ಎಂಬ ಚಿಂತನೆ ಮಾಡಿದ್ದಾರೆ. ಅರಸು ಮನೆತನಗಳ ಪ್ರಭಾವ, ಭಾಷೆಯ ಪ್ರಭಾವ, ಸಾಹಿತ್ಯಿಕ ಪ್ರಭಾವ, ಧಾರ್ಮಿಕ ಪ್ರಭಾವ ಹೇಗೆಲ್ಲ ಪರಿಣಾಮ ಬೀರಿದೆ ಎಂಬುದರತ್ತ ನಮ್ಮ ಲಕ್ಷ್ಯ ಸೆಳೆಯುವಂತೆ ಮಾಡಿದ್ದಾರೆ. ಜ್ಞಾನೇಶ್ವರಿ ಮತ್ತು ಲೀಳಾಚರಿತ್ರೆಗಳಲ್ಲಿ ಹೇರಳವಾಗಿ ಕನ್ನಡ ಪದಗಳು ಸಿಗುತ್ತವೆ ಎಂಬುದನ್ನು ಡಾ. ಘಾಟಗೆ ಅವರು ತುಂಬ ಸೋದಾಹರಣವಾಗಿ ವಿವರಿಸಿದ್ದಾರೆ. ಈ ಅಧ್ಯಾಯದಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಮಹತ್ವದ ಅಂಶವೆಂದರೆ ಮರಾಠಿ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಪ್ರಭಾವ ಎಷ್ಟು ಎಂಬುದನ್ನು ಗುರುತಿಸಿದ್ದು. ೧೬ನೇ ಶತಮಾನದಲ್ಲಿ ಬಸವಾದಿ ಶಿವಶರಣರ ಕೃತಿಗಳು ಮರಾಠಿ ಭಾಷೆಗೆ ಅನುವಾದಗೊಂಡಿರುವುದು ಗಮನಾರ್ಹ ಅಂಶವಾಗಿದೆ. ಚನ್ನಬಸವಣ್ಣನವರ ಕರಣಹಸಿಗೆ, ನಿಜಗುಣರ ವಿವೇಕ ಚಿಂತಾಮಣಿ, ಚಾಮರಸನ ಪ್ರಭುಲಿಂಗಲೀಲೆ ಕೃತಿಗಳು ಆ ಕಾಲದಲ್ಲಿಯೇ ಮರಾಠಿಗೆ ತರ್ಜುಮೆಗೊಂಡಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಈ ಎಲ್ಲ ವಿಚಾರಗಳನ್ನು ಡಾ. ಘಾಟಗೆ ಅವರು ಅತ್ಯಂತ ಶ್ರಮವಹಿಸಿ ದಾಖಲಿಸಿದ್ದಾರೆ.

ಶಂಬಾ ಜೋಶಿ ಮತ್ತು ದ.ರಾ.ಬೇಂದ್ರೆ ಅವರು ಕನ್ನಡ ಮರಾಠಿ ಉಭಯ ಭಾಷೆಗಳಲ್ಲಿ ಸಾಹಿತ್ಯವನ್ನು ರಚಿಸಿದವರು. ಮಹಾರಾಷ್ಟ್ರ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಇಬ್ಬರೂ ಮಾಡಿದ್ದಾರೆ. ಮಹಾರಾಷ್ಟ್ರದ ವಿದ್ವಜ್ಜನ ಸಮೂಹದಲ್ಲಿ ಇಬ್ಬರೂ ಸ್ಥಾನ ಪಡೆದಿದ್ದಾರೆ. ಬೇಂದ್ರೆಯವರು ಮರಾಠಿಯಲ್ಲಿ ಬರೆದ ಕೃತಿಗಳ ವಿವರಣೆಯನ್ನು ಡಾ. ಘಾಟಗೆ ಅವರು ನೀಡಿದ್ದಾರೆ. ಬೇಂದ್ರೆಯವರು ‘ವಿಠಲ ಸಂಪ್ರದಾಯ’ ಎಂಬ ಕೃತಿಯನ್ನು ಬಹಳ ವರ್ಷಗಳ ಹಿಂದೆಯೇ ಅನುವಾದಿಸಿದ್ದರು. ಅದು ಲೇಖಕರ ಗಮನಕ್ಕೆ ಬಂದಂತೆ ಕಾಣಲಿಲ್ಲ.

ಧಾರ್ಮಿಕ ನೆಲೆಯಲ್ಲಿ ರಾಷ್ಟ್ರಕೂಟರಿಂದ ಹಿಡಿದು ಇಲ್ಲಿಯವರೆಗೆ ಅನೇಕ ಸ್ಥಿತ್ಯಂತರಗಳು ನಡೆದಿವೆ. ಮಹಾರಾಷ್ಟçದ ನಾಥಪಂಥ, ದತ್ತಪಂತ, ವಾರಕರಿ ಪಂಥ, ಮಹಾನುಭಾವ ಪಂಥ ಮೊದಲಾದ ಪಂಥಗಳು ಮತ್ತು ಕರ್ನಾಟಕದ ಶರಣಪಂಥ-ದಾಸಪಂಥಗಳ ಸಮಗ್ರ ವಿಶ್ಲೇಷಣೆಯನ್ನು ಡಾ. ಘಾಟಗೆ ಅವರು ಇಲ್ಲಿ ಮಾಡಿರುವುದು ಗಮನಾರ್ಹ.

ಐದನೆಯ ಅಧ್ಯಾಯದಲ್ಲಿ ಕರ್ನಾಟಕ ಸಂಸ್ಕೃತಿಯ ಮೇಲೆ ಮಹಾರಾಷ್ಟç ಸಂಸ್ಕೃತಿಯ ಪ್ರಭಾವ ಹೇಗಿದೆ ಎಂಬುದನ್ನು ಸುದೀರ್ಘವಾಗಿ ಚರ್ಚಿಸಿದ್ದಾರೆ. ಭಾಷಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯಿಕ ಪ್ರಭಾವಗಳ ಜೊತೆಗೆ ಸಾಮಾಜಿಕ ಚಳವಳಿಯ ಪ್ರಭಾವವನ್ನೂ ಇಲ್ಲಿ ವಿವೇಚನೆಗೆ ಒಳಗು ಮಾಡಿದ್ದಾರೆ. ಮರಾಠಿ ಭಾಷೆಯಿಂದ ಕನ್ನಡಕ್ಕೆ ಬಂದ ಕೃತಿಗಳ ಸಮಗ್ರ ವಿವರಣೆ ನೀಡಿದ್ದಾರೆ. ಜ್ಞಾನೇಶ್ವರಿಯ ಏಳು ಅನುವಾದ ಆವೃತ್ತಿಗಳು ಲೇಖಕರ ಅಧ್ಯಯನವ್ಯಾಪ್ತಿಗೆ ದೊರೆತಿವೆ. ಹಾಗೆಯೇ ಗಳಗನಾಥರಿಂದ ಹಿಡಿದು ಅನೇಕ ಜನ ಕಥೆ ಕಾದಂಬರಿಗಳನ್ನು ಅನುವಾದಿಸುತ್ತ ಬಂದಿದ್ದಾರೆ. ಅವುಗಳ ಸಮಗ್ರವಾದ ವಿವರಣೆ ಇಲ್ಲಿದೆ. ಹಾಗೆ ನೋಡಿದರೆ ವಿಜಯನಗರ ಸಾಮ್ರಾಜ್ಯದ ಬಗ್ಗೆ ಮೊಟ್ಟ ಮೊದಲು ಕಾದಂಬರಿ ಬರೆದವರು ಹ.ನಾ.ಅಪಟೆ ಎಂಬ ಲೇಖಕರು. ಅವರ ‘ವಜ್ರಾಘಾತ’ ಎಂಬ ಕಾದಂಬರಿಯನ್ನು ಗಳಗನಾಥರು ‘ಕನ್ನಡಿಗರ ಕರ್ಮಕಥೆ’ ಎಂದು ಅನುವಾದಿಸಿದ್ದಾರೆ. ಅಪಟೆಯವರ ಪಣ ಕೋಣ ಲಕ್ಷ್ಯಾತ ಘೇತೋ ಎಂಬ ಕೃತಿಯನ್ನು ಡಾ. ಶಿವರಾಮ ಕಾರಂತರು ‘ಯಾರು ಲಕ್ಷಿಸುವರು’ ಎಂದು ಅನುವಾದಿಸಿದರೆ, ಗೋರೂರು ರಾಮಸ್ವಾಮಿ ಅಯ್ಯಂಗಾರ ಅವರು ಖಾಂಡೇಕರ ಅವರ ‘ಕ್ರೌಂಚವಧ’ ಕೃತಿಯನ್ನು ಅನುವಾದಿಸಿದ್ದಾರೆ. ಇನಾಂದಾರರು ಖಾಂಡೇಖರರ ಯಯಾತಿಯನ್ನು ಅನುವಾದಿಸಿದ್ದಾರೆ. ಕಾರಂತ, ಗೋರೂರು ಮೊದಲಾದವರು ಮರಾಠಿಯಿಂದ ಕೃತಿಗಳನ್ನು ಅನುವಾದಿಸಿದ ವಿಷಯವನ್ನು ಮೊಟ್ಟಮೊದಲು ಕನ್ನಡ ಜನತೆಗೆ ತಿಳಿಸಿದ ಕೀರ್ತಿ ಡಾ. ಘಾಟಗೆ ಅವರಿಗೆ ಸಲ್ಲುತ್ತದೆ.

ಆರನೆಯ ಅಧ್ಯಾಯದಲ್ಲಿ ಕರ್ನಾಟಕ ಮಹಾರಾಷ್ಟ್ರ ಸಂಸ್ಕೃತಿಗಳ ಸಮನ್ವಯತೆಯನ್ನು ಗುರುತಿಸಿದ್ದಾರೆ. ಕರ್ನಾಟಕದ ದೇವತೆಗಳು ಮಹಾರಾಷ್ಟ್ರಕ್ಕೆ ವಲಸೆ ಹೋದ ಕಥನವನ್ನು ನಿರೂಪಿಸಿದ್ದಾರೆ. ಡಾ. ರಾಮಚಂದ್ರ ಚಿಂತಾಮಣ ಢೇರೆ ಅವರು ಮಹಾರಾಷ್ಟ್ರದ ಸುಪ್ರಸಿದ್ಧ ಸಂಶೋಧಕರಲ್ಲಿ ಒಬ್ಬರು. ೬೦ಕ್ಕೂ ಮಿಕ್ಕಿ ಸಂಶೋಧನಾತ್ಮಕ ಕೃತಿಗಳನ್ನು ಪ್ರಕಟಿಸಿರುವ ಅವರು ಮಹಾರಾಷ್ಟ್ರದ ಸಮಸ್ತ ಭಕ್ತರ ಗೌರವ ಭಕ್ತಿಗೆ ಪಾತ್ರವಾದ ದೈವತಗಳ ಮೂಲವನ್ನು ಶೋಧಿಸುತ್ತ ಕರ್ನಾಟಕದ ಕಡೆಗೆ ಹೊರಳಿದವರು. ಮಹಾರಾಷ್ಟ್ರದ ಜನರು ಉತ್ತರದ ಪರಂಪರೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಮೂಲಕ ದಕ್ಷಿಣದ ಪ್ರಭಾವವೂ ಮಹಾರಾಷ್ಟ್ರದ ಮೇಲೆ ಸಾಕಷ್ಟು ಆಗಿದೆ ಎಂಬುದನ್ನು ಅನೇಕ ಆಧಾರಗಳಿಂದ ಸಿದ್ಧಪಡಿಸಿದವರು. ಅವರು ಬರೆದ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು, ತುಂಬ ಪ್ರಸಿದ್ಧವಾದವು. ಅವುಗಳಲ್ಲಿ ಡಾ. ಸರಜೂ ಕಾಟ್ಕರ್ ಅವರ ‘ಶಿವಾಜಿ ಮೂಲ ಕನ್ನಡ ನೆಲ’, ಪ್ರೊ. ಚಂದ್ರಕಾಂತ ಪೋಕಳೆ ಅವರ ‘ಶ್ರೀವಿಠ್ಠಲ : ಒಂದು ಮಹಾಸಮನ್ವಯ’, ವಿಠ್ಠಲರಾವ್ ಗಾಯಕ್ವಾಡ ಅವರ ‘ಶಿಖರ ಸಿಂಗಣಪುರದ ಶಂಭು ಮಹಾದೇವ’ ಕೃತಿಗಳು ಪ್ರಮುಖವಾದವು. ಕನ್ನಡದ ವಿದ್ವಾಂಸರಿಗೆ ಹೊಳೆಯದ ಅನೇಕ ಹೊಸ ವಿಚಾರಗಳು ಮೊದಲ ಬಾರಿಗೆ ಅನಾವರಣಗೊಂಡವು. ಹೀಗಾಗಿ ಕನ್ನಡ ನಾಡಿನಲ್ಲಿಯೂ ಡಾ. ಢೇರೆ ಅವರಿಗೊಂದು ಇಮೇಜು ಇದೆ. ಡಾ. ಢೇರೆಯವರ ಸಂಸ್ಕೃತಿ ಚಿಂತನ ಮೂಲದ ಎಲ್ಲ ಕೃತಿಗಳನ್ನು ಡಾ. ಸರಜೂ ಕಾಟ್ಕರ್, ಡಾ. ವಿಠ್ಠಲರಾವ ಗಾಯಕ್ವಾಡ, ಚಂದ್ರಕಾಂತ ಪೋಕಳೆ ಮೊದಲಾದ ವಿದ್ವಾಂಸರು ಅನುವಾದಿಸಿದ್ದಾರೆ. ಈ ಎಲ್ಲ ಕೃತಿಗಳನ್ನು ಡಾ. ಘಾಟಗೆ ಅವರು ವಿಶ್ಲೇಷಣೆಗೆ ಒಳಗು ಮಾಡಿದ್ದಾರೆ.

ಏಳನೆಯ ಅಧ್ಯಾಯದಲ್ಲಿ ಕರ್ನಾಟಕ- ಮಹಾರಾಷ್ಟ್ರ ಸಂಸ್ಕೃತಿಗಳ ಅನನ್ಯತೆಯನ್ನು ಗುರುತಿಸಿದ್ದಾರೆ. ವಿಶೇಷವಾಗಿ ಹೇಳಬೇಕಾದುದು ಎಂದರೆ ಮೋಡಿ ಲಿಪಿಯು ಹೇಮಾಡಪಂಥನಿಂದ ರೂಪುಗೊಂಡಿತ್ತೆಂದು ಮರಾಠಿ ವಿದ್ವಾಂಸರು ಹೇಳುತ್ತಾರೆ. ಆದರೆ ಘಾಟಗೆ ಅವರು ಮೋಡಿ ಲಿಪಿ ಹುಟ್ಟಿರುವುದು ಕರ್ನಾಟಕದ ಹೆಳವರಿಂದ ಎಂಬ ಅಂಶದತ್ತ ನಮ್ಮ ಗಮನ ಸೆಳೆಯುತ್ತಾರೆ. ಹೆಳವರ ಭಾಷೆಯನ್ನು ಮೋಡಿಲಿಪಿಯಾಗಿ ಬಳಕೆಯಲ್ಲಿ ತರಲಾಯಿತು ಎಂಬ ವಿಷಯ ಎಲ್ಲರಿಗೂ ಒಪ್ಪಿತವಾಗುವಂತಿದೆ.

ಸಮಾರೋಪದಲ್ಲಿ ಅಧ್ಯಯನದ ಫಲಿತಗಳನ್ನು ಸಾರವತ್ತಾಗಿ ನಿರೂಪಿಸಿದ್ದಾರೆ. ವಿಠಲನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋದದ್ದು ಹೇಗೆ? ಶಿವಾಜಿಯ ಮೂಲವನ್ನು ಮಹಾರಾಷ್ಟ್ರದವರು ಒಪ್ಪಿಕೊಳ್ಳುವರೇ? ಮೊದಲಾದ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿವೆ ಉಳಿದಿವೆ ಎಂದು ಹೇಳುತ್ತಾರೆ.

ಈ ಮಹಾಪ್ರಬಂಧಕ್ಕೆ ಮುನ್ನುಡಿ ಬರೆದ ಹಿರಿಯ ವಿದ್ವಾಂಸರಾದ ಪ್ರೊ. ಚಂದ್ರಕಾಂತ ಪೋಕಳೆ ಅವರು ಕೃತಿಯ ಮಹತ್ವವನ್ನು ಕುರಿತು ಹೀಗೆ ಹೇಳುತ್ತಾರೆ- ‘ಕನ್ನಡದ ಖ್ಯಾತ ವಿದ್ವಾಂಸರಾದ ಶಂಬಾ, ರಂ.ಶಾ, ಮರಾಠಿಯ ಖ್ಯಾತ ವಿದ್ವಾಂಸರಾದ ರಾ.ಚಿಂ.ಢೇರೆ, ಅ.ರಾ.ಕುಲಕರ್ಣಿ, ಗ.ಹ.ಖರೆ, ಅ.ರಾ.ತೋರೋ ಮುಂತಾದ ಹಿರಿಯ ತಲೆಮಾರಿನ ಗಮನಾರ್ಹವಾದ ಸಂಶೋಧನಾ ಮಾರ್ಗವನ್ನು ಮತ್ತಷ್ಟು ವಿಸ್ತರಿಸುವುದರಲ್ಲಿ, ಅದರ ಆಳ ವ್ಯಾಪ್ತಿಯನ್ನು ವಿವಿಧ ಮಗ್ಗಲುಗಳಲ್ಲಿ ದಾಖಲಿಸುವುದರಲ್ಲಿ ಈ ಮಹಾಪ್ರಬಂಧವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಅಂತರ್ಶಿಸ್ತಿಯ ಬಹು ಆಯಾಮಗಳನ್ನುಳ್ಳ ಅಧ್ಯಯನವು ಈ ಗ್ರಂಥಕ್ಕೆ ಪ್ರಾಪ್ತವಾಗಿದೆ. ಇಂತಹ ಸಮುದಾಯಮುಖಿ ಹಾಗೂ ಸಮಾಜಮುಖಿಯಾದ ಅಧ್ಯಯನವು ಸಾರ್ವತ್ರಿಕವೂ, ಸಾರ್ವಕಾಲಿಕವೂ ಆಗಿದೆ.” ಪ್ರೊ. ಪೋಕಳೆ ಅವರ ಮಾತುಗಳು ಕೃತಿಯ ಮೌಲಿಕತೆಯನ್ನು ಸಾಕ್ಷೀಕರಿಸುತ್ತವೆ.

ಹೀಗೆ ಅನೇಕ ಮೌಲಿಕ ಹೊಸ ವಿಚಾರಗಳನ್ನು ಮೊಟ್ಟಮೊದಲು ಈ ಕೃತಿಯಲ್ಲಿ ದಾಖಲಿಸುವ ಮೂಲಕ ಉಭಯ ರಾಜ್ಯಗಳ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಅನನ್ಯತೆಯನ್ನು ಶೋಧಿಸಿದ ಡಾ. ಘಾಟಗೆ ಅವರು ಮತ್ತು ಇಂಥ ಮಹತ್ವದ ಕೃತಿಯನ್ನು ತಮ್ಮ ಕನ್ನಡ ಜಾಗೃತಿ ಮಾಲೆಯ ಮೂಲಕ ಪ್ರಕಟಿಸಿದ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳವರು ಅಭಿನಂದನಾರ್ಹರು.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!