ಕೊರೋನಾ ಎಂಬ ಮಹಾಮಾರಿ ಮನುಷ್ಯರು ಹಾಗೂ ಪ್ರಾಣಿಗಳನ್ನು ಕೂಡ ಬಾಧಿಸುತ್ತದೆ. ಮುಖ್ಯವಾಗಿ ಮನುಷ್ಯರಲ್ಲಿ ಉಸಿರಾಟದ ಸಮಸ್ಯೆ ಹುಟ್ಟಿಸುವ ಕೊರೋನಾ ಅತಿಯಾಗಿ ಬಾಧಿಸುವುದಲ್ಲದೆ ಪ್ರಾಣವನ್ನು ಕೂಡ ತೆಗೆಯುತ್ತದೆ.
ಸಣ್ಣ ನೆಗಡಿಯಿಂದ ಪ್ರಾರಂಭವಾಗುವ ಇದು ಕೆಮ್ಮು ಸುಸ್ತು ಸೇರಿಕೊಂಡು, ನಿರ್ಲಕ್ಷ್ಯ ಮಾಡಿದರೆ ಎದೆಯಲ್ಲಿ ಕಫ ಹೆಚ್ಚಿಸಿ ಉಸಿರನ್ನೇ ನಿಲ್ಲಿಸಿಬಿಡುವಂಥ ಭೀಕರ ರೋಗ ಕೊರೋನಾ.
ಹಾಗೆಯೇ ಇದು ನಮ್ಮ ಕಿಡ್ನಿಗಳ ಮೇಲೂ ತನ್ನ ಕುಪ್ರಭಾವ ಬೀರಿ ಪ್ರಾಣಹಾನಿ ಮಾಡುತ್ತದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.
ಕಿಡ್ನಿ ಸ್ವರೂಪ
ನಮ್ಮ ಕಿಡ್ನಿ ಗಳು ಅವರೆ ಕಾಳಿನಾಕಾರದ ಎರಡು ಅಂಗಗಳು. ಒಂದು ಮುಷ್ಟಿಯಾಕಾರದ ಸೈಜು ಹೊಂದಿರುತ್ತವೆ. ಕಿಡ್ನಿಗಳ ಕೆಲಸವೆಂದರೆ ದೇಹದಲ್ಲಿನ ಕಲ್ಮಷಗಳನ್ನು ಸೋಸಿ ಮೂತ್ರದ ಮೂಲಕ ಹೊರಹಾಕುತ್ತದೆ.
ಈ ಕಿಡ್ನಿಗೆ ರೋಗ ಬಂದರೆ ನಮ್ಮ ದೇಹದ ಪ್ರತಿ ಅಂಗದ ಮೇಲೂ ಪ್ರಭಾವ ಬೀರುತ್ತದೆ. ಅಂದರೆ ಕಾಲು, ಕೈಗಳಲ್ಲಿ ಬಾವು, ಪುಪ್ಪುಸದಲ್ಲಿ ನೀರು ತುಂಬಿಕೊಳ್ಳುವಿಕೆ, ಅಧಿಕ ರಕ್ತದೊತ್ತಡ, ನಿಶ್ಯಕ್ತಿ, ಒಣಗಿದ ಕಣ್ಣುಗಳು, ಮೂತ್ರದಲ್ಲಿ ರಕ್ತ, ಬುರುಗಿನಂಥ ಮೂತ್ರ ಬರುವುದು, ಕಣ್ಣು ಊದಿಕೊಳ್ಳುವುದು, ಅಲ್ಲದೆ ಅತಿಯಾದ ಮೈ ( ಬೊಜ್ಜು ) ಇವೆಲ್ಲ ಕಿಡ್ನಿಯ ಅನಾರೋಗ್ಯದ ಲಕ್ಷಣಗಳು. ಇದಲ್ಲದೆ ವಾಂತಿ, ಹಸಿವಿಲ್ಲದಿರುವಿಕೆ, ಅನೀಮಿಯಾ, ಮರೆಗುಳಿತನ, ಪೊಟ್ಯಾಸಿಯಮ್ ದೇಹದಲ್ಲಿ ಕಡಿತ ಹೀಗೆ ಅನೇಕ ಸಮಸ್ಯೆಗಳು ಕಿಡ್ನಿಯ ಅನಾರೋಗ್ಯದಿಂದಾಗಿ ಎದುರಾಗುತ್ತವೆ.
ಒಂದುವೇಳೆ ಕಿಡ್ನಿಯ ಆರೋಗ್ಯ ಸರಿಯಿಲ್ಲದಿದ್ದರೆ ಕೊರೋನಾ ವೈರಾಣು ಬೇಗನೆ ದಾಳಿ ಮಾಡುತ್ತದೆ. ಆದ್ದರಿಂದ ಕಿಡ್ನಿಯನ್ನು ಆಗಾಗ ಪರೀಕ್ಷೆ ಮಾಡಿಸಿಕೊಂಡು ಅದು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳುವುದು ಅತಿ ಅಗತ್ಯ.
ಕಿಡ್ನಿ ಆರೋಗ್ಯವಾಗಿರಲು…
ಯೋಗ ಮಾಡಬೇಕು. ಕಿಡ್ನಿಗಳ ಆರೋಗ್ಯಕ್ಕೆ ಯೋಗಾಸನ ಮುಖ್ಯವಾದದ್ದು. ಸಾಕಷ್ಟು ನೀರು ಕುಡಿಯಬೇಕು. ರಕ್ತದೊತ್ತಡ ಹೆಚ್ಚದಂತೆ ನೋಡಿಕೊಳ್ಳಬೇಕು.
ಸಕ್ಕರೆ ಖಾಯಿಲೆ ಇದ್ದರೆ ಕಿಡ್ನಿ ಹಾಗೂ ಹೃದಯಗಳ ಬಗ್ಗೆ ತುಂಬಾನೇ ಎಚ್ಚರವಾಗಿರುವುದು ಅತೀ ಅವಶ್ಯಕ. ಸಕ್ಕರೆ ಕಾಯಿಲೆಯಿಂದಾಗಿ ಕಿಡ್ನಿ ಮೊದಲು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಆದ್ದರಿಂದ ಕೊರೋನಾ ಕಾಲದಲ್ಲಿ ಕಿಡ್ನಿಗಳ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ ಎಂಬುದನ್ನು ಎಲ್ಲರೂ ಅರಿತಿರಬೇಕು.
(ಇಂಗ್ಲೀಷ ಪತ್ರಿಕೆಯಿಂದ)