ಗುರುವಿನ ಪಾದಕೆ ನಮೋನಮಃ ಶಿಕ್ಷಕರ ದಿನಾಚರಣೆಯ ಸಂದರ್ಭದ ಕವನಗಳು

Must Read

ಶಿಕ್ಷಕರು

ಇವರೇ ನೋಡಿ ಶಿಕ್ಷಕರು
ಸಮಾಜದ ಆಪ್ತ ರಕ್ಷಕರು
ಮಣ್ಣಿನ ಮುದ್ದೆಯ ತಿದ್ದುತ
ಮೂರ್ತಿ ಮಾಡಿದ ಶಿಲ್ಪಕಾರರು

ಮಕ್ಕಳ ಮನವನು ಅರಿತವರು
ಸಹನೆಗೆ ಇವರೇ ಹೆಸರಾಗಿಹರು
ಸಕಲ ಕಲೆಯನು ಬಲ್ಲವರು
ಪ್ರತಿಭೆಯ ಬೆಳಕಿಗೆ ತಂದವರು

ಶಿಕ್ಷಕ ಎನ್ನುವ ಪದದಲ್ಲೆ
ದಿವ್ಯ ಶಕ್ತಿಯು ಅಡಗಿಹುದು
ಚೈತನ್ಯದ ಚಿಲುಮೆ ನೀವಾಗಿರಲು
ಸೇವೆಗಾಗಿ ಮನ ಮಿಡಿದಿಹುದು

ಅಜ್ಞಾನದ ಕತ್ತಲೆ ಆಳಿದವರು
ಜ್ಞಾನ ಜ್ಯೋತಿಯ ಬೆಳಗಿದವರು
ಮಾನವೀಯ ಮೌಲ್ಯಗಳ ತಿಳಿಸಿದರು
ಸಮಾಜದ ಏಳ್ಗೆಗೆ ದುಡಿವವರು

ಸರ್ವ ಸಮಾನತೆ ತಂದವರು
ಜಾತ್ಯತೀತತೆ ಮೆರೆದವರು
ವಿಶ್ವಾಸಕೆ ಬೆಲೆಯನುಕೊಟ್ಟವರು
ನೈತಿಕತೆಯನು ಬೆಳೆಸುವವರು

ಪೂರ್ಣಿಮಾ ಯಲಿಗಾರ
ಶಿಕ್ಷಕಿ
ಮೂಡಲಗಿ (ಬೆಳಗಾವಿ)


ಗುರು ನಮನ

ಮಣ್ಣಿನ ಮುದ್ದೆಗೆ ಜ್ಞಾನದ ಆಕಾರವ ನೀಡಿ,
ವಿಚಾರವಂತನ ರೂಪಿಸುವ ಗುರುವೇ,
ನೀನೆ ಬ್ರಹ್ಮ, ನೀನೆ ಏಸು,ನೀನೆ ಅಲ್ಲಾ,ನೀನೆ ಎಲ್ಲಾ!!!

ಹಕ್ಕ-ಬುಕ್ಕರಿಗೆ ಆದೇಶ ನೀಡಿ,
ವಿಜಯನಗರ ಸಾಮ್ರಾಜ್ಯ ನಿರ್ಮಿಸಿದ ವಿದ್ಯಾರಣ್ಯ ಗುರುವೇ,
‘ಹೊಯ್-ಸಳ’ ಎಂದು ಆದೇಶಿಸಿ
ಹುಲಿ ಸಂಹಾರಕೆ,ಹೊಯ್ಸಳ ವಂಶ ಸ್ಥಾಪನೆಗೆ
ದಾರಿತೋರಿದ ಗುರುವೇ…ನೀ ಬ್ರಹ್ಮರೂಪಿ…..

‘ಅಕ್ಷರ ಕಲಿಸಿದಾತ ಗುರು ‘
ಮನೆಯಲಿ ನೀತಿ ಕತೆಗಳ ಹೇಳುವ
ತಾಯಿ-ತಂದೆ,ಅಜ್ಜ-ಅಜ್ಜಿ ಮೊದಲ ಗುರು,
ಶಾಲೆಯೊಳಗೆ ಅಕ್ಷರ ತಿದ್ದಿಸಿ,ಶಿಸ್ತನು ಕಲಿಸಿ,
ಏಕತೆ ರೂಪಿಸಿ,ಬದುಕು ರೂಪಿಸುವ
ಗುರುವೇ, ನೀನೆ ಎಲ್ಲ ಎಳೆಯರ ಆದರ್ಶ….

ರಾಮಾಯಣ,ಮಹಾಭಾರತ,ನೀತಿಕಥೆಗಳ ಹೇಳುವ ಗುರುವೆ,
ನೀ ಎಳೆಯರ ಅಭ್ಯುದಯಕೆ ದಾರಿದೀಪ,
ಇತಿಹಾಸವ ದಾಖಲಿಸುವ,ವರ್ತಮಾನವ ತಿಳಿಹೇಳುವ,
ಭವಿಷ್ಯತ್ತಿನ ಜೀವನಕೆ ದಾರಿತೋರುವ ಗುರುವೆ,
ನೀವೊಂದು ಜ್ಞಾನ ನಿಧಿ,ವಿಜ್ಞಾನ ಭಂಡಾರ….

‘ ಶಿಕ್ಷಣವೆಂದರೆ
ಅಕ್ಷರವಲ್ಲ ;
ಬದುಕು ರೂಪಿಸುವ ರಂಗಶಾಲೆ’
ಅದರ ನಿರ್ಮಾಪಕ-ನಿರ್ದೇಶಕ ನೀನೆ..
ಗುರುವೇ..ನೀ ರೂಪಿಸಿದ
ಸುಂದರ ವ್ಯಕ್ತಿತ್ವದ ಸದ್ಗುಣಿಗಳು
ದೇಶ ಕಾಯುವ ಸೈನಿಕರಾಗಿ,
ದೇಶ ಕಟ್ಟುವ ರಾಷ್ಟ್ರಭಕ್ತರಾಗಿ,
ದೇಶ ಉಳಿಸುವ ವೈದ್ಯರಾಗಿ,
ದೇಶದ ಭವಿಷ್ಯ ರೂಪಿಸುವ ಶಿಕ್ಷಕರಾಗಿ,ವಿಜ್ಞಾನಿಗಳಾಗಿ
ಹಾರಿಸುತಿಹರು ಮುಗಿಲೆತ್ತರಕೆ
ರಾಷ್ಟ್ರದ ಕೀರ್ತಿ ಪತಾಕೆಯ….

ಓ ಗುರುವೇ…
ರಾಷ್ಟ್ರ ಕಟ್ಟುವ ಸುಂದರ ಪ್ರಜೆಗಳ
ನಿರ್ಮಾಪಕ-ನಿರ್ದೇಶಕನಾದ ನಿನಗೆ
ನಮೋ..ನಮಃ….

ಡಾ.ಭೇರ್ಯ ರಾಮಕುಮಾರ್ ಸಾಹಿತಿಗಳು, ಪತ್ರಕರ್ತರು
ಮೊ:94496 80583,
         63631 72368


ಗುರುವಿನಭಯದಿ ಧನ್ಯೋಸ್ಮಿ

ಮಣ್ಣಲುದಿಸಿದ ಪ್ರಾಣಿ ಎನ್ನ
ಮುದದಿ ನಿಲಿಸಿ ಜ್ಞಾನ ಸೇರಿಸಿ
ನಿರ್ಮಲ ಮನದಿ ಹದದಿ ಬೆರಿಸಿ
ಒತ್ತಿ ಕೆತ್ತಿ ಮುದ್ದಿ ಮಾಡಿದಿರಿ…

ಹದವ ಮಾಡಿ ಹಸುಳೆ ಮನವ
ತಿದ್ದಿ ತೀಡಿ ಆಕೃತಿಯಿಂ
ಸುಕೃತಗೊಳಿಸಿ ನಲಿದಿರಿ
ವಿವಿಧ ಕಲೆಗಳ ಕಲಿಸಿದಿರಿ…

ಏಕಚಿತ್ತದಿಂ ಅರಿವ ಅರಳಿಸಿ
ಮಣ್ಣ ಮೂರುತಿಯೋಲ್
ಜ್ಞಾನ ಅವಿರ್ಭವಿಸಿ
ಮಾನವನನ್ನಾಗಿ ಜಗದಲಿ ನಿಲಿಸಿದಿರಿ…

ಮನ ಸಲುಹುವ ಕಲೆಯ
ದುರಾಸೆಯ ಬಲಿಯಿಂ ಕಳಚುವ ನೆಲೆಯ
ಮಾನವತೆಯ ಮೆರೆವ ಸಲೆಯ
ಮಗು ಮನದಿ ಮೂಡಿಸಿದಿರಿ…

ಪ್ರಕೃತಿ ವಿಕೃತಗೊಳ್ಳಲಿ
ಸಾಗರ ಉಬ್ಬರವೇರಿ ಬರಲಿ
ಕಷ್ಟಕಾರ್ಪಣ್ಯ ಜೀವನ ಕಬಳಿಸಲಿ
ಹರ ಮುನಿಯಲಿ ಗುರು ನೀ ಕಾಯುವೆ…

ಮಮತೆಯಿಂ ಮಾತೃ ಹೃದಯದಿ
ಮಗುವ ಮನವ ಗೆದ್ದು
ಪಿತೃ ಹೃದಯದಿ ಆತ್ಮಬಲವ ನೀಡಿ
ಜಗವ ಜಯಿಸುವಕಲೆ ಕಲಿಸಿದ ಗುರುದೇವೋಭವ

ಮೈತ್ರಾದೇವಿ ರಾಚಯ್ಯ ಹಿರೇಮಠ
ಸೋಮನಟ್ಟಿ. ( ಬೆಳಗಾವಿ ಜಿಲ್ಲೆ)


ಗುರುವೆ ನಮನಗಳು

ಪಾಠ ಪ್ರವಚನದ ಜೊತೆ
ಉತ್ತಮ ಸಂಸ್ಕಾರ ಕಲಿಸಿ
ಸತ್ಯ ಮಾರ್ಗದಿ ಬೆಳೆಸಿ
ನನ್ನ ಬದುಕಿಗೆ ಬೆಳಕು
ನೀಡಿದ ಗುರುವೆ ನಮನಗಳು

ಜೀವನ ತೆರೆದ ಪುಸ್ತಕದಂತೆ
ಇರಬೇಕೆಂದವರು,
ಉತ್ತಮ ಶಿಕ್ಷಣದ ಜೊತೆಗೆ
ನೈತಿಕತೆ ಬೋಧಿಸಿದವರು,
ನುಡಿದಂತೆ ನಡೆದು ಸಮಾಜಕೆ
ಮಾದರಿಯಾಗಿರಲು
ತಿಳಿಸಿದವರು,
ಅಂತರಂಗದ ಚೇತನಕೆ
ನೀರೆರೆದವರು,
ಗುರುವೆ ನಮನಗಳು.

ಬದುಕಿನಲಿ ಗೌರವಾನ್ವಿತ ವ್ಯಕ್ತಿ ಯನ್ನಾಗಿಸಿದ
ಉತ್ತಮ ಮೌಲ್ಯಗಳನು ಎನ್ನಲಿ
ಅಳವಡಿಸಿದ,
ಭವಿಷ್ಯದ ಮೇಲೆ ಜ್ಞಾನದ ಬೆಳಕು ಮೂಡಿಸಿದ
ಶಿಸ್ತು ಬದ್ದ ಜೀವನದಲಿ
ಸಾಗಿಸಿದ,
ಗುರುವೆ ನಮನಗಳು.

ಪುಷ್ಪಾ ಮುರಗೋಡ
ಗೋಕಾಕ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group