spot_img
spot_img

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

Must Read

- Advertisement -

ರಾಜಗುರು- ಗುರುರಾಜರು

ದೇವರ ಅನುಗ್ರಹದಿಂದಾಗಿ ನಮ್ಮ ಸಮಗ್ರಜೀವನ ನಡೆಯುತ್ತದೆ. ನಮ್ಮ ಸೃಷ್ಟಿಯಾಗಲಿ ಸ್ಥಿತಿಯಾಗಲಿ ಎಲ್ಲವೂ ಭಗವಂತನ ಕಾರುಣ್ಯ. ಆ ಭಗವಂತನನ್ನು ಕಾಣುವುದೇ ನಮ್ಮ ಜೀವನದ ಪರಮಗುರಿ. ಆದರಿಂದಲೇ ನಮ್ಮ ಎಲ್ಲ ಪುರುಷಾರ್ಥಗಳೂ ಸಿದ್ಧಿಸುವಂಥಹದ್ದು.

ಸಕಲ ಸಮಸ್ಯೆಗಳ ಬಂಧನದಿಂದ ಮೋಕ್ಷ ಆಗಬೇಕಾಗಿದ್ದರೆ ಪರಮಾತ್ಮನ ಕಾರುಣ್ಯವೇ ಪ್ರಧಾನವಾದ ಸಾಮಗ್ರಿ. ಆ ಭಗವಂತನ ಕಾರುಣ್ಯ ನಮ್ಮಲ್ಲಿ ಹರಿಯಬೇಕಾಗಿದ್ದರೆ ಭಗವಂತನ ದರ್ಶನ ಆಗಬೇಕು. ಭಗವಂತನ ದರ್ಶನ ಆಗಬೇಕಾಗಿದ್ದರೆ ಭಗವಂತನಿಗೂ ನಮಗೂ ಮಾಧ್ಯಮರಾದಂತಹ ಗುರುಗಳ ಅವಶ್ಯಕತೆ ಇದೆ. ಅಂತಹ ಗುರುಗಳು ಜಗದ್ಗುರುಗಳಾದ ವಾಯುದೇವರ ಅವತಾರರಾದ ಶ್ರೀಮಧ್ವಾಚಾರ್ಯರು-ಶ್ರೀಮದಾನಂದ ತೀರ್ಥ ಭಗವತ್ಪಾದರು.

ಅವರ ಅನುಗ್ರಹ ಆಗಬೇಕಾಗಿದ್ದರೆ, ಅವರನ್ನು ಹಾಗೂ ಭಗವಂತನನ್ನು ನಮ್ಮೆಡೆಗೆ ತಲುಪಿಸುವವರು ಬೇಕು. ಅವರೇ ಶ್ರೀರಾಘವೇಂದ್ರ ಗುರುಸಾರ್ವಭೌಮರು. ಕಲಿಯುಗದ ಕಲ್ಪವೃಕ್ಷ. ಕಾಮಧೇನು ಎಂದೇ ಪ್ರಖ್ಯಾತರಾದವರು. ಹಾಗಾಗಿ ದೇಶದಾದ್ಯಂತ ಅವರ ಮೃತ್ತಿಕಾ ಬೃಂದಾವನಗಳು, ಮಠಮಂದಿರಗಳು, ಭಜನೆಗಳು ರಾರಾಜಿಸುತ್ತಿವೆ.

- Advertisement -

ದಾಸರಿಗೆ ರಾಯರು ಅಂದರೆ ಆದೆಷ್ಟು ಪ್ರಾಣ. ಸುಮಾರು ನಾಲ್ಕುನೂರು- ಐದುನೂರಕ್ಕೂ ಮಿಗಿಲಾದ ಪ್ರಾಚೀನವಾದ ಹಾಡುಗಳನ್ನು ರಾಯರ ಬಗ್ಗೆ ನಾವು ಕಾಣುತ್ತಾ ಇದ್ದೇವೆ. ರಾಯರು ಅಂದರೆ ಎಲ್ಲರಿಗೂ ಮಠಾತೀತವಾಗಿ, ಮತಾತೀತವಾಗಿ, ಲಿಂಗಾತೀತವಾಗಿ ಅಪಾರವಾದ ಭಕ್ತಿ ಇದೆ. ಅಂತಹ ರಾಯರ ಬಗ್ಗೆ ಕೊಂಡಾಡಿದಷ್ಟೂ ಜನರಿಗೆ ತೃಪ್ತಿಯಿಲ್ಲ. ರಾಯರ ಸೇವೆ ಮಾಡಿದಾಗ ಅವರು ಅಷ್ಟೇ ಕಾರುಣ್ಯದಿಂದ ಅಮ್ಮನು ಕಂದಮ್ಮನನ್ನು ಪೊರೆವರೀತಿಯಲ್ಲಿ ರಕ್ಷಿಸುತ್ತಾರೆ, ಸ್ಪಂದಿಸುತ್ತಾರೆ.

ತತ್ವಜ್ಞಾನ ಪ್ರಪಂಚಕ್ಕೆ ಕನ್ನಡನಾಡಿನ ಹೆಮ್ಮೆಯ ಕಾಣಿಕೆ ಆಚಾರ್ಯ ಮಧ್ವರು. ಆಚಾರ್ಯರ ಸರ್ವಮೂಲಗ್ರಂಥಗಳು, ತತ್ವಸಿದ್ಧಾಂತಗಳು ಕೇವಲ ಪುಸ್ತಕದ ಪುಟಗಳಲ್ಲಿರಲು ಯೋಗ್ಯವಾದವುಗಳಲ್ಲ. ಆಚರಣೀಯಗಳು. ಅನುಸರಣೀಯಗಳು. ಆಚಾರ್ಯರ ಇಂತಹ ತತ್ವಜ್ಞಾನವನ್ನು ಹೊಂದಿ ಜೀವನ ನಡೆಸಿದಲ್ಲಿ ಯಾವ ಮಟ್ಟದ ಎತ್ತರಕ್ಕೆ ಏರಬಹುದು ಭವ್ಯ ಸಾಕ್ಷಿ ಶ್ರೀರಾಘವೇಂದ್ರ ಗುರುಸಾರ್ವಭೌಮರು. ಆಚಾರ್ಯರ ಪರಂಪರೆಯನ್ನು ಬೆಳಗಿದವರು. 

ಜಾತಿ, ಮತ, ಲಿಂಗ ಭೇದಗಳಿಲ್ಲದೆ ಸರ್ವಮಾನ್ಯರೆನಿಸಿದವರು. ತವಸಂಕೀರ್ತನಂ ವೇದಶಾಸ್ತ್ರರ್ಥಜ್ಞಾನಸಿದ್ಧತೇ ಎಂಬ ರಾಯರ ಶಿಷ್ಯ ಅಪ್ಪಣಾಚಾರ್ಯರ ಮಾತು ಶ್ರೀರಾಘವೇಂದ್ರ ಗುರುಗಳ ಮಹತ್ವವನ್ನು ಸಾರಿದೆ. ಕೇವಲ ಅವರ ನಾಮಸ್ಮರಣೆಯೇ ಸಕಲಶಾಸ್ತ್ರಗಳ ಸಿದ್ಧಿಗೆ ಕಾರಣವಾಗುವುದಾದರೆ ಅವರ ಗ್ರಂಥಗಳ ಅಧ್ಯಯನವನ್ನು ನಡೆಸಿದಲ್ಲಿ ಸಿಗುವ ಲಾಭ ಅಗಣಿತ ಎಂದು ಬೇರೆ ಹೇಳಬೇಕಾಗಿಲ್ಲ. 

- Advertisement -

ಕರ್ಮಯೋಗಿ- ಕಾಮಧೇನು- ಕಲವೃಕ್ಷ

ಭಕ್ತರ ಕಾಮಧೇನು ಎನಿಸಿದ ಮಧ್ವ ದುಗ್ಧಾಬ್ಧಿಚಂದ್ರನೆನಿಸಿದ, ಶ್ರೀರಾಘವೇಂದ್ರ ಗುರುಸಾರ್ವಭೌಮರು ಅಪಾರ ಮಹಿಮಾ ಭೂಷಿತರು, ಸಜ್ಜನ ಮಾನ್ಯರು, ಲೌಕಿಕಾ ಲೌಕಿಕಫಲಪ್ರದರು. ಅವರ ಮಹಿಮೆಯನ್ನು ತಿಳಿಸುವುದೆಂದರೆ ಪಾವನಗಂಗೆಯ ಒಂದು ಬಿಂದುವಿನ ಮಹಿಮೆಯನ್ನು ತಿಳಿಸಿದಂತಾಗುತ್ತದೆ. 

ಕಲಿಯುಗ ಕಲ್ಪತರು ಎಂದೇ ಪ್ರಸಿದ್ಧರಾದವರು ಶ್ರೀರಾಘವೇಂದ್ರ ಗುರುಸಾರ್ವಭೌಮರು. ಎಲ್ಲ ಭಕ್ತರಿಗೂ ಬೇಕಾದ ದೇವರೆಂದರೆ ತಿರುಪತಿಯ ಶ್ರೀನಿವಾಸನಾದರೆ, ಎಲ್ಲ ಭಕ್ತರಿಗೂ ಬೇಕಾದ ಗುರುಗಳೆಂದರೆ ಮಂತ್ರಾಲಯದ ರಾಯರು. ಶಾಸ್ತ್ರಗಳಿಂದ ವಿದ್ವಾಂಸರಿಗೆ, ಚರಿತ್ರೆಯಿಂದ ಸಜ್ಜನ ವೃಂದಕ್ಕೆ ಈಗಲೂ ನಡೆಯುವ ಪವಾಡಗಳಿಂದ ಸರ್ವರಿಗೂ ಅಚ್ಚರಿ ಮೂಡಿಸಿ ಅಲೌಕಿಕ ಶಕ್ತಿಯಲ್ಲಿ ವಿಶ್ವಾಸವನ್ನು ಮೂಡಿಸಿ ವೃಂದಾವನದಲ್ಲಿ ಕುಳಿತು ಇಂದಿಗೂ ಆಧ್ಯಾತ್ಮದೆಡೆಗೆ ಸಮಾಜವನ್ನು ಕೊಂಡೊಯ್ಯುವ ಮಹಾಮಹಿಮರು ಮಂತ್ರಾಲಯ ಪ್ರಭುಗಳು. 

ಕರೆದಲ್ಲಿಗೆ ಬರುವವರು. ತಾನಿದ್ದಲ್ಲಿಗೆ ಕರೆವವರು ರಾಯರು. ಕಾಮಧೇನು ಕಲ್ಪವೃಕ್ಷ. ಬೇಡಿದವರಿಗೆ ಅನಲ್ಪಫಲವನ್ನು ಅನತಿಕಾಲದಲ್ಲಿ ಅನುಗ್ರಹಿಸುವವರು. ಆಸೆಯನ್ನು ಕಳೆದುಕೊಂಡ ಭಕ್ತನಿಗೆ ಆಸರೆಯನ್ನು ಕರುಣಿಸುವವರು. ಇನ್ನೇನಿಲ್ಲ ಬದುಕಿನಲ್ಲಿ ಎಂದು ನಿರಾಸೆಗೊಂಡವನಿಗೆ ಎಲ್ಲವೂ ನಾನೇ ಎಂಬ ಭರವಸೆಯ ಭದ್ರತೆಯನ್ನು ತುಂಬಿದವರು. ಲೋಕೋದ್ಧಾರಕರಾದ ಗುರುರಾಘವೇಂದ್ರರ ಮಹಿಮೆಯನ್ನು ಪೂರ್ಣವಾಗಿ ಬಲ್ಲವರಾರು? ಐಹಿಕ-ಆಧ್ಯಾತ್ಮಿಕ ಜಗತ್ತಿಗೆ ಅವರ ಕೊಡುಗೆ ಅಗಣಿಯ. ಅಂತಹ ಗುರುರಾಯರ ಜೀವನ ಚರಿತ್ರೆ, ಪವಾಡ, ಅವರು ರಚಿಸಿದ ಅಮೂಲ್ಯ ಗ್ರಂಥಗಳು, ಟಿಪ್ಪಣಿಗಳು, ಟಿಪ್ಪಣಿಗಳು ಅಸಾಧಾರಣವಾದವುಗಳು. 

ರಾಘವೇಂದ್ರತೀರ್ಥರನ್ನು ಆಬಾಲಗೋಪಾಲರೂ ಅರಿತಿರುವರು. ರಾಘವೇಂದ್ರ ತೀರ್ಥರೆಂದರೆ ಕಲಿಯುಗದ ಕಲ್ಪವೃಕ್ಷ, ಕಾಮಧೇನುವಾಗಿದ್ದಾರೆ. ಕಲ್ಪವೃಕ್ಷವು ತಾನಿದ್ದಲ್ಲಿಗೆ ಬಂದ ಆರ್ಥಿಗಳಿಗೆ ಇಷ್ಟಾರ್ಥಪೂರ್ತಿ ಮಾಡಿದರೆ, ಕಾಮಧೇನುವು ಆರ್ಥಿಗಳ ಸಮೀಪಕ್ಕೆ ಆಗಮಿಸಿ ಇಷ್ಟಾರ್ಥ ಪೂರೈಸುತ್ತದೆ. ಹಾಗೆಯೇ ಶ್ರೀರಾಘವೇಂದ್ರ ಗುರುಗಳು ತಾವಿರುವ ಬೃಂದಾವನಗಳನ್ನು ಭಕ್ತರು ಹೋಗಿ ಸೇವಿಸಿದರೂ ಅಥವಾ ಮನೆಯಲ್ಲಿ ಮೃತ್ತಿಕೆ, ಪಾದುಕೆ, ಚಿತ್ರಗಳನ್ನಿಟ್ಟು ಕರೆದರೂ ಬಂದು ಅನುಗ್ರಹಿಸುವ ಮಹಾನುಭಾವರು. 

ಪ್ರಹ್ಲಾದರಾಜರಾಗಿ ನೃಸಿಂಹನ ಅಭಯಹಸ್ತ ಶಿರದಲ್ಲಿ ಹೊಂದಿದವರು. ಬಾಹ್ಲೀಕ ರಾಜರಾದಾಗ ಭೂಭಾಗಹರಣದಲ್ಲಿ ಭಾಗವಹಿಸಿ ಶ್ರೀಕೃಷ್ಣ ಭೀಮಸೇನರ ಅಭಯಹಸ್ತ ಪಡೆದವರು. ವ್ಯಾಸರಾಜರಾದಾಗ ಶ್ರೀಕೃಷ್ಣನನ್ನು ಕುಣಿಸಿದವರು, ರಾಘವೇಂದ್ರರಾದಾಗ ಮೂಲರಾಮನನ್ನು ಮೆಚ್ಚಿಸಿದವರು. ರಾಘವೇಂದ್ರರು ಐವತ್ತನಾಲ್ಕು ಉಪಯುಕ್ತ ಗ್ರಂಥ ರಚಿಸಿ ತಮ್ಮ ಗ್ರಂಥಗಳಿಂದಾಗಿ ಸಾರಸ್ವತ ಪ್ರಪಂಚಕ್ಕೆ ಅದ್ಭುತ ಕೊಡುಗೆ ನೀಡಿದರು. 

ಸಂಗೀತ ಸರಸ್ವತೀ ನಾಲಿಗೆಯೊಳಗೆ. ವೀಣಾವೆಂಕನಾಥ ಮಹಾಭಾಷ್ಯ ವೆಂಕಟನಾಥ ಇತ್ಯಾದಿ ಬಿರುದುಗಳು. ಇಂತಹ ಗುರುಗಳನ್ನು ‘ನಾಸ್ತಿ’ ಎಂಬುದು ನಾಸ್ತಿ. ಅತ್ಯಂತ ದಯಾಳುಗಳು. ಇಂತಹ ಗುರುಗಳನ್ನು ನಿತ್ಯವೂ ಸೇವಿಸಿದವನಿಗೆ ಆಯುರ್ವಿದ್ಯಾಯಶೋಬಲ ಖಂಡಿತ ಪ್ರಾಪ್ತವಾಗುತ್ತದೆ.

ವ್ಯಾಸರಾಜರಾಗಿದ್ದಾಗ ಏಳುನೂರು ಮೂವ್ವತ್ತೆರಡು ಹನುಮನನ್ನು ದೇಶಾದ್ಯಂತ ಸ್ಥಾಪಿಸಿದ್ದರು. ವಾಯುದೇವರಾದರೋ ರಾಘವೇಂದ್ರ ಬೃಂದಾವನಗಳನ್ನು ಏಳುಸಾವಿರದ ಮುನ್ನೂರ ಇಪ್ಪತ್ತಕ್ಕೂ ಮಿಗಿಲಾಗಿ ಸ್ಥಾಪಿಸಿರುವಂತೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಸನಾತನ ಧರ್ಮ ಉಳಿದಿದೆ. 

ಸತ್ಯ=ಬ್ರಹ್ಮಮೀಮಾಂಸಾ, ಧರ್ಮ=ಭಾಗವತದ ಧರ್ಮಗಳು ಇವುಗಳಲ್ಲಿ ರತರಾದ್ದರಿಂದಲೇ ರಾಘವೇಂದ್ರರು ಪೂಜ್ಯರು.  

ಧರ್ಮ ಭಾರತದ ಕಣ್ಣು. ಭಾರತೀಯರ ಹೃದಯ. ನಮ್ಮೆಲ್ಲರ ನರನಾಡಿಗಳಲ್ಲಿ ನಿರಂತರ ಹರಿಯುತ್ತಿರುವ ಅಂತರಗಂಗೆ ಅದು. ಗುಪ್ತವಾಗಿ ಹರಿಯುತ್ತಿರುವ ಸರಸ್ವತಿ. ನಮ್ಮೆಲ್ಲರ ಒಳಗೆ ಹೊರಗೆ, ಹಗಲು-ರಾತ್ರಿ ಎಡೆಬಿಡದೆ ನಮ್ಮೊಡನೆ ಇರುವ ಆ ದೇವರೇ ನಮ್ಮ ನಿಜವಾದ ಸುಖ. ಆ ಸಖನನ್ನು ಕಂಡಾಗಲೇ ನಮಗೆ ನಿಜವಾದ ಸುಖ, ಹರಿಗುರುಗಳ ಅನುಗ್ರಹ ರಕ್ಷಾಕವಚ. ಪರಮಾತ್ಮನಲ್ಲಿ ಮಾಡುವ ಭಕ್ತಿಯಂತೆಯೇ ಗುರುಗಳಲ್ಲಿ ಭಕ್ತಿ ಮಾಡಬೇಕು.

ಗುರುವಿನ ಅನುಗ್ರಹವಾದಾಗ ಕುರುಕ್ಷೇತ್ರವೂ ಗುರುಕ್ಷೇತ್ರವಾಗುತ್ತದೆ. ನಿಜವಾದ ಗುರುವಿನ ಮಾರ್ಗದರ್ಶನ ಸಾಧನಾ ಮಾರ್ಗದ ದಾರಿದೀಪ. ಗುರುಗಳೆಂದರೆ ಇವರೇ ಗುರುಗಳು ಕಾಣೋ. ಅವರೇ ಮಂತ್ರಾಲಯದ ಗುರುಸಾರ್ವಭೌಮರು ಬೃಂದಾವನಚಂದ್ರ ಶ್ರೀರಾಘವೇಂದ್ರರು. ಲೌಕಿಕ ಪ್ರಯೋಜನ ಹಾಗೂ ಪಾರಲೌಕಿಕ ಶ್ರೇಯಸ್ಸು ಎರಡನ್ನೂ ನೀಡುವ ಕೃಪಸಾಗರರು ಇವರು. 

ಗುರುರಾಘವೇಂದ್ರರ ಅನುಭಾವ 

ಶ್ರೀರಾಘವೇಂದ್ರಸ್ವಾಮಿಗಳು ಈ ಕಾಲದ ದೊಡ್ಡ ವಿಸ್ಮಯ. ಜನರನ್ನು ಮಂತ್ರಮುಗ್ಧವಾಗಿಸುವ ಅವರ ಹೆಸರೇ ಒಂದು ದೊಡ್ಡ ಪವಾಡ. ನಾಸ್ತಿಕ್ಯ ವಿಜೃಂಭಿಸುತ್ತಿರುವ ಈ ಕಾಲದಲ್ಲೂ ಅವರ ಹೆಸರನ್ನು ಕೇಳುತ್ತಲೇ ಎಂತಹ ಕಟು ನಾಸ್ತಿಕನೂ ಸಹ ತಲೆ ಬಾಗುವಂತಾಗುವನು. ಮಧ್ವಸಿದ್ಧಾಂತದ ತತ್ವಗಳಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಸರ್ವಜನರಿಗೂ ಪ್ರಿಯವೆನ್ನಿಸಿದ ಅವರ ನಡೆನುಡಿಗಳು ಲೋಕಕ್ಕೆ ಆದರ್ಶಪ್ರಾಯ.

ಮಧ್ವ ಸಿದ್ಧಾಂತದ ಸರಿಯಾದ ಪರಿಜ್ಞಾನ ಹಾಗೂ ಸೂಕ್ತ ಪರಿಪಾಲನೆ ಕೊಂಡೊಯ್ಯುವ ಎತ್ತರಕ್ಕೆ ಅವರು ಜ್ವಲಂತ ನಿದರ್ಶನ. ತಪಸ್ಸು, ಪಾಂಡಿತ್ಯ, ಪಾಠ-ಪ್ರವಚನ, ಗ್ರಂಥರಚನೆ, ವಾದಿಜಯ, ಸಂಚಾರ, ರಾಜಮಹಾರಾಜರಿಗೆ ಮಾರ್ಗದರ್ಶನ, ಆರ್ತರಿಗೆ ರಕ್ಷಣೆ ಮೊದಲಾದ ಬಗೆಬಗೆಯ ಕಾರ್ಯಗಳನ್ನು ಎಡಬಿಡದೆ ಮಾಡಿದ ಹಿರಿಮೆ ಅವರದು. ಜಾತಿ-ಮತಗಳಿಗೆ ಮೀರಿ ಪೂಜ್ಯತೆಯನ್ನು ಗಳಿಸಿರುವ ಮಹಿಮೆ ಅವರದು. ಅವರ ಅನಂತರದ ಹರಿದಾಸರನ್ನೊಳಗೊಂಡಂತೆ ಸಕಲ ಜ್ಞಾನಿಗಳು ಸಹ ಅವರ ಬಗ್ಗೆ ಆದರವನ್ನು ತೋರಿರುವರು. ಅವರ ಗ್ರಂಥಗಳ ಅಧ್ಯಯನ ತಾತ್ತ್ವಿಕ ಚಿಂತನೆಗ ತೋರುವ ಬೆಳಕು ಅಪೂರ್ವ ಹಾಗೂ ಅಪಾರ. ಅವರ ಜೀವನಾದರ್ಶದ ಅಧ್ಯಯನ ಜೀವನೋತ್ಸಾಹವನ್ನು ಅರಳಿಸಬಲ್ಲದು.

ಅವರ ಹೆಸರಿನಲ್ಲಿ ಕೊಟ್ಯಂತರ ಜನ ಇಂದು ಸುಖ-ಸಂತೋಷವನ್ನು ಕಾಣಲು ಸಾಧ್ಯವಾಗಿದ್ದಾರೆ ಎಂದರೆ, ಅದು ನಿಜಕ್ಕೂ ತತ್ತ್ವಜ್ಞಾನದ ವಿಜಯ ಎಂದೇ ಭಾವಿಸಬೇಕು. ಅವರಿಂದಾಗಿ ಮಂತ್ರಾಲಯ ಎಂಬ ಒಂದು ಗುರುಕ್ಷೇತ್ರವೇ ಭಾರತದ ಭೂಪಟದಲ್ಲಿ ರೂಪುಗೊಂಡಿದೆ ಎಂಬುದು ಈ ಕಾಲದ ಅದ್ಭುತಗಳಲ್ಲೊಂದು. ಮೂಲತಃ ಬೃಹಸ್ಪತಿವಾರದ ಗುರುವಾರವು ಇತ್ತೀಚಿನ ದಿನಗಳಲ್ಲಿ ಶ್ರೀರಾಘವೇಂದ್ರ ಗುರುರಾಯರ ವಾರ ಎಂದೇ ರೂಢಿಗೆ ಬಂದಿರುವುದು ಅವರ ಹಿರಿಮೆಗೆ ಹಿಡಿದ ಕನ್ನಡಿ.ಒಟ್ಟಾಗಿ ಇವರಿಂದ ಸಮಸ್ತವೈಷ್ಣವ ಗುರುವೃಂದಕ್ಕೆ ಗೌರವ ಲಭಿಸಿದಂತಾಗಿದೆ ಎನ್ನಬಹುದು.

ಕಲಿಯುಗದ ಕಲ್ಪವೃಕ್ಷ ಕಾಮಧೇನು ರಾಘವೇಂದ್ರಸ್ವಾಮಿಗಳು, ಪರಮ ಕರುಣಾಮೂರ್ತಿಗಳು. ನ್ಯಾಯಸುಧಾ, ಪರಿಮಳ, ತತ್ವಪ್ರಕಾಶಿಕಾ, ಭಾವದೀಪ, ಚಂದ್ರಿಕಾ ಪ್ರಕಾಶ ಮುಂತಾದ ಉದ್ಗ್ರಂಥಗಳನ್ನು ರಚಿಸಿ ಪಂಡಿತರಿಗೆ ಜ್ಞಾನವನ್ನಿತ್ತು ಕರುಣಿಸಿರುವುದಲ್ಲದೆ ಉಪನಿಷತ್ ಖಂಡಾರ್ಥ ಗೀತಾವಿವೃತ್ತಿ, ರಾಮಚಾರಿತ್ರ್ಯ ಮಂಜರಿ ಮೊದಲಾದ ಕೃತಿಗಳ ಮೂಲಕ ಸಾಮಾನ್ಯ ಜಿಜ್ಞಾಸುಗಳಿಗೂ ತತ್ವಜ್ಞಾನದ ಸುಧೆ ನೀಡಿ ಅವಿಸ್ಮರಣೀಯವಾದ ಉಪಕಾರವನ್ನು ಮಾಡಿದ್ದಾರೆ. ಬೃಂದಾವನಗಳಲ್ಲಿ ನಿಂದವರಾಗಿ ತಮ್ಮ ತಪಃಶಕ್ತಿಯಿಂದ ಭಕ್ತಿಯನ್ನು ಅನುಗ್ರಹಿಸಿರುವುದರ ಜೊತೆಗೆ ಅತೀಂದ್ರಿಯ ಶಕ್ತಿಯ ನಂಬಿಕೆ ಮೂಡಿಸಿ ನಾಸ್ತಿಕ್ಯವನ್ನು ನಿರಾಕರಿಸಿಆಸ್ತಿಕರ ಆಶಾದೀಪವಾಗಿದ್ದರೆ. ಶ್ರೀಮದಾಚಾರ್ಯರ, ಟೀಕಾಚಾರ್ಯರ, ಅಂತರ್ಯವನ್ನು ಸ್ಫುಟಪಡಿಸಲು ರಾಘವೇಂದ್ರರ ಟಿಪ್ಪಣಿ ಗ್ರಂಥಗಳು ಸಂಗ್ರಹಕೋಶವಾಗಿದ್ದು ಅಪೂರ್ವಾಂಶಗಳನ್ನು ಒಳಗೊಂಡು ಎಲ್ಲ ವರ್ಗದ ಸಾಧಕರಿಗೆ ಉಪಯುಕ್ತವಾಗಿವೆ. ರಾಘವೇಂದ್ರಸ್ವಾಮಿಗಳ ಎಲ್ಲ ಗ್ರಂಥಗಳ ಅಧ್ಯಯನ ಅಧ್ಯಾಪನ ಅವರ ವಿಶೇಷ ಅನುಗ್ರಹಕ್ಕೆ ಕಾರಣ. ರಾಘವೇಂದ್ರಸ್ವಾಮಿಗಳಿಗೆ ಅವರ ಗ್ರಂಥಗಳ ಮನನಕ್ಕಿಂತ ಪ್ರಿಯವಾದ ಕಾರ್ಯ ಮತ್ತೊಂದಿಲ್ಲ.

ಸಮುದ್ರದಲ್ಲಿ ಸಾಗುತ್ತಿರುವ ವ್ಯಕ್ತಿ ದಿಕ್ಕುತಪ್ಪುವ ಸಾಧ್ಯತೆಗಳಿರುತ್ತವೆ. ಆದರೆ ಧ್ರುವನಕ್ಷತ್ರದ ಕಡೆಗೆ ಗಮನವಿದ್ದರೆ ದಿಕ್ಕು ತಪ್ಪಲಾರ.ನಾವು ಧ್ರುವತಾರೆಯನ್ನು ಮುಟ್ಟಲಾರೆವು. ಆದರೆ ಧ್ರುವತಾರೆ ನಮ್ಮ ಮುಂದಿದ್ದರೆ ದಿಕ್ಕು ತಪ್ಪಲಾರೆವು. ಗುರುಸಾರ್ವಭೌಮ ಶ್ರೀರಾಘವೇಂದ್ರತೀರ್ಥರು ಸಹೃದಯ ಪ್ರಪಂಚದ ಧ್ರುವತಾರೆ.

‘ಗುರುವಿಲ್ಲದವನಿಗೆ ಗುರಿಯಿಲ್ಲ’ ಎಂಬ ನಾಣ್ಮುಡಿಯಿದೆ. ಚಿಕ್ಕಚಿಕ್ಕ ಗುರುಗಳನ್ನು ಮುಟ್ಟಲು ಗೆಳೆಯರು, ಸಂಬಂಧಿಗಳ ಸಹಕಾರ ಸಾಕಾಗುತ್ತದೆ. ತಂದೆ-ತಾಯಿಯರ ಆಶೀರ್ವಾದದ ಬಲವೂ ಸಾಕಾದೀತು. ಆದರೆ ಮನುಷ್ಯ ಜೀವನದ ಹೆಗ್ಗುರಿಯಾದ ನಿಃಶ್ರೇಯಸವನ್ನು ಪಡೆಯಲು ಶ್ರೀರಾಯರಂಥ ಗುರುಗಳ ಅನುಗ್ರಹ ಬೇಕು.

ಜೀವನವು ಹುಡುಗಾಟವಲ್ಲ. ಅದು ನಿಜನೆಲೆಯ ಹುಡುಕಾಟ.‘ನಾನು’ ಎಂದರೇನು? ‘ನನ್ನದು’ ಎಂದರೇನರ್ಥ? ಕಣ್ಣಿಗೆ ಕಾಣದ ಪರದೈವಕ್ಕೂ ನನಗೂ ಏನು ಸಂಬಂಧ? ಬದುಕು ಬಂಗಾರವಾಗಬೇಕಾದರೆ ಎಂತಹ ಭಾವಶುದ್ಧಿ ಬೇಕು? ಇಂತಹ ವಿಷಯಗಳನ್ನು ತಾವು ಕಂಡು ಕಾಣದ ನಮಗೆಲ್ಲ ತಿಳಿಸಿದ ಕರುಣಾಳುಗಳು ರಾಯರು. ನಿಜನೆಲೆಯ ಹುಡುಕಾಟದಲ್ಲಿ ಸೋತು ಸುಣ್ಣವಾಗಿ ಸಂತಾಪಗೊಂಡ ಜನತೆಗೆ ಚಂದಿರನಂತೆ ತಂಪುಬೆಳಕಿತ್ತು ಮುದಗೊಳಿಸುವ ರಾಯರ ಚರಿತ್ರೆ ಹಾಗೂ ವೈಭವಗಳನ್ನು ಅಧ್ಯಯನ ಮಾಡುವುದರಿಂದ ಸಮಾಜವೂ ಶುದ್ಧವಾಗುತ್ತದೆ.

ಅನನ್ಯ ಯತಿವರೇಣ್ಯ.

‘ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರಸ್ವಾಮಿಗಳ ಹೆಸರನ್ನು ಕೇಳದವರು ವಿರಳಾತಿವಿರಳ. ರಾಯರು ಎಂದರೆ ಧೀಮಂತಿಕೆಯ ರಾಷ್ಟ್ರಸಂತ. ವಿಶ್ವವ್ಯಾಪಿ ಮನ್ನಣೆ ಪಡೆದ ಕೀರ್ತಿವಂತ. ಜೀವನದಲ್ಲಿ ನೊಂದು ಬೆಂದವರಿಗೆ ವಸಂತ.ಅವರು ಜೀವನದ ಸಾರ್ಥಕ ಕ್ಷಣಗಳ ಉದ್ದಕ್ಕೂ ಮಾಡಿದ್ದು ಮಹಾ ಸಾಧನೆ. ಅವರ ನೆನೆಯುವುದೇ ಇಂದು ಭಕುತ ಕೋಟಿಗೆ ದೊಡ್ಡ ಸಾಧನೆ.

ಅವರು ಕರೆದಲ್ಲಿಗೆ ಬರುವಷ್ಟು ದಯಮಯಿ. ಹಾಗಾಗಿ ಅವರು ಭಕ್ತಗಣ ಕಾಮಧೇನು.ರಾಯರೆಂದರೆ ನಮ್ಮೆಲ್ಲರ ಭವದ ಕಡಲು ದಾಟಿಸಲು ನಿಂತ ಅಂಬಿಗ. ಒಳಗೆ ಸುಳಿದು ಕೈಯ್ಯ ಪಿಡಿದು ಕಷ್ಟ ದೂರ ಮಾಡುವ ಧೀಮಂತ ಸಂತ. ಸಾವಿರಾರು ಪ್ರಣಾಮ, ಪ್ರಶಂಸೆಗಳಿಗೆ ಭಾಜನರಾಗಿರುವ ಅನನ್ಯ ಯತಿವರೇಣ್ಯ.

ಮಂತ್ರಾಲಯ ಪ್ರಭುಗಳೆಂದೇ ಖ್ಯಾತರಾದ ರಾಯರು ಅತ್ಯಂತ ಸರಳವಾಗಿ ಭವ ಲೋಕದ ಜೀವಿಗಳಿಗೆ ಹೇಳಿದ ಸಂದೇಶದ ಉದಾತ್ತತೆಗಳನ್ನು ಬಣ್ಣಿಸಲು ಅಸಾಧ್ಯವೇ ಸರಿ.

ರಾಘವೇಂದ್ರರು ಎಂದರೆ ಸತ್ಯ ಸಂಧತೆಯ ರುವಾರಿ. ಧರ್ಮ ಮಾರ್ಗ ಸಂಚಾರಿ. ನಂಬಿದವರನ್ನೆಲ್ಲಾ ಜಾತಿ ಮತ ನೋಡದೇ ಅನುಗ್ರಹಿಸುವುದರಲ್ಲಿ ಅವರು ಅಗ್ರಗಣ್ಯರು. ಶ್ರೀರಾಘವೇಂದ್ರರು ಹತ್ತಾರು ಮತದ ಲಕ್ಷಾಂತರ ಜನ ಭಕುತರ ಮತಿ ಪರಿವರ್ತನೆ ಮಾಡಿ ಅವರೆಲ್ಲರ ಜೀವನ ಗತಿಯನ್ನೇ ಸುಧಾರಿಸಿದ್ದಾರೆ. ಹಾಗಾಗಿ ಅವರು ಒಬ್ಬ ಸಮಾಜಮುಖಿ ಸಂತರೇ ಆಗಿದ್ದಾರೆ ಎನ್ನಬಹುದು.


ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು 9739369621

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group