ಸೋಮವಾರ ದಿ. 9 ರಂದು ಬೆಳಗಾವಿಯ ಕಾರಂಜಿ ಮಠದಲ್ಲಿ ‘ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ’ ಮತ್ತು ಕಾರಂಜಿಮಠ ಬೆಳಗಾವಿ ಇವರ ಆಶ್ರಯದಲ್ಲಿ ದಿ. ಸಿದ್ದರಾಮಯ್ಯ ಚರಂತಿಮಠ ಇವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ವಿಭಾಗದ ಅಪರ ಪ್ರಾದೇಶಿಕ ಆಯುಕ್ತರಾದ ನಜಮಾ ಪೀರಜಾದೆರವರು ಮಾತನಾಡಿ ಇಂದು ‘ಆಸ್ತಿ’ ಎನ್ನುವುದು ‘ಅಸ್ತಿ’ ಆಗುವವರೆಗೆ ಜನರಿಗೆ ಬೇಕಾಗಿದೆ. ಆಸ್ತಿ ವ್ಯಾಮೋಹ ದೂರವಾಗಲಿ, ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ. ಆಸ್ತಿ ಇದ್ದವರು ಮತ್ತು ಇಲ್ಲದವರ ನಡುವಿನ ಅಂತರ ದೂರವಾಗಲು ಉದಾರತೆಯಿಂದ ದಾನಮಾಡಬೇಕು ಅದುವೇ ನಿಜವಾದ ಮನುಷ್ಯತ್ವ. ಜಾತಿ ಧರ್ಮ ನಮ್ಮನ್ನು ಕಾಯುವದಿಲ್ಲ. ನಮ್ಮ ಕರ್ಮ ನಮ್ಮನ್ನು ಕಾಯುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಮ. ನಿ. ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನದಲ್ಲಿ, ಆಡಂಬರದ ಆಚರಣೆ ಬಿಟ್ಟು ಹೆಸರುಳಿಸಲು ದಾನ ಮಾಡಿ. ನಾವೆಲ್ಲಾ ಕೇವಲ ಹೇಳುವುದನ್ನು ಬಿಟ್ಟು ಹೇಳಿದಂತೆ ನಡೆಯುವಂತಾಗಬೇಕು. ಇನ್ನೊಬ್ಬರನ್ನು ತುಚ್ಚವಾಗಿ ಕಾಣದೆ ಸಹಾಯ ಹಸ್ತ ನೀಡಿ ಮಾನವೀಯತೆಯನ್ನು ಮೆರೆಯಬೇಕು ಎಂದರು.
ದತ್ತಿ ಕೊಡಮಾಡಿದ ಸಾಹಿತಿ ನೀಲಗಂಗಾ ಚರಂತಿಮಠ ಅವರ ‘ ಮುಕ್ತಾ0ಗನೆ’ ಮಹಾಕಾವ್ಯದ ಹಸ್ತಪ್ರತಿಯನ್ನು ಸ್ವಾಮೀಜಿಯವರು ಅನಾವರಣಗೊಳಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೊಳ್ಳಿ, ದತ್ತಿ ನಿಧಿಗಳು ಸಂಘಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಹಕಾರಿ ಆಗುವುದರ ಜೊತೆಗೆ ಸಮಾಜಪರ ಕೆಲಸಮಾಡಲು ಬಲ ನೀಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರಳಾ ಹೆರೇಕರ್, ಆಶಾ ಯಮಕನಮರಡಿ, ಜಯಶ್ರೀ ನಿರಾಕಾರಿ, ಸುನಂದಾ ಎಮ್ಮಿ, ಎಂ ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು, ಲೇಖಕಿಯರ ಸಂಘದ ಸದಸ್ಯರು ಮತ್ತು ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾರಂಜಿಮಠದ ‘ಅಪ್ಪಾಜಿ ಸಂಗೀತ ಬಳಗ’ದ ವತಿಯಿಂದ ಪ್ರಾರ್ಥನೆ ನೆರವೇರಿತು. ರಾಜೇಶ್ವರಿ ಹಿರೇಮಠ ವಚನದೊಂದಿಗೆ ಪ್ರಾರ್ಥಿಸಿದರು, ಜ್ಯೋತಿ ಬದಾಮಿ ಪರಿಚಯದೊಂದಿಗೆ ಸ್ವಾಗತಿಸಿದರು, ಇಂದಿರಾ ಮೋಟೆಬೆನ್ನೂರ ಕಾರ್ಯಕ್ರಮವನ್ನು ನಿರೂಪಿಸಿದರು, ಕೊನೆಯಲ್ಲಿ ವಿದ್ಯಾ ಹುಂಡೇಕಾರ ವಂದಿಸಿದರು.