ಮೂಡಲಗಿ: ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವುದು ಬಹಳ ಮುಖ್ಯ ಪಾತ್ರ, ಒಳ್ಳೆಯ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಂಡು ಸಮಾಜದ ಆಸ್ತಿಯಾಗಿ ತಂದೆ ತಾಯಿಯ ಪ್ರೀತಿಗೆ ಪಾತ್ರರಾಗಬೇಕೆಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ತ್ರಿವಿಕ್ರಮತೀರ್ಥ ಶ್ರೀಪಾದಂಗಳು ಹೇಳಿದರು.
ತಾಲೂಕಿನ ನಾಗನೂರ ಪಟ್ಟಣದ ಪ್ರಣಮ್ಯ ಎಜ್ಯುಕೇಶನ್ ಫೌಂಡೇಶನ್ ದ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಎಂದರೆ ಯಾರು ಎಂಬುದನ್ನು ನಾವು ಅರಿತಾಗ ಮಾತ್ರ ಆತನ ಜವಾಬ್ದಾರಿ ಹೆಚ್ಚಲು ಸಾಧ್ಯ. ವಿದ್ಯಾರ್ಥಿಗಳು ವಿದ್ಯೆಯನ್ನು ಸಂಪಾದಿಸುವುದೇ ಮುಖ್ಯ ಗುರಿಯಾಗಿರುತ್ತದೆ. ಅಕ್ಷರ ವಿದ್ಯೆ ಮಾತ್ರವಲ್ಲದೆ ಸಮಾಜದಲ್ಲಿ ಆರೋಗ್ಯಕರವಾದ ಬದುಕಿಗೆ ಏನೆಲ್ಲ ಅವಶ್ಯಕ ಮತ್ತು ಯಾವುದನ್ನು ಅಪೇಕ್ಷಿಸುತ್ತೇವೆಯೋ ಅವೆಲ್ಲವುಗಳ ವಿದ್ಯಾರ್ಜನೆಯೂ ವಿದ್ಯೆಯೇ ಆಗಿರುತ್ತದೆ ಎಂದು ಹೇಳಿದರು.
ಉದಯವಾಣಿಯ ಸುದ್ದಿ ವಿಭಾಗ ಮುಖ್ಯಸ್ಥ ಅಮರೇಗೌಡ ಗೋನಾವರ ಮಾತನಾಡಿ, ನಮ್ಮ ಈ ಮಣ್ಣಿನ ಸಂಸ್ಕಾರ ಉಳಿಸಯಬೇಕು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರೆ ಯುವ ಸಮುದಾಯಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿ ಪರಿಚಯವಾಗಬೇಕು ಇಲ್ಲದೆ ಹೋದರೆ ಕ್ರಮೇಣ ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಜೊತೆಗೆ ನಮ್ಮ ನಾಡಿನ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಹೇಗೆ ಮುಖ್ಯವೋ ಹಾಗೆ ವಿದ್ಯಾರ್ಥಿಗಳ ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಅಷ್ಟೇ ಮುಖ್ಯ ಪಾತ್ರವಹಿಸುತ್ತದೆ ಎಂದರು.
ಕುಂದರಗಿಯ ಶ್ರೀ ಅಮರೇಶ್ವರ ದೇವರು, ಕೊಣ್ಣೂರದ ಡಾ. ವಿಶ್ವಪ್ರಭು ಶ್ರೀಗಳು ಹಾಗೂ ಯಲ್ಲಟ್ಟಿಯ ಪ್ರೊ.ಬಿ.ಕೆ.ಕೊಣ್ಣೂರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ ಇದ್ದು, ಯಾವುದಕ್ಕೂ ಭಯಭೀತರಾಗದೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಕ್ರಾಂತಿಯನ್ನು ಮೂಡಿಸಿ ಎಂದು ಹೇಳಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಬಸನಗೌಡ ಆರ್.ಪಾಟೀಲ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಿಗಾರ, ಸಂತೋಷ ಬಾಗೋಜಿ, ಪರಸಪ್ಪ ಬಬಲಿ, ಬಸವರಾಜ ತಡಸನ್ನವರ ಮತ್ತಿತದ್ದರು.
ಗಿರೀಶ ಗೋರಳಬಾಳ ಸ್ವಾಗತಿಸಿದರು, ಕಾಲೇಜಿನ ಅಧ್ಯಕ್ಷ ವೆಂಕಟೇಶ ಜಂಬಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಚೇತನ ಜೋಗನವರ ಮತ್ತು ಶೈಲಾ ಕೋಕ್ಕರಿ ನಿರೂಪಿಸಿದರು, ಸಂತೋಷ ಮೀಜಿ ವಂದಿಸಿದರು.