spot_img
spot_img

ಜಾಗತಿಕ ಸಂತ ಸಿದ್ಧೇಶ್ವರ ಶ್ರೀಗಳು

Must Read

spot_img
- Advertisement -

“ನಮಗೆ ಭಗವಂತ ಮನಸ್ಸು ಕೊಟ್ಟಾನ,ಆ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತಿದರೆ ಬದುಕು ಚಂದ ಇರುತ್ತದೆ.ಮನಸ್ಸಿನ ಕಸುವು ನಮಗೆ ಗೊತ್ತಿಲ್ಲ.” ಎನ್ನುವ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ವ್ಯಕ್ತಿತ್ವ ನಿಜಕ್ಕೂ ಗಮನಾರ್ಹ. ಮೈಮೇಲೆ ಕಾವಿ ಬಟ್ಟೆಗಳಿಲ್ಲ.ಕೈಯಲ್ಲಿ ದಂಡ ಕಮಂಡಲಗಳಿಲ್ಲ. ಕಾಲಲ್ಲಿ ಆವಿಗೆ ಇಲ್ಲ, ಬಿಳಿ ಖಾದಿ ಪಂಚೆ, ಅಂಗಿ, ಅಂಗಿಗೆ ಜೇಬೂ ಇಲ್ಲ, ಸರಳತೆ, ಸಭ್ಯತೆ ಮತ್ತು ಸೌಜನ್ಯದ ಮೂರ್ತಿಯಾಗಿ ಕಾಣುತ್ತಿರುವವರು ಸಿದ್ದೇಶ್ವರ ಶ್ರೀಗಳು. ಬಾಹ್ಯ ಲಕ್ಷಣಗಳಲ್ಲಿಂದ ಸ್ವಾಮಿಗಳಂತೆ ಕಾಣದಿದ್ದರೂ ಆಂತರಿಕವಾಗಿ ನಿಜವಾದ ಸ್ವಾಮಿಗಳಾಗಿರುವರು. ಇವರು ಮಾತನಾಡಿದರೆ ಸಾಕು ಮನಸ್ಸಿನ ಸಂಸ್ಕಾರದ ವಿಚಾರಗಳೇ ಬರುವವು.

ಭಕ್ತಿಯನ್ನು ಉಕ್ಕಿಸುವ ಮಾತುಗಳ ಮೂಲಕ ಮನಸ್ಸಿನ ಕೊಳೆಯನ್ನು ತೊಡೆಯುವರು. ”ಮುಗಿದ ಕೈ ಬಾಗಿದ ತಲೆ”ಎನ್ನುವಂತ ವ್ಯಕ್ತಿತ್ವ ಹೊಂದಿದ ಸಿದ್ದೇಶ್ವರ ಶ್ರೀಗಳನ್ನು ಮೊಟ್ಟ ಮೊದಲು ಕಂಡಿದ್ದು ಮುನವಳ್ಳಿಯಲ್ಲಿ ಗಜಾನನ ವಿದ್ಯಾವರ್ಧಕ ಟ್ರಸ್ಟದ ಪದಾಧಿಕಾರಿಗಳೆಲ್ಲರ ಸಹಯೋಗದಲ್ಲಿ ಅವರ ಪ್ರವಚನ ತಿಂಗಳುಗಟ್ಟಲೇ ಮುನವಳ್ಳಿಯಲ್ಲಿ ನಡೆದಾಗ,ನಂತರ ಏಳು ವರ್ಷಗಳ ಹಿಂದೆ ಅಥಣಿ ತಾಲೂಕಿನ ಮಲಾಬಾದ್ ದಲ್ಲಿ ಸಂಘಟಿಸಲಾಗಿದ್ದ “ವಚನ ನಿರ್ವಚನ” ಎಂಬ ಕಮ್ಮಟದಲ್ಲಿ ಹತ್ತಿರದಿಂದ ಮಾತನಾಡುವ ಅವಕಾಶ ದೊರಕಿತು.

ವ್ಯಾಟ್ಸಪ್‌ಗಳಲ್ಲಿ ಅವರ ವಾಣಿಯನ್ನು ಕೇಳುತ್ತಿದ್ದ ಹಾಗೂ ಅವುಗಳನ್ನು ನನ್ನ ಮಿತ್ರರಿಗೂ ಕಳಿಸುವ ಮೂಲಕ ಅವುಗಳ ಮೌಲ್ಯ ಕುರಿತು ಆಗಾಗ ಬರಹಗಳನ್ನು ಸಿದ್ದಪಡಿಸುತ್ತಿದ್ದೆನು. ಧಾರವಾಡದಲ್ಲಿ ಈ ಹಿಂದೆ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯರಾದ ಈಶ್ವರ ಸಂಪಗಾವಿಯವರು ತಮ್ಮ  ಮಿತ್ರರಾದ ರಾಮಣ್ಣ ವೆಂ ಮುಳ್ಳೂರ ಅವರು ತಮ್ಮ ಸಂಪಾದನೆಯ ಶ್ರೀ ಸಿದ್ದೆಶ್ವರ ಶ್ರೀಗಳ ಪ್ರವಚನಗಳಲ್ಲಿ “ಹೂವು” ಕೃತಿಯನ್ನು ಕೈಗಿತ್ತಾಗ ಅವರ ವಾಣಿಯ ಸಂಗ್ರಹದ ಕೃತಿಯನ್ನು ಓದುವ ಅವಕಾಶ ದೊರಕಿತು.

- Advertisement -

ಪರಮಪೂಜ್ಯರು ಜನಿಸಿದ್ದು ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದ ತಂದೆ ಶರಣ ಯೋಗಪ್ಪ ಶರಣೆ ಸಂಗಮ್ಮನವರ ದಂಪತಿಯ ಉದರದಲ್ಲಿ ೧೯೪೧ ಅಕ್ಟೋಬರ್ ೨೪ ರಂದು ಸಾಮಾನ್ಯ ರೈತ ಕುಟುಂಬದಲ್ಲಿ. ಬಾಲ್ಯದಿಂದಲೂ ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದ ಪೂಜ್ಯರು ೪ನೆಯ ತರಗತಿಯವರೆಗೂ ಶಿಕ್ಷಣ ಪಡೆದರು.

ಈ ಸಂದರ್ಭ ಸುಪ್ರಸಿದ್ದ ಪ್ರವಚನಕಾರರೆಂದು ಖ್ಯಾತಿ ಹೊಂದಿದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾಗಿ ಅವರ ಪರಮಶಿಷ್ಯರಾಗಿ ಅವರ ಗರಡಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಾವು ಪ್ರವಚನ ನಡೆಸುತ್ತಿದ್ದ ಸ್ಥಳಗಳಿಗೆ ಇವರನ್ನು ಕರೆದುಕೊಂಡು ಹೋಗುತ್ತಿದ್ದರು. ಅವರ ಪ್ರವಚನವನ್ನು ಆಲಿಸುತ್ತಿದ್ದ ಇವರು ಇದರೊಟ್ಟಿಗೆ ತಮ್ಮ ಓದನ್ನು ಮುಂದುವರೆಸುತ್ತಿದ್ದರು.

- Advertisement -

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿ ನಂತರ ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಎಂ.ಎ.ತತ್ವಶಾಸ್ತ್ರ ವಿಷಯದಲ್ಲಿ ಪಾಸು ಮಾಡಿದರು. ಇದೇ ಸಂದರ್ಭದಲ್ಲಿnತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಪ್ರವಚನಗಳನ್ನು ಒಟ್ಟುಗೂಡಿಸಿ “ಸಿದ್ದಾಂತ ಶಿಖಾಮಣಿ” ಎಂಬ ಪುಸ್ತಕವನ್ನು ತಮ್ಮ ಗುರುಗಳ ಹೆಸರಿನಲ್ಲೇ ಪ್ರಕಟಿಸಿದರು.

ಆಗ ಅವರಿಗೆ ೧೯ ವರ್ಷ ವಯಸ್ಸು. ಎಂ.ಎ.ಸ್ನಾತಕೋತ್ತರ ಪದವಿ ಪೂರೈಸಿ ವಿಜಯಪುರಕ್ಕೆ ಬಂದಾಗ ಇವರ ಗುರುಗಳು ಇವರಿಗೆ ಭಗವದ್ಗೀತೆ,ಉಪನಿಷತ್ತುಗಳ ಬಗ್ಗೆ ವ್ಯಾಖ್ಯಾನವನ್ನು ನೀಡಿದರು.ಪೂಜ್ಯರನ್ನು ಕುರಿತು ಗುರುಗಳು ತಮ್ಮ ಭಕ್ತರ ಮುಂದೆ ಒಂದು ಮಾತನ್ನು ಹೇಳಿದ್ದರು”ಆತ ಮಹಾಬುದ್ದಿವಂತ, ಅಧ್ಯಾತ್ಮಿಕ ವಿಷಯದಂತೆ ಭೌತಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೆ ದೊಡ್ಡವನಾಗುತ್ತಾನೆ”ಎಂದು ಹೇಳುತ್ತಿದ್ದರಂತೆ. ಇಂದು ಪರಮಪೂಜ್ಯರು ವಿಶ್ವದೆಲ್ಲೆಡೆಯಲ್ಲಿಯೂ ಸಂಚರಿಸಿ ಬದುಕಿನ ಕುರಿತು ಮೌಲಿಕ ವಿಚಾರಗಳನ್ನು ಪ್ರವಚನದ ಮೂಲಕ ನೀಡಿದ್ದು ಗುರುವಾಣಿಯ ಪ್ರತೀಕವಾಗಿದೆ.

ಇವರ ಮಾತುಗಳಲ್ಲಿ “ಬದುಕುವುದು ಹೇಗೆ.? ನಾವು ಹೇಗೆ ಬದುಕಬೇಕು” ಎಂಬುದರ ಕುರಿತಾಗಿಯೇ ಇವೆ.ಭಾರತದ ಸಂತರು ಮತ್ತು ಸ್ಪಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಕೃತಿಗಳನ್ನು ಬರೆಯುವುದರ ಜೊತೆಗೆ ಪತಂಜಲಿಯವರ “ಯೋಗಶಾಸ್ತ್ರ” ಕೃತಿಯನ್ನು ಸಂಪಾದಿಸಿದ್ದಾರೆ.

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತುಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರ ತರುತ್ತವೆ.ಹಾಗೂ ಅಂತಿಮವಾಗಿ ಶಾಂತಿಯುತ ಮತ್ತು ನೆಮ್ಮದಿಯ ಜೀವನಕ್ಕೆ ಕಾರಣವಾಗುತ್ತವೆ.ಇವರು ಜೀವಂತ ದೇವರಿಗೆ ಹೋಲಿಸಬಹುದಾದ ವ್ಯಕ್ತಿತ್ವವನ್ನು ಹೊಂದಿದ್ದು ಮಹಾತ್ಮರೆಂದರೆ ಅತಿಶಯೋಕ್ತಿಯಲ್ಲ.

ಎಂತಹ ಅನಕ್ಷರಸ್ಥರೂ ಕೂಡ ಅರ್ಥೈಸಿಕೊಳ್ಳಬಲ್ಲ ರೀತಿ ಇವರ ವಿಚಾರದಾರೆಗಳು ಸರಳ ಮತ್ತು ಸುಂದರವಾಗಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ “ವಿಶಾಲವಾದ ಭೂಮಿ,ಪರಿಶುದ್ಧವಾದ ಗಾಳಿ,ಬೆಳಕು,ನೀರು ಎಲ್ಲವೂ ಇಲ್ಲಿದೆ.ಲಕ್ಷ ಲಕ್ಷ ಜೀವಜಂತುಗಳು ಪಶುಪಕ್ಷಿಗಳು ನಮ್ಮ ಬದುಕಿಗೆ ಸಹಕಾರಿಯಾಗಿವೆ.ಈ ಭೂಮಿಯಲ್ಲಿ ನಮಗೆ ಬದುಕಲು ಬೇಕಾದುದೆಲ್ಲವೂ ಸಮೃದ್ಧವಾಗಿವೆ. ಸುಂದರವಾದ ಸಿರಿವಂತವಾದ ಬದುಕನ್ನು ನಾವು ಕಟ್ಟಿಕೊಳ್ಳಬೇಕು.ಒಂದು ಹೂವಿನಕಂಟಿ ಎಷ್ಟು ಸೊಗಸಾಗಿ ಬದುಕಿದೆ.ಅದಕ್ಕೆ ಕಣ್ಣಿಲ್ಲ.ಕಾಲಿಲ್ಲ,ತಲೆಯಿಲ್ಲ,ಬಾಯಿಯಿಲ್ಲ ಆದರೆ ಅದರ ಬದುಕು ನಮಗೆಲ್ಲ ಆದರ್ಶ.

ಒಮ್ಮೆ ಒಬ್ಬ ಮನುಷ್ಯ ಹೂವಿನಕಂಟಿಗೆ ಹೇಳಿದ.”ನನ್ನ ಹೊಲ-ಮನೆ, ಧನ-ಕನಕ, ವಸ್ತು-ಒಡವೆ,ನೋಡು ನಾನೆಷ್ಟು ಸಿರಿವಂತನಾಗಿದ್ದೇನೆ. ನಿನ್ನಲ್ಲಿ ಒಂದೆರಡು ಹೂ ಮುಳ್ಳು ಬಿಟ್ಟರೆ ಇನ್ನೇನಿದೆ.”? ಅದಕ್ಕೆ ಹೂವಿನ ಕಂಟಿ ಹೇಳಿತು. ”ನನ್ನಲ್ಲಿ ನನ್ನ ರಕ್ಷಣೆಗಾಗಿ ಮೈತುಂಬ ಮುಳ್ಳಿದ್ದರೂ,ತಲೆ ತುಂಬಾ ಹೂವುಗಳಿವೆ. ಆ ಹೂವುಗಳು ದೇವರ ತಲೆಯನ್ನೇರುತ್ತವೆ.ನೀನು ಹೂವನ್ನು ಹರಿಯುವುದನ್ನು ಕಲಿತೆ ವಿನಃ ಹೂವಿನಂತೆ ಬದುಕುವುದನ್ನು ಕಲಿಯಲಿಲ್ಲ.ನಾನೂ ಯಾರನ್ನೂ ಅವಲಂಬಿಸಿಲ್ಲ. ನೀನೇ ನನ್ನನ್ನು ಅವಲಂಬಿಸಿರುವೆ. ಪೂಜಾದಿ ಕಾರ್ಯಗಳಿಗಾಗಿ” ಎಂಬ ಹೂವಿನ ನುಡಿಗಳನ್ನು ಕೇಳಿ ಆ ಮುನುಷ್ಯನ ಕಣ್ಣು ತೆರೆಯಿತು.ಹೂವಿನಂತೆ ತಾನೂ ಬಾಳುವುದನ್ನು ನಿರ್ಧಾರ ಮಾಡಿದ.

ಇದು ಅವರ ಮಾತುಗಳಲ್ಲಿ ಬಂದಾಗ ಭಾಷೆಯ ಪರಿಚಯವಿರುವ ಪ್ರತಿಯೊಬ್ಬರಿಗೂ ಬದುಕಿನ ಮೌಲ್ಯ ಅರ್ಥವಾಗದಿರದು. ಇಂತಹ ನುಡಿಗಳನ್ನು ಹೇಳುವ ಮೂಲಕ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಇದ್ದಾಗ ಬದುಕು ಸುಂದರ ಎಂಬುದನ್ನು ತಮ್ಮ ಪ್ರವಚನಗಳಲ್ಲಿ ಸಿದ್ದೇಶ್ವರ ಶ್ರೀಗಳು ಹೇಳುವುದನ್ನು ಕೇಳುತ್ತೇವೆ.

ಬದುಕಿನಲ್ಲಿ ನಾವು ಯಾವುದೇ ಕೆಲಸ ಮಾಡುತ್ತಿರಬಹುದು. ರೈತನಾಗಿರಬಹುದು, ವಕೀಲ ವೃತ್ತಿಯಾಗಿರಬಹುದು, ವೈದ್ಯ,ವ್ಯಾಪಾರಿ ಇಲ್ಲವೇ ಮನೆಯಲ್ಲಿಯೇ ಕೆಲಸ ಮಾಡುತ್ತಿರಬಹುದು. ನಾವು ಮಾಡುವ ಕೆಲಸಗಳಲೆಲ್ಲಾ ಸಂತೋಷ ಕಾಣುವುದು. ಕೆಟ್ಟದ್ದು ಇಲ್ಲಾ ಅಂತಾ ಅಲ್ಲ, ಇರೋದೆ, ಆದರೆ ಒಳ್ಳೆಯದನ್ನು ಮಾತ್ರ ಕಾಣುವುದು. ಬದುಕನ್ನು ಸುಂದರ ಮಾಡಿಕೊಳ್ಳುವುದು.

ಬದುಕು ಹೂವಿನಂತೆ ಇರಬೇಕು. ಎಂಬುದನ್ನು ತಮ್ಮ ನುಡಿಗಳಲ್ಲಿ ಪೂಜ್ಯರು ಹೇಳುತ್ತಿರುತ್ತಾರೆ.

ಪೂಜ್ಯ ಶ್ರೀಗಳನ್ನು ವರ್ಣಿಸಲು ಶಬ್ದಗಳು ಸಾಲವು. ಅವರು ನಡೆದಾಡುವ ದೇವರು. ಇಂದಿನ ಕಲುಷಿತ ಸಾಮಾಜಿಕ ಪರಿಸರದಲ್ಲಿ ಅದ್ಬುತ ಪವಾಡ ವ್ಯಕ್ತಿತ್ವ ಹೊಂದಿದವರು. ಸಹಸ್ರಾರು ಜನರು ಸೇರುವ ಪ್ರವಚನ ಸಾಮಾನ್ಯವಾಗಿ ಒಮ್ಮೆ ಬೆಳಿಗ್ಗೆ ೬ ರಿಂದ ೭ ಗಂಟೆಯವರೆಗೆ ಹಾಗೂ ಅಗತ್ಯವಿದ್ದ ಸ್ಥಳಗಳಲ್ಲಿ ಮತ್ತೊಮ್ಮೆ ಸಂಜೆ ೬ ರಿಂದ ೭ ರ ವರೆಗೆ ನಡೆಯುತ್ತದೆ. ಅಷ್ಟೊಂದು ಜನ ಸಮೂಹ ಸೇರಿದರೂ ಸೂಜಿ ಬಿದ್ದರೂ ಸಪ್ಪಳಾಗದಷ್ಟು ಪ್ರಶಾಂತತೆ ಇರುವುದೊಂದು ವಿಶೇಷ.ಪಿಸು ಧ್ವನಿಯಲ್ಲಿ ಪ್ರಾರಂಭಗೊಳ್ಳುವ ಶ್ರೀಗಳ ನುಡಿಗಳು ಬರಬರುತ್ತ ಏರುಧ್ವನಿಯಲ್ಲಿ ಜನರನ್ನು ಮನತಲುಪುತ್ತವೆ.

ಅವರು ಬಳಸುವ ಭಾಷೆ ಸರಳ ದೃಷ್ಟಾಂತಗಳು ಪ್ರವಚನಕ್ಕೆ ಕಳೆ ಕಟ್ಟುತ್ತವೆ. ಹಲವು ವರ್ಷಗಳ ಹಿಂದೆ ಸವದತ್ತಿಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ ೬ ರಿಂದ ೭ ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆಂದೇ ಹಾಗೂ ಆಸಕ್ತರಿಗೆ ಸಂಜೆ ೭ ರಿಂದ ೮ ಗಂಟೆಯವರೆಗೆ ಇಂಗ್ಲೀಷ ಭಾಷೆಯಲ್ಲಿಯೂ ಪ್ರವಚನ ನೀಡುತ್ತಿದ್ದುದು ವಿಶೇಷವಾಗಿತ್ತು.

ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ,ಪರಂಪರೆ,ವಚನ ಉಪನಿಷತ್ತು,ಗೀತೆಗಳ ಸಂದೇಶಗಳನ್ನು ಸಾರಿದವರು.ಪ್ರತಿ ವರುಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಇವರ ಪ್ರವಚನ ಜರುಗುತ್ತಿರುವುದು ವಿಶೇಷ. ಅಷ್ಟೇ ಅಲ್ಲ ಇವರ ಪ್ರವಚನ ಸಲುವಾಗಿಯೇ ವರ್ಷಗಟ್ಟಲೇ ಕಾಯ್ದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇವರ ಪ್ರವಚನ ಹೇಳಿಸುವ ಮಟ್ಟಿಗೆ ಇಂದು ಇವರು ಬಿಡುವಿರದ ವಿರಳಾತೀತರಲ್ಲಿ ಅಗ್ರಗಣ್ಯರು. ಸಿದ್ದೆಶ್ವರ ಶ್ರೀಗಳು ಯಾವುದೇ ಪ್ರಶಸ್ತಿ ಸನ್ಮಾನಗಳಿಂದ ದೂರ. ಇವರಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಕಟಿಸಿದಾಗ ನಾನು ಸಾಮಾನ್ಯ ಮನುಷ್ಯ, ಎಂದು ಹೇಳಿ ನಿರಾಕರಿಸಿದವರು.ಇಂತಹ ಗುರುಗಳನ್ನು ಪಡೆದ ನಾವು ಧನ್ಯರು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
೮೯೭೧೧೧೭೪೪೨    ೭೯೭೫೫೪೭೨೯೮

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group