spot_img
spot_img

ಸದಾಶಯ: ಜನತೆಯ ಬಾಳು ಬೆಳಗಲಿ ದೀಪದ ಹಬ್ಬ

Must Read

ಒಂದು ಸಣ್ಣ ಹಣತೆ ಒಂದಿಡೀ ಪ್ರಮಾಣದ ಕತ್ತಲೆಯನ್ನೇ ಹೊಡೆದೋಡಿಸುತ್ತದೆ. ಇದನ್ನೇ ನಮ್ಮೆಲ್ಲರ ಬದುಕಿಗೆ ಜನನ ಹೋಲಿಸಿಕೊಂಡರೆ ನಮ್ಮಗಳ ಬದುಕಿಗೆ ಇಂಥ ಹಣತೆಗಳು ಇಂದಿನ ಜಗತ್ತಿನಲ್ಲಿ ಹಲವಾರು ಬೇಕಾಗಬಹುದು. ಅಷ್ಟೊಂದು ಪ್ರಮಾಣದಲ್ಲಿ ಕತ್ತಲೆಯೇ ತುಂಬಿಕೊಂಡಿದೆ ಬದುಕಿನಲ್ಲಿ.

ಹುಟ್ಟಿದಾರಂಭದಿಂದ ಹಿಡಿದು ಬೆಳೆದು ಬದುಕಿನ ಜಟಕಾ ಬಂಡಿಯ ಬಾರುಕೋಲು ಹಿಡಿಯುವ ತನಕ ಹಲವಾರು ರೀತಿಯ ಏರುಪೇರುಗಳು ಮನುಷ್ಯನನ್ನು ನಜ್ಜುಗುಜ್ಜು ಮಾಡುತ್ತವೆ. ಆಧುನಿಕ ಎನಿಸಿಕೊಡಿರುವ ಈ ಯುಗವೇ ನಮ್ಮ ಬದುಕಿಗೆ ಮಾರಕವಾಗಿದ್ದು ವಿಪರ್ಯಾಸ ಯಾಕೆಂದರೆ ಇಂದಿನ ಕಲುಷಿತ ವಾತಾವರಣದಿಂದಾಗಿ ಹುಟ್ಟಿನಿಂದಲೇ ಹಲವು ಕಾಯಿಲೆಗಳು ಆಕ್ರಮಿಸಿಕೊಂಡು ಬಿಡುತ್ತವೆ. ಆಗಲೇ ಆಸ್ಪತ್ರೆಗೆ ಅಲೆದಾಟ ಒಂದಾದರೆ ಧನದಾಹಿ ವೈದ್ಯರುಗಳ ಹೊಡೆತಕ್ಕೆ ನಲುಗಿ ಎಷ್ಟೋ ಜೀವಗಳು ಪ್ರಾಣತ್ಯಾಗ ಮಾಡಿದ್ದೂ ಉಂಟು. ಇನ್ನು ಬೆಳೆದಂತೆ ಸಾಮಾಜಿಕ ಅಸ್ತವ್ಯಸ್ತದ ದುಷ್ಪರಿಣಾಮ ಮನುಷ್ಯನ ಮೇಲಾಗತೊಡಗುತ್ತದೆ. ಈ ಸಾಮಾಜಿಕ ಜೀವನದಲ್ಲಿ ತುಂಬಿಕೊಂಡಿರುವ ಈರ್ಷೆ, ದ್ವೇಷ, ಹೀನ ಮನಸ್ಥಿತಿಗಳು ಒಂದು ಸಾತ್ವಿಕ ಮನಸಿಗೆ ಅನೇಕ ರೀತಿಯಲ್ಲಿ ಘಾಸಿ ಮಾಡಿಬಿಡುತ್ತವೆ.

ಮನಸು ಘಾಸಿಗೊಂಡಾಗ ಮನುಷ್ಯ ಭಗವಂತನ ನೆರವು ಬೇಡುತ್ತಾನೆ. ಪ್ರತಿದಿನದ ಪ್ರಾರ್ಥನೆಯ ಹೊರತಾಗಿಯೂ ಹಬ್ಬ ಹರಿದಿನ, ಜಾತ್ರೆ ಸಮಾರಂಭಗಳ ನೆಪದಲ್ಲಿ ಭಗವಂತನ ಎದುರು ತನ್ನ ಅಳಲು ಹೇಳಿಕೊಳ್ಳಲು ಕಾತರನಾಗುತ್ತಾನೆ. ಜಾತ್ರೆಯಲ್ಲಿ ತೇರಿನಲ್ಲಿ ವಿರಾಜಮಾನನಾಗಿ ಬರುವ ಭಗವಂತ ಭಕ್ತನ ಕಣ್ಣಗಳನ್ನು ತಣಿಸಿಬಿಡುತ್ತಾನೆ, ಹಬ್ಬ ಹರಿದಿನಗಳಲ್ಲಿ ವಿಶೇಷ ರೂಪದಲ್ಲಿ ಪ್ರಕಟಗೊಂಡು ತಪ್ತ ಮನಸಿಗೆ ತಂಪು ನೀಡುತ್ತಾನೆ  ಅಥವಾ ಹಾಗೆಂದು ಭಾವನೆ ತಳೆದ ಮನುಷ್ಯ ಭಗವಂತನ ಸಾಕ್ಷಾತ್ಕಾರವಾದಂತೆಯೇ ತೃಪ್ತಿ ಹೊಂದುತ್ತಾನೆ.

ಪ್ರತಿದಿನದ ಧಾವಂತದ ನಡುವೆಯೂ ತನ್ನ ಭಗವಂತನನ್ನು ಕಾಣಲು ಮಾನವ ಹಬ್ಬ ಹರಿದಿನಗಳ ಸಹಕಾರ ಪಡೆಯುತ್ತಾನೆಂದರೆ ಅಡ್ಡಿಯಿಲ್ಲ. ವರ್ಷದ ಆದಿಯಾಗಿ ಬರುವ ಯುಗಾದಿಯಲ್ಲಿ ಹೊಸ ಕಳೆಯಿಂದ ಕಂಗೊಳಿಸುವ ಪ್ರಕೃತಿ ಮನಸಿಗೆ ಮುದನೀಡುತ್ತದೆ. ನಂತರ ಪೌರಾಣಿಕ ಹೋಳಿ, ಪಂಚಮಿ, ಶ್ರಾವಣ ಮಾಸದ ವಿಶೇಷ ದೇವಾರಾಧನೆ, ದಸರೆಯಲ್ಲಿ ದೇವಿಯ ದರ್ಶನ, ದೀಪಾವಳಿಯಲ್ಲಿ ದೀಪಗಳ ಬೆಳಕಿನಲ್ಲಿ ಭಗವಂತನ ದರ್ಶನ. ಹೀಗೆ ಅನೇಕ ರೂಪ ರೀತಿಗಳಲ್ಲಿ ಭಗವಂತ ದರ್ಶನ ನೀಡುತ್ತಾನಾದರೂ ಮಾನವನ ಜೀವನ ಪಾವನ ಮಾಡಿದ್ದು ಕಡಿಮೆ ಎನ್ನಬಹುದು. ಅದಕ್ಕೆ ಏನು ಕಾರಣ ಎಂದು ಕೇಳಿಕೊಂಡರೆ ಮಾನವನ ಸ್ವಯಂಕೃತಾಪರಾಧವೇ !

ನಮ್ಮಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳು ತುಂಬಿಕೊಂಡಿವೆ. ಹಣ, ಆಸ್ತಿಯೆಂಬ ಮೋಹಜಾಲಕ್ಕೆ ಅತಿಯಾಗಿ ಸಿಲುಕಿಕೊಂಡು ಸ್ನೇಹ ಸಂಬಂಧಗಳನ್ನೇ ಕಳೆದುಕೊಳ್ಳುವಷ್ಟು ಮೂಢರಾಗಿಬಿಟ್ಟಿದ್ದೇವೆ. ಇದನ್ನೇ ಹೇಳುವುದು ನಾವು ನಮ್ಮ ಜೀವನದ ದೀಪಾವಳಿಯಲ್ಲಿ ದೀಪಗಳ ಬೆಳಕನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ.

ಪ್ರತಿವರ್ಷವೂ ದೀಪಾವಳಿ ಬಂದಾಗ ಎಲ್ಲರೂ ಎಲ್ಲರಿಗೂ ಶುಭಾಶಯ ಹೇಳುತ್ತಾರೆ. ಈ ಸಲದ ದೀಪಾವಳಿ ತಮ್ಮ ಬಾಳಿನಲ್ಲಿ ಹೊಸ ಬೆಳಕು ತರಲಿ ಎಂದು ! ಆದರೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ತಾವೇ ಒಬ್ಬರ ಬದುಕಿನ ಬೆಳಕು ಕಸಿದುಕೊಂಡು ಕತ್ತಲೆ ಉಂಟು ಮಾಡಿರುತ್ತಾರೆ ! ಇದನ್ನು ಅರಿಯಬೇಕಾದರೆ ಪ್ರತಿಯೊಬ್ಬರ ಹೃದಯದಲ್ಲಿಯೂ ಜ್ಞಾನವೆಂಬ ಹಣತೆಗಳು ಬೆಳಗಬೇಕು !

ಹೌದು, ಜ್ಞಾನದ ಬೆಳಕು ಎಲ್ಲರ ಹೃದಯಗಳಲ್ಲಿಯೂ ತುಂಬಿರಲಿ. ನಾವು ಮುಂದಿಡುವ ಪ್ರತಿ ಹೆಜ್ಜೆಯೂ ಒಬ್ಬರ ಬದುಕಿನಲ್ಲಿ ಬೆಳಕು ತರದೇ ಇದ್ದರೂ ಇರುವ  ಹಣತೆಯನ್ನೂ ಆರಿಸದಿರಲಿ. ಎಲ್ಲರಿಗೂ ಅವರದೇ ಆದ ಕೆಲಸ ಕಾರ್ಯಗಳು, ಜವಾಬ್ದಾರಿಗಳು ಇರುತ್ತವೆ ಅವುಗಳ ಬೆಳಕು ಸ್ವಯಂ ಬದುಕನ್ನು ಬೆಳಗುತ್ತಿರಲಿ. ಬೆಳಕು ಎಂಬುದು ಭಗವಂತನ ಪ್ರತಿನಿಧಿಯಾಗಿ ಬಂದು ಎಲ್ಲರ ಬದುಕನ್ನು ಹಸನು ಮಾಡಲಿ ಎಂಬ ಸದಾಶಯದೊಂದಿಗೆ….


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!