ಮೊಬೈಲ್ ನಿಂದ ಸಾವಿರಾರು ಮಕ್ಕಳಿಗೆ ಮಾನಸಿಕ ಎಫೆಕ್ಟ್
ಬೀದರ – ಪೋಷಕರೆ ಎಚ್ಚರ… ಎಚ್ಚರ…ಇನ್ನು ಮುಂದೆ ನಿಮ್ಮ ಮಕ್ಕಳ ಕೈಗೆ ಮೊಬೈಲ್ ಪೋನ್ ಕೊಡುವ ಮುಂಚೆ ಎಚ್ಚರ… ಮಕ್ಕಳು ಮೊಬೈಲ್ ಬೇಕು ಎಂದು ಹಠ ಮಾಡಿದ್ರೆ ಮೊಬೈಲ್ ಕೊಡಲು ಹತ್ತಾರು ಬಾರಿ ಯೋಚನೆ ಮಾಡಬೇಕಾಗಿದೆ. ಮೊಬೈಲ್ ಕೊಟ್ಟಿದ್ದೇ ಆದ್ರೆ ನಿಮ್ಮ ಮಕ್ಕಳು ಮಾನಸಿಕ ಸಮಸ್ಯೆಗಳಿಂದ ಬಳಲೋದು ಗ್ಯಾರಂಟಿ… ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಹಟ ಮಾಡುವ ಮಕ್ಕಳನ್ನು ಸಮಾಧಾನಪಡಿಸಲು ಮೊಬೈಲ್ ಕೊಡುವುದರ ಎಫೆಕ್ಟ ನಿಂದಾಗಿ ಹತ್ತಾರು ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ ಪುಟ್ಟ ಮಕ್ಕಳು.
ಕೊರೋನಾ ವನವಾಸದಿಂದಾಗಿ ಎರಡು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ.
ಒಂದು ಕಡೆ ಮೊಬೈಲ್ ಬಳಕೆಯಿಂದ ಮಾನಸಿಕ ಸಮಸ್ಯೆಗೆ ತುತ್ತಾಗಿ ಬಳಲುತ್ತಿರುವ ನೂರಾರು ಮಕ್ಕಳ ದೃಶ್ಯಗಳು.
ಮತ್ತೊಂದು ಕಡೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿವಿಧ ರೀತಿಯ ಚಿಕಿತ್ಸೆ ನೀಡುತ್ತಿರುವ ವೈದ್ಯರ ದೃಶ್ಯಗಳು. ನಗರದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾನಸಿಕ ಸಮಸ್ಯೆಗಳು ಇಂದು ಕುಗ್ರಾಮದ ಪುಟ್ಟ ಕಂದಮ್ಮಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಆಘಾತಕಾರಿ ಸ್ಟೋರಿ ಇದು.
ಹೌದು, ಗಡಿ ಜಿಲ್ಲೆ ಬೀದರ್ ನಲ್ಲಿ ಮೊಬೈಲ್ ಹಾಗೂ ಟಿವಿ ಎಫೆಕ್ಟ್ ನಿಂದ ಮಕ್ಕಳು ಹತ್ತಾರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಭಯಾನಕ ವಿಷಯ ಬಹಿರಂಗವಾಗಿದೆ. ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಮಿದುಳಿಗೆ ಹಾನಿಯಾಗಿ ಮಾನಸಿಕ ಒತ್ತಡ, ಸೈಲೆಂಟ್ ಆಗುವುದು, ಪ್ರತಿಯೊಂದಕ್ಕೂ ಹಠ ಮಾಡುವುದು, ಯಾವುದನ್ನೂ ಗುರುತಿಸದೆ ಮೌನಕ್ಕೆ ಶರಣಾಗುತ್ತಿರುವುದು ಸೇರಿದಂತೆ ಹತ್ತಾರು ಮಾನಸಿಕ ಸಮಸ್ಯೆಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ.
ಮೊದಲು 1% ಮಾತ್ರ ಮಕ್ಕಳು ಈ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದರು ಆದ್ರೆ ಈಗ 4% ರಷ್ಟು ಮಕ್ಕಳು ಈ ಮಾನಸಿಕ ಸಮಸ್ಯೆ ತುತ್ತಾಗಿದ್ದಾರೆ.
5ಜಿ ಬಂದ ಬಳಿಕ 10% ಮಕ್ಕಳು ಈ ಮಾನಸಿಕ ಸಮಸ್ಯೆಗೆ ತುತ್ತಾದರೂ ಆಶ್ಚರ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ ವೈದ್ಯರುಗಳು. ಚೀನಾ ಮಾಹಾಮಾರಿ ಕೊರೋನಾ ವೈರಸ್ನಿಂದ ಮಕ್ಕಳು ಮನೆಯಲ್ಲಿದ್ದ ಕಾರಣ ಮೊಬೈಲ್ ಗೆ ದಾಸರಾಗಿ ಹೆಚ್ಚಾಗಿ ಮಾನಸಿಕ ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಜೊತೆಗೆ ಪೋಷಕರು ಕೂಡಾ ಮಕ್ಕಳು ಹಠ ಮಾಡಿದಾಗ ಮಕ್ಕಳ ಕೈಗೆ ಪೋನ್ ಕೊಟ್ಟು ಮಹಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಇಂದಿನ ಬಿಜಿ ಸಮಯದಲ್ಲಿ ಪೋಷಕರು ಅವರವರ ಮಕ್ಕಳ ಕಡೆ ಗಮನಕೊಡದೆ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವಂತೆ ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಯಾವುದೇ ದೈಹಿಕ ಶ್ರಮವಿಲ್ಲದೆ ಕೇವಲ ಮೊಬೈಲ್ ಹಾಗೂ ಟಿವಿಗೆ ಮಕ್ಕಳು ದಾಸರಾಗಿ ಇಂದು ಹತ್ತಾರು ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಮೊದಲು ಮಾನಸಿಕ ಪುನರ್ವಸತಿ ಕೇಂದ್ರಗಳಿಗೆ 10 ರಿಂದ 15 ಮಕ್ಕಳು ಬರುತ್ತಿದ್ದರು. ಆದರೆ ಈಗ 60 ರಿಂದ 70 ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಪುನರ್ವಸತಿ ಕೇಂದ್ರಗಳಿಗೆ ಬರುತ್ತಿದ್ದಾರೆ… ಎಷ್ಟು ವೇಗವಾಗಿ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಬೀದರ್ನಲ್ಲಿ ಉಟ್ಗೆ ಎಂಬ ಮಾನಸಿಕ ಆಸ್ಪತ್ರೆಯಲ್ಲಿ ಸೆನ್ಸೋರಿ ಎಂಬ ಚಿಕಿತ್ಸೆ ನೀಡುತ್ತಿದ್ದಾರೆ. ಐಕ್ಯೂ ಥೆರಪಿ, ಸ್ಪೀಚ್ ಥೆರಪಿ, ಎಜುಕೇಷನ್ ಥೆರಪಿ, ಸೆನ್ಸೋರಿ ಥೆರಪಿ, ಮೈಂಡ್ಗೇಮ್ ಥೆರಪಿ ಸೇರಿದಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪುಟ್ಟ ಪುಟ್ಟ ಕಂದಮ್ಮಗಳಿಗೆ ಇಲ್ಲಿನ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕೊರೋನಾ ಬಳಿಕ ಇದು ದುಪ್ಪಟ್ಟಾಗಿದೆ.ಇದು ಒಂದು ದೊಡ್ಡ ಸೂಚನೆ ಆಗಿದ್ದು ಮಕ್ಕಳು ಮಾನಸಿಕ ಹಾಗೂ ಶಾರೀರಿಕವಾಗಿ ಚೆನ್ನಾಗಿ ಬೆಳೆಯಬೇಕು ಅಂದರೆ ಅವರನ್ನು ಗಮನಿಸಬೇಕು… ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿಡಿ ಎಂದು ಮಕ್ಕಳ ಮಾನಸಿಕ ತಜ್ಞರು ಪೋಷಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎನ್ನುತ್ತಾರೆ ಡಾ. ಅಭಿಷೇಕ್ ಪಾಟೀಲ್ ( ಮಾನಸಿಕ ಮಕ್ಕಳ ತಜ್ಞರು ).
ಮಕ್ಕಳನ್ನು ಶಾಂತವಾಗಿಡಲು ಮಕ್ಕಳ ಕೈಗೆ ಪೋನ್ ಕೊಟ್ಟು ಪೋಷಕರು ತಮ್ಮ ಮಕ್ಕಳನ್ನು ಮಾನಸಿಕ ಖಿನ್ನತೆಗೆ ದೂಡುತ್ತಿರುವುದು ದುರಂತವೇ ಸರಿ… ಈಗಾಗಲೇ 5ಜಿ ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದ್ರಿಂದ ಲಕ್ಷಾಂತರ ಮಕ್ಕಳು ಮಾನಸಿಕ ಸಮಸ್ಯೆಗೆ ತುತ್ತಾಗೋದು ಗ್ಯಾರಂಟಿಯಾಗಿದೆ… ಇನ್ನಾದ್ರು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಟ್ಟು ಮಾನಸಿಕ ಸಮಸ್ಯೆಯಿಂದ ಪಾರು ಮಾಡಬೇಕಿದೆ.
ವರದಿ: ನಂದಕುಮಾರ ಕರಂಜೆ,ಬೀದರ