ಬೆಳಗಾವಿ: ನಿಮ್ಮ ಪ್ರೀತಿಯನ್ನುಬೆಳಗಾವಿಯ ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಬೆಳಗಾವಿಯ ಯಡಿಯೂರಪ್ಪ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಮಾಲಿನಿ ಸಿಟಿಯಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಬಾಕ್ಸೈಟ್ ರಸ್ತೆಯಿಂದ ವೇದಿಕೆಯವರೆಗೂ ನಡೆಸಿದ ರೋಡ್ ಶೋ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ಸೇರಿ ಪ್ರಧಾನಿಯವರಿಗೆ ಹೂವಿನ ಸುರಿಮಳೆ ಸುರಿಸಿ, ಘೋಷಣೆ ಕೂಗಿ ತೋರಿಸಿದ ಪ್ರೀತಿ ಅಭಿಮಾನಕ್ಕೆ ತಾವು ಮರುಳಾಗಿದ್ದು ಈ ಪ್ರೀತಿಯನ್ನು ಬಡ್ಡಿ ಸಹಿತ ತೀರಿಸುವುದಾಗಿ ಹೇಳಿದರು.
ಈ ಮುಂಚೆ ಒಂಬತ್ತು ವಿಧದ ಸಿರಿಧಾನ್ಯಗಳ ಸಸಿಗಳಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಪ್ರಧಾನಿ, ಬೆಳಗಾವಿಯ ಬಾಪು ಬಾಬುರಾವ ಪುಸಾಲಕರ ೧೦೦ ವರ್ಷಗಳ ಹಿಂದೆಯೇ ಸ್ಟಾರ್ಟಪ್ ಯೋಜನೆಯನ್ನು ಜಾರಿ ಮಾಡಿದ್ದರು ಎಂದು ಆರಂಭಿಸಿ, ಇಂದು ಉದ್ಘಾಟಿಸಿದ ಯೋಜನೆಗಳ ಮೂಲಕ ಬೆಳಗಾವಿಗೆ ಒಂದು ಹೊಸ ಅಭಿವೃದ್ಧಿ ಸಿಗಲಿದೆ.
ಭಾರತದ ಪ್ರತಿ ರೈತನೂ ಬೆಳಗಾವಿಯ ಜೊತೆ ಸಂಬಂಧ ಹೊಂದಿದ್ದಾನೆ. ಹೋಳಿಯ ಹಬ್ಬದ ಮುಂಚೆಯೇ ರೈತರಿಗೆ ಕೊಡುಗೆ. ಯಾವುದೇ ಭ್ರಷ್ಟಾಚಾರವಿಲ್ಲದೆ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ಈವರೆಗೆ ರೈತರ ಖಾತೆಗಳಿಗೆ ೨.೫ ಲಕ್ಷ ಕೋಟಿ ರೂ. ಜಮೆಯಾಗಿದೆ ಎಂದು ಸುಮಾರು ೧೬೦೦೦ ಕೋಟಿ ರೂ. ಗಳನ್ನು ಕಿಸಾನ್ ಸಮ್ಮಾನ್ ನಿಧಿಗೆ ಜಮಾ ಮಾಡಿರುವ ಬಗ್ಗೆ ಹೇಳಿದರು.
ಕೃಷಿಯನ್ನು ಆಧುನಿಕತೆಯ ಜೊತೆಗೆ ಜೋಡಿಸುತ್ತಿದ್ದೇವೆ. ೨೦೧೪ ರಲ್ಲಿ ನಾವು ಬಂದಾಗ ಭಾರತದ ಕೃಷಿ ಬಜೆಟ್ ೨೫೦೦೦ ಕೋಟಿ ಇತ್ತು ಈಗ ೧.೨೫ ಲಕ್ಷ ಕೋಟಿ ಕೃಷಿ ಬಜೆಟ್ ಆಗಿದೆ ಇದರಿಂದಲೇ ತಿಳಿಯುತ್ತದೆ ಬಿಜೆಪಿ ಸರ್ಕಾರ ರೈತರಿಗಾಗಿ ಏನು ಮಾಡಿದೆಯೆಂಬುದು.ಜನಧನ ಖಾತೆ ಇರದಿದ್ದರೆ ಕೃಷಿ ಸಮ್ಮಾನ ಯೋಜನೆ ಇರದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಇದರ ಜೊತೆಗೆ ಭವಿಷ್ಯದ ನಿಧಿಯನ್ನೂ ಸೇರಿಸಿ ಬಜೆಟ್ ನಲ್ಲಿ ನೂರಾರು ಯೋಜನೆಗಳನ್ನು ಸೇರಿಸಲಾಗಿದೆ. ನೈಸರ್ಗಿಕ ಕೃಷಿ, ರೈತರಿಗೆ ನೆರವಾಗಲು ಕೃಷಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದರು.
ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಎಲ್ಲರೂ ಯೋಗ ಮಾಡಬೇಕು ಸಾವಯವ ಉತ್ಪನ್ನಗಳನ್ನು ಬಳಸಬೇಕು ಅದಕ್ಕಾಗಿ ಸಿರಿಧಾನ್ಯಗಳನ್ನು ಬಳಸಲು ಪ್ರಧಾನಿಯವರು ಕರೆ ಕೊಟ್ಟಿದ್ದಾರೆ ಎಂದರು.
ಇಂಥ ಕಾರ್ಯಕ್ರಮ ಹಿಂದೆ ಆಗಿಲ್ಲ ಮುಂದೆ ಕೂಡ ಆಗೋದಿಲ್ಲ ಎಂದು ಭಾಷಣ ಆರಂಭಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ರೈತರಿಗಾಗಿ ವಿಶ್ವದಲ್ಲಿಯೇ ಪ್ರಥಮವಾದ ರೈತರಿಗೆ ನೇರ ಹಣ ತಲುಪಿಸುವ ಕಿಸಾನ್ ಸಮ್ಮಾನ, ಭೂ ಸಿರಿ ಯೋಜನೆ ರೈತರ ಮಕ್ಕಳಿಗೆ ಪ್ರೋತ್ಸಾಹ,ಬೆಳೆ ವಿಮಾ ಯೋಜನೆಯಲ್ಲು ಈ ವರ್ಷ ಅತಿ ಹೆಚ್ಚು ಹಣ ಬಿಡುಗಡೆ ಮಾಡಲಾಯಿತು, ಎಮ್ ಎಸ್ ಪಿ ಹಣ ಬಿಡುಗಡೆ, ಹೊಸ ರೈಲು ನಿಲ್ದಾಣ, ಹೆದ್ದಾರಿ ಮೇಲ್ದರ್ಜೆಗೆ ಏರಿಕೆ, ಧಾರವಾಡ ಹುಬ್ಬಳ್ಳಿಯ ಮುಖ್ಯರಸ್ತೆ ಇಂಥ ಅನೇಕ ಕಾರ್ಯಕ್ರಮಗಳು.
ಅಸಾಧ್ಯವಾದದ್ದನ್ನು ಮೋದಿ ಸಾಧ್ಯವಾಗಿಸಿ ತೋರಿಸಿದ್ದಾರೆ. ಮನೆ ಮನೆಗೆ ನೀರು ತಲುಪಿಸುವ ಹತ್ತು ಕೋಟಿಗಿಂತ ಹೆಚ್ಚು ಮನೆಗಳಿಗೆ ನೀರು ತಲುಪಿಸುವ ಭಗೀರಥ ಮೋದಿಯವರು. ಬೆಳಗಾವಿಗೆ ಬೆಳಕು ತಂದವರು ಮೋದಿಯವರು ಎಂದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಉದ್ಘಾಟನೆ ಮಾಡಿದ ಮೋದಿಯವರು ೧೩ ನೇ ಕಂತು ರೂ. ೨೦೦೦ ದಂತೆ ೧೬೦೦೦ ಕೋಟಿ ರೂ. ಗಳು ನೇರವಾಗಿ ರೈತರ ಖಾತೆಗೆ ತಲುಪುವಂತೆ ಮಾಡಿದರಲ್ಲದೆ ಅಲ್ಲಿಯೇ ಇದ್ದ ರೈತರನ್ನು ಹಣ ತಲುಪಿದೆಯಾ ಎಂದು ಕೇಳಿದರು ಅಲ್ಲಿ ನೆರೆದ ಸಾವಿರಾರು ರೈತರಿಂದ ಮೋದಿ ಮೋದಿ ಎಂಬ ಘೋಷಣೆಯಿಂದ ಸಮ್ಮತಿ ಸಿಕ್ಕಂತಾಯಿತು.
ರೂ. ೨೨೪೦ ಕೋಟಿ ರೂ ಗಳ ಯೋಜನೆಯಾದ ಬೆಳಗಾವಿ ಲೋಂಡಾ ಘಟಪ್ರಭಾ ಜೋಡಿ ರೈಲು ಮಾರ್ಗ ಯೋಜನೆ ಹಾಗೂ ಹಳ್ಳಿಗಳಿಗೆ ಜಲ ಜೀವನ ಯೋಜನೆಗಳನ್ನೂ ಮೋದಿಯವರು ಉದ್ಘಾಟಿಸಿದರು.