ಸಿಂದಗಿ: ನೌಕರರ ಹಿತರಕ್ಷಣೆಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆ ರದ್ದತಿ, ವೇತನ ಪರಿಷ್ಕರಣೆ ಒತ್ತಾಯಿಸುವ ಮುಷ್ಕರಕ್ಕೆ ಶಿಕ್ಷಕರ ಬೆಂಬಲವಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎಚ್.ಬಿರಾದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರಿ ನೌಕರರ ಪರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಮಾ.೧ ರಿಂದ ಕರ್ತವ್ಯದಿಂದ ಗೈರಾಗಿ ಅನಿರ್ದಿಷ್ಟಾವಧಿಯವರೆಗೆ ಮುಷ್ಕರದಲ್ಲಿ ಪಾಲ್ಗೊಂಡು ತಾಲೂಕಿನ ಎಲ್ಲ ಪ್ರೌಢಶಾಲಾ ಸಹ ಶಿಕ್ಷಕರು ಮಾ.೧ ರಂದು ಕರ್ತವ್ಯದಿಂದ ದೂರ ಉಳಿದು ಹೋರಾಟವನ್ನು ಯಶಸ್ವಿಗೊಳಿಸಬೇಕು. ಎನ್‌ಪಿಎಸ್ ನೌಕರರ ಹಿತರಕ್ಷಣೆಗೆ ಮಾರಕವಾಗಿದೆ, ಸರ್ಕಾರಿ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ ಸರ್ಕಾರಿ ನೌಕರ ತನ್ನ ಸಂಧ್ಯಾಕಾಲದಲ್ಲಿ ಪಿಂಚಣಿ ಪಡೆಯಲು ಸಾಧ್ಯವಾಗದಂತಹ ದಾರುಣ ಸ್ಥಿತಿಯನ್ನು ಎನ್‌ಪಿಎಸ್ ಸೃಜಿಸಿದೆ.
ಹೀಗಾಗಿ ಪಂಜಾಬ್, ರಾಜಸ್ತಾನ್, ಚತ್ತೀಸಗಢ, ಜಾರ್ಖಂಡ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಕರ್ನಾಟಕ ಸರಕಾರವು ಸಹ ಈ ನಡೆ ಅನುಸರಿಸಲಿದೆ ಎಂಬ ವಿಶ್ವಾಸವಿದೆ, ಸರ್ಕಾರ ಈ ನಿರ್ಧಾರ ಕೈಗೊಳ್ಳದೇ ಇದ್ದರೆ ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢ ಶಾಲಾ ಶಿಕ್ಷಕರುಗಳು ಮಾ.೧ ರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಬಲಿಸಬೇಕು.ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ, ಇದು ನ್ಯಾಯಯುತವಾದ ಹಕ್ಕಿನ ಬೇಡಿಕೆಯಾಗಿದೆ.
ಈ ಮಹತ್ವದ ಎರಡು ಬೇಡಿಕೆಗಳನ್ನು ಈಡೇರಬೇಕು ಆ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದ ಅವರು ಸರ್ಕಾರದ ಗಮನ ಸೆಳೆಯಲು ನಡೆಯುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಜಿಲ್ಲೆಯ ಮತ್ತು ತಾಲೂಕಿನ ಸಮಸ್ತ ಪ್ರೌಢಶಾಲಾ ಶಿಕ್ಷಕರು ಮುಷ್ಕರಕ್ಕೆ ಬೆಂಬಲವಿದ್ದು, ಆ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಶಿಕ್ಷಕರು ಗೈರು ಹಾಜರಾಗುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸಿದ್ದಾರೆ