ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಲಬುರಗಿ ಮತ್ತು ಉದಯ ಪ್ರಕಾಶನ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಾಹಿತಿ, ಶಾಸ್ತ್ರಚೂಡಾಮಣಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದ “ಜ್ಞಾನಸಿಂಧು” ಚಿದಾನಂದಾವಧೂತರ ವೇದಾಂತ ಕಾವ್ಯ ಗ್ರಂಥ ಲೋಕಾರ್ಪಣೆ ಹಾಗೂ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂನ್ 05, 2024ರ ಬುಧವಾರ ಸಂಜೆ 5.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರ”ದಲ್ಲಿ ಆಯೋಜಿಸಲಾಗಿದೆ.
ಚೈತನ್ಯಾಶ್ರಮ ಶ್ರೀಕ್ಷೇತ್ರ, ಹೆಬ್ಬಳ್ಳಿಯ ಪ.ಪೂ. ಶ್ರೀ ದತ್ತಾವಧೂತ ಗುರುಗಳು ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ, “ಜ್ಞಾನಸಿಂಧು” ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರಿನ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2023ರ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಯನ್ನು ಸಿಲಿಕಾನ್ ಸಿಟಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಎಸ್.ಎಚ್. ಗೋವರ್ಧನ ಅವರು ಸ್ವೀಕರಿಸುತ್ತಾರೆ. ನಂತರ ದಿ. ಬಸಲಿಂಗಪ್ಪ ಮಲ್ಕಪ್ಪ ಕಟ್ಟಿ ಸ್ಮರಣಾರ್ಥವಾಗಿ ಪ್ರೊ. ಮಲ್ಲೇಪುರಂ ಪುಸ್ತಕ ಬಹುಮಾನವನ್ನು ನಗರದ ವರ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ. ಚಂದ್ರಪ್ಪ ಸ್ವೀಕರಿಸುವರು.
ಹುಬ್ಬಳ್ಳಿಯ ಸಿದ್ಧಾರೂಢ ಆಶ್ರಮದ ಟ್ರಸ್ಟಿಗಳಾದ ಶ್ರೀ ಶಾಮಾನಂದ ಪೂಜೇರಿಯವರು “ಜ್ಞಾನಸಿಂಧು” ಗ್ರಂಥ ಪರಿಚಯ ಮಾಡಿಕೊಡುತ್ತಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರು ಭಾಗವಹಿಸಲಿದ್ದಾರೆ.