spot_img
spot_img

ಶ್ರೀ ಸಿದ್ದೇಶ್ವರ ಸ್ವಾಮಿಗಳು

Must Read

spot_img
- Advertisement -

ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ಬಹಳ ಆಳವಾಗಿ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭವಿಗಳಾಗಿದ್ದರು. ಇವರು ಕನ್ನಡ ಸಂಸ್ಕೃತ ಇಂಗ್ಲಿಷ್ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರಾಗಿದ್ದರು. ಎಲ್ಲರೂ ಇವರ ಹೊಸ ಜ್ಞಾನ ತತ್ವಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು ಎಂದು ಡಾ. ಸರಸ್ವತಿ ಪಾಟೀಲ ಹೇಳಿದರು.

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಡಾ.ವೀಣಾ ಎಲಿಗಾರ ಅವರ ತಂದೆಯವರಾದ ಲಿಂಗೈಕ್ಯ ಶರಣ ಹನುಮಂತಪ್ಪ ಲಿಂಗಪ್ಪ ಹೂಗಾರ ತಾಯಿ ಶರಣೆ ಶಾಂತಮ್ಮ ಹನುಮಂತಪ್ಪ ಹೂಗಾರ ಇವರ ಸ್ಮರಣಾರ್ಥ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 31 ನೆಯ ದಿವಸ ಅವರು ಮಾತನಾಡಿದರು.

ಶ್ರೀಗಳು ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ನನ್ನದು ತನ್ನದೆಂಬ ಮಮಕಾರ ತೊಡೆದ ಮಹಾಪುರುಷರೇ ಸಿದ್ದೇಶ್ವರ ಸ್ವಾಮೀಜಿಯವರು. ಸಂತರು ಅಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನರಿದ್ದರು ಈಗಲೂ ಇದ್ದಾರೆ ಆದರೆ ಜನಯೋಗಿಗಳು ಬಹಳ ಅಪರೂಪ. ಅಂಥವರಲ್ಲಿ ಒಬ್ಬರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.ವಿಜಯಪುರದ ಜ್ಞಾನ ಯೋಗಾಶ್ರಮ ಜನತೆಗೆ ಜ್ಞಾನ ದಾಸೋಹ ನೀಡುವ ವಿಶಿಷ್ಟ ಕೇಂದ್ರ.ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳ ಮಹತ್ವ ಪಡೆಯಿತು ಎನ್ನುವುದನ್ನು ಸ್ಮರಿಸಿದರು.

- Advertisement -

ಜನರನ್ನು ಸೆಳೆಯುವ ಜನಕ್ಕೆ ಈ ಲೋಕದಲ್ಲಿ ಕೊರತೆ ಇಲ್ಲ ಆದರೆ ಅದರ ಪರಿಣಾಮ ಕೇಳುಗನ ಆಳಕ್ಕೆ ಇಳಿಯುವುದಿಲ್ಲ. ಉತ್ತಮ ಮಾರ್ಗದಲ್ಲಿ ನಡೆದು ಅದನ್ನೇ ಹೃದಯದಲ್ಲಿ ತುಂಬಿಕೊಂಡ ನಂತರ ತಮ್ಮ ಹೃದಯದಲ್ಲಿ ಮೂಡಿದ ಸದ್ಭಾವದ ಪಾಕವನ್ನೇ ಮಾತಿನಾನುಭೂತಿಯಲ್ಲಿ ಅಭಿವ್ಯಕ್ತಿಸುವ ನಡೆಯೇ ಮಹಾತ್ಮರ ಹಾದಿ. ಅಪರೂಪದ ಮಹಾತ್ಮರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮುಖ್ಯರು ಎಂದು ಹೇಳುತ್ತಾ ಅವರು ಹೇಳುವ ಬಸವಣ್ಣನವರ ವಚನ ಮತ್ತು ಅಲ್ಲಮರ ವಚನಗಳ ಸಾರವನ್ನು ಉಲ್ಲೇಖಿಸುತ್ತಾ, ಅವರು ಬರಹ ಒಂದರಲ್ಲಿ ಹೇಳಿದ ಮಾತು… ನಾವು ಹುಡುಕುತ್ತಿರುತ್ತೇವೆ ಅದು ಇದು ಮತ್ತೊಂದನ್ನು ಸಂತೋಷವನ್ನು ದೇವರನ್ನು ಕೂಡ ಹುಡುಕುತ್ತೇವೆ ಹುಡುಕಬೇಡಿ ನೋಡಿ ಸೂರ್ಯೋದಯದಲ್ಲಿ ಸೂರ್ಯಾಸ್ತದಲ್ಲಿ ಹೂವಿನಲ್ಲಿ ಹಸುರಿನಲ್ಲಿ ಹರಿಯುವ ನೀರಿನಲ್ಲಿ ಮಗುವಿನ ನಗೆಯಲ್ಲಿ ಅವನು ಇಲ್ಲೇ ಇದ್ದಾನೆ ನೋಡಿ ಹುಡುಕಬೇಡಿ ಎಂಬರ್ಥದ ಅವರ ಮಾತು ಎಲ್ಲರ ಅಂತರಾಳ ತಟ್ಟುತ್ತದೆ ಎನ್ನುವ ಅರ್ಥಗರ್ಭಿತ ಮಾತುಗಳನ್ನು ಹಂಚಿಕೊಳ್ಳುತ್ತ, ಶ್ರೀಗಳ ಉಪನ್ಯಾಸಕ್ಕೆ ಅಸoಖ್ಯಾತ ಜನರು ಶಿಸ್ತಿನಿಂದ ಕೂಡುತ್ತಿದ್ದರು ಎಂದು ಹಂಚಿಕೊಂಡರು
ಸಾಮಾಜಿಕ ಪರಿವರ್ತನೆಗಾಗಿ ದುಡಿಯುತ್ತಿರುವ ಸಂಸ್ಥೆಗಳ ಸಾಲಿಗೆ ವಿಜಯಪುರದ ಜ್ಞಾನ ಯೋಗಾಶ್ರಮವು ಸೇರುತ್ತದೆ. ಐತಿಹಾಸಿಕ ಗುಮ್ಮಟ ನಗರಿ ವಿಜಯಪುರವು ಧಾರ್ಮಿಕ ಪುಣ್ಯಕ್ಷೇತ್ರವೂ ಹೌದು. ಇಲ್ಲಿನ ಜ್ಞಾನ ಯೋಗಾಶ್ರಮವು ನಾಡಿನ ಪ್ರಸಿದ್ಧ ಆಧ್ಯಾತ್ಮಿಕ ಸಾಮಾಜಿಕ ಶೈಕ್ಷಣಿಕ ತಾಣಗಳಲ್ಲಿ ಒಂದಾಗಿದೆ. ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಈ ಜ್ಞಾನ ಯೋಗಾಶ್ರಮವನ್ನು ಅದರ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು ಹೋದರು ನಿಸ್ವಾರ್ಥ ಸೇವೆ ಸರಳ ಜೀವನ ಅಕ್ಷರ ದಾಸೋಹ ಶ್ರೀಗಳ ಮೂಲ ಉದ್ದೇಶವಾಗಿತ್ತು ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಅರಿತಿರುವ ಸಿದ್ದೇಶ್ವರ ಸ್ವಾಮೀಜಿ ಅವರು ಸೀದಾ ಸಾದಾ ಸರಳ ಸುಂದರ ಆಧ್ಯಾತ್ಮದ ಜೀವನ ನಡೆಸುತ್ತಿದ್ದರು. ಹಣ ಮತ್ತು ವಸ್ತುಗಳ ಮೇಲೆ ಆಸೆ ಹುಟ್ಟಬಾರದು ಎಂದು ತಾವು ಧರಿಸುವ ಉಡುಪುಗಳಿಗೆ ಅವರು ಜೇಬು ಕೂಡ ಇಟ್ಟಿರಲಿಲ್ಲ.ಅವರಿಗೆ ಅಧ್ಯಾತ್ಮವೆಂಬುದು ಬೋಧನೆಯ ವಸ್ತುವಲ್ಲ ಸರಳ ಸಹಜ ಜೀವನದ ದೈನಂದಿನ ನಡೆ ಎಂದು ಭಕ್ತಿ ಭಾವದಿಂದ ನೆನೆಸಿದರು.

ಇವರ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು ಸ್ವಾಮಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ ವಸತಿಗಳಿಗೆ ವ್ಯವಸ್ಥೆ ಮಾಡಿದರು ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು ಎನ್ನುವ ಅವರ ಕಳಕಳಿಯನ್ನು ಬಿಂಬಿಸಿದರು.

ಎಂಎ ಪದವಿ ಮುಗಿದ ನಂತರ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ ಸಿದ್ಧಾಂತ ಶಿಖಾಮಣಿ ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲಿ ಪ್ರಕಟಿಸಿದರು ಆಗ ಅವರಿಗೆ ಕೇವಲ 19 ವರ್ಷವಾಗಿತ್ತು. ಆಗಲೇ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಞಾನ ದಿಗಂತವನ್ನು ವಿಸ್ತರಿಸಿದ್ದರು. ಸಿದ್ದೇಶ್ವರರು ಉಪನಿಷತ್ತುಗಳು ಭಗವದ್ಗೀತೆ ಯೋಗ ಸೂತ್ರ ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಗುರು ಮುಖೇನ ಕಲಿತ ಜ್ಞಾನವನ್ನು ಬಳಸಿಕೊಂಡು ಬೋಧಪ್ರಧ ಪ್ರವಚವನ್ನು ನೀಡುತ್ತಿದ್ದರು ಘನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡುವುದು ಅವರ ವೈಶಿಷ್ಟವಾಗಿತ್ತು ಎನ್ನುವುದನ್ನು ಸ್ಮರಿಸಿದರು.

- Advertisement -

ಶ್ರೀಗಳ ಉಪನ್ಯಾಸ ಸರಣಿಯಲ್ಲಿ ” ಬದುಕುವುದು ಹೇಗೆ ” “ನಾವು ಹೇಗೆ ಬದುಕಬೇಕು ಮತ್ತು ಬದುಕಿಗೆ ದಾರಿ ಮಾಡಿಕೊಳ್ಳಬೇಕು ” ಎಂಬುದು ಲಕ್ಷಾಂತರ ಭಾರತೀಯರನ್ನು ಸೆಳೆದಿದೆ .ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಅಲ್ಲಮಪ್ರಭುಗಳ ವಚನಗಳ ಮೇಲೆ ಮಹತ್ವದ ಬೆಳಕು ಚೆಲ್ಲುತ್ತಾ ಬಂದಿದ್ದಾರೆ. ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಭಾರತದ ಸಂಸ್ಕೃತಿಯ ಕುರಿತಾಗಿ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸವಾಣಿಯಂತೆ ನನ್ನದೇನಿದೆ ಎಲ್ಲವೂ ಭಗವಂತನದು ಇಲ್ಲಿರುವ ಪ್ರತಿಯೊಬ್ಬ ಮನುಷ್ಯನು ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು ನಾನು ನನ್ನದೆಂಬ ಮಮಕಾರ ಸಲ್ಲದು ಇಹಪರ ಎರಡೂ ಒಂದೇ ಎಂದು ಸಾರುತ್ತ ಅದರಂತೆ ನಡೆಯುತ್ತಾ ಇರುವ ಅಪರೂಪದ ಯೋಗಿಗಳು ಸಿದ್ದೇಶ್ವರರು ಎಂದು ಹಂಚಿಕೊಂಡರು.

ಶ್ರೀಗಳ ಪರಿಸರ ಕಾಳಜಿಯು ಮಹತ್ವಪೂರ್ಣವಾದದ್ದು ಭೂಮಿಯ ಮೇಲೆ ಮನುಷ್ಯ ಒಬ್ಬನೇ ಬುದ್ಧಿಜೀವಿ, ಸಂಘಜೀವಿಯಾಗಿದ್ದಾನೆ.ಆದ್ದರಿಂದ ಮನುಷ್ಯ ಸಮಾಜದಲ್ಲಿ ಹೃದಯವಂತಿಕೆಯಿಂದ ಬಾಳಿ ಬದುಕಬೇಕು ಅಲ್ಲದೆ ಉಳಿದ ಇತರರಿಗೆ ಕೇಡನ್ನು ಬಯಸದೆ ಸಂತೋಷ ನೀಡುವ ಗುಣ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ.ಶ್ರೀಗಳಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಯಿತು ಆದರೆ ಇಂತಹ ಪ್ರಶಸ್ತಿ ಪುರಸ್ಕಾರಗಳನ್ನು ಸಿದ್ದೇಶ್ವರ ಶ್ರೀಗಳು ವಿನಮ್ರವಾಗಿ ನಿರಾಕರಿಸಿದರು. ನಾನೊಬ್ಬ ಸರಳ ವ್ಯಕ್ತಿ ಸಾಮಾನ್ಯ ಜೀವನ ನಡೆಸುತ್ತಾ ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತಗೊಳಿಸುವುದು ನನ್ನ ಉದ್ದೇಶ. ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆಯೂ ನನಗಿಲ್ಲ ಆಧ್ಯಾತ್ಮ ಆದರ್ಶ ಮತ್ತು ನೈತಿಕತೆ ಕೇವಲ ಬೋಧನೆ ಮಾಡುವುದಕ್ಕೆ ಅಲ್ಲ ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನನ್ನ ಧರ್ಮ ಎಂದು ಹೇಳಿ ಗೌರವ ಪೂರಕ ಭಾವನೆಯಿಂದ ಅವುಗಳನ್ನು ನಿರಾಕರಿಸಿದರು ಎನ್ನುತ್ತಾ ತಮ್ಮ ಉಪನ್ಯಾಸ ಮುಗಿಸಿದರು.

ಶರಣೆ ಪ್ರೇಮಾ ಅಣ್ಣಿಗೇರಿ ಅವರು ಗುರುಲಿಂಗ ಕಾಪ್ಸೆ ಅವರ ಕವನವನ್ನು ಹೇಳುತ್ತಾ, ದಿವ್ಯ ಚೇತನ, ನಡೆದಾಡುವ ದೇವರು, ನುಡಿದಂತೆ ನಡೆದರು ಎಂದು ಶ್ರೀಗಳ ಬಗೆಗೆ ಅಭಿಮಾನದಿಂದ ಹೇಳಿದರು. ತಾವು ಶ್ರೀಗಳನ್ನು ಭೆಟ್ಟಿಯಾದ ಪ್ರಸಂಗ, ಅವರ ಪ್ರವಚನ ಬೆಳಿಗ್ಗೆ 6 ರಿಂದ 7 ರವರೆಗೆ ಯಾವುದೇ ಗದ್ದಲವಿರದೆ ಶಾಂತತೆಯಿಂದ ಕೂಡಿರುತ್ತಿತ್ತು, ಎಂದು ಹೇಳುತ್ತಾ, ಸರಳತೆಯ ಸಾಕಾರಮೂರ್ತಿ, ಜೇಬಿಲ್ಲದ ಸರದಾರ, ನಿಸರ್ಗ ಪ್ರಿಯರು ಮೌಲ್ಯಗಳ ಮೊತ್ತ ಎಂದು ಶ್ರೀಗಳ ಬಗೆಗೆ ಭಕ್ತಿಪೂರ್ವಕವಾಗಿ ಮಾತನಾಡಿ ಅಮೇರಿಕಾಕ್ಕೆ ಅಕ್ಕ ಸಮ್ಮೇಳನಕ್ಕೆ ಬಂದಾಗಿನ ಅವರ ಸರಳತೆಯನ್ನು ಹೇಳುತ್ತಾ, ನಿರಪೇಕ್ಷತೆಯಿಂದ ಪೂರ್ವಾಶ್ರಮದ ಎಲ್ಲಬಂಧುಗಳನ್ನು ಅವರು ಕಳಚಿಕೊಂಡಿದ್ದರು ಎಂದು ಹೇಳುತ್ತಾ, ಮಧ್ಯೆ ಮಧ್ಯೆ ವಚನಗಳನ್ನು ಉಲ್ಲೇಖಿಸುತ್ತಾ ತಮ್ಮ ಮಾರ್ಗದರ್ಶನದ ನುಡಿಗಳನ್ನು ಮುಗಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ತಾವು ಚಿಕ್ಕವರಿದ್ದಾಗ ಮಲ್ಲಿಕಾರ್ಜುನ ಸ್ವಾಮಿಗಳನ್ನು ನೋಡಿದ್ದು, ಅವರ ಜೊತೆಗೆ ಸಿದ್ಧೇಶ್ವರ ಶ್ರೀಗಳು ಇರುತ್ತಿದ್ದುದನ್ನು ಹೇಳುತ್ತಾ, ತಪೋವನದ ಕುಮಾರ ಸ್ವಾಮಿಗಳ ನಂತರ ಸಿದ್ಧೇಶ್ವರ ಶ್ರೀಗಳು ಇಡೀ ಭಾರತದಲ್ಲಿಯೇ ಸರ್ವಶ್ರೇಷ್ಠ ದಾರ್ಶನಿಕರು ಎಂದು ಅಭಿಮಾನದಿಂದ ಹೇಳುತ್ತಾ, ಅವರು ಸ್ಥಿತಪ್ರಜ್ಞರಾಗಿದ್ದರು, ಮೌನವೇ ಅವರ ಮಾತಾಗಿತ್ತು, ಅವರು ಉದಾತ್ತೀಕರಣದ ಪರಿಕಲ್ಪನೆಯನ್ನು ಹೊಂದಿದ್ದರು ಎನ್ನುವುದನ್ನು ಹೇಳುತ್ತಾ, ಅವರ ಜೊತೆಗಿನ ಭೇಟಿ, ಅವರ ಮುಗುಳ್ನಗೆಯ ಉತ್ತರ, ಅವರ ಉಪನ್ಯಾಸದ ಕ್ಯಾಸೆಟ್ ಕೇಳಿದ್ದು, ಅವರು ಶರಣರ ವಚನಗಳ ಜೊತೆಗೆ ಉಪನಿಷತ್ ಗಳ ಉದಾಹರಣೆಗಳನ್ನೂ ಸಹ ತಮ್ಮ ಉಪನ್ಯಾಸದಲ್ಲಿ ಉದಾಹರಣೆ ಸಮೇತ ಹೇಳುತ್ತಿದ್ದರು ಎನ್ನುವುದನ್ನು ಸ್ಮರಿಸಿದರು.

ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಶರಣೆ ಸುವರ್ಣಾ ಪಾಟೀಲ ಅವರ ಸ್ವಾಗತ-ಪ್ರಾಸ್ತಾವಿಕ-ಪರಿಚಯ, ಶರಣೆ ದೀಪಾ ಜಿಗಬಡ್ಡಿ ಅವರ ಶರಣು ಸಮರ್ಪಣೆ, ಡಾ. ಬಸಮ್ಮ ಗಂಗನಳ್ಳಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯ್ತು. ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group