spot_img
spot_img

ಮೂರಲ್ಲ ಮುನ್ನೂರು ವರ್ಷಗಳೇ ಉರುಳಿದರೂ ಪುನೀತ !

Must Read

spot_img
- Advertisement -

ಅಪ್ಪು ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ. ಕೇವಲ ಸಿನಿಮಾದಲ್ಲಿ ನಟಿಸಿ ನಾಯಕನೆನಿಸಿಕೊಳ್ಳಲಿಲ್ಲ, ನಟನೆ ಅವರ ವೃತ್ತಿ ಧರ್ಮ. ಸಿನಿಮಾಗೆ ಬಣ್ಣ ಹಚ್ಚಿದರೇ ಹೊರತು ನಿಜ ಜೀವನದಲ್ಲಿ ಅವುಗಳನ್ನು ಮೈಗೂಡಿಸಿಕೊಳ್ಳಲಿಲ್ಲ. ಬದುಕಿನಲ್ಲಿ ಬಣ್ಣಗಳನ್ನ ಮೈಗೊಡವಿ ಬದುಕನ್ನ ಬದುಕಿನಂತೆ ಬದುಕಿದವರು. ಬದುಕಿನ ಬವಣೆಯಲ್ಲಿ ನೊಂದು ಬೆಂದವರಿಗೆ ಕಲಿಯುಗದ ಕರ್ಣನಂತೆ ನೆರವಾದವರು. ಯಾವ ಸಿನಿಮಾಗಳಲ್ಲೂ ಅಬ್ಬರತನ ತೋರಿದವರಲ್ಲ, ಸರಳತೆಯ ಸಾಮ್ರಾಟನಂತೆ ಇಡೀ ಚಂದನವನದ ನಗುವಾಗಿದ್ದು ಕನ್ನಡ ಮತ್ತು ಕನ್ನಡಮ್ಮನ ಕಂಪನ್ನು ಇಡೀ ಕನ್ನಡ ಚಿತ್ರರಂಗದಲ್ಲಿ ಪಸರಿಸಿದವರು. ಮುರಿದ ಮನಸ್ಸುಗಳನ್ನು ಕಟ್ಟುವ, ಮಕ್ಕಳ, ವೃದ್ಧರ, ಯುವಕರ ಎಲ್ಲ ವಯೋಮಾನದವರ ಮನಸ್ಸನ್ನು ಹಿಡಿದಿಡುವಂತಹ ಚಲನಚಿತ್ರಗಳ ಮೂಲಕ ಬಾಲ್ಯದಿಂದಲೇ ಮುಗ್ದ ನಗುವೊಂದರ ಮೂಲಕ ಸಾಮಾಜಿಕ ಕಳಕಳಿಹೊತ್ತ ಸಿನಿಮಾಗಳನ್ನು ತೆರೆ ಮೇಲೆ ತಂದು ನಮ್ಮೆಲ್ಲರನ್ನೂ ಹಿಡಿದಿಟ್ಟ ಸುಸಂದಿ ಮಾಯಗರ ಅಪ್ಪುರವರು. ಬಾಲ್ಯದಲ್ಲಿ ಲೋಹಿತನೆಂದು ನಾಮಾಂಕಿತಗೊಂಡು, ಅಭಿಮಾನಿಗಳ ಅಪ್ಪು ಆಗಿ, ಪವರ್ ಸ್ಟಾರ್ ಎಂಬ ಬಿರುದು, ನೂರಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದ ಅಪ್ಪು ಅಪ್ಪ ಅಮ್ಮ ಸಹೋದರರ ಪಾಲಿನ ಪುನೀತನಾದದ್ದು ನಿಜಕ್ಕೂ ಶ್ಲಾಘನೀಯ. ಅದೆಷ್ಟೋ ವೃದ್ದಾಶ್ರಮಗಳಲ್ಲಿ ಆರೈಕೆಯಿಂದ ಹೊರಬಿದ್ದ ಮುದಿ ಜೀವಗಳ ರೋದನೆ ಆಲಿಸಿ, ಅನಾಥ ಮಕ್ಕಳಿಗೆ ಅನಾಥರು ಎಂಬ ಅರಿವು ಮೂಡದಂತೆ ಪಾಲನೆ ಮಾಡಿದ್ದೂ, ಅಂದರ ಬಾಳಿಗೆ ಬೆಳಕಾದದ್ದು, ಉನ್ನತ ಶಿಕ್ಷಣದ ಆಸೆ ಹೊತ್ತವರ ಪಾಲಿಗೆ ವರವೆಂಬತೆ ಒಲಿದು ಬಂದ ದೈವ ಸ್ವರೂಪಿ, ಹೆಣ್ಣು ಅಲ್ಲದ ಗಂಡೂ ಅಲ್ಲದ ಶಿವ ಪಾರ್ವತಿಯರ ಸ್ವರೂಪಿಗಳಾದ ಮಂಗಳಮುಖಿಯರ ಪಾಲಿಗೂ ಅಪ್ಪು ತಂದೆ ತಾಯಿಯಾಗಿದ್ದವರು ಅಪ್ಪು ಎಂದರೆ ತಪ್ಪಾಗಲಾರದು. ಎಲ್ಲ ಸ್ಟಾರ್ ಗಿರಿಗಳನ್ನು ಮೀರಿದ ಸಾಧನೆ ಪುನೀತ್ ರವರದು. ಎಲ್ಲಿಯೂ ತಾನು ಮಾಡಿದ ಸಹಾಯ ತಿಳಿಯದಂತೆ ಎಲೆ ಮರೆಯ ಕಾಯಿಯ ಹಾಗೆ ಸದ್ದಿಲ್ಲದೆ ಸಮಾಜಕಾರ್ಯ ಮಾಡಿದ ಪುಣ್ಯಾತ್ಮ.

ನಾನು ಬದುಕಿದರೆ ಸಾಕು. ನಾನು ಮಾತ್ರ ಎನ್ನುವವರ ನಡುವೆ ನಾವು ನಮ್ಮವರು ಎಂದು ಬದುಕಿ ತೋರಿಸಿದ್ದು ಮಾತ್ರ ಪುನೀತ್. ಮೂರು ಜನ್ಮಕ್ಕಾಗುವಷ್ಟು ಗಳಿಸಿದ್ದರು ಸಹ ಸ್ವಾರ್ಥಕ್ಕೆ ಏನನ್ನೂ ಬಳಸಿಕೊಳ್ಳಲಿಲ್ಲ. ಅಜಾತ ಶತ್ರುವಿನಂತೆ ಬದುಕಿದ ಅಪ್ಪುವಿನ ಗುಣಗಳು ನಿಜಕ್ಕೂ ಆದರ್ಶ. ಮತ್ತೊಬ್ಬರ ಖುಷಿಯಲ್ಲಿ ಖುಷಿ ಕಂಡ ಜೀವ. ಈ ನಗುವನ್ನು ಕಂಡು ನಗುವೇ ಸಾಲ ಕೇಳುವಷ್ಟು, ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಮನಸಾರೆ ನಗ್ತಿದ್ದ ಈ ನಗುಮೊಗ ದೇವರಿಗೂ ಹೊಟ್ಟೆಕಿಚ್ಚು ಆಗುವಂತೆ ಮಾಡಿತ್ತೇನೋ ಎನಿಸುತ್ತದೆ. ಸುಖಾ ಸುಮ್ಮನೆ ಯಾರನ್ನೂ ನಿಂದಿಸಲಿಲ್ಲ, ಯಾರ ಕುರಿತ ಹರಟೆಯನ್ನು ಮಾಡಲಿಲ್ಲ, ಅಕ್ಷರಶಃ ಬದುಕನ್ನು ಬದುಕಿನಂತೆ ಬದುಕಿದ ಪರಮಾತ್ಮ ನೀವು. ಮೂರು ಜನ್ಮ ಅಲ್ಲ ಮುನ್ನೂರು ಜನ್ಮ ಕಳೆದರು ನೆನಪಿನಲ್ಲೇ ಉಳಿವ ಮತ್ತು ಜನರ ಆರಾಧ್ಯ ದೈವವಾಗಿ ಅಜರಾಮರ ನೀವು. ಬಿಟ್ಟು ಹೋಗುವ ಪ್ರಪಂಚಕ್ಕೆ ನೀವು ಕೊಟ್ಟು ಹೋದದ್ದು ಮಾತ್ರ ಒಂದಲ್ಲ ಎರಡಲ್ಲ ಮುನ್ನೂರು ಜನ್ಮಕ್ಕಾಗುವಷ್ಟು. ನೀವು ಕಣ್ಣಿಗೆ ಕಾಣದೆ ಹೋದರೂ ಮಾನಸಿಕವಾಗಿ ಎಲ್ಲರೊಂದಿಗೂ ಜೀವಿಸಿದ್ದೀರಿ. ತಂದೆ ತಾಯಿಗಳ ಮೂಲಕ ಮಕ್ಕಳನ್ನು ಗುರುತಿಸುವ ಪ್ರಪಂಚದಲ್ಲಿ ನಿಮ್ಮ ಮೂಲಕ ತಂದೆ ತಾಯಿಯ ಹೆಸರೇಳುವಂತೆ ನೀವು ಬದುಕಿದ್ದು ಮಾತ್ರ ಸೋಜಿಗ. ನಿಮ್ಮನ್ನ ಕಂಡು ಭಗವಂತನಿಗೂ ಅಸೂಯೆ ಎನಿಸಿತ್ತೇನೋ ಅದಕ್ಕಾಗಿ ನಿಮ್ಮನ್ನು ನಮ್ಮಗಳಿಂದ ಮತ್ತು ನಿಮ್ಮಿಂದ ನಗುವನ್ನು ದೇವರೂರಿಗೆ ಕರೆಸಿಕೊಂಡ ಎನಿಸುತ್ತದೆ. ಕ್ಷಣಕಾಲ ಬದುಕಿನಲ್ಲಿ ಅನುಗಾಲ ಉಳಿದವರು ನೀವು ಮತ್ತು ನಿಮ್ಮ ನೆನಪುಗಳು. ಅದೆಷ್ಟೋ ಮನೆಗಳಲ್ಲಿ ದೇವರಾದವರು. ನಿತ್ಯ ಪೂಜೆಗೊಳ್ಳುತ್ತಿರುವವರು ನೀವು. ನಿಮ್ಮಂತವರ ಕಾಲಘಟ್ಟದಲ್ಲಿ ನಾವಿದ್ದೆವು ಎಂಬುದು ನಮಗೂ ಸೋಜಿಗವೆ.

ಮೂರು ವರ್ಷ ಅಲ್ಲ, ಮೂರು ವಸಂತಗಳಲ್ಲ, ಮುನ್ನೂರು ಜನ್ಮಗಳು ಕಳೆದರು ನೀವು ಅಜರಾಮರ. ಬದುಕು ಬಂದು ಕರೆದಾಗ ಎಲ್ಲರೂ ಎದ್ದು ಹೋಗಲೇಬೇಕು ಆದರೆ ನಿಮ್ಮಂತಹ ಆದರ್ಶಮಯ, ಪುಣ್ಯಾತ್ಮ, ಪರಮಾತ್ಮನಂತವರನ್ನು ಭಗವಂತ ತನ್ನೂರಿಗೆ ಕರೆದೊಯ್ದದ್ದನ್ನು ನೆನಪಿಸಿಕೊಂಡರೆ ಭಗವಂತನಿಗೂ ಹಿಡಿ ಶಾಪ ಹಾಕಿಬಿಡೋಣ ಎನಿಸುತ್ತದೆ. ನಿಮ್ಮಲ್ಲಿನ ಒಳ್ಳೆಯತನಗಳು ಅವನಿಗೂ ಹಿಡಿಸಿತ್ತೇನೋ, ನಿಮ್ಮ ಹಾಡು ಕೇಳಲು, ನಿಮ್ಮ ನಗು ಕದಿಯಲು, ನಿಮ್ಮ ಗುಣಗಳನ್ನು ಲೆಕ್ಕಹಾಕಲು ಪಾಪಿ ಭಗವಂತ ಸ್ವರ್ಗಕ್ಕೆ ಕರೆದೊಯ್ದನೇನೋ ಎಂದು ಬೇಸರವಾಗುತ್ತದೆ. ಬೆಟ್ಟದ ಹೂ ಇಂದಿಗೆ ದೇವರೂರಿಗೆ ಸೇರಿ ಮೂರು ವರ್ಷಗಳಾದರೂ ದೇವರನ್ನು ಮರೆತರು ಅಭಿಮಾನಿಗಳು ಆ ನಿರಂತರ ನಗುವ ಮೊಗದ ಹೂವನ್ನು ಮರೆತಿಲ್ಲ. ಇನ್ನಾದರೂ ಜನರಲ್ಲಿ ಒಂದಷ್ಟು ಸಾಮಾಜಿಕ ಕಳಕಳಿಯುಳ್ಳ ಗುಣಗಳಿವೆ ಎಂದಾದ್ರೆ ಅದು ಅಪ್ಪು ಈ ಸಮಾಜಕ್ಕೆ ಬಿಟ್ಟುಹೋದ ಹೆಜ್ಜೆಗುರುತುಗಳಿಂದ ಎನಿಸುತ್ತದೆ. ಬಿಟ್ಟು ಹೋಗುವ ಪ್ರಪಂಚದಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಬಲವಾಗಿ ಇಟ್ಟು ಸದ್ದಿಲ್ಲದೆ ಎದ್ದು ಹೋದ ಅಪ್ಪುವಿನ ನೆನಪು ಮಾತ್ರ ನಮ್ಮೊಳಗೇ ಚಿರಾಯು. ಅಪ್ಪು ನೀವಿಲ್ಲ ಎಂಬುದನ್ನು ನಮಗೆ ಅರಗಿಸಿಕೊಳ್ಳಲಾಗದು ನೀವು ನಮ್ಮೊಳಗೇ ಸದಾ ಜೀವಂತ.

- Advertisement -

ಡಾ ಮೇಘನ ಜಿ
ಕೂಡ್ಲಿಗಿ

- Advertisement -
- Advertisement -

Latest News

ಸಿಂದಗಿಯಲ್ಲಿ ಅಗ್ನಿ ಅವಘಡ

ಸಿಂದಗಿ : ತಾಲೂಕಿನ ಕೊಕಟನೂರ ಗ್ರಾಮದ.   ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡಿನಲ್ಲಿ ಅಗ್ನಿ ಅವಘಡದಲ್ಲಿ 6 ಆಕಳು, ಮಶೀನ್, ಮೇವು, ಮ್ಯಾಡ್  ಸೇರಿದಂತೆ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group