- Advertisement -
ಹೊಸ ಬಾಳಿನ ಬೆಳಕು
ಹಚ್ಚಿದ್ದೇವೆ ಶಬ್ದ ಮಧ್ಯದ
ಸಂತೆಯ ಸೊಡರು
ಗುಡಿಸಲಲಿ ಕಾಣದ ಮಿಣುಕು ಬೆಳಕು
ಸಿರಿವಂತರ ಅಂಗಳದ ಸಾಲು ಹಣತೆಗಳು
ಆಕಾಶ ಬುಟ್ಟಿ ಬಣ್ಣದೋಕುಳಿ
ಚಿಂದಿ ಬಟ್ಟೆಗಳ ಮುಂದೆ
ಉಡುಗೆ ತೊಡಗಿನ ವೈಯಾರ
ಹಿಂಗಿಲ್ಲ ಶತಮಾನದ ಹಸಿವು
ತಿರುಪೆ ಭಿಕ್ಷೆ ಬಡವರ ಅಳಲು
ಎಳೆಯ ಬಾಳೆ ಕಬ್ಬು ತೆರೆದು
ಹಸಿರು ತೋರಣ ಕೊಚ್ಚಿ
ಚೆಂಡು ಹೂವಿನ ಚೆಂಡು ಕಡಿದ ಮಂಟಪ
ಮನೆಗಳಲಿ ಲಕುಮಿಯ ಮೆರವಣಿಗೆ
ಪಟಾಕಿಯ ಅಬ್ಬರಕೆ ಕೊನೆಯಿಲ್ಲ
ಮೌನದಿ ಮರುಗಿ ಸಾಯುವ
ಪುಟ್ಟ ಗುಬ್ಬಚ್ಚಿ ಗಿಳಿ ಪಾರಿವಾಳಗಳು
ಸಿಡಿ ಮದ್ದಿಗೆ ಅಂಧರಾದರು ನನ್ನವರು
ಉನ್ಮಾದ ಉತ್ಸವ ಬೆಳಕಿನ ಹಬ್ಬ
ಹೊಲದಲ್ಲಿ ದುಡಿವ ರೈತರು
ಗಡಿಯಲ್ಲಿ ಸಾಯುವ ರೈತರು
ಯಂತ್ರಗಳ ಕೈಗಳಲ್ಲಿನ ಕಾರ್ಮಿಕರು.
ಎಂದು ಕಾಣುವೆವು ಶಾಂತಿ ನೆಮ್ಮದಿ ?
ಕಾಣಬಲ್ಲೆವೆ ಸತ್ಯ ಸಮತೆ ?
ನಡೆದ ದಾರಿ ಬಟ್ಟೆ ಬೆತ್ತಲು
ಕಳೆಯಲಿ ಶತಮಾನದ ಕತ್ತಲು.
ಮೂಡಿ ಬರಲಿ ಹೊಸಬಾಳಿನ ಬೆಳಕು.
ಕೊಚ್ಚಿ ಹೋಗಲಿ ಮನ ಮೈಲಿಗೆ ಕೊಳಕು
ಡಾ.ಶಶಿಕಾಂತ.ಪಟ್ಟಣ -ಪೂನಾ ರಾಮದುರ್ಗ