ಗುಡಿಗೆ ಹೋಗುವದೇಕೆ ? ದೇವನರಸುವದೇಕೆ ?
ಮತ್ತೆ ಹುಡುಕುವುದೇಕೆ ಗುರುದೇವನ ?
ದೇಹದೇವಾಲಯದಿ ನೀ ದೇವನಾಗುರುವಿ
ನಿನ್ನರಿವೆ ಗುರುದೇವ – ಎಮ್ಮೆತಮ್ಮ
ಶಬ್ಧಾರ್ಥ
ಅರಸು = ಹುಡುಕು.
ತಾತ್ಪರ್ಯ
ದೇಹದ ಸಾಂಕೇತಿಕವಾಗಿ ದೇವಾಲಯವನ್ನು ನಿರ್ಮಿಸಿದರು.
ಅದರಿಂದ ದೇವಾಲಯ ಸಂಸ್ಕೃತಿ ಬೆಳೆದು ಬಂದಿತು ಆದ್ದರಿಂದಲೇ ದೇಹೋ ದೇವಾಲಯಃ ಪ್ರೋಕ್ತಃ ಜೀವೋ ಹಂಸಃ ಸನಾತನಃ ಎಂಬ ಮಾತು ಬೆಳೆದು ಬಂತು.
ಪಾದಗಳೇ ಮುಖದ್ವಾರ, ಜನನೇಂದ್ರಿಯವು ಧ್ವಜಸ್ತಂಭ, ಉದರವು ಬಲಿಪೀಠ, ಹೃದಯವು ನವರಂಗ, ಕೊರಳು ಸುಕನಾಸಿ, ಶಿರಸ್ಸು ಗರ್ಭಗುಡಿ, ಭ್ರೂಮಧ್ಯದ ಆಜ್ಞಾಚಕ್ರ ಸ್ಥಾನವೇ ದೇವಪೀಠ. ಅದಕ್ಕೆ ಶಿಶುನಾಳ ಶರೀಫರು ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ಎಂದು ಹಾಡಿದ್ದಾರೆ. ದೇಹವೇ ಗುಡಿಯಾದ ಮೇಲೆ ಗುಡಿಗೆ
ಹೋಗಿ ದೇವರನ್ನು ಹುಡುಕುವ ಬದಲು ನಿನ್ನೊಳಗಿರುವ
ದೇವನನ್ನು ಹುಡುಕಬೇಕು. ಎನ್ನ ಕಾಲೆ ಸ್ಥಂಭ ದೇಹವೇ ದೇಗುಲ ಎನ್ನ ಶಿರವೇ ಹೊನ್ನ ಕಳಸವಯ್ಯ ಎಂದು ಬಸವಣ್ಣ
ಹೇಳಿದ್ದಾರೆ. ಮತ್ತೆ ಹೊರಗಡೆ ಗುರುವನ್ನು ಹುಡುಕುವುದು
ಕೂಡ ತರವಲ್ಲ. ನಿನ್ನ ನಡೆನುಡಿ ಸರಿಯಾಗಿಟ್ಟುಕೊಂಡರೆ
ಗುರುವೇ ನಿನ್ನಲ್ಲಿಗೆ ಬರುವನು. ಆಗ ನಿನ್ನ ಅರಿವೇ ಗುರುವಾಗಿ
ನಿನಗೆ ದಾರಿ ತೋರುವುದು. ಗುಡಿಗುಂಡಾರ ಸುತ್ತುವುದು
ಮತ್ತು ದೇವನನ್ನು ಗುರುವನ್ನು ಹುಡುಕುತ್ತ ಕಾಲ ಕಳೆಯುವ
ಬದಲು ನಿನ್ನೊಳಗಿಣಿಕಿ ನೋಡು. ಆಗ ಗುರುವು ಸಿಗುತ್ತಾನೆ ಮತ್ತು ದೇವನು ಸಿಗುತ್ತಾನೆ
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990