ಬೈಲಹೊಂಗಲ: ರೈತರ ಭೂಮಿ ಸಂಬಂಧಿತ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ ಸಮಸ್ಯೆ ಉಂಟಾಗಿದ್ದು, ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವ ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ಸಿನ ಸರಕಾರವೇ ಕಾರಣ. ಇದರ ವಿರುದ್ಧ ನಮ್ಮ ಪಕ್ಷ ನಿರಂತರ ಹೋರಾಟ ನಡೆಸಲಿದೆ. ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ಮುಂದುವರೆಸುತ್ತೇವೆ.ಇದು ಈಗಾಗಲೇ ಜನಾಂದೋಲನದ ರೂಪು ಪಡೆದಿದೆ. ಬಿಜೆಪಿ ಸಂತ್ರಸ್ತರಿಗೆ ಕಾನೂನು ಹೋರಾಟಕ್ಕೆ ಬೇಕಾದ ನೆರವನ್ನೂ ನೀಡಲಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು,
ತಮ್ಮ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೊಂದು ಲ್ಯಾಂಡ್ ಜಿಹಾದ್ ರೂಪದಂತಿದೆ. ಇದರ ವಿರುದ್ಧ ರೈತರು ಶೀಘ್ರವೇ ಪಹಣಿ ಪರಿಶೀಲನಾ ಅಭಿಯಾನ ನಡೆಸಲಿದ್ದಾರೆ. ಇದನ್ನು ಬಿಜೆಪಿ ಬೆಂಬಲಿಸಲಿದೆ. ಆದಿಲ್ ಶಾಹಿ, ತುಘಲಕ್ ಮಾದರಿ ಆಡಳಿತ ರಾಜ್ಯದಲ್ಲಿ ಜಾರಿಗೊಂಡಿದೆ. ಪಹಣಿ ಪ್ರದರ್ಶಿಸಿ ಹೋರಾಟ ನಡೆಸುತ್ತೇವೆ. ಇಡೀ ವಿಜಯಪುರ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್, ಬೀದರ್ ಜಿಲ್ಲೆಯಲ್ಲೂ ಇದೇ ರೀತಿ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿದ್ದಾರೆ. ದೆಹಲಿಯಲ್ಲಿ ಸಂಸತ್ತು ಇರುವ ಜಾಗ ಸೇರಿ ಲಕ್ಷಾಂತರ ಹೆಕ್ಟೇರ್ ಜಾಗ ನಮ್ಮದು ಎಂದಿದ್ದಾರೆ. ಹಲವೆಡೆ ದೇವಸ್ಥಾನ, ದೇವಾಲಯದ ಭೂಮಿಯೂ ನಮ್ಮದೆನ್ನುತ್ತಿದ್ದಾರೆ. ರೈತರು ಎಲ್ಲಿಗೆ ಗುಳೆ ಹೋಗಬೇಕು? ಎಂದು ಪ್ರಶ್ನಿಸಿದರು.
ಸಿಎಂ ಸೂಚನೆ ಮೇರೆಗೆ ಅದಾಲತ್ ನಡೆದಿದೆ ಎಂದು ಜಮೀರ್ ಅಹ್ಮದ್ ಮಾತನಾಡಿದ್ದಾರೆ. ವಕ್ಫ್ ಆಸ್ತಿ ಇಂದೀಕರಣಕ್ಕೆ ಸೂಚನೆ. ಇದು ಕೇವಲ ಬಿಜೆಪಿ ಹೋರಾಟವಲ್ಲ. ಸಂತ್ರಸ್ತ ರೈತರು, ಎಲ್ಲ ವರ್ಗದ ಜನರ ಹೋರಾಟ.ಮಠಾಧೀಶರೂ ತಮ್ಮ ಮಠಕ್ಕೆ ಮುಂದೆ ಹೀಗೆ ಆಗಬಹುದೆಂದು ಆತಂಕ ಹೊಂದಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಗದೀಶ ಬೂದಿಹಾಳ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ ಉಪಸ್ಥಿತರಿದ್ದರು.