spot_img
spot_img

ಸಾಹಿತ್ಯ ಪರಿಚಾರಿಕೆ ಕನ್ನಡ ಸೇವೆ ಸಿಸಿರಾ

Must Read

spot_img
- Advertisement -

ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬುದ್ಧ ಬಸವ ಗಾಂಧೀಜಿಯವರ ತತ್ವ ಆದರ್ಶಗಳಿಗೆ ಮಾರು ಹೋದ ನಾನು ಅಲ್ಲಿಂದಲೇ ಸರಳ ಸಸ್ಯಾಹಾರ,ಆಹಿಂಸಾ ತತ್ವ ಇನ್ನೊಬ್ಬರ ನೋವು ನಲಿವುಗಳಲ್ಲಿ ಸ್ಪಂದಿಸುವ ಗುಣವನ್ನು ಈ ಚೇತನಗಳಿಂದ ಕಲಿತೆ ಎನ್ನುತ್ತಾರೆ ಸಿಸಿರಾ.

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಕರು ಎಸ್.ರಾಮಲಿಂಗೇಶ್ವರ ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು ಪ್ರವೃತ್ತಿಯಲ್ಲಿ ಸಾಹಿತ್ಯ ಪರಿಚಾರಕರು. ಸಿಸಿರಾ ಸ್ವಭಾವತಃ ಕವಿ. ಸಾಹಿತ್ಯ ವಲಯದಲ್ಲಿ ಕವಿಗೆ ಕವಿ ಒಲಿವ ಕವಿಗೆ ಕವಿ ಮುನಿವ ನುಡಿಮಾತಿದೆ. ಹೇಳಿದರೆ ಹಾಳಾಗುವುದು ಅನುಭವದ ಈ ಸವಿಯು, ಹೇಳದಿರೆ ತಾಳಲಾರನು ಕವಿಯು (ಕುವೆಂಪು) ಒಂದು ತರಹದ ಪ್ರಸವ ಸ್ಥಿತಿಯಲ್ಲಿರುತ್ತಾನೆ ಕವಿ. ಕವಿಗೆ ಪ್ರೋತ್ಸಾಹವಿರದಿರೆ ವಿರಹ ವೇದನೆಯಲ್ಲಿ ಕವಿತ್ವಕ್ಕೆ ಮಂಕು ಕವಿಯುತ್ತದೆ. ಕವಿಗಳಿಗೆ ಕಲಾವಿದರಿಗೆ ಪ್ರೋತ್ಸಾಹ ವೇದಿಕೆ ಖಂಡಿತ ಅಗತ್ಯ ಹೌದಷ್ಟೇ.! ಇದನ್ನು ಮನಗಂಡು ವೇದಿಕೆ ಸೃಷ್ಟಿಸಿ ಅವಕಾಶ ಕಲ್ಪಿಸುವ ಕಾಯಕ ನಿರತರು ಸಿಸಿರಾ.

ಬಹಳ ವರ್ಷಗಳ ಹಿಂದೆ ನನಗೂ ಇವರ ವೇದಿಕೆಯಲ್ಲಿ ಅವಕಾಶ ಸಿಕ್ಕಿದೆ. ಆಗ ಚನ್ನಪಟ್ಟಣ ಸನಿಹದ ಕೆಂಗಲ್‌ಗೆ ಕರೆದು ಹನಿಗವನ ವಾಚನ ಉಪನ್ಯಾಸಕ್ಕೆ ಅವಕಾಶ ನೀಡಿ ಬುದ್ಧ ಬಸವ ಗಾಂಧಿ ಪ್ರಶಸ್ತಿ ಕೊಟ್ಟದ್ದರು (ತಾ.೧೫-೮-೨೦೧೫) ಮೊನ್ನೆ ಚನ್ನಪಟ್ಟಣಕ್ಕೆ ಹೋಗಿ ಬರುವಾಗ ಕೆಂಗಲ್ ಊರು ನೋಡಿ ಸಿಸಿರಾ ನೆನಪಾದರು. ಆಗ ಅವರು ನೀಡಿದ್ದ ಸೃಜನಶೀಲ ಕೃತಿಯನ್ನು ಪುಸ್ತಕ ಭಂಡಾರದಲ್ಲಿ ಹೆಕ್ಕಿ ತೆಗೆದು ತಿರುವಿ ಹಾಕಿದೆ. ಇವರ ಸಾಹಿತ್ಯ ಪರಿಚಾರಿಕೆ ಮೆಚ್ಚಿ ಇವರ ಸ್ನೇಹ ಬಳಗದ ಸಾಹಿತಿಗಳು, ಶಿಷ್ಯ ವರ್ಗ ಬರೆದಿದೆ. ಸಿಸಿರಾ ಸ್ವಭಾವತಃ ಕವಿ. ನಾಡುನುಡಿ ಪ್ರೇಮಿ ಕನ್ನಡಪರ ಸಂಘಟಕ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅನೇಕ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಶಾಲಾ ಕಾಲೇಜಿಗೆ ಕನ್ನಡ ಸಾಹಿತ್ಯ ಅಭಿರುಚಿ ಹೆಚ್ಚಿಸುವ ಕೈಂಕರ್ಯ ಮಾಡಿದ್ದಾರೆ. ಕನ್ನಡ ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳಲು ಪರಿಷತ್‌ಗಿಂತ ಉತ್ತಮ ಅವಕಾಶ ಇಲ್ಲ. ಇದು ನಮ್ಮ ಜಿಲ್ಲೆಯಲ್ಲೇಕೆ ಇಲ್ಲ ಎಂಬ ಕೊರಗಿದೆ.

- Advertisement -

ಸಿಸಿರಾ ಕನ್ನಡ ಸಾಹಿತ್ಯ ಓದು ಬರಹ ಪ್ರಕಾಶನ ಜೊತೆಗೆ ಕನ್ನಡ ಬಾಳ್ಗೆ ಕನ್ನಡ ಏಳ್ಗೆ ದುಡಿವ ಕನ್ನಡಾಭಿಮಾನಿ. ಸಾಹಿತ್ಯವೇ ಉಸಿರಾಗಿ ಕವಿಗೋಷ್ಠಿ, ಸಾಹಿತ್ಯ ಶಿಬಿರ, ಕಾವ್ಯ ರಸಗ್ರಹಣ, ಹಳೆಗನ್ನಡ ಓದು, ಕೃತಿ ವಿಮರ್ಶೆ, ಸಂವಾದ ಚರ್ಚೆ ಸಂಘಟಿಸಿದವರು. ಸಾಹಿತ್ಯ ಪರಿಚಾರಿಕೆ ಸಂಘಟನೆ ಒಂದು ಮುಖವಾದರೆ ಸಾಹಿತ್ಯ ಕೃತಿಗಳ ರಚನೆ ಸಂಪಾದನೆ ಇನ್ನೊಂದು ಮುಖ. ಇವರ ಚೊಚ್ಚಲ ಕೃತಿ ಚೈತ್ರಾ ಚಿತ್ತಾರ ೩೮ ಕವಿತೆಗಳ ಸಂಕಲನ. ಕಾವ್ಯ ರಚನೆಯ ಆರಂಭ ಕಾಲದವು ವಿದ್ಯಾರ್ಥಿ ದಿನಗಳಲ್ಲಿ ಬರೆದವು.

ದುಃಖ ನನಗಿರಲಿ ಅವಳಿಗೆ ಸುಖವೇ ಬರಲಿ
ಯಾರೊಡನಿದ್ದರು ಸರಿಯೆ ಪ್ರೇಮದ ಪದಕೆ ಅರ್ಥವು ಸಿಗಲಿ
ಎನ್ನುತ್ತಾರೆ ಪ್ರೇಮದ ಸುಳಿಯೊಳಗೆ ಕವಿತೆಯಲ್ಲಿ. ಬಹುಶ: ಸಿಸಿರಾ ಈ ಸುಳಿಯಲ್ಲಿ ಸಿಲುಕಿ ತಮ್ಮಷ್ಟೇ ಓದಿದ ಸಿ.ಹೇಮಾವತಿ ಅವರನ್ನು ತಾ. ೧೮-೫-೨೦೦೬ರಂದು ಕುವೆಂಪು ಅವರ ಮಂತ್ರಮಾಂಗಲ್ಯ ಪ್ರಕಾರ ಸರಳ ವಿವಾಹವಾಗಿದ್ದಾರೆ. ಇವರ ೨ನೇ ಕವನ ಸಂಕಲನ ಪ್ರೇಮ ಗಂಗೆ ೧೯೯೯ರಲ್ಲಿ ಪ್ರಕಟ. ಕನ್ನಡದಿ ಹುಟ್ಟಿರುವ ಕವನದಲ್ಲಿ ಗೆಳತಿಗೆ ಹೀಗೆ ಆಹ್ವಾನಿಸಿದ್ದಾರೆ.

ಈ ಭಾಷೆ ಸಂಸ್ಕೃತಿಯ ಬೆಳೆಸು ಬಾ
ತಾಯಿ ಭಾರತಿಯ ಮುಡಿಗೆ ಶಿರಬಾಗಿ ನಮಿಸು ಬಾ
ವರಕವಿ ಬೇಂದ್ರೆ ತಮ್ಮ ಒಂದು ಸಾಲಿನಲ್ಲಿ ಕವಿ ಮನದ ಬೇಸರ ಹರಿ ಸಾಕ ಎನಬೇಕಾ! ಒಂದು ಹೂತ ಹುಣಸೀಮರ ಸಾಕಾ! ಎಂದಿದ್ದಾರೆ. ಒಣಗಿದ ಮರದ ಬೊಡ್ಡೆ ಕರಿಕಲ್ಲಿನ ಗುಡ್ಡ ಯಾವುದು ಸರಿ? ಎಂಬುದು ಕವಿ ಮನಸ್ಸನ್ನು ಪ್ರಚೋದಿಸಿದೆ. ಇವರ ತಾಯಿನಾಡು ಕವನ ಸಂಕಲನದಲ್ಲಿ ತಾಯಿನಾಡು ಅಭಿಮಾನ ಅಭಿವ್ಯಕ್ತಿ ಕವಿತೆ ಮಾತ್ರವಿರದೆ ಅದು ಎದುರಿಸುತ್ತಿರುವ ಆತಂಕದ ನೆಲೆಯ ಅನಾವರಣವಿದೆ. ಕವಿ ಸಿಸಿರಾ ತಮ್ಮ ಬಾಲ್ಯ ನೆನೆಸಿಕೊಳ್ಳುತ್ತಾರೆ. ಅವ್ವ ಪದ್ಮ ಅಪ್ಪ ಸಿದ್ದೇಗೌಡ. ಹುಟ್ಟಿದ್ದು ತಾ. ೪-೫-೧೯೭೩. ಪ್ರೈಮರಿ ಶಾಲೆ ಹುಟ್ಟ್ಟೂರು ಸಿದ್ದನಹಳ್ಳಿಯಲ್ಲಿ. ಕುಡಿಕೆ ಬೇವೂರಿನಲ್ಲಿ ಹೈಸ್ಕೂಲು. ಬಿಸಿಎಂ ಹಾಸ್ಟೆಲ್ ಸೇರಿ ತಿಮ್ಮಪ್ಪನ ಬೆಟ್ಟ, ಸಿದ್ಧರಾಮೇಶ್ವರ ಬೆಟ್ಟ ಹತ್ತಿದ್ದೆ ಹೆಚ್ಚು. ಚುಂಚನಗಿರಿ ಮಠದಲ್ಲಿದ್ದು ಚನ್ನಪಟ್ಟಣ ಕೆಂಗಲ್ ಕುವೆಂಪು ಕಾಲೇಜು ಸೇರಿ ನಂತರ ಕನ್ನಡ ಉಪನ್ಯಾಸಕರಾಗಿ ಎಸ್‌ಎಲ್‌ಎನ್ ಕಾಲೇಜು, ವಿವಿಪುರಂ ಕಾಲೇಜು, ವಿವೇಕಾನಂದ ಕಾಲೇಜು ಸೇರಿದಂತೆ ಬೆಂಗಳೂರಿನಲ್ಲಿ ಎಂಟೆತ್ತು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪದವಿ ಹಂತದಲ್ಲಿ ಐಚ್ಛಿಕ ಕನ್ನಡ ಓದಿದ್ದರಿಂದ ಕುವೆಂಪು ಸಾಹಿತ್ಯ ಪ್ರಭಾವ ಬೀರಿದೆ. ಚುಂಚನಗಿರಿ ಮಠದ ಪ್ರಭಾವ ಪಾರಂಭಕ್ಕೆ ಭಕ್ತಿಗೀತೆ ಬರೆಯಲು ಪ್ರೇರಣೆ. ನವೋದಯ ಸಮನ್ವಯ ಕಾವ್ಯದ ಕಡೆಗೆ ಹೊರಳಿ ಎಂ.ಎ. ಓದುವಾಗ ಚೈತ್ರಾ ಚಿತ್ತಾರ, ಪ್ರೇಮಗಂಗೆ ಕವನ ಸಂಕಲನ ಪ್ರಕಟಿಸಿದರು. ೨೦೦೪ರಲ್ಲಿ ಬೆಂಗಳೂರು ಗ್ರಾಮಾಂತರ ಕಸಾಪ ಜಿಲ್ಲಾಧ್ಯಕ್ಷರಾಗಿ ಗ್ರಾಮ, ಹೋಬಳಿ ಸಮ್ಮೇಳನ, ತಾ. ಜಿಲ್ಲಾ ಸಮ್ಮೇಳನ, ಬೇಂದ್ರೆ, ಕುವೆಂಪು, ಕನಕ. ಪುರಂದರ, ಬಸವ ಜಯಂತಿ, ಸಂಕ್ರಾAತಿ, ಶಿವರಾತ್ರಿ ಯುಗಾದಿ ಕವಿಗೋಷ್ಠಿಗಳು, ಗೀತಗಾಯನ ಉಪನ್ಯಾಸ ವಿಚಾರ ಸಂಕಿರಣ, ಮನೆಯಂಗಳದಲ್ಲಿ ಸಾಹಿತ್ಯ ಸಂಸ್ಕೃತಿ ಹೀಗೆ ಹತ್ತು ಹಲವು ಬಗೆಯಲ್ಲಿ ಸಾಹಿತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ೩ ಲಕ್ಷ ಮಿಕ್ಕಿ ದತ್ತಿ ಸಂಗ್ರಹ ಮಾಡಿದ್ದಾರೆ. ಯುವಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪುಸ್ತಕ ಖರೀದಿಸಿ ಶಾಲಾ ಕಾಲೇಜಿಗೆ ನೀಡಿದ್ದಾರೆ. ಓರ್ವ ಶಿಷ್ಯ ಉಪನ್ಯಾಸಕ ಕೆ.ರವಿಚಂದ್ರ ನಾನು ಸಿಸಿರಾರವರ ಶಿಷ್ಯ ಹೇಳಿಕೊಳ್ಳುವಲ್ಲಿ ಹೆಮ್ಮೆ ಇದೆ. ಅವರು ಕಾಲೇಜು ದಿನಗಳಲ್ಲಿ ಸಾಹಿತ್ಯ ಪ್ರೀತಿ ತುಂಬದಿದ್ದರೆ ಇಂದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕಷ್ಟವಾಗಿರುತ್ತಿತ್ತು ಎಂದಿದ್ದಾರೆ. ಸಾಹಿತ್ಯ ಎಲ್ಲ ಎಲ್ಲವನ್ನೂ ಸಂಪೂರ್ಣ ಒಳಗೊಂಡಿದೆ. ಸಾಹಿತ್ಯದಲ್ಲಿ ಏನಿದೆ ಎಂಬುವವರು ಸಾಹಿತ್ಯ ಪ್ರವೇಶಿಸಬೇಕಷ್ಟೇ. ಸಾಹಿತ್ಯ ಎಲ್ಲವನ್ನೂ ಸಂಗ್ರಹಿಸಿಕೊಂಡಿದೆ. ಅದರ ಶಾಖೆಗಳು ಅನಂತ..

- Advertisement -


ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನವ ಪೌರೋಹಿತ್ಯ ಪೋಷಿಸುವ ನಮ್ಮ ಮಠಾಧೀಶರು ಮಾತೆ ಅಕ್ಕ ಸ್ವಾಮಿಗಳು

ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ ಚಿಂತಕ. ಯಾವುದೇ ಶ್ರೇಣೀಕೃತವಿಲ್ಲದ ಸಮಾನತೆ ಸಮತೆ ಪ್ರೀತಿ ಶಾಂತಿಯನ್ನು ಮೈಗೂಡಿಸಿಕೊಂಡ ಹೊಸ ಲಿಂಗಾಯತ ಧರ್ಮವನ್ನು ಶರಣರು ಸ್ಥಾಪಿಸಿದರು. ಭಕ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group