spot_img
spot_img

ಸಂವಹನ ಕಲೆಯೇ ಭದ್ರ ಭವಿಷ್ಯಕ್ಕೆ ಕೀಲಿ ಕೈ

Must Read

- Advertisement -

‘ಯಾರೊಂದಿಗೆ ಹೇಗೆ ಮಾತನಾಡಬೇಕು ಅಂತ ತಿಳಿಯದೇ ಎಷ್ಟೋ ಸಲ ಅಪಾರ್ಥಗಳು ಸೃಷ್ಟಿಯಾಗಿ ಬಿಡುತ್ತವೆ.  ಮಾತನಾಡಿದರೆ ರಗಳೆ ಅಂತ ಮಾತನಾಡಲೇಬೇಕಾದ ಸಂದರ್ಭ ಬಂದಾಗಲೂ ಮೌನ ವಹಿಸುತ್ತೇನೆ. ಆಗಲೂ ಬೈಸಿಕೊಳ್ಳ್ಳುತ್ತೇನೆ ಮಾತನಾಡದೇ ಇದ್ದುದಕ್ಕೆ. ಬಾಯಿ ಬಿಟ್ಟರೂ ತೊಂದರೆ ಮುಚ್ಚಿಕೊಂಡಿದ್ದರೂ ತೊಂದರೆ ಯಾವಾಗ, ಎಲ್ಲಿ, ಎಷ್ಟು, ಹೇಗೆ ಮಾತನಾಡುವುದು ತಿಳಿಯದೇ ತಲೆ ಗಿರಗಿಟ್ಲೆ ಆಡಿಸುತ್ತದೆ. ಅಪರಿಚಿತರನ್ನು ಕಂಡಾಗಲಂತೂ ಮೈ ಮೇಲೆ ಮುಳ್ಳು ಬಿದ್ದವರ ತರ ಆಡ್ತಿನಿ. ಗೆಳೆಯರೊಂದಿಗೆ ಕೊಂಚ ಸಲುಗೆಯಿಂದ ಮಾತನಾಡಿದರೆ ನಿನ್ನ ಮಾತು ಮನಸ್ಸಿಗೆ ನೋವು ತಂತು ಅಂತಾರೆ. ಮೌನ ವಹಿಸಿದರೆ ಆತ್ಮೀಯತೆಯೇ ಇಲ್ಲ ಅಂತ ಬೈತಾರೆ. ಅಬ್ಬಬ್ಬಾ! ಎಷ್ಟೊಂದು ಕಠಿಣ ಈ ಸಂವಹನ. ನಾವಾಡುವ ಮಾತುಗಳು ಕೇವಲ ನಮ್ಮ ಮನದ ಅಭಿಪ್ರಾಯಗಳನ್ನು ಸೂಚಿಸುತ್ತವೆ ಅಂತ ತಿಳಿದಿದ್ದೆ. ಹಲವು ಬಾರಿ ನಾನು ಬಳಸುವ ಪದಗಳು ನಿಜ ಸಂದೇಶವನ್ನು ತಲುಪಿಸದೇ ತಪ್ಪು ಕಲ್ಪನೆಯನ್ನು ಮೂಡಿಸುತ್ತವೆ. ವಿಸ್ಮಯಕಾರಿ ಪರಿಣಾಮ ಬೀರುತ್ತವೆ. ಅದಕ್ಕೆ ಬಲ್ಲವರು ಹೇಳಿದ್ದು ಸರಿಯಾಗಿಯೇ ಇದೆ. ‘ಮಾತು ಬಲ್ಲವನಿಗೆ ಜಗಳವಿಲ್ಲ.’ ‘ಮಾತು ಕಲಿಯಲು ಮೂರು ವರ್ಷ ಸಾಕು. ಮಾತು ಹೇಗೆ ಆಡುವುದು ಎಂಬುದಕ್ಕೆ ನೂರು ವರ್ಷ ಸಾಲದು.’ ಇದು ಹಲವು ಜನರ ಸ್ವಗತ ಮತ್ತು ಗೋಳು.

ಸಂವಹನ ಕಲೆ ಎಂಬುದು:

‘ನಮ್ಮ ವಿಚಾರಗಳನ್ನು ಇತರರಿಗೆ ಸ್ಪಷ್ಟವಾಗಿ ಮನದಟ್ಟಾಗುವಂತೆ, ಅರ್ಥೈಸಿಕೊಳ್ಳುವಂತೆ ತಿಳಿಸುವುದೇ ಸಂವಹನ.’ ಎರಡು ಮುಖ್ಯ ಅಂಶಗಳಿವೆ. ಒಂದು ಸಂದೇಶ ನೀಡುವುದು. ಮತ್ತೊಂದು ಸ್ವೀಕರಿಸುವುದು. ಉಪಯೋಗಿಸುವ ಶಬ್ದಗಳ ಮೇಲೆ ಅಷ್ಟೇ ಅಲ್ಲ ದಾಟಿಗೂ ಗಮನ ನೀಡಬೇಕು. ನಮ್ಮ ಮಾತು ಅರ್ಥ ನೀಡಿದರೆ ಸಾಲದು. ಅದು ಕೇಳುಗರ ಮನ ತಟ್ಟಬೇಕು. ಇತರರೊಂದಿಗಿನ ಸಂವಹನವನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದಾಗಿದೆ. ನಾವೇನು ಮಾತನಾಡುತ್ತೇವೆ. ಹೇಗೆ ಮಾತನಾಡುತ್ತೇವೆ. ಏನು ಮಾಡುತ್ತೇವೆ. ಹೇಗೆ ಕಾಣಿಸಿಕೊಳ್ಳುತ್ತೇವೆ. 

ಅರಿವಿನ ಕೊರತೆ:

ವೈಯಕ್ತಿಕ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಲು ಕಲಿಯಲೇಬೇಕಾದ ಈ ಕೌಶಲ್ಯ ವೃದ್ಧಿಗೆ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಬೋಧನಾ ಶೈಲಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂಬುದು  ಹಲವರ ದೀರ್ಘಕಾಲದ ಒತ್ತಾಸೆ. ಸಂವಹನಕ್ಕೆ ಸಂಬಂಧಿಸಿದಂತೆ ತರಬೇತಿ ಮಾರ್ಗದರ್ಶನಗಳು ತುಂಬಾ ಕಡಿಮೆಯಾಗಿರುವುದು ವಿಷಾದಕರ ಸಂಗತಿ. ಮಾಮೂಲಿ ಸಂದರ್ಭಗಳಲ್ಲಿ ಔಪಚಾರಿಕ ಸನ್ನಿವೇಶಗಳಲ್ಲಿ ಸಂವಹನ ನಡೆಸುವುದು ಹೇಗೆ ಎಂಬುದು ಗೊಂದಲಕ್ಕೆ ಕೆಡುವುತ್ತಿದೆ. ಸಾಮಾನ್ಯ ಮಾರ್ಗದರ್ಶನ ಹಾಗೂ ಅರಿವಿನ ಕೊರತೆಯಿಂದಾಗಿ ಈ ಕಲೆ ಕಬ್ಬಿಣದ ಕಡಲೆಯಂತಾಗಿದೆ. ಬಹುತೇಕ ಉದ್ಯೋಗಾಕಾಂಕ್ಷಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಕೇವಲ ಉದ್ಯೋಗಾರ್ಥಿಗಳಿಗೆ ಮಾತ್ರವಲ್ಲ ದಿನ ನಿತ್ಯದ ಬದುಕಿನಲ್ಲಿ ಇತರರನ್ನು ಮನವೊಲಿಸುವ, ಪ್ರೇರೇಪಿಸುವ, ಒತ್ತಾಯಿಸುವ ಸಂದರ್ಭಗಳು ಸಹಜ. ವ್ಯಾವಹಾರಿಕ ಸಮಸ್ಯೆಗಳು ಉಲ್ಬಣಗೊಂಡಾಗ ಸಂವಹನದ ಪ್ರಾಮುಖ್ಯತೆ ನಮ್ಮ ಅರಿವಿಗೆ ಬಂದೇ ಬರುತ್ತದೆ. ನಾವು ಬಳಸುವ ಪದಗಳು ಇತರರಿಗೆ ಕಿರಿಕಿರಿ ಬೇಸರ ತರಿಸುತ್ತವೆ. ನಕಾರಾತ್ಮಕ ಭಾವ ಮೂಡಿಸುತ್ತವೆ.ವೈಯಕ್ತಿಕ ಸಂಬಂಧಗಳನ್ನು ಹಾಳು ಮಾಡುತ್ತವೆ. ಹೀಗಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ. 

ಅವಕಾಶದ ಬಾಗಿಲು 

- Advertisement -

ನಿಜ, ಸಂವಹನ ಕಲೆ ಕರಗತ ಮಾಡಿಕೊಳ್ಳುವುದು ಅಷ್ಟೊಂದು ಸುಲಭವೇನಲ್ಲ. ಹಾಗಂತ ಕರಗತ ಮಾಡಿಕೊಳ್ಳುವುದು ಅಸಾಧ್ಯವೆಂದೇನಿಲ್ಲ. ಮೊದಲೆಲ್ಲ ಮಾತು ವ್ಯಕ್ತಿತ್ವ ವಿಕಸನದಲ್ಲಿ ಇಷ್ಟೊಂದು ಪಾತ್ರ ವಹಿಸುತ್ತಿರಲಿಲ್ಲ ಎನ್ನುವುದು ಸಾಮಾನ್ಯ ಅಂಬೋಣ. ಆದರೆ ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ಎಲ್ಲೆಲ್ಲೂ ಸಂವಹನ ಕಲೆಗೆ ಮಣೆ ಹಾಕಲಾಗುತ್ತಿದೆ. ಈ ಕಲೆ ಬಲ್ಲವರಿಗೆ ಎಲ್ಲಿಲ್ಲದ ಮನ್ನಣೆ. ಇತ್ತೀಚೆಗಂತೂ ಸಂವಹನ ಕೌಶಲ ಇಲ್ಲದ ಉದ್ಯೋಗಾರ್ಥಿಗಳ ನೇಮಕಾತಿ ದುರ್ಲಭವೆನಿಸುತ್ತಿದೆ.ಸಂವಹನ ಬಲ್ಲವರಿಗೆ ಅವಕಾಶದ ಬಾಗಿಲುಗಳು ತೆರೆಯುತ್ತಿವೆ. ಇದು ಜೀವನದ ಅತ್ಯಮೂಲ್ಯ ಕಲೆಗಳಲ್ಲಿ ಕೌಶಲ್ಯಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿದೆ. ಏನೆಲ್ಲ ಪ್ರತಿಭೆ ಇದ್ದರೂ ಇದಿಲ್ಲದಿದ್ದರೆ ಏನೂ ಇಲ್ಲ ಎನ್ನುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ವಿಜ್ಞಾನ ಯುಗದ ಜೀವನ ಶೈಲಿಗೆ ಅತ್ಯವಶ್ಯಕವಾಗಿ ಕರಗತ ಮಾಡಿಕೊಳ್ಳಲೇಬೇಕಾದ ಕಲೆ ಇದಾಗಿದೆ. ಉತ್ತಮ ಸಂವಹನ ನಮ್ಮ ಬೆಲೆಯನ್ನು ಹೆಚ್ಚಿಸುತ್ತದೆ. ಈ ಕಲೆಯ ಕೊರತೆ ಕೀಳರಿಮೆಯಿಂದ ಬಳಲುವಂತೆ ಮಾಡುತ್ತದೆ. ಭದ್ರ ಭವಿಷ್ಯ ನಿರ್ಮಾಣದ ಕೀಲಿ ಕೈಯಂತಿರುವ ಕಲೆ ಕರಗತ ಮಾಡಿಕೊಳ್ಳಲು ಸಂಭಾಷಣೆ ಸಂವಾದ ಚರ್ಚೆ ಉಪನ್ಯಾಸಗಳಲ್ಲಿ ಭಾಗವಹಿಸುವುದು ಮುಖ್ಯ.

ಪರಿಣಾಮಕಾರಿ ಸಂವಹನ ಕೌಶಲ ಬೆಳೆಸಿಕೊಳ್ಳುವುದು ಹೀಗೆ 

ಕೇಳಿಸಿಕೊಳ್ಳದಿರಿ, ಆಲಿಸಿಕೊಳ್ಳಿ  

ಅರೆ! ಇದೇನು ಮಾತನಾಡಬೇಕೆಂದರೆ ಕೇಳಿಸಿಕೊಳ್ಳದೇ ಆಲಿಸಬೇಕೆ? ಎಂದು ಹುಬ್ಬೇರಿಸುತ್ತಿರೇನು? ಹೌದು ಮುಂದಿನವರ ಮಾತಿಗೆ ಯಾಂತ್ರಿಕಕವಾಗಿ ಕುಳಿತು ಕಿವಿಗೊಡುವುದು ಕೇಳಿಸಿಕೊಳ್ಳುವಿಕೆ. ಬದಲಾಗಿ ಮಾನಸಿಕವಾಗಿ ಕಿವಿ ತೆರೆದಿಡಿ. ಅದೇ ಆಲಿಸುವಿಕೆ.  ಟೀಕೆಗಳಿಗೆ ಸಮಾಧಾನದಿಂದ ಪ್ರತಿಕ್ರಿಯಿಸಿ. ಸತ್ಯಾಂಶ ತಿಳಿದು ಕ್ರಮ ಕೈಗೊಳ್ಳಿ. ಹಾವಭಾವ ಗಮನಿಸಿ. ‘ಮಾತನಾಡುವುದು ಜ್ಞಾನದ ಕ್ಷೇತ್ರ ಆದರೆ, ಅದನ್ನು ಮನಗೊಟ್ಟು ಕೇಳುವುದು ಜಾಣತನದ ಹಕ್ಕು.’ಎಂದಿದ್ದಾನೆ ಅಲಿವರ್ ಹೋಮ್..’ ನಿಜ, ನೀವು ಹೇಳಿದ್ದು ಸರಿಯಾಗಿದೆ, ಹೌದಾ! ವಿಚಾರಿಸೋಣ, ನೀವು ಹೇಳಿದ್ದನ್ನು ಒಪ್ಪಿಕೊಳ್ತಿನಿ. ಎಂಬ ಪ್ರತಿಕ್ರಿಯೆಗಳಿಂದ ಸ್ಪಂದಿಸಿ.ಆಗ ನಿಮ್ಮಲ್ಲಿನ ಮಾತುಗಾರ ಚುರುಕಾಗುತ್ತಾನೆ. ಜಾಗೃತಗೊಳ್ಳುತ್ತಾನೆ. ಬೆಳೆಯುತ್ತಾನೆ 

ದೃಷ್ಟಿ ಸಂಪರ್ಕ

- Advertisement -

ಮಾತನಾಡುವಾಗ ಪರಸ್ಪರ ದೃಷ್ಟಿ ಸಂಪರ್ಕದಿಂದ ಮಾತನಾಡುವುದು ಮುಖ್ಯ. ಎಲ್ಲೆಲ್ಲೋ ನೋಡುತ್ತ ಇಲ್ಲವೇ ನೆಲದತ್ತ ನೋಡಿ ಮಾತನಾಡುವ ರೂಢಿ ಸರಿಯಲ್ಲ. ಇತರರನ್ನು ನಿಮ್ಮ ಮಾತಿನೆಡೆ ಸೆಳೆಯಬೇಕೆಂದರೆ ನಿಮ್ಮ ನೋಟ  ಅತಿ ಮುಖ್ಯ. ಅಚ್ಚುಮೆಚ್ಚಿನ ಗೆಳೆಯರೊಂದಿಗೆ ಹೇಳುವ ವಿಷಯವನ್ನು ಹೇಗೆ ಅರ್ಥ ಮಾಡಿಸುತ್ತೀರಿ ಎಂಬುದು ಗಣನೆಗೆ ಬರುತ್ತದೆ.

‘ಮಾತಿನ ಬಡತನವು ಮನಸ್ಸಿನ ದಾರಿದ್ರ್ಯತನದ ದ್ಯೋತಕ’ ಎಂದೊಮ್ಮೆ ಬ್ರೂಸ್ ಬರ್ಟನ್ ಹೇಳಿದ್ದು ಅರ್ಥಪೂರ್ಣವಾಗಿದೆ. ಸಂವಹನದಲ್ಲಿ ವ್ಯವಹಾರಿಕ ಜ್ಞಾನ,ಬುದ್ಧಿವಂತಿಕೆ, ಚಾಣಾಕ್ಷತನ, ಗಟ್ಟಿ ಸ್ನೇಹಕ್ಕೆ ಕಾರಣವಾಗುತ್ತದೆ ನಾಯಕನಾಗಲು ದಾರಿಯಾಗುತ್ತದೆ ವೃತ್ತಿಗೆ ಬೇಕಾದ ಪೂರಕ ಮಾಹಿತಿ ಜೊತೆಗೆ ವಾಕ್ಚಾತುರ್ಯವಿರಲಿ ಸ್ಪಷ್ಟವಾದ ನೇರವಾದ ಮಾತಿರಲಿ. ಅಗತ್ಯತೆ ಇದ್ದರೆ ಪುನುರುಚ್ಛಾರವಿರಲಿ. ಮೇಲರಿಮೆ ಕೀಳರಿಮೆ ಇಲ್ಲದೇ ಸ್ಪಂದಿಸಿ.. ಹೀಗಾದಾಗ ಕ್ಯಾಂಪಸ್ ನೇಮಕಾತಿ ಸಂದರ್ಶನಗಳಲ್ಲಿ  ಉದ್ಯೋಗ ಸಿಗುವುದು ಖಾತರಿ.

ದೇಹ ಭಾಷೆ

ಆಲೋಚನೆಗಳಿಗೂ ದೇಹ ಭಾಷೆಗೂ ಸಾಮ್ಯತೆಯಿದೆ ದೇಹದ ನಿಲುವು ಆಲೋಚನೆಗಳಿಗೆ ಪೂರಕವಾಗಿರಬೇಕು. ಅಭಿಪ್ರಾಯಗಳನ್ನು ಇತರರ ಮೇಲೆ ಹೇರದೆ ಮನದಟ್ಟು ಮಾಡುವಂಥ ದೇಹ ಭಾಷೆ ಬಳಸಿ. ಇತರರನ್ನು ಅಭಿನಂದಿಸುವಾಗ ಇಲ್ಲವೇ ಬೇರೆ ಭಾವಾಭಿವ್ಯಕ್ತಿ ಸಂದರ್ಭಗಳಲ್ಲಿ ನಿಮ್ಮ ಮುಖದ ಭಾವ,ಹಸ್ತ ಲಾಘವ, ನಿಲುವು,ಶೈಲಿ, ದಾಟಿ, ಚಲನೆ, ಮುಗಳ್ನಗೆ, ಧ್ವನಿ ಎಲ್ಲವೂ ಆಲೋಚನೆಗೆ ತಕ್ಕಂತಿರಬೇಕು. ಆಡುವ ಮಾತಿಗೆ ದೇಹ ಭಾಷೆ ಪೂರಕವಾದಾಗ  ಮಾತ್ರ ಸಂವಹನ ಪರಿಣಾಮಕಾರಿ ಆಗುವುದರ ಜೊತೆಗೆ ಎಲ್ಲರೂ ಮೆಚ್ಚುವ ವ್ಯಕ್ತಿತ್ವ ನಿಮ್ಮದಾಗಲು ಸಾಧ್ಯ. ಪ್ರಶ್ನೆ ಕೇಳಲು ಹಿಂಜರಿಯದಿರಿ. ಪ್ರಶ್ನೆ ಕೇಳುವ ದಾಟಿ ಮತ್ತು ಧೋರಣೆ ಗೌರವಪೂರ್ವಕವಾಗಿರಲಿ. 

ಅಲ್ಪಾವಧಿ ಕೋರ್ಸ್ 

ಉತ್ತಮ ಮಾತುಗಾರಿಕೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಂಡವಾಳವಾಗಿದೆ. ಹೀಗಾಗಿ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಸಂವಹನ ಕೋರ್ಸ್‍ಗಳಿಗೆ ಹಾಜರಾಗಿ. ಪ್ರಾಯೋಗಿಕ ತರಬೇತಿಯನ್ನು ಪಡೆಯಿರಿ. ಪರಿಣಾಮಕಾರಿ ಸಂವಹನದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ನಿರೀಕ್ಷಿತ ಫಲಿತಾಂಶವೂ ಲಭಿಸುತ್ತದೆ.ಜನ್ಮತಃ ಯಾರೂ ಉತ್ತಮ ವಾಗ್ಮಿಗಳಾಗಿರುವುದಿಲ್ಲ. ನಿರಂತರ ಪ್ರಯತ್ನದಿಂದ ಮಾತ್ರ ಸಂವಹನ ಕೌಶಲ್ಯ ವೃದ್ದಿಸಿಕೊಳ್ಳಬಹುದು. ತನ್ಮೂಲಕ ಭದ್ರ ಭವಿಷ್ಯದ ಕೀಲಿಕೈ ಪಡೆಯಬಹುದು.  


ಜಯಶ್ರೀ.ಜೆ. ಅಬ್ಬಿಗೇರಿ,  ಬೆಳಗಾವಿ 

9449234142

- Advertisement -
- Advertisement -

Latest News

Today Horoscope: ಭಾನುವಾರ, ಫೆಬ್ರವರಿ 25, 2024 ರಂದು ನಿಮ್ಮ ರಾಶಿ ಭವಿಷ್ಯ

ಇಂದು ಫೆಬ್ರವರಿ 25, 2024, ಭಾನುವಾರ. ಈ ದಿನ 3 ವಿಶೇಷ ಯೋಗಗಳ ಸಂಯೋಜನೆಯಾಗಿದೆ: ಸುಕರ್ಮ ಯೋಗ, ತ್ರಿಪುಷ್ಕರ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ....
- Advertisement -

More Articles Like This

- Advertisement -
close
error: Content is protected !!
Join WhatsApp Group