ಕಲ್ಲುಗುಡಿಯನು ಕಟ್ಟಿ ಕಲ್ಲಮೂರ್ತಿಯನಿಟ್ಟು
ಪೂಜೆಯನು ಮಾಡುವರು ದೇವರೆಂದು
ಧರ್ಮಲಂಡರು ಬಂದು ತುಂಡರಿಸಿ ಹಾಕಿದರೆ
ದೇವರೆಲ್ಲಿಗೆ ಹೋದ ? – ಎಮ್ಮೆತಮ್ಮ
ಶಬ್ಧಾರ್ಥ
ಧರ್ಮಲಂಡರು = ಧರ್ಮಶ್ರದ್ಧೆಯಿಲ್ಲದವರು
ತಾತ್ಪರ್ಯ
ನಿರಾಕಾರವಾದ ದೇವರನ್ನು ಸಾಕಾರಮಾಡಿ ಕಲ್ಲಿನ
ದೇವಾಲಯ ಕಟ್ಟಿ ದೇವರಮೂರ್ತಿಯನ್ನು ಪ್ರತಿಷ್ಠಾಪಿಸಿ
ಅರ್ಚನೆ ಮಾಡುವರು. ಸಾಮಾನ್ಯ ಜನರು ದೇವರನ್ನು
ಮೂರ್ತಿಯಲ್ಲಿ ಕಾಣುತ್ತಾರೆ. ಅದನ್ನು ಮುಗ್ಧ ಭಕ್ತರು
ದೇವರೆಂದು ಪೂಜಿಸುತ್ತಾರೆ ಮತ್ತು ಭಜಿಸುತ್ತಾರೆ. ಆದರೆ
ಧರ್ಮಶ್ರದ್ಧೆಯಿಲ್ಲದವರು ಬಂದು ಆ ಮೂರ್ತಿಯನ್ನು
ಒಡೆದು ಹಾಕಿದರೆ ತನ್ನನ್ನು ರಕ್ಷಿಸಿಕೊಳ್ಳದ ದೇವರು ಎತ್ತ
ಹೋದನು ? ಇದನ್ನೆ ಅಲ್ಲಮಪ್ರಭುಗಳು ಪ್ರಶ್ನಿಸುತ್ತಾರೆ.
ಕಲ್ಲುಮನೆಯ ಮಾಡಿ ಕಲ್ಲು ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕಡೆದರೆ ದೇವರೆಲ್ಲಿಗೆ ಹೋದ ? ಎಂದೆಂದಿಗೂ
ನಾಶವಾಗದ ಶಾಶ್ವತವಾದವನೆ ಈಶ್ವರ. ಅಂಥ ಶಾಶ್ವತವಾದ
ದೇವರನ್ನು ಆತ್ಮದಲ್ಲಿ ಕಂಡು ಮಾನಸಪೂಜೆ ಮಾಡಬೇಕು
ಎಂಬುದು ಶರಣರ ವಾದ. ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯತೀರ್ಥ ಕ್ಷೇತ್ರಗಳಲ್ಲಿರುವ ದೇವರುಗಳು ದೇವರಲ್ಲ ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮದೇವಾ.. ಎಂದು ಬಸವಣ್ಣನವರು ಹೇಳುತ್ತಾರೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099