spot_img
spot_img

ಸಂಕ್ರಾಂತಿ ಹಬ್ಬ ನದಿ ಸ್ನಾನ

Must Read

spot_img
- Advertisement -

ಸಂಕ್ರಾಂತಿ ಎಂದರೆ ಜನವರಿ ೧೪ ರಂದು ಬರುವ ಹಬ್ಬ. ಸಂಕ್ರಮಣ ಎಂದರೆ ಉಜ್ವಲವಾದ ಬೆಳಕು, ಜೀವನದ ಹೊಸ ತಿರುವು ಎಂದರ್ಥ. ಸೂರ್ಯನು ಮಕರವೃತ್ತದಿಂದ ಕರ್ಕಾಟಕ ವೃತ್ತಕ್ಕೆ ಸ್ಥಾನಪಲ್ಲಟ ಮಾಡುವುದರಿಂದ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆದಿರುವರು.

ಈ ದಿನ ಎಳ್ಳು ಅರಿಸಿನ ಹಚ್ಚಿಕೊಂಡು ನದಿಯಲ್ಲಿ ಸ್ನಾನ ಮಾಡುವರು.ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಕಾಲಿಡುವ ಮಕರ ರಾಶಿಯನ್ನು ಪ್ರವೇಶಿಸುವ ಈ ದಿನ ಸೂರ್ಯ ರಶ್ಮಿಗಳ ಪ್ರಕರತೆ ಶಾರೀರಿಕ ಪೀಡೆ ತೊಲಗಿಸುತ್ತವೆ ಎಂಬುದು ಕೂಡ ನಂಬಿಕೆ. ಹೀಗಾಗಿ ನದಿಯಲ್ಲಿನ ಪವಿತ್ರ ಸ್ನಾನಕ್ಕಾಗಿ ಎಲ್ಲೆಡೆ ಸಡಗರ ಸಂಭ್ರಮ. ಎಲ್ಲರೂ ಹೊಸಬಟ್ಟೆ ಧರಿಸುವರು.ಅಂದು ಸಂಜೆ ನದಿಗಳಲ್ಲಿ ತೆಪ್ಪೋತ್ಸವ ನಡೆಯುವುದು. ಬಾಳೆಯ ದಿಂಡಿನಿಂದ ಮಾಡಿದ ತೆಪ್ಪದ ರಥವನ್ನು ಎಳೆಯುವರು. ನಂತರ ಮಠಮಾನ್ಯಗಳಲ್ಲಿ ಉಪನ್ಯಾಸ ಏರ್ಪಡಿಸುವ ಮೂಲಕ ಪುಣ್ಯಕಾಲದ ಆಚರಣೆಯನ್ನು ಸಾರ್ಥಕಪಡಿಸಿಕೊಳ್ಳುವರು.

ಸಣ್ಣ ಮಕ್ಕಳಿಗೆ ತಲೆಯ ಮೇಲೆ ಚುರುಮುರಿ ಹಾಕಿ ಬೋರೆ ಹಣ್ಣು ಕಬ್ಬಿನ ಚೂರು ಕಾಸು ಎಲ್ಲವನ್ನು ಬೆರೆಸಿ ಎಳ್ಳೆಣ್ಣೆ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸಿ ಆರುತಿ ಮಾಡುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿದೆ. ಈ ಹಬ್ಬದಲ್ಲಿ ಜನರು ಮೊದಲ ದಿನ ಎಳ್ಳು ಅರಿಸಿನ ಹಚ್ಚಿಕೊಂಡು ಸ್ನಾನ ಮಾಡಿ ದೇವರ ಪೂಜೆ ಮಾಡಿದರೆ ಮರುದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಮೂಲಕ ದೇವಾಲಯಗಳಿಗೆ ತೆರಳಿ ದರ್ಶನ ಪಡೆಯುವರು. ಎಳ್ಳಿನ ಜೊತೆಗೆ ಸಕ್ಕರೆಯ ಅಚ್ಚುಗಳು ಹಣ್ಣು ಕಬ್ಬಿನ ತುಂಡುಗಳನ್ನು ಸಹ ಸಂಕ್ರಾಂತಿಯಲ್ಲಿ ತಿನ್ನುವರು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತಗೆದ ಕಡೆಲೇಕಾಯಿ.ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳುಬೆಲ್ಲ” ತಯಾರಿಸುವರು.

- Advertisement -

ಆ ದಿನ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಳ್ಳುವರು .”ಎಳ್ಳು-ಬೆಲ್ಲ ಕೊಟ್ಟು ನಾವು-ನೀವೂ ಒಳ್ಳೆಯವರಾಗಿರೋಣ, ಒಳ್ಳೊಳ್ಳೆ ಮಾತನಾಡೋಣ ಎಳ್ಳು ಬೆಲ್ಲದ ಹಾಗೆ ಇರೋಣ ‘ ಎಂದು ಹೇಳುತ್ತ ಎಲ್ಲರಲ್ಲಿ ಪರಸ್ಪರ ಶುಭ ಕೋರುವ ಮೂಲಕ ಆಚರಿಸುವುದು ಇಂದಿಗೂ ಸಂಕ್ರಾಂತಿ ಆಚರಣೆ ಉಳಿದುಕೊಂಡು ಬಂದಿದೆ.

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಇಲ್ಲಿ ಭೋಗಿ(ಹೊಸ ಬಟ್ಟೆಗಳ ಧರಿಸುವುದು) ನಂತರ ಹಾಲು ಬೆಲ್ಲಗಳನ್ನು ಪಾತ್ರೆಯಲ್ಲಿ ಹಾಕಿ ಉಕ್ಕಿಸುವ ಪೊಂಗಲ್ ಹಬ್ಬ. ಗೋಪೂಜೆ ಮಾಡುವ ಮಾಟ್ಟು ಪೊಂಗಲ್. ಎಂದು ಆಚರಿಸಿದರೆ ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆಯುವ ಸಂಪ್ರದಾಯ ಇಂದಿಗೂ ಜರುಗುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಗಾಳಿಪಟ ಹಾರಿಸುವ ಮೂಲಕ ಈ ಹಬ್ಬದ ಆಚರಣೆ ಜರುಗುತ್ತಿದೆ.ಮಹಾರಾಷ್ಟದಲ್ಲಿ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವಿದೆ. ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಈ ಹಬ್ಬವನ್ನು “ಲೋಹರಿ” ಎಂದು ಕರೆಯುವರು.

ಗ್ರೆಗೋರಿಯನ್ ಪಂಚಾಂಗದ ಪ್ರಕಾರ ಸೂರ್ಯನ ಉತ್ತರ ದಿಕ್ಕಿನ ಪಯಣವನ್ನು ಸೂಚಿಸುವ ಕಾಲ. ಉತ್ತರಾರ್ಧಗೋಳದಲ್ಲಿ ಚಳಿ ಬೆಚ್ಚನೆಯ ವಾತಾವರಣ ಆರಂಭವಾಗಿ ಬೆಳೆ ಕಟಾವಿನ ಕಾಲ. ಉತ್ತರಾಯಣ ಕಾಲ ಡಿಸೆಂಬರ್ ೨೨ ಕ್ಕೆ ಆರಂಭವಾದರೂ ಜನೇವರಿ ೧೪ ರಂದ ನಡೆಯುವ ಮಕರ ಸಂಕ್ರಾಂತಿಯಂದೇ ಉತ್ತರಾಯಣ ಆಚರಣೆ ನಡೆಯುತ್ತದೆ. ಮಹಾಭಾರತದಲ್ಲಿ ಇಚ್ಛಾ ಮರಣವನ್ನು ಹೊಂದಿದ್ದ ಬೀಷ್ಮರು ಉತ್ತರಾಯಣ ಪರ್ವಕಾಲವನ್ನು ಕಾದಿದ್ದ ಬಗ್ಗೆ ಉಲ್ಲೇಖವಿದೆ.

- Advertisement -

ಬೇಸಗೆಯಲ್ಲಿ ಹಗಲು ಹೆಚ್ಚು ಇರುಳು ಕಡಿಮೆ. ಚಳಿಗಾಲದಲ್ಲಿ ಹಗಲು ಹೆಚ್ಚು ಇರುಳು ಕಡಿಮೆ. ಚಳಿಗಾಲ ಮುಗಿದು ಬೇಸಗೆಯ ಪ್ರಾರಂಭದ ಮುನ್ಸೂಚನೆ ಸಂಕ್ರಾಂತಿ. ಸಂಕ್ರಾಂತಿಯ ನಂತರ ಸೂರ್ಯನ ತಾಪಮಾನದಲ್ಲಿ ಏರಿಕೆಯಾಗುತ್ತ ಹೋಗುತ್ತದೆ.

ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡುವ ಸಂಪ್ರದಾಯವಿದೆ. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಸೇರಿದಂತೆ ಎಳ್ಳಿನ ಮಹತ್ವ ಸಾರುವ ಸಂಕ್ರಾಂತಿ ಎಳ್ಳು ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಂಪ್ರದಾಯ ಮಕರ ಸಂಕ್ರಾಂತಿಯ ವಿಶೇಷ.ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಶೀತ ವಾತಜನ್ಯವಾದ ಜಡ್ಡು ಆಲಸ್ಯಗಳನ್ನು ದೂರ ಮಾಡುವುದು ಎಂದು ನಂಬಿಕೆ.

ಜನಪದರು “ಬೆಳಗಾಗ ನಾನೆದ್ದು ಯಾರ‍್ಯಾರ ನೆನೆಯಲಿ,ಎಳ್ಳು ಜೀರಿಗೆ ಬೆಳೆಯೋ ಭೂತಾಯಿ, ಎಳ್ಳು ಜೀರಿಗೆ ಬೆಳೆಯೋಳು ಮಹಾತಾಯಿ, ಎದ್ದೊಂದು ಗಳಿಗೆ ನೆನದೇನ” ಎಂದು ಭೂತಾಯಿಯನ್ನು ನೆನೆಯುವ ಜೊತೆಗೆ ಎಳ್ಳು ಮಹತ್ವದ್ದು ಎಂದು ಸಾರಿದ್ದಾರೆ. ರೈತರು ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಎಂದು ಆಚರಿಸುವರು. ಭೋಗಿ ಕೃಷಿ ಸಂಬಂಧಿತ ಹಬ್ಬ.ರೈತರು ತಾವು ಬೆಳೆದ ಬೆಳೆಯನ್ನು ಪೂಜಿಸಿ ಜನತೆಗೆ ಉಣಬಡಿಸುವ ದಿನವನ್ನು ಭೋಗಿ ಎಂದು ಕರೆಯಲಾಗಿದೆ.ಎಳ್ಳು ಜೀರಿಗೆಯಂತಹ ಬೆಳೆಯನ್ನು ಬೆಳೆಯುವ ಭೂ ತಾಯಿಯನ್ನು ನೆನೆಯುವುದೇ ಸೂಕ್ತವೆಂದು ಜನಪದರು ಅಂದಿನ ದಿನವನ್ನು ತಮ್ಮ ತ್ರಿಪದಿಗಳಲ್ಲಿ ಹಾಡುವ ಮೂಲಕ ಭೂತಾಯಿಯನ್ನು ನೆನೆದಿರುವರು. ಸುಗ್ಗಿ ಹಬ್ಬ ಸಂಕ್ರಾಂತಿಗೆ ನಮ್ಮ ಸಂಸ್ಕೃತಿ ನೆನಪು ಮಾಡುವ ಆಚರಣೆಗಳನ್ನು ಮೈಗೂಡಿಸಿಕೊಂಡು ಬದುಕನ್ನು ಸಂತ್ಸಂಪ್ರದಾಯದತ್ತ ಕೊಂಡೊಯ್ಯುವ ಹಬ್ಬ.ವೈಜ್ಞಾನಿಕವಾಗಿ ಮತ್ತು ಆರೋಗ್ಯಕ್ಕೆ ಸಂಜೀವಿನಿಯಾದ ಸಂಕ್ರಾಂತಿಯ ಎಳ್ಳು ಬೆಲ್ಲ ಕೊಬ್ಬರಿ ಕಡಲೆ ಇತ್ಯಾದಿಗಳ ಸೇವನೆ ಕೂಡ ಮಹತ್ವವನ್ನು ಪಡೆದಿದೆ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಶಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group