ಕನಸಿನರಾಣಿ
ಇವಳು ಯಾರು ತಿಳಿಯಲಾರೆ !
ಇವಳ ಹೆಸರು ಹೇಳಲಾರೆ !
ಇವಳ ದನಿಯ ಕೇಳಲಾರೆ !
ಇವಳು ಏತಕೋ ಬಂದು,
ನನ್ನ ಕರೆದಳು.
ಹಾವತಳುಕಿನಂತೆ ಜಡೆ;
ತೂಗುತಿತ್ತು ಬೆನ್ನಿನೆಡೆ;
ಹಂಸಗಮನದಂತೆ ನಡೆ
ಹೆಜ್ಜೆಗೆಜ್ಜೆಗೆ ಮಾತು
ಮಥಿಸಿ ಮೆಲ್ಲಗೆ.
ಚೆಂದುಟಿಗಳ ಬಣ್ಣ ಕೆಂಪು,
ಸವಿನುಡಿಗಳ ಕೇಳಲಿಂಪು,
ಮೈಯ್ಯ ಸೊಬಗು ಕಣ್ಗೆ ತಂಪು
ಸೆಳೆದವೆನ್ನನು; ನಾನು
ಮಾರುಹೋದೆನು.
ತುಟಿಗಳಲ್ಲಿ ದಂತ ಮುತ್ತು;
ಮೂಗಿನಲ್ಲಿ ಹೊಳೆವ ನತ್ತು;
ಕೊಡಲುಬಂದಳೆನಗೆ ಮುತ್ತು
ಬಳಿಗೆ ಸುಳಿದಳು ; ನನ್ನ
ತಬ್ಬಿ ಸೆಳೆದಳು.
ಪೀತಾಂಬರದುಡುಗೆಯಲ್ಲಿ
ಬಂಗಾರದ ತೊಡುಗೆಯಲ್ಲಿ
ಬೆಳದಿಂಗಳ ಬೆಳಕಿನಲ್ಲಿ
ಹೊಳೆಯುತ್ತಿದ್ದಳು; ನನ್ನ
ಸೆಳೆಯುತಿದ್ದಳು
ಅವಳು ಹೆಜ್ಜೆಯಿಟ್ಟ ಕಡೆಗೆ
ಚೆಂಗುಲಾಬಿ ಕಂಡೆನು;
ನಕ್ಕರವಳು ಮುತ್ತುದಿರಿತು
ನಾನಾರಿಸಿ ತಂದೆನು.
ತಂದ ಮುತ್ತು ಎನಿತು ಚಂದ
ಕೊಟ್ಟವಳನು ನೆನೆದೆನು
ಕಂಡ ಕನಸು ಕರಗಿಹೋಯ್ತು
ನನ್ನ ಕಣ್ಣು ತೆರೆದೆನು.
ಕನಸಿನರಾಣಿ ಬೇರಾರಲ್ಲ ಕಾವ್ಯಕನ್ನೆ
ಹಾಡುಹಕ್ಕಿಗೆ ಬೇಕೆ ಬಿರುದು ಮಾನ ?
ಈ ಸಲವು ಸಿಗಲಿಲ್ಲ ಕೋಗಿಲೆಗೆ ಸನ್ಮಾನ
ಸವಿನುಡಿವ ಚೆಂಗಿಳಿಗೆ ದೊರಕಿತಲ್ಲ
ಪಂಡಿತವಕ್ಕಿಯದುಯೆಂದು ಮಾಡಿದರದಕ್ಕೆ
ಕೋಗಿಲೆಯು ಅದನೆಂದು ಬಯಸಲಿಲ್ಲ
ಚೈತ್ರಬಂದರೆ ಸಾಕು ಹಾಡುತ್ತ ಹೋಗುವುದು
ಮಧುರ ಹಾಡುವುದದರ ಜಾಯಮಾನ
ಜನ ಕೂತು ಕೇಳಿದರೆ ಸಂತೋಷಗೊಳ್ಳುವುದು
ಹಾಡುಹಕ್ಕಿಗೆ ಬೇಕೆ ಬಿರುದು ಮಾನ
ಅದಕೆ ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ
ವಾಸಿಸಲು ಸ್ವಂತ ಮನೆಯೆಂಬುದಿಲ್ಲ
ಬಣ್ಣ ಕಪ್ಪಾಗಿಹುದು ಎಂದು ಪಂಡಿತರೆಲ್ಲ
ಸೇರಿ ತೀರ್ಮಾನ ತೆಕ್ಕೊಂಡರಲ್ಲ
ಹಸಿರು ಮೈ ಕೆಂಪಾದ ಕೊಕ್ಕು ಸುಂದರ ರೂಪ
ಸವಿಯಾದ ಮಾತುಗಳ ನುಡಿವುದೆಂದು
ಗಿಳಿಗೆ ಕಟ್ಟಿದರು ಪಟ್ಟ ಪಂಡಿತೋತ್ತಮರೆಲ್ಲ
ಬೆಲೆಯು ದೊರಕುವುದು ಪಾಂಡಿತ್ಯಕಿಂದು
ಸಂಗೀತ ನಾಧಮಾಧುರ್ಯಗಳು ಹುಟ್ಟಿದ್ದು
ಎಲೆಮರೆಯಲಿದ್ದ ಕೋಗಿಲೆಯಿಂದಲೆ
ತೆರೆದಿತ್ತು ಗಂಧರ್ವ ಲೋಕದಿಹ ಸಂಗೀತ
ಆ ಕಚೇರಿಯ ಜನರೆದೆಯ ಬಾಗಿಲೆ
ಯಾರು ಬೆಲೆ ಕೊಡದಿದ್ದರೇನಂತೆ ಕೋಗಿಲೆಯು
ತನ್ನ ಸಂತೋಷಕ್ಕೆ ಹಾಡುತಿಹುದು
ಬೆಲೆ ಕೊಟ್ಟರು ಅಷ್ಟೆ ಕೊಡದಿದ್ದರು ಅಷ್ಟೆ
ಮಾನ ಸನ್ಮಾನಕಾಗಿ ಅದು ಹಾಡದು
ಹೂಮಾರುವ ಹುಡುಗಿ
ಬಂದಳು ಹೂವಿನ ಬುಟ್ಟಿಯ ಜೊತೆಯಲಿ
ಹೂಮಾರುವ ಹುಡುಗಿ
ತೆಳ್ಳಗೆ ಬೆಳ್ಳಗೆ ಬಳುಕುತ ಬಂದಳು
ತಾನೇ ಹೂವಾಗಿ
“ಮಲ್ಲಿಗೆ ಬೇಕೇ ? ಸಂಪಿಗೆ ಬೇಕೇ ?”
ಕೂಗುತ ಇಂಪಾಗಿ
ಹೂವಿನ ವಾಸನೆ ಹಿಡಿಯುತ ಬಂದರು
ಜನಗಳು ಬೆರಗಾಗಿ
ಮನೆಯ ಬಾಗಿಲಲಿ ಬಂದು ಕೂಗಿದಳು
“ಹೂವು ಬೇಕೆ ಹೂವು ?”
ಮನೆಯಲಿ ಮಡದಿಯು ಇಲ್ಲದಿದ್ದರು
ಕೊಳ್ಳಬಂದೆ ಹೂವು
ಹೂವಿಗಿಂತಲೂ ಚೆಂದವಾಗಿತ್ತು
ನಗೆಮಲ್ಲಿಗೆಹೂವು
ಅವಳ ನಗೆಮೊಗವ ನೋಡುತ ಮರೆತೆನು
ನನ್ನಲಿರುವ ನೋವು
ಹೂಗಳ ಕೊಟ್ಟಳು ಕಿಲಕಿಲ ನಕ್ಕಳು
ಹಣವನು ಕೊಟ್ಟೆನು ಕೈಗೆ
ಹಣವ ಕೊಡುವಾಗ ತಾಕಿತು ಮುಂಗೈ
ವಿದ್ಯುತ್ತೇರಿತು ಮೈಗೆ
ಮಂದ ಮಾರುತವು ತಿದ್ದಿ ತೀಡುತಿರೆ
ಹರುಷವಾಗದೇನು ?
ಚೆಲುವೆಯ ಕಂಡರೆ ಮೋಹಗೊಳ್ಳದವ
ಜಗದಲಿರುವನೇನು ?
ಧರ್ಮ ಸಂಕಟ
ನಾನು ಸೋತಿದ್ದೇನೆ
ಬದುಕಿನ ಚದುರಂಗದ
ಜೂಜಾಟದಲ್ಲಿ
ರಾಜ್ಯ ಧರ್ಮಪತ್ನಿ ಸಹೋದರ
ಎಲ್ಲವನ್ನು
ಒತ್ತೆಯಿಟ್ಟಿದ್ದೇನೆ
ನನ್ನೆದುರಿನಲ್ಲಿ
ನನ್ನವಳ ಎಳೆದು ತಂದು
ಸೀರೆ ಸೆಳೆಯುತ್ತಿದ್ದರು
ಸುಮ್ಮನಿದ್ದೇನೆ ಅಸಹಾಯಕನಾಗಿ
ತಮ್ಮಂದಿರೆದ್ದು
ಗುಡುಗುವುದನ್ನು ಕಂಡು
ಸುಮ್ಮನಿರಿಸಿದ್ದೇನೆ.
ತಮ್ಮಂದಿರು
ನನ್ನ ಮೇಲೆ ಕಿಡಿಕಾರಿ
ಹಲ್ಲು ಮಸೆಯುತ್ತ
ಗೊಣಗುತ್ತಿದ್ದಾರೆ
“ಎಂಥ ರಣಹೇಡಿ ನೀನು
ಮಡದಿಯನ್ನು ಎಳೆದು ತಂದು
ಸೀರೆ ಸೆಳೆದು ಮಾನಭಂಗ ಮಾಡಿ
ಬಾ ತೊಡೆಯಮೇಲೆ ಕೂಡೆಂದು
ಮೀಸೆ ತಿರುವಿ ಮೆರೆವ
ಮುಠ್ಠಾಳರನ್ನು ಕಂಡು
ಸುಮ್ಮನಿದ್ದೀಯಲ್ಲ ”
ಎಂದು ಮೂದಲಿಸುತ್ತಿದ್ದಾರೆ.
ದೊಡ್ಡವರಿದ್ದರು ಕೂಡ
ದುಷ್ಟರ ದಾಸರಾಗಿ
ಇದನ್ನು ನೋಡುತ್ತ
ತುಟಿಪಿಟಕ್ಕೆನ್ನದೆ
ಸುಮ್ಮನೆ ಕೂತಿದ್ದಾರೆ.
ಧರ್ಮ ಬಿಡುವಂತಿಲ್ಲ
ಸಹನೆ ಸೈರಣೆ ತೊರೆವಂತಿಲ್ಲ
ಕೋಪದಿಂದ ಮಾತಾಡಿ
ಮನಸು ನೋಯಿಸುವಂತಿಲ್ಲ
ವೀರನಂತೆದ್ದು ಅವರ ಕೊಂದು
ಹಿಂಸೆ ಮಾಡುವಂತಿಲ್ಲ
ದ್ವಂದ್ವ ಸಂಕಟದಲ್ಲಿ
ಸಿಕ್ಕು ನಲುಗುತ್ತಿರುವೆ
ಧರ್ಮಕ್ಕೆ ಗುಲಾಮನಾಗಿ.
ಲೋಕದಲ್ಲಿ ಧರ್ಮದಿ ನಡೆವವರ
ತೊಳಲಾಟವಿಷ್ಟೆ
ದುಷ್ಟರು ಮೆರೆಯುತ್ತಾರೆ
ಧರ್ಮಿಷ್ಟರು ಬಳಲುತ್ತಾರೆ.
ಕವಿತೆ ಗೀಚುತ್ತೇನೆ
ಕವಿತೆ ಗೀಚುತ್ತೇನೆ ನಾನೂ
ಈ ಜಗತ್ತಿನಲಿ ಕವಿಯಾಗಬೇಕೆಂಬ ಬಯಕೆಯಿಂದಲ್ಲ;
ಹಲವಾರು ಮಂದಿ ಕವಿವರ್ಯರು ಬರೆದ ಕವಿತೆಗಳು
ತುಂಬಿ ತುಳುತ್ತಿರುವಾಗ
ನಾನು ಗೀಚಿದ ಕವಿತೆ ಉಳಿಯಬೇಕೆಂಬ ಆಶೆ ನನಗಿಲ್ಲ.
ಕವಿತೆ ಗೀಚುತ್ತೇನೆ ನಾನೂ;
ಆ ದಾರಿ ತಪ್ಪಿದ ಜನಗಳ ತಿದ್ದುತ್ತೇನೆಂಬ
ಅಹಂ ನನಗಿಲ್ಲ.
ಮೊದಲಿನಿಂದಲೂ ದಾರಿ ಬಿಟ್ಟು ನಡೆವವರ ಕಂಡು
ಕನಿಕರದಿಂದ
ಸರಿದಾರಿಗೆ ಹೆಜ್ಜೆಹಾಕಲೆಂದು
ನಾನಿಷ್ಟು ಕವಿತೆ ಗೀಚುತ್ತೇನೆ;
ಅಚ್ಚಾಕಿಸಿ ಪುಸ್ತಕ ಪ್ರಕಟಿಸುತ್ತೇನೆ.
ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ
ಮಹಾಕವಿಗಳು ಬರೆದು ನಾಡಿನಲ್ಲಿ
ಒಟ್ಟಿದ್ದಾರೆ;
ಸದ್ಗ್ರಂಥಗಳನೆಲ್ಲ ಓದಿ ಓದಿ
ಅರಗಿಸಿಕೊಳ್ಳದೆ
ಪುಸ್ತಕದ ಬದನೆಕಾಯಿ ಆಗಿದ್ದಾರೆಂದು
ನನಗೆ ಗೊತ್ತಿದ್ದರೂ
ಬರವಣಿಗೆಗೆ ಕೊನೆಯಿರದೆ
ಎಷ್ಟೊಂದು ಪುಸ್ತಕ ಬರೆದೂ ಬರೆದೂ,
ಅಚ್ಚಾಕಿಸಿ ತಂದರೂ
ಇನ್ನೂ ಬರೆಯಬೇಕೆಂಬ ಬಯಕೆ .
ಆದರೂ ಕವಿತೆ ಬರಯುತ್ತೇನೆ ನಾನೂ;
ಜನರ ಸುಧಾರಿಸುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ದಿವಸ ನಿನ್ನ ನಾನು, ನನ್ನ ನೀನು
ಪ್ರೀತಿಸಬೇಕೆಂಬ ಒಂದೇ ಒಂದು ಬಯಕೆಯಿಂದ;
ಮರೆಯಾದ ಮೇಲೆ ನೀನು ಯಾರೋ ?!
ಮತ್ತೆ ನಾನು ಯಾರೋ ?!
ಎನ್.ಶರಣಪ್ಪ ಮೆಟ್ರಿ
ಗಂಗಾವತಿ