ಮೂಡಲಗಿ: ವಿವಿಧ ದೇಶದಲ್ಲಿ ಸಾಧನೆ ಮಾಡಿ ಉತ್ತಮ ಹುದ್ದೆಯಲ್ಲಿರುವ ಭಾರತೀಯರು, ಕರ್ನಾಟಕ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮಾಡುತ್ತಿರುವುದು ಹಮ್ಮೆಯ ವಿಷಯವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ಅವರು ಸಮೀಪದ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಸರಕಾರಿ ಶಾಲೆಯಲ್ಲಿ ಯುವಾ ಬ್ರಿಗೇಡ್ ವತಿಯಿಂದ ಆಯೋಜಿಸಲಾದ ಸರಕಾರಿ ಕನ್ನಡ ಶಾಲೆಯ ಜೀರ್ಣೋದ್ಧಾರ ಹಾಗೂ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿ ಶತಮಾನ ಕಂಡ ಶಾಲೆಗೆ ಶತಕೋಟಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಸಂಖ್ಯೆ ಕಡಿಮೆ ಇರುವಂತಹ ಸಂದರ್ಭದಲ್ಲಿ ಕಲ್ಲೋಳಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯು 137 ವರ್ಷ ಪೂರೈಸಿ, ಮುಂದಿನ ದಿನಗಳಲ್ಲಿ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಕನ್ನಡ ಮಾಧ್ಯಮ ಜೊತೆಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ತರುವಂಥ ಪ್ರಯತ್ನವನ್ನು ಈಗಾಗಲೇ ಮಾಡುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಆ ಯೋಜನೆಯನ್ನು ಮೊದಲು ಈ ಶಾಲೆಯಲ್ಲಿ ಪ್ರಾರಂಭಿಸಲಾಗುವುದು. ಈ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿಯವರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕಾಂತ್ರಿಯನ್ನು ರೂಪಿಸಿ ಬದಲಾವಣೆಯನ್ನು ತರುವಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಮಾತೃಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಪರ ಭಾಷೆಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡದೇ ಮುಂದಿನ ದಿನಮಾನಗಳಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲು ಮೋದಿಯವರು ಹೊಸ ಶಿಕ್ಷಣ ನೀತಿ ಎನ್‍ಇಪಿ ಎಂಬ ಹೊಸ ಶೈಕ್ಷಣಿಕ ಯೋಜನೆಯನ್ನು ರೂಪಿಸುತ್ತಿದ್ದಾರೆ. ಮಗುವಿನ ಕಲಿಕೆಯ ಫಲಶೃತಿಯು ಅವರು ನಿರ್ಮಾಣಗೊಂಡು ಅವರ ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಿ ರೂಪುಗೊಂಡಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ದೊರೆಯುವದು ಎಂದು ನುಡಿದರು.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನಾಡಿನ ಶಾಲಾ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳನ್ನು ಯುವಾ ಬ್ರಿಗೇಡ್ ತಲುಪಿಸುವ ಪ್ರಯತ್ನ ಮಾಡುತ್ತಿದೆ. ವಿಜ್ಞಾನ ಪ್ರಯೋಗಾಲಯ ನಿರ್ಮಿಸಲು ಪ್ರಥಮವಾಗಿ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಶಾಲೆಯನ್ನು ಆಯ್ದುಕೊಳ್ಳಲಾಯಿತು. ಪ್ರಾರಂಭದಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಸೂಕ್ತ ಕಟ್ಟಡದ ಕೊರತೆ ಉಂಟಾದ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಮುಂದಾಗಿ ಸುಸಜ್ಜಿತ ಶಾಲೆಯನ್ನಾಗಿ ಮಾಡಿರುವ ಗ್ರಾಮಸ್ಥರ ಕಾರ್ಯವನ್ನು ನಿಜಕ್ಕೂ ಮೆಚ್ಚುವಂಥದು. ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಮುಂದಾಗಿ ಕನ್ನಡ ಶಾಲೆಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವಂಥ ಕಾರ್ಯ ಮಾಡಬೇಕು ಎಂದರು.
ಉತ್ತರ ಕರ್ನಾಟಕದಲ್ಲೇ ಕನ್ನಡ ಶಾಲೆಯಲ್ಲಿ ಉತ್ತಮವಾದ ವಿಜ್ಞಾನ ಪ್ರಯೋಗಾಲಯವನ್ನು ಯುವಾ ಬ್ರಿಗೇಡ್ ವತಿಯಿಂದ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಶಾಲೆಯಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಭೌಗೋಳಿಕ ಪ್ರಯೋಗಾಲಯವನ್ನು ಕೂಡಾ ಪ್ರಾರಂಭಿಸಲಾಗುವುದು. ಮಕ್ಕಳು ವಿಜ್ಞಾನ ಬಗ್ಗೆ ತಿಳಿದುಕೊಳ್ಳಲು ಈ ಶಾಲೆಗೆ ಆಗಮಿಸಿ ವಿಜ್ಞಾನ ಪ್ರಯೋಗಾಲಯದ ಸದುಪಯೋಗವನ್ನು ಪಡೆದುಕೊಂಡಾಗ ಮಾತ್ರ ಯುವಾ ಬ್ರಿಗೇಡ್ ಮಾಡಿರುವ ಪ್ರಯತ್ನ ಸಾರ್ಥಕತೆಯನ್ನು ಹೊಂದಲು ಸಾಧ್ಯ ಎಂದರು.
ನಿಡಸೋಸಿಯ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನಮಠ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸಿ ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶತಮಾನಕಂಡ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಶಿಕ್ಷಕರೊಂದಿಗೆ ಸಾರ್ವಜಕರೊಂದಿಗೆ ಸಂವಾದ ನಡೆಸಿದರು. ಆರಾಧ್ಯ ದೈವ ಹನುಮಾನ ಮಂದಿರದಲ್ಲಿ ಪೂಜೆ ನೆರವೇರಿಸಿ ಜಾಥಾ ಮೂಲಕ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿಯ ವೇದಿಕೆಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಶಿವಪ್ಪ ಬೆಳಕೂಡ, ಯುವಾ ಬ್ರಿಗೇಡ್‍ನ ಉತ್ತರ ಪ್ರಾಂತಸಂಚಾಲಕ ವರ್ಧಮಾನ ತ್ಯಾಗಿ, ಧಾರವಾಡ ಅಪರ ಆಯುಕ್ತ ಸಿದ್ರಾಮಪ್ಪ ಬಿರಾದಾರ, ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ, ಬೆಳಗಾವಿ ಡಿಡಿಪಿಐ ಬಸವರಾಜ ನಲವತ್ವಾಡ, ತಹಶೀಲ್ದಾರ ಡಿ ಜಿ ಮಹಾತ್ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ ಬಿಇಒಗಳಾದ ಅಜಿತ ಮನ್ನಿಕೇರಿ, ಜಿ.ಬಿ ಬಳಗಾರ, ಮೋಹನ ದಂಡಿನ, ಯುವಾ ಬ್ರಿಗೇಡ್‍ನ ಸಿದ್ದು ಉಳ್ಳಾಗಡ್ಡಿ, ಶಶಿಕಾಂತ, ಚಿದಾನಂದ ಮಠಪತಿ, ಬಸವರಾಜ ಸಂಪಗಾವಿ, ಕಾಡೇಶ ಗೋರೊಸಿ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತರು, ಶಿಕ್ಷಕರು ಮತ್ತು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.