spot_img
spot_img

ದುಡಿಯುವ ಮನಗಳಿಗೆ ನಮದೊಂದು ಸಲಾಂ….

Must Read

- Advertisement -

(ಮೇ 01 ರ ಕಾರ್ಮಿಕ ದಿನದ ನಿಮಿತ್ಯ ಪ್ರಸ್ತುತ ಲೇಖನ)

● ಮೇ 1 ಅಂದರೆ ಅದೊಂದು ರಜಾದಿನ….! ಕೆಲವರಿಗೆ ಮಾತ್ರಾ ರಜಾ ಸಿಕ್ಕಿತು, ಈ ರಜಾ ಭಾಗ್ಯ ನಮಗಿಲ್ಲವಲ್ಲ ಎಂಬ ಅತೃಪ್ತಿ ನಮ್ಮಲ್ಲಿ ಅಡ್ಡಾಡುವುದುಂಟು. ಅಂದಿನ ಮೇ ದಿನದ ಅಶೋತ್ತರಗಳಿಗೂ ನಮ್ಮೀ ರಜಾವಾದಕ್ಕೂ ಅಜಗಜಾಂತರವಿದೆ. ಅಂದಿನ ಕಾರ್ಮಿಕರಲ್ಲಿ ಇಷ್ಟೇ ನಿಯಮಿತ ಅವಧಿಯ ಕೆಲಸ ಎಂಬುದಾಗಲೀ, ಕಾರ್ಮಿಕ ಕಲ್ಯಾಣದ ಯಾವುದೇ ಭದ್ರತೆಗಳಾಗಲಿ ಇರಲಿಲ್ಲ. ಅಂತಹ ನೆಲೆಯಲ್ಲಿ ಬಂಡವಾಳಷಾಹಿ ಜನರಿಂದ ಶೋಷಿತರಾದ ಜನ ರೊಚ್ಚಿಗೆದ್ದು ತಮಗೆ ಅರ್ಹವಾಗಿ ದೊರಕಬೇಕಿದ್ದ ಕೂಲಿ ಮತ್ತು ಮಾನವೀಯ ಪ್ರತಿಸ್ಪಂದನೆಗಳಿಗಾಗಿ ಬೀದಿಗಿಳಿದ ಸಂದರ್ಭವನ್ನು ನೆನಪಿಸುವಂತ ದಿನವಾಗಿದೆ – ಈ ‘ಮೇ ದಿನ’ ಅಥವಾ ‘ಕಾರ್ಮಿಕರ ದಿನ’. ಅಂದು ಎಂಟು ಗಂಟೆಗಳ ಕೆಲಸ ಮಾತ್ರ ಎಂಬುದು ಕಲ್ಪನೆಗೂ ಸಾಧ್ಯವಿಲ್ಲದ ವಿಷಯವಾಗಿತ್ತು. ಮನುಷ್ಯ ಮಹಾಯುದ್ಧಗಳಲ್ಲಿ ಪ್ರಾಣಬಿಡುವಂತೆ ಹೋರಾಡುವುದಕ್ಕೂ, ಕಾರ್ಖಾನೆಗಳಲ್ಲಿ ಪ್ರಾಣಿಗಳಂತೆ, ಬದುಕುತ್ತೇನೋ ಇಲ್ಲವೋ ಎಂದು ಗೊತ್ತುಗುರಿ ಇಲ್ಲದೆ ದುಡಿಯುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲದಂತಹ ದಿನಗಳವು. ಇಂತಹ ದಿನಗಳಲ್ಲಿ ಅಧಿಕಾರಶಾಹಿಗಳ ಗಮನ ಸೆಳೆಯುವ ಒಂದು ಚಳವಳಿ ನಡೆಯಿತು. ಪೊಲೀಸ್ ಗುಂಪಿನ ಮೇಲೆ ಯಾರೋ ಒಂದು ಪುಡಿಬಾಂಬೆಸೆದರು. ಇದಕ್ಕೆ ಪ್ರತಿರೋದವಾಗಿ ಪೋಲಿಸ್ ಶಕ್ತಿ ದಮನಕಾರಿ ರೂಪತಾಳಿ, ಹಲವಾರು ಪ್ರದರ್ಶಕರನ್ನು ಮಾರಣಾಂತಿಕ ಹೋಮ ನಡೆಸಿದ ‘ಚಿಕಾಗೋ ಹೇ ಮಾರ್ಕೆಟ್ ಮಾರಣ ಹೋಮ’ ಎಂಬ ಘಟನೆ ಚರಿತ್ರೆಯಲ್ಲಿ ರಕ್ತಸಿಕ್ತವಾಗಿ ದಾಖಲಾಗಿಬಿಟ್ಟಿತು. ಈ ಅಳಿಸಲಾರದ ರಕ್ತದ ಕಲೆಯಿಂದ ಬರೆಯಲ್ಪಟ್ಟಿರುವ ಈ ಚರಿತ್ರೆಯ ದಿನವೇ ‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕ ದಿನ’ದ ರೂಪ ತಾಳಿ ನಿಂತಿದೆ

● ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಸಂಘಟನೆಗಳು ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ) ಆಗಿದೆ. ಮೇ ದಿನ ಅಥವಾ “ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ” ಯನ್ನು ಪ್ರತಿ ವರ್ಷದ ಮೇ 1ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.

- Advertisement -

● ಹಿನ್ನಲೆ ಮತ್ತು ಇತಿಹಾಸ:- 1886ರ ವರ್ಷದ ಮೇ 4 ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ. ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889 ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.

● ಭಾರತದಲ್ಲಿ ಕಾರ್ಮಿಕ ದಿನ:- 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ- ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧದ ನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಒಕ್ಕೂಟವೊಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.

● ಒಟ್ಟಿನಲ್ಲಿ ಹೇಳೋದಾದರೆ, ಪ್ರಪಂಚದಲ್ಲಿ ನಮ್ಮಂಥ ಮುಂದೆ ಹುಟ್ಟಿದ ಜನಾಂಗಕ್ಕೆ ಉಪಯೋಗವಾಗುವ ಹಾಗೆ, ಅಂದಿನ ದಿನದಲ್ಲೇ ಹೋರಾಡಿದ, ಪ್ರಾಣ ತೆತ್ತ; ಇಂದು ಕೂಡಾ ತಮ್ಮ ನಿಷ್ಠ ಶ್ರಮ ಭರಿತ ದುಡಿಮೆಗಳಿಂದ, ನಾವು ಮೂಗು ಮುಚ್ಚಿ ಅಸಹ್ಯಿಸುವ ವಾತಾವರಣಗಳಲ್ಲಿ ಕೂಡಾ ನಮಗಾಗಿ ದುಡಿಯುತ್ತಿರುವ; ನಮಗಾಗಿ ತಾವು ಕಸದಲ್ಲಿದ್ದು ನಮಗೆ ಶುಭ್ರ ವಾತಾವರಣ ನೀಡುವ; ತಾವು ಗುಡಿಸಲಲ್ಲಿದ್ದು ನಮಗಾಗಿ ಮಹಲುಗಳನ್ನು ಕಟ್ಟುವ; ತಾವು ಮಳೆ, ಬಿಸಿಲುಗಳನ್ನು ಲೆಕ್ಕಿಸದೆ ಒಣ ಚೂರು ರೊಟ್ಟಿ ತಿಂದು ನಮಗಾಗಿ ಪುಷ್ಕಳ ಆಹಾರ ಒದಗಿಸುವ; ನಾವು ಪಾರ್ಟಿ ಮಾಡಿ ತಿಂದು ತೇಗಿದ್ದನ್ನು ಬಳಿಯಲು ಅದೆಷ್ಟೇಷ್ಟೋ ಹೊತ್ತು ಅನಿಯಮಿತವಾಗಿ ದುಡಿಯುವ ಕೈಗಳು; ನಾವು ಸುಖವಾಗಿ ನಿದ್ರೆ ಮಾಡುವಾಗ ನಮಗಾಗಿ ನಮ್ಮ ದೇಶ ಮತ್ತು ಮನೆಗಳ ಸುತ್ತ ಕಾಯುವ ಕಂಗಳು, ಮನಗಳು, ಹೃದಯಗಳು ಎಷ್ಟೆಷ್ಟೋ. ಅವರೆಲ್ಲರಿಗೂ ಒಂದು ಕ್ಷಣ ಗೌರವ ಸಲ್ಲಿಸೋಣವೇ, ದುಡಿಯುವ ಮನಗಳಿಗೆ ನಮದೊಂದು ಸಲಾಂ….

- Advertisement -

ಎನ್.ಎನ್.ಕಬ್ಬೂರ
ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group