ಬೀದರ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಬಿಜೆಪಿ ನಾಯಕ ಪದವಿಯಿಂದ ಕೆಳಗೆ ಇಳಿದ ಮೇಲೆ ಹೈಕಮಾಂಡಿಗೆ ಬೀದರ ಲಿಂಗಾಯತರ ಭಯ ಶುರುವಾಗಿದೆಯಾ..? ಲಿಂಗಾಯತರು ಬಿಜೆಪಿ ಮೇಲೆ ಗರಂ ಅಗಿದ್ದಾರಾ..? ಎಂಬ ಪ್ರಶ್ನೆ ಎದ್ದಿದ್ದು ಈ ಕೋಪ ಶಮನ ಮಾಡಲು ಕಲ್ಯಾಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಚುನಾವಣಾ ಚಾಣಕ್ಯ ಅಮಿತ ಷಾ !
ಲಿಂಗಾಯತ ಕಾಶಿ ಬಸವಕಲ್ಯಾಣದಿಂದ ಮಾರ್ಚ್ 3 ರಂದು ವಿಜಯ ಸಂಕಲ್ಪ ಯಾತ್ರೆಗೆ ಅಮಿತ್ ಷಾ ಚಾಲನೆ ನೀಡುವ ಮೂಲಕ ಲಿಂಗಾಯತರ ಮಂತ್ರ ಜಪ ಮಾಡುತ್ತಿದ್ದಾರೆ ಷಾ… ಮೋದಿ, ಷಾ ಲಿಂಗಾಯತ ಮಂತ್ರ ಜಪದ ಕುರಿತು ಒಂದು ಸ್ಪೆಷಲ್ ವರದಿ ಇಲ್ಲಿದೆ….
ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೋದಿ ಹಾಗೂ ಷಾ ಚುರುಕಾಗಿದ್ದಾರೆ.
ಬಿ ಎಸ್ ಯಡಿಯೂರಪ್ಪ ನಾಯಕತ್ವದಿಂದ ಹಿಂದೆ ಸರಿದ ಮೇಲೆ ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ಚದ ಕೊರತೆ ಎದ್ದು ಕಾಣುತ್ತಿದ್ದು ಬೀದರ ಭಾಗದಲ್ಲಿ ಲಿಂಗಾಯತರ ಓಲೈಕೆಗೆ ಕಲ್ಯಾಣದಿಂದ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 3 ರಂದು ಚಾಲನೆ ನೀಡಲಿದ್ದಾರೆ. ಬೀದರ ಬಿಜೆಪಿಗೆ ಲಿಂಗಾಯತರ ಮತಗಳನ್ನು ಸೆಳೆಯುವ ಮಾಸ್ ನಾಯಕರ ಕೊರತೆ ಎದ್ದು ಕಾಣುತ್ತಿದ್ದು ಮೋದಿ, ಅಮಿತ್ ಶಾಗೆ ಇದು ತಲೆನೋವಾಗಿ ಪರಿಣಮಿಸಿದೆ.
ಬಸವಕಲ್ಯಾಣ ಕರ್ಮಭೂಮಿಗೆ ಎಂಟ್ರಿ ಕೊಡುವ ಮೂಲಕ ನಾವು ಲಿಂಗಾಯತರ ಪರ ಇದ್ದೇವೆ ಎಂಬ ಸಂದೇಶ ಸಾರಲು ಹೊರಟ್ಟಿದ್ದಾರೆ. ಹೌದು, ಬಿ ಎಸ್ ಯಡಿಯೂರಪ್ಪರನ್ನು ಪದವಿಯಿಂದ ಹೈಕಮಾಂಡ್ ಕಳಗೆ ಇಳಿಸಿ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯದ ಲಿಂಗಾಯತರು ಪುಲ್ ಗರಂ ಆದಂತೆ ಕಾಣುತ್ತಿದ್ದು ಲಿಂಗಾಯತರ ಕೋಪ ಶಮನಕ್ಕಾಗಿ ಅಮಿತ್ ಶಾ ಕಲ್ಯಾಣಕ್ಕೆ ಬಂದು ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಮಾರ್ಚ್ 3 ರಂದು 11 ಗಂಟೆಗೆ ಬಸವಕಲ್ಯಾಣಕ್ಕೆ ಬರುವ ಅಮಿತ್ ಶಾ ಅನುಭವ ಮಂಟಪಕ್ಕೆ ಭೇಟಿ ನೀಡಿ ವಿಶ್ವಗುರು ಬಸವಣ್ಣನ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲಿದ್ದು ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ಮಾಡಿ ಥೇರು ಮೈದಾನದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 2ಲಕ್ಷ 50 ಸಾವಿರ ಮತದಾರರಿದ್ದು ಇದರಲ್ಲಿ ಲಿಂಗಾಯತರು ಸುಮಾರು 65 ಸಾವಿರ ಮತದಾರರಿದ್ದಾರೆ ಅಭ್ಯರ್ಥಿಗಳ ಗೆಲುವಿಗೆ ಲಿಂಗಾಯತರೆ ನಿರ್ಣಾಯಕರಾಗಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಬಸವಣ್ಣನ ಕರ್ಮಭೂಮಿಯಿಂದಲೇ ಚಾಲನೆ ಕೊಡುವ ಮೂಲಕ ನಾವು ಬಸವಣ್ಣ ಅನುಯಾಯಿಗಳು ಎಂಬ ಸಂದೇಶವನ್ನು ಇಲ್ಲಿಂದಲ್ಲೆ ರಾಜ್ಯಕ್ಕೆ ಸಾರಲಿದ್ದಾರೆ ಅಮಿತ್ ಶಾ.
ಹಾಗೆ ನೋಡಿದರೆ ಬಿಎಸ್ ಯಡಿಯೂರಪ್ಪನವರೆ ಹೇಳಿದ್ದಾರೆ ಪಕ್ಷದಿಂದ ಕೆಳಗೆ ಇಳಿಸಿದ್ದಕ್ಕೆ ಯಾವುದೇ ಬೇಸರವಿಲ್ಲ ಎಂದು. ಹೀಗಾಗೀ ಲಿಂಗಾಯತರು ಬಿಜೆಪಿ ಪಕ್ಷದ ಮೇಲೆ ಸಿಟ್ಟಾಗಲ್ಲ, ಬಿಜೆಪಿ ಪಕ್ಷದ ಜೊತೆಗೆ ಬಿಎಸ್ವೈ ಹಾಗೂ ಎಲ್ಲಾ ಧರ್ಮೀಯರು ಇದ್ದಾರೆ ಎಂದು ಬಸವಕಲ್ಯಾಣ ಶಾಸಕರು ಹೇಳುತ್ತಾರೆ.
ವಿಜಯ ಸಂಕಲ್ಪ ಯಾತ್ರೆಗಾಗಿ ಈಗಾಗಲೇ ಬಸವಕಲ್ಯಾಣ ಸಂಪೂರ್ಣವಾಗಿ ಕೇಸರಿ ಮೈಯವಾಗಿದ್ದು ಎಲ್ಲಿ ನೋಡಿದ್ರೆ ಅಲ್ಲಿ ಕೇಸರಿ ಬಾವುಟಗಳ ಕಹಳೆ ಮೊಳಗುತ್ತಿವೆ. ಮೋದಿ, ಅಮಿತ್ ಶಾ, ಸಿಎಂ ಬೊಮ್ಮಾಯಿ, ಬಿಎಸ್ವೈ, ಕಟೀಲು ಸೇರಿದಂತೆ ರಾಜ್ಯ ನಾಯಕರ ಬ್ಯಾನರ್ಗಳು ಪಟ್ಟಣದಲ್ಲಿ ರಾರಾಜಿಸುತ್ತಿವೆ.
ಮತ್ತೊಂದು ಕಡೆ ಲಿಂಗಾಯತ ಬಿಜೆಪಿ ಶಾಸಕ ಶರಣು ಸಲಗರ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಹಳ್ಳಿ ತಿರುಗಾಡಿ ಅಮಿತ್ ಶಾ ಕಾರ್ಯಕ್ರಮದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಗೆ ಲಿಂಗಾಯತ ಟೆನ್ಶನ್ ಒಂದು ಕಡೆಯಾದ್ರೆ ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ನಲ್ಲೂ ಲಿಂಗಾಯತ ಅಭ್ಯರ್ಥಿಯ ಜಪ ಶುರುವಾಗಿದೆ. ಈ ಬಾರಿ ಕಾಂಗ್ರೆಸ್ ನಿಂದಲ್ಲೂ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡಗೆ ಒತ್ತಡ ಹಾಕುತ್ತಿದ್ದಾರೆ. ಕಾಂಗ್ರೆಸ್ ನಿಂದ ಲಿಂಗಾಯತ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಧನರಾಜ್ ತಾಡಂಪಳ್ಳಿ, ಶಿವರಾಜ್ ನರಶೆಟ್ಟಿ, ಆನಂದ್ ದೇವಪ್ಪ, ಲಿಂಗಾಯತ ಕೋಟಾದಲ್ಲಿ ಟಿಕೆಟ್ ಕೇಳುತ್ತಿದ್ದಾರೆ.
ಮತ್ತೊಂದು ಕಡೆ ಮಾಜಿ ಸಿಎಂ ಎನ್ ಧರ್ಮಸಿಂಗ್ ಪುತ್ರ ವಿಜಯ ಸಿಂಗ್ ಕೂಡಾ ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿಯಾದ್ರೆ, ದಿವಂಗತ ಬಿ ನಾರಾಯಣ್ ರಾವ್ ಪತ್ನಿ ಮಾಲಾ ಬಿ. ನಾರಾಯಣರಾವ್ ಕೂಡಾ ಕಾಂಗ್ರೆಸ್ನಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗೀ ಲಿಂಗಾಯತ ಕಾಂಗ್ರೆಸ್ ಅಭ್ಯರ್ಥಿಗಳು ಕೂಡಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ ಹೈಕಮಾಂಡ್ ಗೆ ಲಿಂಗಾಯತರ ಜಪ ಮಾಡುತ್ತಿದ್ದಾರೆ.
ಬಸವಕಲ್ಯಾಣದ ಅನುಭವ ಮಂಟಪ ಲಿಂಗಾಯತರ ಕಾಶಿ ಇದ್ದಂತೆ ಇಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಬಹುದು ಎನ್ನುತ್ತಾರೆ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಗಳು.
ವರದಿ: ನಂದಕುಮಾರ ಕರಂಜೆ, ಬೀದರ