ಹಲೋ ಸುಂದರಾಂಗ,
ಅದೆಷ್ಟೋ ಬಾರಿ ಬರಿ ಕಂಗಳಲ್ಲಿಯೇ ಮಾತನಾಡಿದೆ. ಅಡೆತಡೆಯಿಲ್ಲದೇ ಸಾಗುವ ನಯನದ ಭಾಷೆ ನನಗೂ ಕಲಿಸಿದೆ. ಕಣ್ಣಿನಲ್ಲೇ ಸಲಿಗೆ ಬೆಳೆಸಿದೆ. ಸುದ್ದಿ ಇಲ್ಲದೇ ಸದ್ದು ಮಾಡದೆ ಹೃದಯದಿ ಕಳ್ಳಬೆಕ್ಕಿನಂತೆ ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟೆ. ಎಂಥ ಚೆಂದದ ಚೆಲುವಿಯರು ನಿನ್ನ ಬಯಸಿ ಹಿಂದೆ ಹಿಂದೆ ಬಂದರೂ ಕ್ಯಾರೆ ಅನ್ನಲಿಲ್ಲ. ಅಂಥ ಮೋಹಕ ಚುಂಬಕ ವ್ಯಕ್ತಿತ್ವದವನು ನೀನು. ಈ ರೀತಿ ಪ್ರೀತಿಯ ಚಾಲಾಕತನವನ್ನು ಅದು ಯಾವ ಶಾಲೆಯಲ್ಲಿ ಕಲಿತಿದ್ದೋ ಗೊತ್ತಿಲ್ಲ. ನನ್ನನು ಬರಸೆಳೆದುಬಿಟ್ಟೆ ಗುರುತ್ವದಂತೆ. ಪ್ರೀತಿಸುವ ಭಾವ ಬಂಧ ಸಂಬಂಧದ ಕುರಿತು ಅದೆಷ್ಟು ತಿಳಿದಿರುವೆಯೋ ನಿನಗೆ ನೀನೇ ಸಾಟಿ ನಿನಗಾರಿಲ್ಲ ಸರಿಸಾಟಿ. ಕಾಲೇಜಿನಲ್ಲಿ ಓದುವಾಗ ‘ನಿನಗೊಬ್ಬ ಬಾಯ್ ಫ್ರೆಂಡ್ ಇಲ್ಲ.’ ಅಂತ ಎಲ್ಲ ಗೆಳತಿಯರು ಕಾಲೆಳೆಯುತ್ತಿದ್ದರು. ಅವರು ಹಾಗೆಲ್ಲ ಅಂದಾಗಲೂ ನನ್ನ ಮನಸ್ಸು ವಿಚಲಿತಗೊಂಡಿರಲಿಲ್ಲ. ಆದರೆ ನಿನ್ನ ಕಂಡಾಗಿನಿAದ ಮಾತ್ರ ನನಗೆ ನಾನೇ ಹಿಡಿತಕ್ಕೆ ಸಿಗುತ್ತಿಲ್ಲ.
ನನ್ನ ಬಯಸಿ ಬಯಸಿ ಬಂದೆ ನೀನು. ಹೇಳಿದೆ ಒಂದೇ ಒಂದು ಮಾತೊಂದನು. ತುಂಬಿದೆ ಕಣ್ಣಲ್ಲಿ ಕನಸು ನೂರನು. ದಿನಗಳದಂತೆ ಜೋಡಿ ಹಕ್ಕಿಯ ಕನಸನು ಸುಂದರಗೊಳಿಸಿದೆ. ಪ್ರೀತಿ ಹೂವಿನ ಗಂಧ ಮನದ ಮನೆಯಲ್ಲಿ ಹರಡಿದೆ. ಪ್ರೇಮದ ಹೂವಿನಲ್ಲಿ ನಾ ಗಂಧವಾಗಿ ಬೆರೆತು ಹೋದೆ. ನಿನ್ನ ಕಣ್ಣಿನ ಪ್ರತಿಬಂಬವಾದೆ. ತುಟಿಗಳಿಗೆ ನಗು ತಂದೆ. ಹೆಜ್ಜೆ ಹೆಜ್ಜೆಗೂ ಗೆಲುವಾಗಿ ಹೃದಯ ತಂತಿಯನು ಮೀಟಿದೆ. ತುಸು ದೂರವಾದರೂ ಅಸು ನೀಗುವೆ ಅನ್ನೊವಷ್ಟು ಈ ಒಡಲಿಗೆ ಪ್ರೀತಿ ತುಂಬಿದೆ.
ಕಡಲ ತೀರದಲ್ಲಿ ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಬೆರೆಸುತಿರುವಾಗ ಅಂಕುರಿತ್ತು ಪ್ರೀತಿ. ಅದೇ ಸಪ್ತಪದಿ ಎನಿಸಿತು.ಅಂದೇ ಮನಸ್ಸಿನ ಮೈಗೆ ನಿನ್ನುಸಿರಿನ ಹೆಸರು ತೊಡಿಸಿದೆ. ಪ್ರೇಮದ ಹೊಸ ಕಾವ್ಯವೊಂದನು ಅಂದೇ ಬರೆದೆ. ಜೊತೆಜೊತೆ ನಡೆಯುವಾಗ ಭುಜಕ್ಕೆ ಭುಜ ತಾಗಿ ಮೈಯಲ್ಲಿ ವಿದ್ಯುತ್ ಸಂಚರವಾಯಿತು. ನನಗರಿವಿಲ್ಲದೇ ತುಸು ಸಮಯ ನಿನ್ನ ತೋಳೊಳಗೆ ಬಂಧಿಯಾದೆ. ಹಾರುತ್ತಿದ್ದ ಮುಂಗುರಳನ್ನು ಮೆಲ್ಲನೆ ಗಲ್ಲ ಸವರುತ ಬೆರಳುಗಳಿಂದ ಸರಸಿದೆ. ಹರವಾದ ನಿನ್ನೆದೆಗೆ ಒರಗಿ ಎದೆಯ ರೋಮಗಳಲ್ಲಿ ಬೆರಳಗಳ ಓಡಾಡಿಸಿದೆ. ಇದೆಲ್ಲ ನೆನೆದರೆ ಮೈ ಜುಂ ಎನ್ನುತ್ತೆ.
ಒಂದು ಸುಂದರ ಮುಂಜಾನೆ ಪಾರ್ಕಿಗೆ ಬರಹೇಳಿದ್ದೆ. ಜೋಡಿ ಹಕ್ಕಿಗಳೆರಡು ಮುದ್ದು ಮಾಡುವುದನ್ನು ತೋರಿಸಿದೆ. ನಮಗೆ ಹಾಗೆ ಮಾಡಲು ಅವು ಹೇಳುತಿವೆ ಎಂದೆ. ಯಾರಾದರೂ ಬಂದರೆ ಅಂದೆ. ‘ಸುತ್ತ ಮುತ್ತ ಯಾರೂ ಇಲ್ಲ ನಾನು ನೀನು ಇಲ್ಲಿ ಎಲ್ಲ ಎಂದು ಹಾಡು ಹೇಳಿದೆ. ಜೋಡಿ ಅಧರಗಳಿಗೆ ಮತ್ತೊಂದು ಜೋಡಿ ಅಧರಗಳನು ಜೋಡಿಸಿದೆ. ಜೋಡಿಸಿದ ಅಧರಗಳು ಒಂದನ್ನೊಂದು ಕಚ್ಚಿಕೊಂಡು ಎಷ್ಟೋ ಹೊತ್ತು ದಣಿಯದಂತೆ ಆಡಿದವು. ಅಬ್ಬಾ! ಮೊದಲ ಸಲದ ಆ ಮುತ್ತು ನಿಜಕ್ಕೂ ಸ್ವಾತಿ ಮುತ್ತು. ಆಹಾ! ಅದೆಷ್ಟು ಸವಿ ಜೇನು ಕಲೆ ಹಾಕಿ ಇಟ್ಟಿರುವೆ ಅದೆಲ್ಲ ನನಗಾಗಿ ಮೀಸಲು ಎನ್ನುವ ಭಾವ ಉಂಟಾಗಿ ಮೈ ರೋಮಾಂಚನಗೊಂಡಿತು !
ಇಬ್ಬರಿಗೂ ಈ ಅನುಭವ ಹೊಸತು ಆಗಿದ್ದರಿಂದ ಮೈಗಳು ನಡುಗುತ್ತಿದ್ದವು. ನಡುಗುವ ನಡುವಿಗೆ ನಿನ್ನ ಕೈಯೊಂದು ಸನಿಹ ಬಂದು ಹತ್ತಿರ ಎಳೆಯಿತು. ಈರ್ವರ ನಡುವೆ ಗಾಳಿ ಓಡಾಡಲು ಜಾಗವಿರದಷ್ಟು ಬಿಗಿಯಿತ್ತು ಬಂಧ. ಒಂದು ಕ್ಷಣ ಗಾಬರಿಗೊಂಡೆ. ಬಲವಾಗಿದ್ದ ಬಿಗಿ ಹಿಡಿತವನ್ನು ಸಡಿಲಿಸಿ ದೂರ ಓಡಿದೆ. ಏ! ಜಿಂಕೆ ಎಲ್ಲಿ ಓಡಿ ಹೋಗುತ್ತಿ ನಿಲ್ಲೆ ಎನ್ನುತ್ತ ಹಿಂದೆ ಓಡಿದ ನೀನು ಮೆಲ್ಲಗೆ ಅಂಗೈ ಅಮುಕಿದೆ. ನಂತರ ಬೆರಳಿಗೆ ಬೆರಳು ಜೋಡಿಸಿ ನಡೆದೆ. ಸಂಜೆ ದೀಪ ಹಚ್ಚುವ ಸಮಯವಾದರೂ ನಿನ್ನಲ್ಲೇ ಕಳೆದು ಹೋಗಿಬಿಟ್ಟಿದ್ದೆ. ಸಂಪೂರ್ಣ ಪ್ರೇಮ ಮನಮಂದಿರವನ್ನು ತುಂಬಿ ಬಿಟ್ಟಿತ್ತು.
ಆ ರಾತ್ರಿಯೆಲ್ಲ ಕಣ್ರೆಪ್ಪೆಗಳು ಒಂದಕ್ಕೊಂದು ಅಂಟಲೇ ಇಲ್ಲ. ನಿನ್ನಿಂದ ಇನ್ನು ದೂರ ಇರಲಾರೆ ಎಂಬ ಭಾವ ಪ್ರಬಲವಾಯಿತು. ಸ್ವಲ್ಪ ಅಳುಕಿನಿಂದಲೇ ಅಮ್ಮನಿಗೆ ನಿನ್ನ ಪ್ರೀತಿಸುವ ವಿಷಯ ಹೇಳಿದೆ. ಕೆಲ ಸಮಯ ಮೌನವಾಗಿ ನಿಂತಳು. ಮೈಯಲ್ಲಿರುವ ಧೈರ್ಯವನ್ನೆಲ್ಲ ಒಗ್ಗೂಡಿಸಿ ಅವತ್ತು ಮನೆಗೆ ಬಂದಿದ್ದನಲ್ಲ ಅದೇ ಹುಡುಗ ಅಮ್ಮಾ ಎಂದೆ. ಒಂದು ಕ್ಷಣ ಆವಾಕ್ಕಾದಳು. ನಂತರ ಸಾವರಿಸಿಕೊಂಡು, ಓ! ಅವನಾ ತುಂಬಾ ಸುಸಂಸ್ಕೃತ ಹುಡುಗ. ತಿದ್ದಿ ತೀಡಿ ಮಾಡಿದಂತಿದ್ದಾನೆ. ಅವರ ಮನೆಯಲ್ಲಿ ಒಪ್ಪಬೇಕಲ್ಲ ಎಂದಳು. ಒಳ್ಳೆಯ ಹುಡುಗ, ಸರಕಾರಿ ನೌಕರಿಯಲ್ಲಿದ್ದಾನೆ ಅವರ ಡಿಮ್ಯಾಂಡ್ ಏನೇನಿದಯೋ ನಮ್ಮ ಕೈಯಲ್ಲಿ ಕೊಡಲು ಆಗಬೇಕಲ್ಲ. ಎಂದಳು ಆತಂಕ ತುಂಬಿದ ದನಿಯಲ್ಲಿ.
ಅಮ್ಮಾ, ನೀವು ತಿಳಿದಂತೆ ಅವರಿಲ್ಲ. ಅವರು ವರದಕ್ಷಿಣೆ ವಿರೋಧಿಗಳು. ಒಂದು ನಯಾ ಪೈಸೆ ಬೇಡ ಹುಡುಗಿ ಕೊಟ್ಟರೆ ಸಾಕು ಎಂದು ಹೇಳಿದ್ದಾರೆ. ಅವರಮ್ಮ ಅಪ್ಪ ಆಗಲೇ ಒಪ್ಪಿಗೆ ಹಾಕಿದ್ದಾರೆ. ಮದುವೆ ಓಲಗ ಊದಿಸಲು ಕಾಯುತ್ತಿದ್ದಾರೆ ಎಂದೆ ನಾಚಿಕೆಯಿಂದ. ಹಾಗಾದರೆ ನನ್ನ ಅಭ್ಯಂತರವೇನಿಲ್ಲ ಎಂದಳು ನನ್ನ ಮುಖ ಕಮಲದಂತೆ ಅರಳಿತು. ಅದೇ ಭರದಲ್ಲಿ ಅಮ್ಮಾ, ಅಪ್ಪನನ್ನು ಒಪ್ಪಿಸುವ ಜವಾಬ್ದಾರಿ ನಿನ್ನದೇ ಎಂದು ಅಲ್ಲಿಂದ ಓಡಿ ನಿನಗೆ ರಿಂಗಿಸಿದೆ. ಆ ಸುದ್ದಿ ಕೇಳಿ ನಿನಗೆ ಆಕಾಶ ಮೂರೇ ಗೇಣು ಉಳಿದವನಂತೆ ಆಡಿದೆ. ಪ್ರಾಣಕಾಂತನ ಒಲುಮೆಯ ಬಲೆಯಲ್ಲಿ ಬಿದ್ದ ಗಳಿಗೆಯನ್ನು ಕಿಂಚಿತ್ತೂ ಮರೆಯುತ್ತಿಲ್ಲ ಮನಸ್ಸು. ಇನಿಯನ ಪ್ರೀತಿಯಲ್ಲಿದೆ ಬದುಕಿನ ದಾರಿಯಲ್ಲಿ ನಡೆಯುವದಾದರೂ ಹೇಗೆ ? ಕೂಡಿ ಕಳೆದ ಸವಿಸಮಯದ ಸವಿನೆನಪು ದೂರದ ಅಂತರ ತಗ್ಗಿಸಿದೆ.
ಈಗ ಪ್ರೀತಿಯ ಗಿಡ ಹೂ ಬಿಟ್ಟಿದೆ. ನನ್ನ ಮುಡಿ ಸೇರಬೇಕೆಂದು ಬಯಸಿದೆ. ಮೋಡದ ಮರೆಯಲ್ಲಿ ಚಂದಿರನ ಕಂಡಾಗ ಕದ್ದು ಮುಚ್ಚಿ ಆಡಿದ ಪ್ರೀತಿಯ ಆಟ ನೆನಪಾಗುತ್ತಿದೆ. ತಾರೆಗಳು ನಗುವಾಗೆಲ್ಲ ನಕ್ಷತ್ರಗಳ ಸಾಲಲ್ಲಿ ನಿಂತು ನೀನೇ ನೋಡಿ ನಕ್ಕಂತೆ ಅನಿಸುತ್ತದೆ. ನಿನ್ನ ದನಿ ಕೇಳಿದರೆ ಸಾಕು ಎದೆಯಲ್ಲಿ ಶೃಂಗಾರದ ತನನ ಸರಸದ ಜನನ ಶುರುವಾಗುತ್ತದೆ. ಏಳೇಳು ಜನುಮಕ್ಕೂ ನೀನೇ ಬೇಕೆನ್ನುವ ಗೆಳತಿ ನಾನು. ಹೇಳದೇ ಉಳಿದ ಮಾತು ಎದೆಯಲ್ಲಿ ಸಾಕಷ್ಟಿದೆ. ಅಂದದ ಅಧರಗಳ ಒಡೆಯ ಚಂದದ ನಗುವಿನ ಚಂದಿರ ಬೇಗ ಬಂದು ಬಾಳು ಬೆಳಗು ಬಾರಾ. ಅಪ್ಪಟ ಚಿನ್ನಕ್ಕಿಂತ ಅಸಲಾದ ಗುಣ ನಿನ್ನದು. ಬಂಗಾರದ ಗುಣವಂತನಿಗೆ ಸಿಂಗಾರಿಯ ಸೊಬಗು ಸವಿಯಲು ಸುವರ್ಣಾವಕಾಶವಿದು. ಎದೆಯ ಕದ ತೆರೆದಿದೆ ಮನದ ವೀಣೆ ಮೀಟಿಯಾಗಿದೆ. ಅರ್ಧಕ್ಕೆ ನಿಲ್ಲಿಸಿದ ದೇಹ ವೀಣೆಯ ಮಿಡಿತವನು ಜೀವ ವೀಣೆಯಾಗಿ ಜೀವನ ಪೂರ್ತಿ ನುಡಿಸುವ ಅವಕಾಶಕ್ಕೆ ಈಗ ಕಾಲ ಕೂಡಿ ಬಂದಿದೆ. ನನ್ನಪ್ಪನ ಒಪ್ಪಿಗೆ ಸಿಕ್ಕಾಗಿದೆ. ಇನ್ನೇನಿದ್ದರೂ ಕಾದಿದೆ ಶುಭ ಗಳಿಗೆ ಕೆಂಪು ಕೆನ್ನೆಗೆ, ಜೇನ ಅಧರಕೆ, ಕೊಡು ನೀ ಕಾಣಿಕೆ, ಸಿಹಿ ಅಪ್ಪುಗೆಗೆ ಪ್ರಥಮ ರಾತ್ರಿಯ ಶುಭದೊಸುಗೆಗೆ. ಬಂದು ಬಿಡು ಪ್ರವಾಹದಂತೆ ಇಷ್ಟು ದಿನದ ವಿರಹ ತೊಯ್ದು ಹೋಗಲಿ ಒಮ್ಮೆಲೇ.
ಇಂತಿ ನಿನ್ನ ಅರ್ಧಾಂಗಿ
ಶುಭಾಂಗಿ