spot_img
spot_img

ಸಾಹಿತ್ಯ ಚಿಂತಕರ ಚಾವಡಿಯ ವಾರ್ಷಿಕೋತ್ಸವ; ಸಂತಸದಲ್ಲಿ ಸಂಪನ್ನವಾಯಿತು ಈ ದಿನ… ಸಂಭ್ರಮಿಸಿತು ಹೃನ್ಮನ…

Must Read

- Advertisement -

ಮೊನ್ನೆ ಭಾನುವಾರ 02.04.23 ರಂದು ಶಿರಸಿಯ ನೆಮ್ಮದಿ ಕುಟೀರದ ನೂತನ ರಂಗಧಾಮದಲ್ಲಿ, ಸಾಹಿತ್ಯ ಚಿಂತಕರ ಚಾವಡಿಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವರ್ಣಮಯ ಸಾಹಿತ್ಯ-ಸಾಂಸ್ಕೃತಿಕ ಸಮಾರಂಭ ಹಲವು ಚಿರಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ಸಾಹಿತ್ಯಿಕ ಸಹೃದಯರ ಸಮಾಗಮ, ಅಕ್ಷರಲೋಕದ ದಿಗ್ಗಜರ ಸಂಗಮ, ಕಾವ್ಯಬಂಧುಗಳ ಸಂಭ್ರಮ, ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ಗೀತ ಗಾಯನ, ನರ್ತನ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ರಂಗಧಾಮದಲ್ಲಿ ನವರಂಗು ಚೆಲ್ಲಿ, ನವ್ಯ ಸಂಚಲನ ಸೃಷ್ಟಿಸಿತು.

ವೇದಿಕೆಯಲ್ಲಿದ್ದ ಸಕಲರನ್ನು ಹೆಸರಿಸುತ, ಪ್ರಾಸಬದ್ದವಾಗಿ ರಚಿಸಿ ಸುಶ್ರಾವ್ಯವಾಗಿ ಹಾಡಿದ ಎಸ್.ಎಂ.ಹೆಗಡೆಯವರ ವಿಶಿಷ್ಟ ಸ್ವಾಗತಗೀತೆಯೊಂದಿಗೆ ವಿನೂತನವಾಗಿ ಆರಂಭಗೊಂಡ ಸಮಾರಂಭಕ್ಕೆ, ಚಾವಡಿಯ ಸಾಹಿತ್ಯಭೀಷ್ಮ ಎಸ್.ಎಸ್.ಭಟ್ಟರ ಅಮೋಘ ಪ್ರಸ್ತಾವಿಕ ವಿಶೇಷ ಮೆರಗನ್ನು ನೀಡಿತು. ಸೂಜಿಗಲ್ಲಿನಂತಹ ವ್ಯಕ್ತಿತ್ವದ ದಿವಸ್ಪತಿ ಭಟ್ಟರ ಆಶಯ ನುಡಿಗಳು, ಸಾಹಿತ್ಯ ಬಳಗದ ಮುಂದಿನ ನಡೆಗಳ ದಿಕ್ಸೂಚಿಯಂತಿತ್ತು. ಸಮಾರಂಭ ಉದ್ಘಾಟಕರಾದ ಹಿರಿಯ ಪತ್ರಕರ್ತ ಜಯರಾಮ್ ಹೆಗ್ಡೆಯವರ ಸಮಯೋಚಿತ ಮಾತುಗಳು, ಮಹಾಬಲ ವತ್ತು ಇನ್ನಿತರ ಮುಖ್ಯ ಅತಿಥಿಗಳ ಸಂದರ್ಭೋಚಿತ ನುಡಿಗಳು ವೇದಿಕೆಯ ಘನತೆಯನ್ನು ಇಮ್ಮಡಿಗೊಳಿಸಿದವು. ಸಮಾರಂಭದ ಸರ್ವಾಧ್ಯಕ್ಷರಾದ ಪ್ರಖ್ಯಾತ ಹಿರಿಯ ಸಾಹಿತಿ ಡಿ.ಎಸ್.ನಾಯ್ಕರ ಅಧ್ಯಕ್ಷೀಯ ಭಾಷಣ ಕಳಶಪ್ರಾಯದಂತಿತ್ತು.

- Advertisement -

ದಿವಸ್ಪತಿ ಭಟ್ಟರ ‘ಅಂತರಾಳದಿಂದ’, ಯಮುನಾ ಹೆಗಡೆಯವರ ‘ಶನಿಕಥಾ’, ಜಗದೀಶರ ‘ಜಗ ಜೀವನ’,  ಮಹೇಶರವರ ‘ಇಳೆಯೊಳಗಿನ ಮೌನ’ ಲೋಕಾರ್ಪಣೆಗೊಂಡವು, ಕೃತಿ ಪರಿಚಯಿಸಿ ಮಾತನಾಡಿದ ಮಹೇಶ್ ಕುಮಾರ್ ಹನ್ಕೆರೆ, ಪೂರ್ಣಿಮ ಹೆಗಡೆ, ಪ್ರಕಾಶ್ ಭಾಗ್ವತ್ ಮತ್ತು  ಎನ್.ಎಸ್.ಭಟ್ ಅವರ ನುಡಿಗಳು ಕೃತಿಗಳ ಮೌಲ್ಯವನ್ನು ನೂರ್ಮಡಿಸಿ, ಕುತೂಹಲ ಹೆಚ್ಚಿಸಿ, ಕೇಳುಗರನ್ನು ಕೃತಿ ಓದಲು ಪ್ರೇರೇಪಿಸುವಂತಿತ್ತು. ಶ್ರೀಮತಿ ಸುಜಾತರವರ ಚೆಂದದ ನಿರೂಪಣೆ ಸಮಾರಂಭ ಮತ್ತಷ್ಟು ಕಳೆಗಟ್ಟುವಂತೆ ಮಾಡಿತು.

ಇಂತಹ ಮಹತ್ವಪೂರ್ಣ ಮತ್ತು ಔಚಿತ್ಯಪೂರ್ಣ ಸಮಾರಂಭಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಿ, ನಾಲ್ಕು ನುಡಿಗಳಾಡಲು ಅವಕಾಶವಿತ್ತ, ಅಕ್ಕರಾತಿಥ್ಯದ ಸವಿಯೊಂದಿಗೆ, ಪ್ರೀತಿ ವಾತ್ಸಲ್ಯದ ಮಹಾಪೂರವನ್ನೇ ಹರಸಿದ ಎಸ್.ಎಸ್.ಭಟ್ ಹಾಗೂ ಸಮಸ್ತ ಆಯೋಜಕರಿಗೂ ನನ್ನ ಅಭಿಮಾನಪೂರ್ವಕ ಪ್ರಣಾಮಗಳು. ವಾಟ್ಸಾಪು ಮತ್ತು ಮುಖಪುಸ್ತಕದಲ್ಲಿ ಅಕ್ಷರಗಳಿಂದ ಪರಿಚಿತರಾಗಿ ಆತ್ಮೀಯರಾಗಿದ್ದ ಹಲವಾರು ಸಹೃದಯರನ್ನು ಮುಖಾಮುಖಿಯಾಗಿದ್ದು ಅತೀವ ಸಂತಸವಾಯಿತು. ಭೇಟಿಯಾಗಿ ಅಮಿತ ಸಂಭ್ರಮ ನೀಡಿದ ಸಕಲ ಕವಿಹೃದಯಗಳಿಗೂ, ಸಾಹಿತ್ಯಿಕ ಮನಸುಗಳಿಗೂ ನಾನು ಆಬಾರಿ.

- Advertisement -

ನನ್ನೀ ಅಕ್ಷರಗಳಿಗೆ ಪ್ರೋತ್ಸಾಹದ ಅಮೃತ ತುಂಬಿ, ನುಡಿಗಳಿಗೆ ಚೈತನ್ಯದ ಕಾಂತಿ ತುಂಬಿ, ಎಲ್ಲರೂ ಆದರಿಸುವಂತೆ ಮಾಡುತ್ತಿರುವುದು ನಿಮ್ಮ ಹಾರೈಕೆ. ಅನನ್ಯ ಅವಕಾಶಗಳಿಂದ ನಾಡಿನೆಲ್ಲೆಡೆ ನಲಿದಾಡುವಂತೆ ಮಾಡುತ್ತಿರುವುದು ನಿಮ್ಮ ಅಂತಃಕರಣಗಳ ಹರಕೆ. ಅಡಿಗಡಿಗೂ ಬೆನ್ತಟ್ಟಿ ನಡೆಸುತ್ತಿರುವ ನಿಮಗಿದೋ ಶಿರಸಿಯ ಅಪೂರ್ವ ಕ್ಷಣಗಳ ದೃಶ್ಯಮಾಲಿಕೆ. ಒಪ್ಪಿಸಿಕೊಳ್ಳಿ”.


ಎ.ಎನ್.ರಮೇಶ್.ಗುಬ್ಬಿ.

- Advertisement -
- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group