ಸುಳ್ಳು ಹರಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಗೋಕಾಕ – ಜಮಖಂಡಿ ತಾಲೂಕಿನ ಹೊಸ ಬಬಲಾದಿ ಮಠದ ಬೆಂಕಿ ಮಹಾ ಸಂಸ್ಥಾನ ಮಠದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾರ ಬಂಧನವಾಗಿದೆಯೆಂಬ ವದಂತಿಗಳು ಹರಿದಾಡುತ್ತಿದ್ದು ಅದು ಸುಳ್ಳು ಎಂಬುದಾಗಿ ಗೋಕಾಕದ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಕಿ ಮಠದ ಹೆಸರು ಹಾಳು ಮಾಡಲು ಹಾಗೂ ತಮ್ಮ ದ್ವೇಷವನ್ನು ಹರಡಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಮುತ್ಯಾರ ಬಂಧನವಾಗಿದೆಯೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆಯೆಂದರು.
ಗೋಕಾಕದ ಮಹಾಲಕ್ಷ್ಮಿ ಸೊಸಾಯಿಟಿಯಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿದ್ದು ಆ ಬಗ್ಗೆ ತನಿಖೆ ನಡೆಯುವಾಗ ಮಹಾಲಕ್ಷ್ಮಿ ಸೊಸಾಯಿಟಿಯಿಂದ ದೇಣಿಗೆ ಪಡೆದಿರುವ ಹೊಸ ಬಬಲಾದಿ ಮಠದ ಅಜ್ಜರನ್ನು ವಿಚಾರಣೆಗೆ ಸಹಜವಾಗಿ ಕರೆದಿದ್ದರು. ಮಠ ಮಾನ್ಯಗಳಿಗೆ ಬಂದ ಹಣವನ್ನು ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ, ಅನ್ನ ದಾಸೋಹಕ್ಕಾಗಿ ಬಳಸಿರುತ್ತಾರೆ. ಅದರ ವಿಚಾರಣೆಗೆ ಕರೆದಿದ್ದರು. ಅದರಂತೆ ಸ್ವಾಮೀಜಿಯವರು
ದಿ. ೬.೧.೨೫ ರಂದು, ೧೦.೨.೨೫ ರಂದು ಹಾಗೂ ೨೧.೩.೨೫ ರಂದು ಹಾಜರಾಗಿದ್ದರು. ಇಂದು ಕೂಡ ವಿಚಾರಣೆಗೆ ಅವರು ಗೋಕಾಕಕ್ಕೆ ಬಂದಿದ್ದಾರೆ. ಆದ್ದರಿಂದ ಅವರ ಬಂಧನದ ವದಂತಿ ಸುಳ್ಳಾಗಿದೆ ಎಂದರು.
ಈಗಾಗಲೇ ಯಾರದರೂ ಸ್ವಾಮೀಜಿಯವರ ಬಂಧನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದರೆ ಅದನ್ನು ಡಿಲೀಟ್ ಮಾಡಬೇಕು ಇನ್ನು ಮುಂದೆ ಯಾರದರೂ ಈ ಸುಳ್ಳು ಸುದ್ದಿಯನ್ನು ಹರಡಿದರೆ ಅವರ ಮೇಲೆ ಕಾನೂನು ಕ್ರಮಕ್ಕೆ ನಾವು ಮುಂದಾಗುತ್ತೇವೆ ಎಂದು ವಕೀಲ ಚೌಕಾಶಿ ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಯಲ್ಲಪ್ಪ ದುರದುಂಡಿ ಸೇರಿದಂತೆ ಅನೇಕ ಭಕ್ತರು ಇದ್ದರು.