ಭಾನುವಾರ ಬೆಳಿಗ್ಗೆ ಸುಖಾನಿದ್ರೆಯಲ್ಲಿ ಮಲಗಿದ್ದೆ. ಆರು ಗಂಟೆಗೆ ಮಾಮುಲಿ ರಿಂಗ್ ಟೋನ್ ಮೊಳಗಿತು. ನಿದ್ದೆಗಣ್ಣಿನಲ್ಲೇ ಆಫ್ ಮಾಡಿ ಬಲಗಡೆಗೆ ಹೊರಳಿದೆ. ಮತ್ತೆ ಮೊಬೈಲ್ ರಿಂಗಣಿಸಿತು. ಅತ್ತ ಕಡೆಯಿಂದ ಬಿ.ಎಂ.ನಂದೀಶ್ ಮಾತನಾಡಿ ‘ಅನಂತರಾಜು ಚಿತ್ರದುರ್ಗಕ್ಕೆ ನಾವು ಮೂರು ಮಂದಿ ಕಾರಿನಲ್ಲಿ ಹೋಗುತ್ತಿದ್ದೇವೆ. ನೀವು ಬರ್ತೀರಾ..’ಎಂದರು. ಚಿತ್ರದುರ್ಗದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ರಾಜ್ಯಮಟ್ಟದ ಸಮಾವೇಶದಲ್ಲಿ ಸಿಂಹಧ್ವನಿ ಪತ್ರಿಕೆಯ ಸಂಪಾದಕರು ನಂದೀಶ್ ಪ್ರಶಸ್ತಿ, ಸನ್ಮಾನಕ್ಕೆ ಆಯ್ಕೆ ಆಗಿದ್ದರು. ಬರುವುದಾದರೇ ಕೂಡಲೇ ಹೊರಡಿ, ಅರಸೀಕೆರೆಗೆ ಬಸ್ಸಿನಲ್ಲಿ ಹೋಗೋಣ. ಅಲ್ಲಿಂದ ಪತ್ರಕರ್ತ ಪುಟ್ಟಪ್ಪನವರ ಕಾರಿನಲ್ಲಿ ಚಿತ್ರದುರ್ಗಕ್ಕೆ ಹೋಗುವ,, ನಾನು ನಿದ್ರೆ ಮಂಪರಿನಲ್ಲಿ ಏನು ಮಾಡುವುದೆಂದು ಯೋಚಿಸುತ್ತಿರಲು ‘ಹೋಗ್ತಾ ದಾರಿಯಲ್ಲಿ ದೇವಸ್ಥಾನಗಳ ದರ್ಶನ ಮಾಡೋಣ ಎಂದಾಗ ಸರಿ ಎಂದು ಎದ್ದವನೇ ಸ್ನಾನ ಮಾಡಿ ಪಾದಯಾತ್ರೆಯಲ್ಲಿ ಎನ್.ಆರ್.ಸರ್ಕಲ್‍ಗೆ ಹೊರಟೆ. ಅಲ್ಲಿಗೆ ಸ್ಕೂಟರ್‍ನಲ್ಲಿ ಬಂದು ನನ್ನನ್ನು ಪಿಕ್ ಮಾಡಿ ರೈಲ್ವೆ ಸ್ಟೇಷನ್ ತಲುಪಿದೆವು. ಅಲ್ಲಿಗೆ ನಂದೀಶ್ ಕ್ಲಾಸ್‍ಮೆಟ್ ನಾರಾಯಣಸ್ವಾಮಿ ಜೊತೆಯಾದರು. ನಾವು ಮೂವರು 9.30ಕ್ಕೆ ಅರಸೀಕೆರೆಯಲ್ಲಿ ಇಳಿದು ಹೋಟೆಲ್‍ನಲ್ಲಿ ಇಡ್ಲಿ ತಿಂದು ಕಾಫಿ ಕುಡಿದೆವು. ಪುಟ್ಟಪ್ಪನವರು ಮೇಟಿಕುರ್ಕೆಯಿಂದ ಬರುವವರೆಗೆ ವೈಟ್ ಮಾಡಲು ಅರಸೀಕೆರೆಯ ಶಿವಾಲಯಕ್ಕೆ ಭೇಟಿ ಇತ್ತೆವು. ಅಲ್ಲಿಂದ ಕಾರಿನಲ್ಲಿ ನಮ್ಮ ನಾಲ್ವರ ಪ್ರಯಣ ಮುಂದುವರೆದು ಬೆಲಗೂರು ತಲುಪಿದೆವು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಇತರೆ ನವ್ಯ ದೇವಾಲಯಗಳು ಹಿಂದೂ ಧಾರ್ಮಿಕತೆಯನ್ನು ಪ್ರತಿಬಿಂಬಿಸಿವೆ. ಹೊಸದುರ್ಗದಿಂದ 23 ಕಿ.ಮೀ. ಅರಸೀಕೆರೆಯಿಂದ 49 ಕಿ.ಮೀ ದೂರವಿರುವ ಶ್ರೀ ಕ್ಷೇತ್ರ ಬೆಲಗೂರು ಶ್ರೀ ಬಿಂದು ಮಾಧವ ಶರ್ಮಾರವರ ಧಾರ್ಮಿಕ ಆಚರಣೆ, ಅಭಿವೃದ್ಧಿ ಕಾರ್ಯಗಳು, ಪವಾಡ ಕಥೆಗಳಿಂದ ಪ್ರಸಿದ್ಧಿ ಹೊಂದಿದೆ ಇಲ್ಲಿ ಹಲವು ದೇಗುಲಗಳಿವೆ. ಮಾರ್ಗಸೂಚಿ ಫಲಕದಲ್ಲಿ ಇದ್ದಂತೆ ವೀರಪ್ರತಾಪ ಆಂಜನೇಯ ಸ್ವಾಮಿ, ಲಕ್ಷ್ಮೀನಾರಾಯಣ ಸ್ವಾಮಿ, ಮಹಾಲಕ್ಷ್ಮೀ ದೇವಿ, ಗುರು ಚೈತನ್ಯ ಮಂದಿರ, ಗುರು ನಿವಾಸ, ಅನ್ನಪೂಣೇಶ್ವರಿ ಭೋಜನ ಶಾಲಾ, ಅರುಂಧತೀ ವಶಿಷ್ಟ ಯಾಗ ಶಾಲೆ, ಭಾರತೀ ತೀರ್ಥ ಭವನ, ರಾಮ ಮಾನಸ ಮಂದಿರ, ಧ್ಯಾನ ಮಂದಿರ, ಶ್ರೀ ಬಿಂದುಮಾಧವ ರಥ ಶಾಲೆ ಹೀಗೆ ಅಭಿವೃದ್ಧಿ ಕಾರ್ಯಗಳು ಕಾಲಕಾಲಕ್ಕೆ ಸಾಗಿವೆ.
ಇಲ್ಲಿನ ವೀರ ಪ್ರತಾಪ ಆಂಜನೇಯ ದೇವಾಲಯವನ್ನು ಸುಮಾರು 750 ವರ್ಷಗಳ ಹಿಂದೆ ಋಷಿ ವ್ಯಾಸರಾಯರು ನಿರ್ಮಿಸಿದರೆಂದು ಹೇಳಿದೆ. ಶ್ರೀ ಬಿಂದು ಮಾಧವ ಶರ್ಮಾರ ಕುಟುಂಬವು ಈ ದೇವಾಲಯವನ್ನು ಮೊದಲಿನಿಂದಲೂ ಪೂಜಿಸಿಕೊಂಡು ಬಂದಿದೆ. ಕ್ಷೇತ್ರದ ಭಗವಾನ್ ಹನುಮಾನ್, ಶಿವ, ವಿಷ್ಣು ದೇಗುಲಗಳನ್ನು ನವೀಕರಿಸಿ ಜೀರ್ಣೋದ್ಧಾರ ಮಾಡಿದ್ದಾರೆ ಸ್ವಾಮೀಜಿಯವರು. ಇಲ್ಲಿಗೆ ಬರುವ ಭಕ್ತರಿಗೆ ತಂಗಲು, ವಿಶ್ರಾಂತಿ ಪಡೆಯಲು ವಿಶಾಲ ಕೊಠಡಿಗಳಿವೆ. ಪ್ರತಿ ಪೂರ್ಣಿಮೆ ದಿನ ಹೋಮ ಮಾಡಿ ಭಕ್ತರಿಗೆ ಅನ್ನ ಸಂತರ್ಪಣೆ ಇರುತ್ತದೆ. ಇಲ್ಲಿಗೆ ಕೆಲವು ಬಾರಿ ಹೋಗಿ ಬಂದಿದ್ದ ಪುಟ್ಟಪ್ಪನವರು ನಮ್ಮನ್ನು ಊಟದ ಹಾಲ್‍ಗೆ ಕರೆದೊಯ್ದರು. ಅಲ್ಲಿ ಫಲಹಾರ ಸೇವಿಸಿದರು. ಹಾಲ್‍ನಲ್ಲಿ ಹಾಗೇ ತಿರುಗುತ್ತಾ ಕಿಟಕಿಯ ಆಚೆ ನೋಡಲು ಅಲ್ಲಿ ಕೆರೆಯಲ್ಲಿ ಕುರಿ ಮಂದೆ ನೀರಿಗಾಗಿ ಧಾವಿಸಿದ್ದವು. ದೇವಾಲಯವೊಂದರಲ್ಲಿ ಸಮೂಹ ಭಜನೆ ನಡೆಯುತ್ತಿತ್ತು.
ಅವಧೂತ ಸದ್ಗುರು ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರು 30 ಏಪ್ರಿಲ್ 1947ರಂದು ಜನಿಸಿದರು. ಹುಟ್ಟಿದ 7ನೇ ದಿನಕ್ಕೆ ತನ್ನ ತಂದೆಯನ್ನು ಕಳೆದುಕೊಂಡರು. ಅವರ ಉತ್ಕಟ ಭಕ್ತಿ ರಾಮಾಯಣದ ನಿರೂಪಕರಾಗಿದ್ದ ಅವರ ಚಿಕ್ಕಮ್ಮನಿಂದ ಬಲಗೊಂಡಿತು. ಶೌರ್ಯ ಧೈರ್ಯ ಭಕ್ತಿಯ ಪ್ರತಿರೂಪವಾದ ಭಗವಾನ್ ಆಂಜನೇಯನ ಸೇವೆ ಮಾಡುವ ಅವರ ಪ್ರೀತಿಯು ಹೆಚ್ಚು ತೀವ್ರವಾಯಿತು. 5ನೇ ತರಗತಿಗೆ ಓದು ನಿಂತಿತು. ಲಕ್ಷ್ಮಿನಾರಾಯಣ ಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳ ಪ್ರಧಾನ ಅರ್ಚಕರಾಗಿದ್ದ ಅವರ ಚಿಕ್ಕಪ್ಪನಿಗೆ ಸಹಾಯ ಮಾಡುತ್ತಾ ಧರ್ಮನಿಷ್ಟೆ ಭಕ್ತಿ, ಧಾರ್ಮಿಕ ಶ್ರದ್ಧೆಗಳೊಂದಿಗೆ ಅವರ ಒಡನಾಟವು ಏಕ ಮನಸ್ಸಿನಿಂದ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿತು. 27-11-2020ರಂದು ಇಹಲೋಕ ತ್ಯಜಿಸುವ ಮುನ್ನ ಶ್ರೀ ವಿಜಯ ಮಾರುತಿ ಶರ್ಮಾ ಅವರನ್ನು ಉತ್ತರಾಧಿಕಾರಿ ಪೀಠಾಧಿಪತಿಯಾಗಿ ನೇಮಿಸಿದರು. ಅವಧೂತ ಸದ್ಗುರುಗಳು ದೇವಸ್ಥಾನದಲ್ಲಿ ದಿನನಿತ್ಯದ ಪೂಜೆ ವಿಧಿವಿಧಾನಗಳನ್ನು ನಡೆಸುತ್ತಿದ್ದ ಪುರೋಹಿತ ವರ್ಗಕ್ಕೆ ಸೇರಿದ್ದು ತಮ್ಮ 19ನೇ ವಯಸ್ಸಿನಿಂದಲೇ ದೈವಿಕ ಮಾರ್ಗದರ್ಶನ ನೀಡುತ್ತಾ ಬಂದವರು. ಹಲವು ವರ್ಷ ಜನ ಕಲ್ಯಾಣಕ್ಕಾಗಿ ಶ್ರಮಿಸಿದವರು. ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಪ್ರತಿಷ್ಠಾಪನೆಗೊಂಡ ಕೆಲವು ಆಂಜನೇಯ ದೇವಸ್ಥಾನಗಳ ಉದ್ಘಾಟನೆಗೆ ಬಂದು ಹೋಗಿದ್ದರು. ಶ್ರೀ ರಾಮ ಮಾನಸ ಮಂದಿರವನ್ನು 1998ರಲ್ಲಿ, ಅನ್ನಪೂರ್ಣೇಶ್ವರಿ ಭೋಜನ ಶಾಲೆಯನ್ನು 2010ರಲ್ಲಿ, ಭಾರತೀ ತೀರ್ಥ ಸಭಾ ಭವನವನ್ನು 2017ರಲ್ಲಿ ಮತ್ತು ಮಾರುತಿ ಪೀಠವನ್ನು 2019 ಸ್ಥಾಪಿಸಿದ್ದಾರೆ. ಶ್ರೀ ಕ್ಷೇತ್ರದ ಎಲ್ಲಾ ದೇವತೆಗಳ ದೈನಂದಿನ ಪೂಜೆ ಪ್ರತಿನಿತ್ಯ ರಾಮ ಭಜನೆ, ಆಂಜನೇಯನ ಮಾಸಿಕ ಉತ್ಸವ ಮತ್ತು ಹುಣ್ಣಿಮೆಯಂದು ಹೋಮಗಳು ನಡೆಯುತ್ತವೆ. ಡಿಸೆಂಬರ್ ಮಾಹೆಯಲ್ಲಿ ಹನುಮ ಜಯಂತಿ ಮತ್ತು ದತ್ತ ಜಯಂತಿ ಆಚರಣೆ ವಿಜೃಂಭಣೆಯಿಂದ ಜರುಗುತ್ತದೆ. ಪುಟ್ಟಪ್ಪನವರು ಈಗಿನ ಪೀಠಾಧಿಪತಿಗಳನ್ನು ಹುಡುಕಿ ಹೊರಟರು. ಅಲ್ಲಿ ಒಂದು ದೇವಸ್ಥಾನದಲ್ಲಿ ಸ್ವಾಮೀಜಿಯವರು ಭೇಟಿಯಾಗಿ ಕೆಲಹೊತ್ತು ಅವರೊಂದಿಗೆ ಮಾತನಾಡಿದೆವು. ನೀವು ಪತ್ರಕರ್ತರು ಇನ್ನೊಮ್ಮೆ ದೇವಸ್ಥಾನಕ್ಕೆ ಬನ್ನಿ, ಸವಿಸ್ತಾರವಾಗಿ ಕ್ಷೇತ್ರದ ಮಹಿಮೆ ಬಗ್ಗೆ ತಿಳಿಸುವ ಎಂದರು. ಆಗ ಅಲ್ಲಿಗೆ ಯಾವುದೋ ಊರಿನಿಂದ ಕೆಲವು ಭಕ್ತರು ದೇವರ ಮೂರ್ತಿಯೊಂದನ್ನು ತಂದಿದ್ದರು.
ಪುಟ್ಟಪ್ಪನವರು ಅಲ್ಲಿ ಮುಂದೆ ಕನ್ನಡ ತೇರಿದೆ ನೋಡ್ತಾ ಇರಿ ನಾನು ಅಲ್ಲಿಗೆಯೇ ಕಾರು ತರ್ತೇನೆ ಎಂದರು. ಕನ್ನಡ ತೇರಿನಲ್ಲಿ ಅಳವಡಿಸಿದ್ದ ಹಲವು ಮಹನೀಯರ ಭಾವಚಿತ್ರಗಳ ಮರದ ಕೆತ್ತನೆ ಕೆಲಸಗಳು ಸಹಜ ನೈಜತೆಯಲ್ಲಿ ಆಕರ್ಷಿಸಿದವು. ರಥದ ಮಧ್ಯದ ಸಾಲಿನಲ್ಲಿ ಗಾಂಧೀಜಿಯಾದಿಯಾಗಿ ಸ್ವಾತಂತ್ರ್ಯ ಹೋರಾಟಗಾರರು, ವಾಜಪೇಯಿ ಸೇರಿದಂತೆ ಭಾರತದ ಪ್ರಧಾನಿಗಳು, ಕರ್ನಾಟಕ ಮುಖ್ಯಮಂತ್ರಿಗಳು, ಕುವೆಂಪು ಒಳಗೊಂಡಂತೆ ಕನ್ನಡ ಕವಿ ಸಾಹಿತಿಗಳು, ರಾಜಕುಮಾರ್ ಒಳಗೊಂಡು ಕನ್ನಡ ಚಿತ್ರರಂಗದ ಮೇರು ನಟರು. ಹೀಗೆ ನೋಡುತ್ತಾ ತೇರನ್ನು ಒಂದು ಸುತ್ತು ಸುತ್ತಿದೆವು. ನಾವು ಪೋಟೋಗಳಲ್ಲಿ ನೋಡಿರುವ ಚಿತ್ರಗಳು ಯಥಾಸ್ಥಿತಿ ಯಥಾವತ್ತಾಗಿ ಪ್ರತಿಬಿಂಬಿಸಿ ನೋಡಿದ ತಕ್ಷಣವೇ ಇಂತವರೆಂದು ತಿಳಿಯುವಷ್ಟು ಸಹಜವಾಗಿತ್ತು. ಬೃಹತ್ ತೇರಿನ ಸುಭದ್ರತೆಯ ದುರಸ್ತಿ ಕೆಲಸ ನಡೆಯುತ್ತಿತ್ತು. ತೇರುಮನೆ ಎದುರಿಗೆ ನಿರ್ಮಿಸಿರುವ ಶ್ರೀ ಶಿವಪ್ರಿಯ ಶನೇಶ್ವರಸ್ವಾಮಿ ದೇವಸ್ಥಾನ ಮುಂಭಾಗ ಶನಿಯ ವಾಹನ ಕಾಗೆಯ ಮೂರ್ತಿ ಶಿಲ್ಪ ಇಡೀ ದೇವಸ್ಥಾನ ನವ್ಯತೆಯಲ್ಲಿ ಶೋಭಿಸುತ್ತಿತ್ತು. ಇಲ್ಲಿಯ ದೇವಸ್ಥಾನಗಳ ಗೋಪುರಗಳಲ್ಲಿ ವರ್ಣ ವಿನ್ಯಾಸಗಳಲ್ಲಿ ವಿವಿಧ ದೇವರ ಮೂರ್ತಿಗಳನ್ನು ಅಳವಡಿಸಿದ್ದು ಸ್ವಾಗತ ಕಮಾನುಗಳ ಆರ್ಚ್‍ಗಳಿಂದ ಬೆಲಗೂರು ಕಂಗೊಳಿಸುತ್ತಿದೆ. ಕಾರು ಮುಂದೆ ಹರಿದಂತೆ ಮತ್ತೆ ಒಂದಿಷ್ಟು ದೇವಸ್ಥಾನಗಳನ್ನು ಕಾರಿನಲ್ಲೇ ವೀಕ್ಷಿಸುತ್ತಾ ಹೊಸದುರ್ಗದ ಕಡೆಗೆ ನಮ್ಮ ಪ್ರಯಾಣ ಮುಂದುವರೆಯಿತು.
—
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.