ಸರ್ಕಾರ ಹಾಗೂ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ
ಬೀದರ – ರಾಜ್ಯದಲ್ಲಿ ದಲಿತರ ಕಲ್ಯಾಣ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದೆಲ್ಲ ಭೋಂಗು ಬಿಡುವ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರೆಲ್ಲ ನಾಚಿಕೆಯಿಂದ ತಲೆ ತಗ್ಗಿಸಲೇಬೇಕಾದ ಘಟನೆಯೊಂದು ಭಾಲ್ಕಿ ತಾಲೂಕಿನ ಧನ್ನೋರ ಗ್ರಾಮದಲ್ಲಿ ನಡೆದಿದೆ.
ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ನೋಡಲೇಬೇಕಾದ ಈ ಘಟನೆ ನಡೆದಿದ್ದು ವಿರೋಧ ಪಕ್ಷ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕ್ಷೇತ್ರದಲ್ಲಿ.
ಈ ಗ್ರಾಮದಲ್ಲಿ ಯಾರಾದ್ರು ಸತ್ತರೆ ಕದ್ದು ಮುಚ್ಚಿ ಶವ ಸಂಸ್ಕಾರ ಮಾಡಬೇಕಾದ ಕರ್ಮ ದಲಿತರದ್ದಾಗಿದೆ. ಅದೂ ಇಂಥ ಆಧುನಿಕ ಯುಗದಲ್ಲಿ ! ಮಾತೆತ್ತಿದರೆ ನಾವು ದಲಿತರ ಉದ್ಧಾರ ಮಾಡುತ್ತೇವೆ ಎಂದು ಉದ್ದುದ್ದ ಭಾಷಣ ಬಿಗಿಯುವ ಎಲ್ಲಾ ರಾಜಕೀಯ ನಾಯಕರು ಇಂದು ತಲೆ ತಗ್ಗಿಸಬೇಕಾಗಿದೆ. ಧನ್ನೋರ ಗ್ರಾಮದಲ್ಲಿ ಸತ್ತವರನ್ನು ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಇಲ್ಲದೆ ಗ್ರಾಮಸ್ಥರು ಕದ್ದು ಮುಚ್ಚಿ ಅರಣ್ಯ ಪ್ರದೇಶದಲ್ಲಿ ಶವ ಸುಟ್ಟು ಹಾಕಿದ್ದಾರೆ.
ಇದೇ ದಿ 16 ರಂದು ನಿಧನ ಹೊಂದಿದ ಶಿವರಾಜ್ ಬಾಲಾಜಿ ವಾಘಮಾರೆ ( 45 ) ಎಂಬ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ವಂತ ಜಾಗವಿಲ್ಲದೆ ಇದ್ದಿದ್ದರಿಂದ ಭಜನೆ ಮಾಡುತ್ತಾ ಇಡೀ ದಿನ ಮೃತದೇಹ ಇಟ್ಟುಕೊಂಡು ರಾತ್ರಿಯಾದ ಬಳಿ ಕದ್ದು ಮುಚ್ಚಿ ಸುಟ್ಟು ಹಾಕಿದ್ದಾರೆ ಗ್ರಾಮಸ್ಥರು.
ಸುಮಾರು 120 ದಲಿತ ಕುಟುಂಬಗಳು ಇದ್ದರೂ ಈ ಗ್ರಾಮದ ದಲಿತರ ದುಸ್ಥಿತಿ ಯಾರಿಗೂ ಬೇಡವಾಗಿದೆ. ಸಂಜೆಯವರೆಗೆ ಕಾದು ರಾತ್ರಿ ಅರಣ್ಯ ಪ್ರದೇಶದಲ್ಲಿ ಕದ್ದು ಮುಚ್ಚಿ ಶವ ಸುಟ್ಟು ಹಾಕಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದೆ.
ಇನ್ನು ಕೆಲವರಿಗೆ ಮನೆಯ ಅಂಗಳವೇ ಸ್ಮಶಾನ ಜಾಗವಾಗಿದೆಯೆಂದರೆ ಈ ಕ್ಷೇತ್ರದ ನಾಯಕರನ್ನು ಪಡೆದ ಜನರು ಎಷ್ಟೊಂದು ಪುಣ್ಯ ಮಾಡಿರಬೇಕು !
ಅದೂ ಅಲ್ಲದೆ ಇದು ಕಳೆದ 30 ವರ್ಷಗಳಿಂದ ಕದ್ದು ಮುಚ್ಚಿ ಶವ ಸಂಸ್ಕಾರ ಮಾಡುತ್ತಿದ್ದರೂ ಸ್ಪಂದಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದಾರೆಂದರೆ ಈ ಕ್ಷೇತ್ರದ ರಾಜಕೀಯ ನಾಯಕರು ದಲಿತರನ್ನು ಯಾವ ತೆರದಲ್ಲಿ ಕತ್ತಲೆಯಲ್ಲಿ ಇಟ್ಟಿದ್ದಾರೆಂಬುದು ಅರಿವಾಗುತ್ತದೆ. ಇಂಥ ಪ್ರಕರಣಗಳು ಬೆಳಕಿಗೆ ಬಾರದಿರುವುದು ಒಂದು ಅಚ್ಚರಿಯ ಸಂಗತಿಯೇ ಸರಿ.
ವರದಿ: ನಂದಕುಮಾರ ಕರಂಜೆ, ಬೀದರ