spot_img
spot_img

ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ !

Must Read

- Advertisement -

ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. ಇದನ್ನು BUTTER TREE ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇಪ್ಪೆ ಮರ ಎಂದು, ತಮಿಳಿನಲ್ಲಿ ಇಲ್ಲಿಪ್ಪೆ, ತೆಲುಗಿನಲ್ಲಿ ಇಪ್ಪಿ ಎಂದು, ಹಿಂದಿಯಲ್ಲಿ ಮೊಹ್ವ, ಸಂಸ್ಕ್ರತದಲ್ಲಿ ಮಧೂಕ, ಮಂಗಳೂರು ಮತ್ತು ಉಡುಪಿ ಆಸುಪಾಸಿನಲ್ಲಿ ‘ನಾನಿಲ್ ಮರ’ ಎಂದೂ ಕರೆಯುತ್ತಾರೆ. ಮೋಹ, ಮಹಲ, ಇಲುಪ, ಪೂನಮ, ಮಹುವಾ ಎಂದೂ ನಾನಾ ಭಾಷೆಗಳಲ್ಲಿ ಕರೆಯುವುದುಂಟು. ಇದರ ವೈಜ್ಞಾನಿಕ ಹೆಸರು ‘ಬ್ಯಾಸ್ಸಿಯ ಲ್ಯಾಟಿಫೂಲಿಯಾ’. ಇದು ‘ಸಪೋಟೇಸಿ’ ಕುಟುಂಬ ವರ್ಗಕ್ಕೆ ಸೇರಿದೆ.

ಇದು ಎಲೆ ಉದುರುವ ಮರದ ಜಾತಿಗೆ ಸೇರಿದೆ. ಸುಮಾರು 12 ರಿಂದ 20 ಮೀ ಎತ್ತರ ಬೆಳೆಯುವ ಇಪ್ಪೆ ಮರ, ಒಣ ಹವೆ ಮತ್ತು ತೇವ ಹವೆಯ ಕಾಡುಗಳಲ್ಲಿ ಬಿಡಿ ಬಿಡಿಯಾಗಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ಕಾಡು ಹೊಳೆಯ ಸಮೀಪದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೊಗಟೆ ತಿಳಿ ಕಪ್ಪು ಅಥವಾ ಬೂದು ಬಣ್ಣದಿಂದ ಕೂಡಿದ್ದು, ಗೆಲ್ಲುಗಳು ಚದುರಿ ಚದುರಿದಂತೆ ಇದ್ದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ.

ಚಳಿಗಾಲ ಬಂತೆಂದರೆ ಈ ಮರ ವಿಶಿಷ್ಟವಾದ ಕಟು ಮಧುರ ಹೂವಿನ ಪರಿಮಳವನ್ನು ಸೂಸುತ್ತದೆ. ನೇರವಾದ ಕಾಂಡದ ಮೇಲೆ ಕೊಂಬೆಗಳು ಮತ್ತು ತುದಿ ಚೂಪಾಗಿರುವ ಎಲೆಗಳು – ಛತ್ರಿಗಳು ಬಿಡಿಸಿಟ್ಟಂತೆ ಹರಡಿಕೊಂಡಿರುತ್ತದೆ. ವರ್ಷಕ್ಕೊಮ್ಮೆ ಎಲೆ ಉದುರುವ ಈ ಮರ, ಹೊಸ ಚಿಗುರು ಬಂದಾಗ ತಾಮ್ರಗೆಂಪು ಬಣ್ಣದಿಂದ ನಳನಳಿಸುತ್ತದೆ. ಈ ಸಮಯದಲ್ಲಿ ಬಸ್ತಾರ್ ನ ಆದಿವಾಸಿಗಳು ಮತ್ತು ಮಧ್ಯಪ್ರದೇಶದ ಗೊಂಡ ಆದಿಮಾಸಿಗಳು ಆ ಮರವನ್ನು ಪೂಜಿಸುತ್ತಾರೆ.
ಹೊಸ ಚಿಗುರು ಮಾಗಿ ಎಲೆ ದಪ್ಪಗಾದ ಕೂಡಲೇ ಮರ ಹೂ ಬಿಡಲು ಆರಂಭಿಸುತ್ತದೆ. ಈ ಹೂಗಳು ಮಾಸಲು ಬಣ್ಣವನ್ನು ಹೊಂದಿದ್ದು, ಕೊಂಬೆಯ ತುದಿಯಲ್ಲಿ ಜೋತು ಬಿದ್ದಿರುತ್ತದೆ. ಈ ಹೂವಿನ ಪುಷ್ಪಪಾತ್ರೆಯ ಭಾಗ ಹಣ್ಣಾಗಿ ತಿನ್ನಲು ರುಚಿಯಾಗಿರುತ್ತದೆ. ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಿಗೂ ಈ ಹಣ್ಣು ಬಹಳ ಪ್ರಿಯ. ಇಪ್ಪೆ ಹಣ್ಣಿನಿಂದ ಆದಿವಾಸಿಗಳು ಹೆಂಡವನ್ನು ತಯಾರಿಸುತ್ತಾರೆ. ಇದರ ಬೀಜದಿಂದ ಎಣ್ಣೆ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ. ಕಾಡಿನಲ್ಲಿ ಆಹಾರಕ್ಷಾಮ ಉಂಟಾದಾಗ ಆದಿವಾಸಿಗಳಿಗೆ ಈ ಮರದ ಹೂವು ಹಣ್ಣುಗಳೇ ಆಹಾರ. ಗೊಂಡ ಆದಿವಾಸಿಗಳಲ್ಲಿ ಚಳಿಗಾಲದಲ್ಲಿ ಮಗು ಜನಿಸಿದರೆ, ತಾಯ ಹಾಲಿಗೂ ಮೊದಲು ಇಪ್ಪೆ ಹಣ್ಣಿನ ರಸವನ್ನು ನೆಕ್ಕಿಸುತ್ತಾರೆ. ಯಾಕೆಂದರೆ ಅದು ಆದಿವಾಸಿಗಳ ಪಾಲಿನ ಪವಿತ್ರ ಮತ್ತು ಆರಾಧನೀಯ ಮರ.

- Advertisement -

ತುಳುನಾಡು ಇಲ್ಲಿ “ನಾನಿಲ್” ಮರ ಎನ್ನುವರು. ಇದರ ನೆರಳು ತಂಪು. ಹೆಚ್ಚಿನ ಮರಗಳ ಹೂವು ಮತ್ತು ಹಣ್ಣುಗಳನ್ನು ತಿನ್ನಲು ಆಗುವುದಿಲ್ಲ. ಇದರ ಹಣ್ಣು ಹೂವು ತಿಂದರೆ ಜೀವ ತಂಪಾಗಿ ಇರುತ್ತದೆ. ಹೂವಿನ ರಸ ಆಹಾ ! ಅಮೃತ. ಅಂದು ಮನೆ ಸುತ್ತ ಮುತ್ತ ನಾನಿಲ್ ಮರಗಳಿದ್ದವು. ಈ ಮರದಲ್ಲಿ ಹೆಚ್ಚಾಗಿ “ಚನಿಲ್” (ಇಣಚಿ-ಅಳಿಲು) ಓಡಾಡುವುದು‌. ಚನಿಲ್  ನಾನಿಲ್ ಮರದಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತದೆ. ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಇದರಲ್ಲಿ ಹೂವುಗಳು ಅರಳಲು ಆರಂಭ ಆಗುತ್ತದೆ. ಮೇ-ಜೂನ್ ತಿಂಗಳ ವರೆಗೂ ಈ ಅಳಿಲುಗಳಿಗೆ ನಾನಿಲ್ ಮರದಲ್ಲಿ ಆಹಾರ ಸಿಗುತ್ತದೆ. ತುಳು ಭಾಷೆಯಲ್ಲಿ
ನಾನಿಲ್-ಚನಿಲ್ ಎಂಬ ಹೆಸರು ಬಂದಿರುವುದು ಇದರ‌ ಸಂಬಂಧದಿಂದ. ಹೂವು ಉದುರಿದ ಬಳಿಕ ಗೊಂಚಲು ಗೊಂಚಲು ಹೂವಿನಂತೆ ಗೊಂಚಲು ಗೊಂಚಲು ಕಾಯಿಗಳು ಬರುತ್ತದೆ. ಕಾಯಿ ನೋಡಲು ಬಲು ಸುಂದರ. ಮೆಣಸಿನಕಾಯಿಯಂತೆ ತೋರುತ್ತದೆ. ಕಾಯಿಯನ್ನು ಕಿತ್ತಾಗ ಹಸು ಹಾಲಿನಂತೆ ಹಾಲು ಸುರಿಯುತ್ತದೆ. ಅದನ್ನು ಕುಡಿಯಬಹುದು. ಸಿಹಿಯಾಗಿ ನಂತರ ಅಂಟು ತರಹದ ಫೀಲಿಂಗ್ ಬರುತ್ತದೆ. ಇದರ ಹಣ್ಣು ಬೆಣ್ಣೆಯಂತೆ ಮೃದುವಾಗಿ ಇರುತ್ತದೆ. ಬಲು ಸಿಹಿ. ಚನಿಲ್ ಗೆ ಹೇಗೆ ನಾನಿಲ್ ಇಷ್ಟವೋ ಅದೇ ರೀತಿ ಬಾವಲಿಗಳಿಗೂ ಬಲು ಇಷ್ಟ.
ಕತ್ತಲೆ ಆದರೆ ಆಯಿತು, ಬಾವಲಿಗಳು ಸಾಲು ಸಾಲಾಗಿ ಬಂದು ಅದರ ಮಕರಂದ ಹೀರುತ್ತವೆ‌.

ಚನಿಲ್, ಬಾವಲಿಗಳಿಗೆ ನಾನಿಲ್ ಹಣ್ಣು ಮುಗಿದ ಬಳಿಕ ಮಾವಿನ ಮರಗಳು ಅವುಗಳನ್ನು ಆಹ್ವಾನಿಸುತ್ತವೆ. ಆ ಬಳಿಕ ಚನಿಲ್ ಗಳು ಹಲಸಿನ ಮರಗಳಲ್ಲಿ ಓಡಾಡುತ್ತವೆ. ಇವುಗಳನ್ನು ಹಲಸು ಸಾಕುತ್ತದೆ.ಈಗಲೂ ನೆನಪು ಇದೆ. ಬಾವಲಿಗಳು, ಚನಿಲ್ ಗಳು ತಿಂದು ಎಸೆದ ಮಾವು, ನಾನಿಲ್ ಹಣ್ಣುಗಳನ್ನು ಜನರು ತಿನ್ನುವರು. ಅದರಲ್ಲೂ ತೊಳೆಯದೆ ಸ್ವಾಹ ಮಾಡುವರು. ಅವರಿಗೇನು ಆಗಿರಲಿಲ್ಲ. ಅವುಗಳು ಜನರ ಫ್ರೆಂಡ್ಸ್ ಆಗಿದ್ದವು‌. ಇವುಗಳು ಮರದಲ್ಲಿ ಇದ್ದರೆ ಮರಗಳಿಂದ ಹಣ್ಣುಗಳು ಉದುರುತ್ತಿದ್ದವು.

ಬಳಿಕ ನಾನಿಲ್ ಕಾಯಿಗಳನ್ನು ಕಿತ್ತು ಭತ್ತದ (ಅಕ್ಕಿಯ) ತೌಡು ಒಳಗಿಟ್ಟು ಎರಡು ದಿವಸದಲ್ಲಿ ನೋಡಿದರೆ ಅದು ಹಣ್ಣಾಗಿರುತ್ತದೆ. ಅದರ ಸಿಹಿ ರುಚಿ ಬೇರೇಯೇ ಆಗುತ್ತದೆ.
ಜೂನ್ ತಿಂಗಳಿನ ಕೊನೆ ದಿನಗಳಲ್ಲಿ ಈ ಮರದ ಅಡಿಗೆ ಬಂದರೆ ಎಲ್ಲೆಡೆ ನಾನಿಲ್ ಬೀಜ ಬಿದ್ದಿರುತ್ತದೆ. ಚಿಕ್ಕು ಸಪೋಟ ಹಣ್ಣಿನ ಬೀಜದಂತೆ ಇದರ ಬೀಜ ಇರುತ್ತದೆ. ಬೀಜ ಕೊಂಚ ಹಳದಿ ಕಪ್ಪು ಮಿಶ್ರಿತ ಆಗಿರುತ್ತದೆ. ಬೀಜವನ್ನು ಹೆಕ್ಕಿ ಅದರ ಒಳಗಿನ ಬಿಳಿ ಬಣ್ಣದ ತಿರುಳನ್ನು ಕೊಂಚ ಹಂಚಿನಲ್ಲಿ ಹುರಿದು ರುಬ್ಬುವ ಕಲ್ಲಿನಲ್ಲಿ ಹಾಕಿ ರುಬ್ಬಿ ರುಬ್ಬಿ ಸುಸ್ತಾಗುವವರೆಗೆ ರುಬ್ಬಿ ಮೃದುವಾದ ಬಳಿಕ ಅದನ್ನು ತೆಗೆದು ನೀರು ಬೆರೆಸಿ ಒಲೆಯಲ್ಲಿ ಬಿಸಿ ಮಾಡಿ ಕುದಿಸುವಾಗ ಎಳ್ಳೆಣ್ಣೆ ರೂಪದಲ್ಲಿ ಮೇಲೆ ಎಣ್ಣೆ ನಿಲ್ಲುತ್ತದೆ‌. ಅದನ್ನು ಸಂಗ್ರಹಿಸುವುದು.
ತಲೆಗೆ ಎಣ್ಣೆ ಹಾಕಬಹುದು. ಮೈಗೆ ಸವರುವುದು‌. ದೇವರಿಗೆ ದೀಪ ಇಡುವುದು. ಕೇಶ ರಾಶಿ ಬೆಳೆಯುತ್ತೆ. ಸೌಂಡ್ ಸ್ಲೀಪ್, ಶರೀರ ಕೂಲ್ ಕೂಲ್.

- Advertisement -

ಎಣ್ಣೆಯನ್ನು ತೆಗೆದ ಬಳಿಕ ಅದರ ಹಿಂಡಿಯನ್ನು ಒಣಗಿಸಿ ಹಂಚಿನಲ್ಲಿ ಹಾಕಿ ದೀಪದ ಬದಲು ಇದನ್ನು ಉರಿಸುತ್ತಿದ್ದರಂತೆ‌.
ಈ ಮರಗಳನ್ನು ಮಾನವರೇ ನಾಶ ಮಾಡಿರುವುದು ಮಾತ್ರ ಖೇದಕರ.ಈ ಮರಗಳನ್ನು ಕಡಿಯದೆ ಇದ್ದರೆ ಈ ಮರಗಳಿಗೆ ಸಾವು ಇಲ್ಲ.

ಸಂಗ್ರಹ : ಹೇಮಂತ ಚಿನ್ನು
*ಕರ್ನಾಟಕ ಶಿಕ್ಷಕರ ಬಳಗ*
ಮಾಹಿತಿ :: ದಿನೇಶ್ ಬಂಗೇರ ಇರ್ವತೂರು.
ಇರ್ವತೂರು ಗೋವಿಂದ ಭಂಡಾರಿ.

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group