spot_img
spot_img

ವಿಷ್ಣು ನನ್ನ ವೃತ್ತಿ ಬದುಕಿನ ದಿಕ್ಸೂಚಿಯಾದ : ದ್ವಾರಕೀಶ್

Must Read

spot_img
- Advertisement -

2012ರಲ್ಲಿ ‘ಮಂಗಳ’ ವಾರ ಪತ್ರಿಕೆಗೆ ನಾನು ದ್ವಾರಕೀಶ್ ಸಂದರ್ಶನ ನಡೆಸಿ ಬರೆದ ಲೇಖನ ಇಲ್ಲಿದೆ

ನಾನೇನಾಗ್ಬೇಕು, ನಾನೇನಾಗ್ತಿದ್ದೀನಿ ಅಂತ ಯೋಚಿಸುವುದಕ್ಕಿಂತ ಮೊದಲೆ ಕಾರ್ಯೋನ್ಮುಖನಾಗುತ್ತಿದ್ದೆ. ನನ್ನಲ್ಲಿದ್ದ ಆವೇಗ-ಆವೇಶ ಈ ತರಹದ ತ್ವರಿತ ತುಡಿತಕ್ಕೆ ಕಾರಣವಾಗುತಿತ್ತೊ ಅಥವಾ ನನ್ನ ಸುತ್ತಲಿನ ಪರಿಸರದ ವೇಗೋತ್ಕರ್ಷದ ಆ ಪರಿ ನನ್ನೊಳಗೆ ಚೈತನ್ಯ ತುಂಬುತ್ತಿತ್ತೊ ಎಂಬುದನ್ನು ನಿಖರವಾಗಿ ಹೇಳಲಾರೆ. ಆದರೆ ಒಂದಂತೂ ಸ್ಪಷ್ಟವಾಗಿ ನನಗೆ ಗೊತ್ತಿತ್ತು; ವಾತಾವರಣಕ್ಕೆ ತಕ್ಕಂತೆ ನಾವು WARM UP ಆಗದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು. ನಾನು ಚಿತ್ರರಂಗಕ್ಕೆ ಬಂದು ೫೦ ವರ್ಷ ಕಳೆದರೂ ನನ್ನೊಳಗಿರುವ ಸಾಧಕ ದಿನದಿಂದ ದಿನಕ್ಕೆ ವಾರ್ಮ್ ಅಪ್ ಆಗುತ್ತಲೆ ಇದ್ದಾನೆ. ಅವನು ನನ್ನ ಮನದೊಳಗೆ ಬಿಸಿಯಾದಷ್ಟು ನನ್ನ ಸಾಧನೆ ಪಕ್ವ ರೂಪ ಪಡೆಯುತ್ತದೆ. ನನ್ನೊಳಗಿನ ಸಾಧಕ ಯಾವತ್ತು ತಣ್ಣಗಾಗುತ್ತಾನೊ ಆವತ್ತೇ ನನ್ನ ಜೀವ ಮೆತ್ತಗೆ ಕರಗಿ ಹೋಗುತ್ತದೆ ಅನಿಸುತ್ತೆ.
ನನ್ನೆದೆಯಲ್ಲಿ ಉರಿಯುವ ಸಾಧನೆಯ ಕುಲಮೆಯಲ್ಲಿ ಹಲವಾರು ಚಿತ್ರಗಳು ಅರಳಿವೆ. ಹಲವಾರು ಕಲಾವಿದರು-ತಂತ್ರಜ್ಞರು ಅದರಲ್ಲಿ ನಳನಳಿಸಿದ್ದಾರೆ. ನನ್ನಿಂದಾಗಿ ಉಳಿದರು-ಬೆಳೆದರು ಎಂಬ ಅಹಂ ನನಗಿಲ್ಲ. ಅವರೊಳಗಿದ್ದ ಸಾಧಕನ ಇಂಧನ ಒಂದಿಷ್ಟು ಎರವಲಾಗಿ ನನ್ನೆದೆಯ ಕುಲುಮೆ ಪ್ರಜ್ವಲಿಸಲು ನೆರವಾಗಿದೆ ಎಂದು ಭಾವಿಸಿದ್ದೇನೆ. ನಾನು-ನನ್ನಿಂದ ಎಂಬ ಅಹಂಕಾರ ಇದ್ದಿದ್ದರೆ ಕೇವಲ ೨ ಸಾವಿರ ರೂಪಾಯಿ ಇಟ್ಕೊ oಡು ನಿರ್ಮಾಪಕನಾಗಲು ಆಗುತ್ತಿರಲಿಲ್ಲ. ೨೫೦ ರೂಪಾಯಿ ಜೇಬಲ್ಲಿ ಇಟ್ಕೊಂಡು ನಟನಾಗಿ ಮದರಾಸಿನಂಥ ಊರಿನಲ್ಲಿ ಬದುಕಲು ನನ್ನಿಂದ ಸಾಧ್ಯವೂ ಆಗುತ್ತಿರಲಿಲ್ಲ.

ನಾನು ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲೂ ಅಲ್ಲಾ, ಅತ್ಯಂತ ಬಡ ಕುಟುಂಬದಲ್ಲೂ ಅಲ್ಲ. ಮೇಲ್ಮಧ್ಯಮ ವರ್ಗದ ಕುಟುಂಬದ ಬಂಗ್ಲೆ ಶ್ಯಾಮರಾವ್-ಜಯಮ್ಮ ದಂಪತಿಯ ನಾಲ್ಕು ಗಂಡು, ಮೂವರು ಹೆಣ್ಣು ಮಕ್ಕಳ ಸಂತಾನದಲ್ಲಿ. ೧೯೪೨ರ ಆಗಸ್ಟ್ ೧೯ರಂದು ತಾಯಿ ತವರು ಮನೆ ಹುಣಸೂರಿನಲ್ಲಿ ಜನಿಸಿ, ತಂದೆ ಮನೆ ಮೈಸೂರಿನಲ್ಲಿ ಬೆಳೆದೆ. ಮೈಸೂರಿನ ಪ್ರಭಾ ಚಿತ್ರಮಂದಿರದ ಎದುರಿನ ದಾಸ್ ಪ್ರಕಾಶ್ ಹೋಟೆಲ್ ಪಕ್ಕ ಇದ್ದ ಭಾರತ್ ಆಟೊ ಸ್ಪೇರ್ ಪಾರ್ಟ್ಸ್ ಅಂಗಡಿಯನ್ನು ನಾನು ಮತ್ತು ಅಣ್ಣ ನಾಗರಾಜ್ ನೋಡಿ ಕೊಳ್ತಿದ್ವಿ. (ಈಗ ಅಣ್ಣನ ಮಗ ಸುಧೀಂದ್ರ ನೋಡಿಕೊಳ್ತಿದ್ದಾನೆ) ಬನುಮಯ್ಯದಲ್ಲಿ ಹೈಸ್ಕೂಲ್, ಶಾರದಾ ವಿಲಾಸದಲ್ಲಿ ಕಾಲೇಜು ನಂತರ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಆಟೊ ಮೊಬೈಲ್ ಡಿಪ್ಲೊಮಾ ಪಡೆದೆ. ಆದರೆ ನಾ ಓದಿದ್ದು ಬೇರೆ, ಬಯಸಿದ್ದೆ ಬೇರೆ. ಹೀಗಾಗಿ ನಮ್ಮ ಆಟೊಮೊಬೈಲ್ ಅಂಗಡಿ ಮುಂದಿದ್ದ ಪ್ರಭಾ ಟಾಕೀಸ್ ನನ್ನ ಬಯಕೆಯ ಬಾನಂಗಳಕ್ಕೆ ರಂಗು ಚೆಲ್ಲಿ ಕಿಚಾಯಿಸುತ್ತಿತ್ತು. ಯಾವಾಗ ನನ್ನೆದೆಯೊಳಗಿನ ಸಾಧಕ ಉರಿದೆದ್ದನೊ ಆಗಲೆ ವೀರಸಂಕಲ್ಪ ಮಾಡಿ ಮದರಾಸ್ ರೈಲು ಹತ್ತಿಬಿಟ್ಟೆ.

- Advertisement -

ಖ್ಯಾತ ನಿರ್ಮಾಪಕ-ನಿರ್ದೇಶಕ ಜಿ.ವಿ. ಅಯ್ಯರ್ ಗುಬ್ಬಿ ನಾಟಕ ಕಂಪೆನಿ ಬಿಟ್ಟು ಸ್ನೇಹಿತರೊಂದಿಗೆ ಸೇರಿ ‘ವೀರ ಸಂಕಲ್ಪ’ ಚಿತ್ರ ಮಾಡುತ್ತಿದ್ದರು. ನನ್ನ ಸೋದರ ಮಾವ ಖ್ಯಾತ ಸಾಹಿತಿ-ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಸಹಾಯದಿಂದ ೧೯೬೨ರಲ್ಲಿ ‘ವೀರಸಂಕಲ್ಪ’ ಚಿತ್ರದಲ್ಲಿ ಮೊದಲ ಬಾರಿ ಅಭಿನಯಿಸಿದೆ. ಆದರೆ ಈ ಚಿತ್ರ ಬಿಡುಗಡೆಯಾಗಿದ್ದು ೧೯೬೪ರಲ್ಲಿ. ಈ ಚಿತ್ರದಿಂದ ಕೇವಲ ಅಭಿನಯವನ್ನಷ್ಟೆ ಕಲಿಯಲಿಲ್ಲ. ಸಿನಿಮಾ ನಿರ್ಮಾಣದ ಹಲವು ತಂತ್ರಗಳನ್ನು ಕಲಿತುಕೊಂಡೆ. ಮರುವರ್ಷವೆ (೧೯೬೫) ಮೇಕಪ್ ಮ್ಯಾನ್‌ಗಳಾದ ಮಾಧವಯ್ಯ ಮತ್ತು ವೀರರಾಜು ಎಂಬುವರೊಡಗೂಡಿ ಬಿ.ಎಂ. ವೆಂಕಟೇಶ್, ಜಯಂತಿ ನಟಿಸಿದ ‘ಮಮತೆಯ ಬಂಧನ’ ಚಿತ್ರ ನಿರ್ಮಿಸಿದೆ. ಇದಕ್ಕಾಗಿ ಅಣ್ಣ ನಾಗರಾಜ್‌ನಿಂದ ಕೇವಲ ೨ ಸಾವಿರ ರೂಪಾಯಿ ಪಡೆದು ೨೩ನೇ ವಯಸಿನಲ್ಲೆ ನಿರ್ಮಾಪಕನಾದೆನೆಂದರೆ ನನ್ನಲ್ಲಿದ್ದ ಆವೇಗ-ತುಡಿತಕ್ಕೆ ಎಷ್ಟು ವೇಗೋತ್ಕರ್ಷವಿತ್ತೆಂದು ಅಂದಾಜಿಸಿ. ಆ ಕಾಲದಲ್ಲಿ ‘ಮಮತೆಯ ಬಂಧನ’ ಚಿತ್ರ ನಿರ್ಮಾಣಕ್ಕೆ ಆದ ವೆಚ್ಚ ಕೇವಲ ೫೫ ಸಾವಿರ ರೂಪಾಯಿ.
೧೯೬೯ ರಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ ಅಣ್ಣ ವೀನಸ್ ಮೂವೀಸ್‌ನ ರತ್ನಂ ಅಯ್ಯರ್‌ರಿಂದ ೨೫ ಸಾವಿರ ರೂಪಾಯಿ ಸಾಲ ಪಡೆದು ಡಾ.ರಾಜ್‌ಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ’ ಚಿತ್ರ ನಿರ್ಮಿಸಿದೆ. ಮೊದಲ ಬಾರಿಗೆ ಸಿದ್ಧಲಿಂಗಯ್ಯರಿಗೆ ಚಿತ್ರ ನಿರ್ದೇಶಿಸುವ ಅವಕಾಶ ಕಲ್ಪಿಸಿಕೊಟ್ಟೆ. ಈ ಚಿತ್ರಕ್ಕೆ ಅಂದು ಖರ್ಚಾಗಿದ್ದು ೧.೧೦ ಲಕ್ಷ ರೂ. ರಾಜ್‌ಕುಮಾರ್ ಸಂಭಾವನೆ ೫ ಸಾವಿರ ರೂಪಾಯಿ ಅಷ್ಟೆ. ಆಗ ಒಂದು ಸಾವಿರ ಅಡಿ ಫಿಲಂ ಪ್ರಿಂಟ್‌ಗೆ ೧೭೦ ರೂಪಾಯಿ. ಈಗ ೨೮ ಸಾವಿರವಾಗಿದೆ. ಆಗ ಮೊದಲ ಪ್ರಿಂಟ್ ಕಾಪಿ ತೆಗೆಯಲು ೧೫೦೦ ರೂ ಇತ್ತು. ಈಗ ೬೦ ಸಾವಿರ ಆಗಿದೆ. ಆಗ ಪೆಟ್ರೋಲ್ ಬೆಲೆ ಲೀಟರ್ ಗೆ ೭೫ ಪೈಸೆ ಇತ್ತು. ಹತ್ತು ರೂಪಾಯಿ ಜೇಬಲ್ಲಿರೋನು ಕಾರ್ ಇಟ್ಕೊಂಡು ಓಡಾಡಬಹುದಿತ್ತು. ಈಗ ಅದನ್ನೆಲ್ಲ ಹೇಳಿದರೆ ಈ ಕಾಲದವರು ಯಾವುದೊ ಓಬಿರಾಯನ ಕಾಲದವನೆಂಬoತೆ ನನ್ನ ನೋಡ್ತಾರೆ.

ಯಾವುದೇ ಕಾರ್ಯ ಕೈಗೆತ್ತಿಕೊಂಡರೂ ಹೊಸದೇನನ್ನೊ ಹುಡುಕುತ್ತಿದ್ದೆ. ಚಾರ‍್ಲಿ ಚಾಪ್ಲಿನ್ ನನ್ನ ಆರಾಧ್ಯ ದೈವ. ಅವನಂತೆ ಹಾಸ್ಯ ಕಲಾವಿದನಾದೆ. ಆದರೆ ನಾಯಕ ನಟನಾಗಲಿಲ್ಲ ಎಂಬ ಕೊರಗಿತ್ತು. ಅದಕ್ಕಾಗಿ ನನ್ನ ನಿರ್ಮಾಣದಲ್ಲೆ ನಾಯಕ ನಟನಾಗಲು ನಿರ್ಧರಿಸಿದೆ. ನನ್ನ ೩ನೇ ಚಿತ್ರಕ್ಕೆ ಕೇವಲ ಹಾಸ್ಯ ಒಂದೇ ಆಧಾರವಾಗಬಾರದೆಂದು ಜೇಮ್ಸ್ ಬಾಂಡ್ ರೀತಿಯಲ್ಲಿ ‘ಕುಳ್ಳ ಏಜೆಂಟ್ ೦೦೦’ ಚಿತ್ರ ನಿರ್ಮಿಸಿದೆ. ಈ ಚಿತ್ರಕ್ಕೆ ಮೊದಲ ಬಾರಿ ಹಿಂದಿ ಜನಪ್ರಿಯ ಗಾಯಕ ಕಿಶೋರ್ ಕುಮಾರ್‌ರಿಂದ ‘ಆಡು ಆಟ ಆಡು’ ಹಾಡು ಹಾಡಿಸಿದೆ. ೧೯೭೪ರಲ್ಲಿ ‘ಕಳ್ಳ ಕುಳ್ಳ’ ಚಿತ್ರದಿಂದ ವಿಷ್ಣುವರ್ಧನ್ ಜೊತೆಯಾದ . ನನ್ನ ವೃತ್ತಿ ಬದುಕಿನ ದಿಕ್ಸೂಚಿಯೆ ಬದಲಾಗಿ ಬಿಟ್ಟಿತು. ವಿಷ್ಣು ನಾವಿಕ, ನಾನು ಹಡಗು ಎಂಬoತೆ ಅನ್ಯೋನ್ಯವಾಗಿ ಚಿತ್ರರಂಗದ ಸಾಗರದಲ್ಲಿ ಬಹುದೂರ ಪ್ರಯಾಣ ಮಾಡಿದೆವು. ಪ್ರಯಾಣದ ಮಧ್ಯೆ ತಿಮಿಂಗಿಲಗಳು, ಷಾರ್ಕ್ ಗಳು ನಮ್ಮನ್ನು ಉರುಳಿಸಿ ಬೇರ್ಪಡಿಸಲು ಯತ್ನಿಸಿದವು. ಇದ್ಯಾವುದಕ್ಕೂ ನನ್ನ -ಅವನ ಸ್ನೇಹ ಸಂಬoಧ ಕಡಿಯಲಾಗಲಿಲ್ಲ. ಆದರೆ ಕೆಲವರ ಕ್ರೂರ ದೃಷ್ಟಿ ನಮ್ಮ ಕೆಟ್ಟ ಕಾಲದಲ್ಲಿ ಬೀರಿದ್ದರಿಂದ ದೈಹಿಕವಾಗಿ ದೂರಾಗುತ್ತಿದ್ದರೂ, ಮಾನಸಿಕವಾಗಿ ಯಾವತ್ತೂ ನಾವು ಹತ್ತಿರವಾಗೇ ಇದ್ದೆವು. ನಮ್ಮ ಸ್ನೇಹ ಅದೆಷ್ಟು ಗಟ್ಟಿಯಾಗಿ ನಮ್ಮ ಹೃದಯ ಬೆಸೆದಿತ್ತು ಎಂದರೆ, ನಾವಿಬ್ಬರು ಒಂದೇ ತಾಯಿ ಹೊಟ್ಟೇಲಿ ಹುಟ್ಟಲಿಲ್ಲ ಎಂಬುದು ಬಿಟ್ಟರೆ, ಬೇರಾವ ಭಾವನಾತ್ಮಕ ವ್ಯತ್ಯಾಸವೂ ನಮ್ಮಲ್ಲಿರಲಿಲ್ಲ.
ನನ್ನ ಮನೆಗೆ ವಿಷ್ಣು ಬಂದನೆoದರೆ ಡೈನಿಂಗ್ ಟೇಬಲ್ ಮೇಲೆ ಕೂತು ತಟ್ಟೇ ಬಾರಿಸುತ್ತಾ, “ಅಂಬುಜಾ, ಬೇಗ ಬಿಸಿಬೇಳೆ ಬಾತ್ ತೊಗೊಂಬಾ. ಹೊಟ್ಟೆ ತಾಳ ಹಾಕ್ತಿದೆ” ಎಂದು ಭಾರಿ ಶಬ್ದ ಬಜಾಯಿಸುತ್ತಿದ್ದ. ನನ್ನೆಂಡ್ತಿ ತರುವುದು ತಡವಾದಷ್ಟು ಇವನ ಬೊಂಬಡಾ ಜಾಸ್ತಿಯಾಗುತ್ತಿತ್ತು. ಇಂಥ ಸ್ನೇಹ ಸಂಬoಧಕ್ಕೆ ಕೆಲವರ ದೃಷ್ಟಿ ತಾಗಿ ಮಸುಕಾಯಿತಷ್ಟೆ. ಅವನನ್ನ ನೆನೆಯದ ದಿನವಿಲ್ಲ, ಮರೆತ ಕ್ಷಣಗಳೇ ಇಲ್ಲ. ಪ್ರತಿನಿತ್ಯವೂ ಅವನೊಂದಿಗೆ ಹೃದಯ ಬೆಸೆದು ಕೊಂಡು ಆತ್ಮ ಸಂಭಾಷಣೆ ನಡೆಸುತ್ತಿರುತ್ತೇನೆ.

1977ರಲ್ಲಿ ‘ಕಿಟ್ಟು ಪುಟ್ಟು ’ ಚಿತ್ರದಿಂದ 2004ರಲ್ಲಿ ಬಿಡುಗಡೆಯಾದ ‘ಆಪ್ತಮಿತ್ರ’ ಚಿತ್ರದವರೆಗೂ ಸುಮಾರು 27 ವರ್ಷ ಕಾಲದಲ್ಲಿ ೨೦ ಕ್ಕೂ ಹೆಚ್ಚು ವಿಷ್ಣು ಚಿತ್ರಗಳನ್ನು ನಿರ್ಮಿಸಿದೆ. ೧೯೭೭ರಲ್ಲಿ ಮೊದಲ ಬಾರಿ ವಿದೇಶದಲ್ಲಿ ಕನ್ನಡ ಚಿತ್ರ ಚಿತ್ರೀಕರಣವಾಗಬೇಕೆಂದು ‘ಸಿಂಗಪೂರ್‌ನಲ್ಲಿ ರಾಜಾಕುಳ್ಳ’ ಚಿತ್ರ ನಿರ್ಮಿಸಿದೆ. ಕೊನೆಗೆ ಅವನ ಹೆಸರು ಚಿರಸ್ಥಾಯಿಯಾಗಬೇಕೆಂದು ಇತ್ತೀಚೆಗೆ ಸುದೀಪ್ ಅಭಿನಯದಲ್ಲಿ ‘ವಿಷ್ಣುವರ್ಧನ’ ಚಿತ್ರ ನಿರ್ಮಿಸಿದೆ. ನನ್ನ ಅವನ ನಡುವೆ ಏನೇ ವಿರಸ ಇದ್ದರೂ ಕ್ಷಣಿಕ. ಅಣ್ಣ-ತಮ್ಮಂದಿರಲ್ಲೆ ಮನಸ್ತಾಪ ಬರುತ್ತೆ. ಹಾಗಂತ ರಕ್ತ ಸಂಬoಧವೇನು ಕಡಿದು ಹೋಗುವುದಿಲ್ಲ. ಹಾಗೆಯೆ, ನನ್ನ-ಅವನ ನಡುವೆ ಏನೆ ಭಿನ್ನಾಭಿಪ್ರಾಯವಿದ್ದರೂ ನಮ್ಮ ಸ್ನೇಹ ಸಂಬoಧ ಯಾವತ್ತೂ ಮುಕ್ಕಾಗಿರಲಿಲ್ಲ. ಕೋಪ ಬಂದಾಗ ನನ್ನ -ಅವನ ನಡುವೆ ಮಾತಿನ ಬಾಣಗಳು ವಿನಿಮಯವಾಗುತಿತ್ತು. ಕೋಪ ತಣ್ಣಗಾದ ಮೇಲೆ ಛೆ… ಯಾಕೀಗೆ ದುಡುಕಿ ಮಾತಾಡಿ ಬಿಟ್ಟೇ ಎಂದು ನಾವಿಬ್ಬರು ಪಶ್ಚಾತ್ತಾಪ ಪಟ್ಟುಕೊಂಡು ಮತ್ತೆ ಒಂದಾಗುತ್ತಿದ್ದೆವು.
ಆತ ಬದುಕಿದ್ದರೆ ಖಂಡಿತ ಇಷ್ಟರಲ್ಲಾಗಲೆ ‘ಬಾರೊ ಕುಳ್ಳ ಮತ್ತೊಂದು ಚಿತ್ರ ಮಾಡೋಣ’ ಅಂತ ಕರೆಯದೆ ಇರುತ್ತಿರಲಿಲ್ಲ. ನಾನು ‘ಆಪ್ತಮಿತ್ರ’ ಚಿತ್ರದ ನಂತರ ಆ ಬಗೆಯ ನಿರೀಕ್ಷೆಯಲ್ಲಿದ್ದೆ. ಆದರೆ ಆತನ ಸಾವನ್ನು ನಿರೀಕ್ಷಿಸಿರಲಿಲ್ಲ. ಈಗಲೂ ನನಗೆ ಮಿತ್ರ ಇಹದಲ್ಲಿಲ್ಲ ಎಂಬ ಸತ್ಯ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಜೀವನ ಅಂದ್ರೇನೆ ಬೆಳವಣಿಗೆ. ಇಬ್ಬರೂ ಬೆಳೆದ್ವಿ . ಹುಟ್ತಾ ಅಣ್ಣ ತಮ್ಮಂದಿರು, ಬೆಳೀತಾ ದಾಯಾದಿಗಳೂ ಅಂತ ಆದ್ವಿ ಅಷ್ಟೆ. ಅವನ ದೊಡ್ಡ ವ್ಯಕ್ತಿತ್ವದ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ಮುಂದಿನ ಜನ್ಮ ಅಂತಿದ್ರೆ ನಾನು-ಅವನು ಒಂದೇ ತಾಯಿ ಹೊಟ್ಟೇಲಿ ಹುಟ್ಟಬೇಕೆಂಬ ಆಸೆ ಇದೆ.

- Advertisement -

ಕನ್ನಡ, ತಮಿಳು, ಹಿಂದಿ ಸೇರಿದಂತೆ ಈವರೆಗೆ ೪೮ ಚಿತ್ರ ನಿರ್ಮಿಸಿದ್ದೀನಿ, ೩೦೦ ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಸಿದ್ದೀನಿ. ೨೦ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ತಮಿಳಿನಲ್ಲಿ ನಾನು ನಿರ್ದೇಶಿಸಿದ ರಜನಿಕಾಂತ್ ಶ್ರೀ ದೇವಿ ನಟನೆಯ ‘ನಾ ಅಡಿಮೈ ಇಲ್ಲಯ್ ’ ಚಿತ್ರ ಯಶಸ್ವಿಯಾಗಿದ್ದರೆ ತಮಿಳು ಚಿತ್ರದಲ್ಲೆ ಉಳಿದು ಬಿಡುತ್ತಿದ್ದೆನೊ ಅಥವಾ ಹಿಂದಿಯಲ್ಲಿ ರಜನಿಕಾಂತ್‌ರನ್ನು ನಾಯಕನಾಗಿಸಿ ನಿರ್ಮಿಸಿದ ‘ಗಂಗ್ವಾ’ ಚಿತ್ರ ಹಿಟ್ ಆಗಿದ್ದರೆ ಹಿಂದಿ ಚಿತ್ರರಂಗದಲ್ಲೆ ಮೈದಾಸ್ ನಿರ್ಮಾಪಕನಾಗಿ ಬಿಡುತ್ತಿದ್ದೆನೊ ಗೊತ್ತಿಲ್ಲ. ಆದರೆ ಕನ್ನಡ ತಾಯಿಯ ಋಣ ದೊಡ್ಡದಿತ್ತು. ಇಲ್ಲೆ ಇರಿಸಿಕೊಂಡಳು, ನಾನು ಇಲ್ಲೆ ಮಣ್ಣಾಗಿ ಕರಗಬೇಕೆಂದು ಬಯಸಿರಬೇಕು. ಜನ್ಮ ಕೊಟ್ಟವಳ ಇಂಗಿತ ಹೇಗಿದೆಯೊ ಹಾಗೆ ಆಗಲೆಂದು ಬದುಕುತ್ತಿದ್ದೇನೆ. ಬದುಕಿರುವಷ್ಟು ಕಾಲ ಈ ಕನ್ನಡ ತಾಯಿಯ ಸೇವೆ ಮಾಡಬೇಕೆಂದು ಸಂಕಲ್ಪ ತೊಟ್ಟಿದ್ದೇನೆ.

ನಿರೂಪಣೆ :
ಎಸ್. ಪ್ರಕಾಶ್ ಬಾಬು,
ಪತ್ರಕರ್ತ-ಲೇಖಕ

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group