ಗಣ್ಯ ವ್ಯಕ್ತಿಯನ್ನು ಸನ್ಮಾನಿಸಿದ ಹಲಗಾ ಗ್ರಾಮದ ಸಾಮಾನ್ಯ ಮಹಿಳೆ

0
189

ಬೆಂಗಳೂರಿನ ಕೆ.ಆರ್. ರಸ್ತೆಯ ಕರ್ನಾಟಕ ಜೈನ ಭವನದಲ್ಲಿ ಬೆಂಗಳೂರು ಜೈನ ಸಮಾಜದ ವತಿಯಿಂದ ಎಪ್ರಿಲ್ 10ರಂದು ಮಹಾವೀರ ಜಯಂತಿ’ಯಂದು ಗಣ್ಯ ವ್ಯಕ್ತಿಯೊಬ್ಬರ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕರ್ನಾಟಕ ಸರ್ಕಾರ 2025ನೇ ಸಾಲಿಗಾಗಿ ‘ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ’ಯನ್ನು ಬೆಂಗಳೂರಿನ ‘ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್’ನ 90 ವರ್ಷದ ಹಿರಿಯ ಜೀವಿ ಎಸ್. ಜಿತೇಂದ್ರಕುಮಾರ್ ಅವರಿಗೆ ಘೋಷಿಸಿದೆ. ಆ ಪ್ರಶಸ್ತಿ 10 ಲಕ್ಷ ರೂ. ನಗದು ಪುರಸ್ಕಾರ ಹೊಂದಿದೆ.

ಆ ಹಿರಿಯ ಸಾಧಕರನ್ನು ಅಲ್ಲಿದ್ದ ಹಿರಿಯರೊಬ್ಬರಿಂದಲೇ ಸನ್ಮಾನಿಸುವ ಉದ್ದೇಶ ಸಂಘಟಕರದ್ದಾಗಿತ್ತು. ಅಲ್ಲಿ ಉಪಸ್ಥಿತರಿದ್ದ ಶ್ರಾವಕ – ಶ್ರಾವಕಿ ಯಲ್ಲಿ 90ರ ಆಸುಪಾಸಿನವರು ಯಾರಾದರೂ ಇದ್ದಾರೆಯೇ ಎಂಬ ಘೋಷಣೆ ಮೊಳಗಿತು. ಸಭಾಂಗಣದಲ್ಲಿ 90 ವರ್ಷದ ಯಾರೊಬ್ಬರೂ ಇರದೇ ಇದ್ದಾಗ, 86 ವರ್ಷದ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ತಂಗೆವ್ವಾ ಗುಂಡಪ್ಪ ಚಿಕ್ಕಪರಪ್ಪಾ ಅವರ ಹಸ್ತದಿಂದ ಜಿತೇಂದ್ರಕುಮಾರ್ ಅವರಿಗೆ ಸನ್ಮಾನ ಮಾಡಲಾಯಿತು.

ಒಂದು ಅಪರೂಪದ, ಆಕಸ್ಮಿಕ ಸನ್ಮಾನ ಮಾಡುವ ಅವಕಾಶ ದೊರಕಿದ್ದು ಶ್ರೀಮತಿ ತಂಗೆವ್ವಾ ಅವರ ಕಣ್ಣುಗಳನ್ನು ಒದ್ದೆ ಮಾಡಿಬಿಟ್ಟಿತ್ತು. ಸನ್ಮಾನದ ಬಳಿಕ ಅವರ ಹಸ್ತದಿಂದ ಶ್ರೀ ಭಗವಾನ ಮಹಾವೀರರಿಗೆ ಮಹಾ ಮಂಗಳಾರತಿ ಮಾಡುವ ವಿಶೇಷ ಅವಕಾಶವೂ ಸಿಕ್ಕಿತು.

ಎಸ್. ಜಿತೇಂದ್ರ ಕುಮಾರ್ ಅವರಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸ್ತದಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ಮುಂಚೆಯೇ ಕರ್ನಾಟಕ ಜೈನ ಭವನದ ವತಿಯಿಂದ ಗೌರವ ಸಮರ್ಪಣೆ ಕಾರ್ಯಕ್ರಮ ಹಲಗಾ ಗ್ರಾಮದ ಹಿರಿಯ ಮಹಿಳೆ ಶ್ರೀಮತಿ ತಂಗೆವ್ವಾ ಅವರ ಹಸ್ತದಿಂದ ನೆರವೇರಿದ್ದು ಬಹಳ ವಿಶೇಷವಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಮಾರಂಭದಲ್ಲಿ ಉಪಸ್ಥಿತರಿದ್ದ ಬೆಳಗಾವಿ ಜಿಲ್ಲೆಯ ಅನೇಕ ಶ್ರಾವಕ – ಶ್ರಾವಕಿಯರು ತಂಗೆವ್ವಾ ಅವರು ನಿಂತಿದ್ದ ಕಡೆ ಬಂದು ಅವರನ್ನು ಸುತ್ತುವರೆದು, ಅವರ ಆರೋಗ್ಯದ ಬಗ್ಗೆ, ಅವರ ಜೀವನಶೈಲಿ ಬಗ್ಗೆ ಕೇಳಿ ತಿಳಿದುಕೊಂಡು ಹೆಮ್ಮೆ ಪಟ್ಟರು.

ಶ್ರೀಮತಿ ತಂಗೆವ್ವಾ ಅವರು ತಮ್ಮ ಉತ್ತಮ ಜೀವನಶೈಲಿಯಿಂದ ‘ನೋ ಬಿಪಿ, ನೋ ಶುಗರ್, ನೋ ಸ್ಪೆಕ್ಟ್’ ಆಗಿದ್ದಾರೆ. ಜೋಳದ ರೊಟ್ಟಿ ಬಡಿಯುವುದರಿಂದ ಹಿಡಿದು, ಅಕ್ಕಿ ಹಸನು ಮಾಡುವ ಸೂಕ್ಷ್ಮ ಕೆಲಸಗಳನ್ನು ಕೂಡ ಅವರು ಈಗಲೂ ಬರಿಗಣ್ಣಿನಿಂದಲೇ, ಉತ್ಸಾಹದಿಂದಲೇ ಮಾಡುತ್ತಿರುತ್ತಾರೆ.

LEAVE A REPLY

Please enter your comment!
Please enter your name here