ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

0
83

 

ಗಿಡಕೆ‌ ನೋವನು‌ ಕೊಟ್ಟು‌ ಗಿಡದ ಹೂವನು ತರಿದು
ದೇವ ಮೆಚ್ಚುವನೇನು‌ ಮುಡಿಗಿಟ್ಟರೆ ?
ಸಪ್ತಚಕ್ರದಲಿರುವ ಸಪ್ತಪುಷ್ಪಗಳನ್ನು
ಅರ್ಪಿಸಲು ಮೆಚ್ಚುವನು‌- ಎಮ್ಮೆತಮ್ಮ

ಶಬ್ಧಾರ್ಥ
ಸಪ್ತಚಕ್ರ = ದೇಹದಲ್ಲಿರು‌ವ ಮೂಲಾಧಾರಾದಿ‌ ಚಕ್ರಗಳು
ಸಪ್ತಪುಷ್ಪ‌ = ಆ ಚಕ್ರಗಳಲ್ಲಿರುವ ಕಮಲದ‌ ಹೂವುಗಳು

ತಾತ್ಪರ್ಯ

ಹೂಗಿಡಲ್ಲಿ‌ ಅರಳಿರುವ ಬಣ್ಣಬಣ್ಣದ‌‌ ಹೂವುಗಳನ್ನು
ಕಿತ್ತು ತಂದು‌ ದೇವರಿಗೆ ಅರ್ಪಿಸಿದರೆ‌‌‌ ದೇವರು ಒಲಿಯುವುದಿಲ್ಲ. ಏಕೆಂದರೆ ಗಿಡಗಳಿಗೂ ಜೀವವಿರುತ್ತದೆ. ‌ಹೂವುಗಳನ್ನು ಕಿತ್ತಾಗ ಅವುಗಳಿಗೆ‌ ನೋವಾಗುತ್ತದೆ.‌ ಧರ್ಮದ‌ ಹತ್ತು ಲಕ್ಷಣಗಳಲ್ಲಿ‌ ಮೊದಲನೆಯದೆ ಅಹಿಂಸೆ. ಗಿಡಗಳಿ‌‌‌ಗೆ ಹಿಂಸೆ ಕೊಡುವುದರಿಂದ ದೇವರು‌ ಮೆಚ್ಚುವುದಿಲ್ಲ. ಆದಕಾರಣ ದೇಹದಲ್ಲಿರುವ ಏಳು‌ ಚಕ್ರಗಳಲ್ಲಿ‌ ಅರಳಿರುವ ಕಮಲದ ಹೂವುಗಳನ್ನು ಅರ್ಪಿಸಬೇಕು.

ಆಧಾರದಲ್ಲಿ ನಾಲ್ಕು ದಳದ, ಸ್ವಾಧಿಷ್ಠಾನದಲ್ಲಿ ಆರು‌ ದಳದ,‌ ಮಣಿಪೂರಕದಲ್ಲಿ ಹತ್ತು ದಳದ, ಅನಾಹತದಲ್ಲಿ‌ ಹನ್ನೆರಡು ದಳದ, ವಿಶುದ್ಧಿಯಲ್ಲಿ ಹದಿನಾರು ದಳದ , ಆಜ್ಞಾದಲ್ಲಿ‌ ಎರಡು ದಳದ‌ ಮತ್ತು ಸಹಸ್ರಾರದಲ್ಲಿ‌ ನೂರಾಯೆಂಟು ದಳದ ಕಮಲಗಳಿವೆ. ಆ ಚಕ್ರಗಳನ್ನು ಕ್ರಿಯಾಶೀಲಗೊಳಿಸಿ ಹೂವುಗಳನ್ನು‌ ‌ಅರಳಿಸಿ ಅರ್ಪಿಸಿದರೆ ಮಾತ್ರ‌ ದೇವ‌ ಮೆಚ್ಚುತ್ತಾನೆ. ಅಂದರೆ‌ ಬಾಹ್ಯ ಪೂಜೆಯಿಂದ ಯಾವ‌ ಸಿದ್ಧಿ ಸಾಧನೆಗಳು ಆಗುವುದಿಲ್ಲ. ಅಂತರಂಗದ ಭಾವಲಿಂಗದ ಪೂಜೆಯಿಂದ ದೇವರ ಸಾಕ್ಷಾತ್ಕಾರವಾಗುತ್ತದೆ .ಆದಕಾರಣ ಮಾನಸಪೂಜೆಗೆ ಹೆಚ್ವಿನ‌ ಮಹತ್ವವನ್ನು‌ ಕೊಡಬೇಕೆಂದು ಈ‌ ಕಗ್ಗ‌‌ ಹೇಳುತ್ತದೆ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990

LEAVE A REPLY

Please enter your comment!
Please enter your name here