ಹಾಯ್, ಹಲೋ, ನಮಸ್ಕಾರ…ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ ಉತ್ತರಗಳನ್ನ ಖಂಡಿತ ಕೊಡ್ತೀರಿ…
ಆದರೆ ಯಾರೂ ಕೂಡ ಫೆಂಟಾಸ್ಟಿಕ್ , ನಾನು ತುಂಬಾ ಚೆನ್ನಾಗಿದ್ದೀನಿ, ಖುಷ್-ಖುಷಿಯಾಗಿ ಇದ್ದೀನಿ ಅಂತ ಮಾತ್ರ ಹೇಳುವುದೇ ಇಲ್ಲ.
ಯಾಕೆಂದರೆ ಮನುಷ್ಯ ಜೀವನವೇ ಹೀಗೆ ಸಿರಿವಂತರಾದರೂ ಬಡವರಾದರೂ, ಲಕ್ಷಾಧಿಶ, ಕೋಟ್ಯಲಧೀಶ, ಬಿಲಿಯನಿಯರ್ ಆಗಿದ್ದರೂ ಅಥವಾ ಡಾಕ್ಟರು,ಇಂಜಿನಿಯರು, ಸಾಫ್ಟ್ವೇರ್ ಕಂಪನಿಯ ವರ್ಕರ್ರು ಹೀಗೆ ಯಾವುದೇ ಒಂದು ದೊಡ್ಡ ಹುದ್ದೆಯಲ್ಲಿ ಇದ್ದರೂ ನಾನು ಚೆನ್ನಾಗಿದ್ದೀನಿ, ಐ ಫೀಲ್ ವೆರಿ ಕಂಫರ್ಟ್ ನಾನು ತುಂಬಾ ಕಂಫರ್ಟ್ ಝೋನ್ ಅಲ್ಲಿ ಸುಖವಾಗಿದ್ದೇನೆ ಅಂತ ಮಾತ್ರ ಯಾರೂ ಹೇಳುವುದಿಲ್ಲ ಹಾಗೊಂದು ವೇಳೆ ಹೇಳಿದರೂ ಕೂಡ ಅವರು ಸುಖವಾಗಿ ಇರಲು ಸಾಧ್ಯವೇ ಇಲ್ಲ.
ಯಾಕೆಂದರೆ ಪ್ರತಿಯೊಬ್ಬರನ್ನು ಕೂಡ ಒಂದಲ್ಲ ಒಂದು ಕೊರತೆ ಅನ್ನುವದು ಕಾಡುತ್ತಲೇ ಇರುತ್ತದೆ ಕೆಲವರಿಗೆ ಬಿಪಿ,ಶುಗರ್,ಅಸ್ತಮಾ, ಅಂತಹ ಕಾಯಿಲೆಗಳು ಕಾಡಿದರೆ ಇನ್ನು ಕೆಲವರಿಗೆ ವಾಸಿಯೇ ಆಗದ ಮತ್ತು ಅಂತಿಮವಾಗಿ ಕೆಲವು ತಿಂಗಳ ಅಥವಾ ವರ್ಷಗಳ ಅವಧಿಯಲ್ಲಿ ಸಾವಿನೊಂದಿಗೆ ಮುಕ್ತಾಯವಾಗುವ ಮಾರಣಾಂತಿಕ ಕಾಯಿಲೆಗಳು ಕೂಡ ಕಾಡುತ್ತಲೇ ಇರುತ್ತವೆ.
ಸಿ ಎಸ್ ಅಶ್ವಥ್ ಅವರ ಒಳಿತು ಮಾಡು ಮನುಜ ನೀ ಇರೋದು ಮೂರು ದಿವಸ,ಮೂರು ದಿನದ ಸಂತೆ ನಗು-ನಗುತ ಮಾಡಬೇಕು ಬರಲು ಏನು ತಂದೆ ಬರದು ಏನು ಹಿಂದೆ ಅನ್ನುವ ಹಾಡಿನ ಸಾಲುಗಳು ಬಹುತೇಕ ಎಲ್ಲರ ಕಿವಿಗೂ ಕೇಳಿಸಿರುತ್ತವೆ ಮತ್ತು ಬಹಳ ಜನರ ಬಾಯಲ್ಲಿ ಗುಣು-ಗುಣಿಸಲ್ಪಟ್ಟಿರುತ್ತದೆ ಆದಾಗಿಯೂ ಕೂಡ ಬದುಕೆಂಬ ಜಾತ್ರೆಗೆ ಬಂದ ನಾವು ನೀವೆಲ್ಲ ಅದು ಎಲ್ಲೆಲ್ಲಿಯೋ ಕಳೆದು ಹೋಗಿರುತ್ತೇವೆ.
ವರ್ಷದ ಉದ್ದಕ್ಕೂ ನಡೆಯುವ ಅದೆಷ್ಟೋ ಊರುಗಳ ದೇವರ ಜಾತ್ರೆ,ರಥಯಾತ್ರೆ, ಹಬ್ಬ ಹರಿದಿನಗಳ ಆಸುಪಾಸಿನಲ್ಲಿ ನಡೆಯುವ ಮಠಗಳ ಜಾತ್ರೆ, ಉತ್ಸವ ಹಾಗೂ ಉರುಸುಗಳ ನೆಪದಲ್ಲಿ ಊರ ಜನರಿಂದ ಹಿಡಿದು ಅಕ್ಕ ಪಕ್ಕದ ಹಳ್ಳಿಗಳಿಂದಲೂ ಜನರೆಲ್ಲ ಒಂದೆಡೆ ಸೇರುವ, ಮತ್ತು ದೇವರಿಗೆ ಕಾಯಿ ಕರ್ಪೂರ ಅರ್ಪಿಸಿಯೋ, ಮುದ್ದೆ ಸಕ್ಕರೆ ಅರ್ಪಿಸಿಯೋ ಊದುಬತ್ತಿ ಅಥವಾ ಕರ್ಪೂರ ಬೆಳಗಿಯೋ,ಚಾದರು ಹೊದಿಸಿಯೋ,ದೀಡ್ ನಮಸ್ಕಾರ ಅಥವಾ ಉರುಳು ಸೇವೆ ಮಾಡಿಯೋ,ಕೆಂಡ ಹಾಯ್ದು ಅಥವಾ ಬೆನ್ನಿಗೆ ಕೊಕ್ಕೆ ಹಾಕಿಸಿಕೊಂಡೋ, ಮಾಡುವ ಭಕ್ತಿ ಭಾವದ ಅರ್ಪಣೆಯ ಜೊತೆಗೆ ಬಣ್ಣದ ಭಾವನೆಗಳನ್ನು ಬಡಿದೆಬ್ಬಿಸುತ್ತಿದ್ದ ಜಾತ್ರೆಗಳು ಕೂಡ ಈಗೀಗ ಮೊದಲಿನಂತೆ ಉಳಿಯದೇ ಇರುವುದು ವಿಪರ್ಯಾಸವೇ ಸರಿ…
ಮೊದಲೆಲ್ಲ ಊರ ಜಾತ್ರೆ ಅನ್ನುವ ಕಾರಣಕ್ಕೆ ದೂರದ ಊರುಗಳಿಂದ ಬರುತ್ತಿದ್ದ ಮಕ್ಕಳು, ನೆಂಟರು,ಬೀಗರು ಹೀಗೆ ಹಲವಾರು ಸಂಬಂಧಿಕರಿಂದ ತುಂಬಿ ತುಳುಕುತ್ತಿದ್ದ ಹಳ್ಳಿಯ ಮನೆಗಳು ಕೂಡ ಈಗೀಗ ಬಣಗುಡುತ್ತಿರುತ್ತವೆ.
ಯಾವುದೋ ಮನೆಯಲ್ಲಿ ಮೊದಲಿನ ಹಿರಿಯರು ಯಾರು ಉಳಿಯಲಿಲ್ಲ ಅನ್ನುವ ಕಾರಣಕ್ಕೆ,ಅಣ್ಣ ತಮ್ಮಂದಿರು ಅವರವರ ಆಸ್ತಿಯ ಪಾಲು ಮಾಡಿಕೊಂಡಿದ್ದಾರೆ ಇನ್ನು ಮುಂದೆ ನಮಗೆ ಯಾರ ಅಗತ್ಯವೇ ಇಲ್ಲ ಅಂದುಕೊಂಡ ಕಾರಣಕ್ಕೆ,ರಜೆ ಸಿಗುವದಿಲ್ಲ ಅನ್ನುವ ನೆಪಕ್ಕೆ ಮತ್ತು ದೂರದ ಪ್ರಯಾಣ ಹೆಂಡತಿಗೆ ಆಗಿ ಬರುವದಿಲ್ಲ ಅಂತಲೋ ಮಕ್ಕಳ ಶಾಲೆ ಟ್ಯೂಷನ್ ಮಿಸ್ ಆದ್ರೆ ಕಷ್ಟ ಅಂತಲೋ ಹುಟ್ಟಿಕೊಂಡ ನೆಪಗಳ ಜೊತೆಗೆ ಒಂದು ವೇಳೆ ಹಾಗೂ ಹೀಗೂ ಬಂಧುಗಳೆಲ್ಲ ಒಂದು ಕಡೆ ಕೂಡಿದರೆ ಸರಿಯಾದ ಆದರ ಆತಿಥ್ಯಗಳು ಸಿಗುವುದಿಲ್ಲ ಅನ್ನುವ ಕಾರಣಕ್ಕೆ ಒಟ್ಟಾರೆಯಾಗಿ ಮೊದಲಿನಂತೆ ಎಲ್ಲರೂ ಒಂದೆಡೆ ಸೇರುವ ಮತ್ತು ಸಂತಸ ಪಡುವ ಹಾಗೂ ಸಡಗರದಿಂದ ಹಬ್ಬಗಳನ್ನು, ಜಾತ್ರೆಗಳನ್ನು ಆಚರಿಸುವ ದಿನಗಳು ಈಗ ಬಹುತೇಕ ಮುಗಿದೇ ಹೋದಂತಾಗಿವೆ.
ಅಪ್ಪಿ-ತಪ್ಪಿ ಇಂತಹ ಜಾತ್ರೆಗಳಿಗೆ ಹೊರಟು ನಿಂತರು ಕೂಡ ಕಾಡುವ ಆರ್ಥಿಕ ಸ್ವಾತಂತ್ರ್ಯದ ಕೊರತೆ ಒಂದು ಕಡೆಯಾದರೆ ನಾವೆಲ್ಲ ಚಿಕ್ಕವರಿದ್ದಾಗ ಸಿಗುತ್ತಿದ್ದ ಒಂದು,ಎರಡು, ಅಥವಾ ಐದು,ಹತ್ತು ಮತ್ತು ಇಪ್ಪತ್ತೈದರ ವಸ್ತುಗಳೆಲ್ಲ ಈಗ ನೂರರ ಗಡಿ ದಾಟಿರುವುದು ಅನುಭವಕ್ಕೆ ಬರುವುದು ಒಂದು ಕಡೆಯಾದರೆ ಜೇಬಿನಲ್ಲಿ ದುಡ್ಡಿದ್ದರೂ ಕೂಡ ಹರುಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಅನ್ನುವ ಸತ್ಯದ ಅರಿವು ಆಗುತ್ತಾ ಹೋದಂತೆ ಮತ್ತು ನಮ್ಮ ವಯಸ್ಸುಗಳು ಮಾಗುತ್ತ ಹೋದಂತೆಲ್ಲ ಜಾತ್ರೆ ಮತ್ತು ಹಬ್ಬ ಹರಿದಿನಗಳ ಆಚರಣೆಗಳಲ್ಲಿ ಪಾಲ್ಗೊಳ್ಳುವಿಕೆಯ ಖುಷಿಯೂ ಕೂಡ ಷೇರ್ ಮಾರ್ಕೆಟ್ಟಿನಂತೆ ಕುಸಿಯುತ್ತ ಹೋಗಿ ನಾವೆಲ್ಲ ನಮ್ಮತನವನ್ನು ಕಳೆದುಕೊಳ್ಳುತ್ತಲೇ ಇದ್ದೇವೆ.
ಅದರಲ್ಲೂ ಕೂಡ ಮೊಬೈಲ್ ಎಂಬ ಮಾಯೆ ಮಕ್ಕಳು ಬಾಲ್ಯದಲ್ಲಿ ನಿಜವಾದ ಜಗತ್ತಿನಲ್ಲಿ ಅನುಭವಿಸಬಹುದಾದ ನವಿರು ಭಾವಗಳನ್ನ ಹೊಸಕಿ ಹಾಕುತ್ತಾ ಅವರೆಲ್ಲ ಕಾಲ್ಪನಿಕ ಲೋಕದಲ್ಲೇ ತೇಲಾಡುವಂತೆ ಮಾಡುತ್ತಾ ಇರುವುದರಿಂದ ಬಹುತೇಕ ಜಾತ್ರೆಗಳ ಕಡೆಗಿನ ಬೆರಗು ಅನ್ನುವುದು ಕರಗುತ್ತಲೇ ಹೋಗುತ್ತಿದೆ…
ಒಂದಾನೊಂದು ಕಾಲದಲ್ಲಿ ಹೋಳಿಗೆಯ ಊಟವೇ ಅಪರೂಪವಾಗಿದ್ದ ಮತ್ತು ಹಬ್ಬ ಹರಿದಿನಗಳ ಕಾರಣಕ್ಕಾಗಿಯೇ ಹೊಸ ಬಟ್ಟೆಗಳನ್ನು ಕೊಳ್ಳುತ್ತಿದ್ದ ದಿನಗಳೆಲ್ಲ ಮಾಯವಾಗಿ ಅಮೆಜಾನ್, ಫ್ಲಿಪ್ಕಾರ್ಟ್, ಮೀಷೋ, ದಂತಹ ಬೃಹತ್ ಆನ್ಲೈನ್, ಉದ್ದಿಮೆಗಳು ಮನೆಯ ಬಾಗಿಲಿಗೆ ನಮಗೆ ಬೇಕೆನಿಸಿದ ತರಹೇವಾರಿ ವಸ್ತುಗಳನ್ನ ಪೂರೈಸತೊಡಗಿದ ಮೇಲಂತೂ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆ-ಪೇಟೆಗಳು ಕೂಡ ಈಗೀಗ ಖಾಲಿ ಖಾಲಿಯಾಗಿ ಕಾಣಿಸುತ್ತಿವೆ…
ಮೊದಲೆಲ್ಲ ಅಪರೂಪಕ್ಕೆ ಸಿಗುತ್ತಿದ್ದವರು, ಮಾತನಾಡುತ್ತಿದ್ದವರು ಈಗೀಗ ವಿಡಿಯೋ ಕಾಲ್, ಫೋನ್ ಕಾಲ್, ಮತ್ತು ಚಾಟಿಂಗುಗಳಲ್ಲಿ ಲಭ್ಯವಾಗುತ್ತಿರುವುದರಿಂದ ಪರಸ್ಪರ ಪ್ರೀತಿ,ಪ್ರೇಮ,ಕರುಣೆ ದಯೆ,ದಾಕ್ಷಿಣ್ಯ ಮತ್ತು ವಾತ್ಸಲ್ಯಗಳು ಕೂಡ ಕಡಿಮೆಯಾಗುತ್ತಾ ಹೋಗಿ ಒಬ್ಬರಿಂದ ಒಬ್ಬರಿಗೆ ಇರುತ್ತಿದ್ದ ಗೌರವ,ಆದರಗಳೂ ಕೂಡ ಸೊರಗಿ ಸುಣ್ಣವಾಗುತ್ತಿರುವುದರಿಂದ ಬಣ್ಣದ ಬದುಕು ತನ್ನ ಬಣ್ಣವನ್ನೇ ಕಳೆದುಕೊಳ್ಳುತ್ತಿದೆ…
ಮೊದಲೆಲ್ಲ ಗೆಳೆಯರ ಜೊತೆಗೆ ಗುಂಪು ಗುಂಪಾಗಿ ತಿರುಗುತ್ತಾ ಜೇಬಿನಲ್ಲಿ ದುಡ್ಡಿಲ್ಲದ ಕಾಲದಲ್ಲಿಯೂ ಜಾತ್ರೆಗಳನ್ನು ಅಚ್ಚರಿಯಿಂದ ನೋಡುತ್ತಾ ಐದು-ಹತ್ತು ರೂಪಾಯಿಗಳಲ್ಲಿ ಮಂಡಕ್ಕಿಯ(ಚುನಮುರಿಯ ಜೊತೆಗೆ) ಜೊತೆ ಒಂದಷ್ಟು ಬೆಲ್ಲದ ಸೇವು,ಬತ್ತಾಸು ಅಥವಾ ಪರ್ಸನ್ ಅನ್ನುವ ಸೇವ್ ಮಿಕ್ಸ್ ಗಳನ್ನೇ ಗೆಳೆಯರೆಲ್ಲ ಒಟ್ಟು ಕೂಡಿಕೊಂಡು ಹಣ ಹೊಂದಿಸಿ ಖರೀದಿಸಿ ಪೇಪರೊಂದರಲ್ಲಿ ಹರವಿಕೊಂಡು ಸುತ್ತಲೂ ಕುಳಿತು ತಿಂದು, ಅಲ್ಲೆ ಪಕ್ಕದ ನಲ್ಲಿ,ಬೋರವೆಲ್ಲ ನಲ್ಲಿ ಅಥವಾ ಟ್ಯಾಂಕರಿನ ನೀರು ಕುಡಿದು ಖಾಲಿ ಕೈಯಲ್ಲೇ ಮನೆಗಳಿಗೆ ಮರಳಿದರೂ ಕೂಡ ಮನಸು ಅನ್ನುವದು ಮರೆಯಲಾಗದ ನೆನಪುಗಳಿಂದ ಮತ್ತು ಸಂತಸದ ಕ್ಷಣಗಳಿಂದ ತುಂಬಿರುತ್ತಿತ್ತು ಆದರೆ ಈಗ ಅದು ಯಾವುದರ ಪರಿವೆಯು ಇಲ್ಲದೆ ನಾವು-ನೀವೆಲ್ಲ ಈ ಬದುಕಿನ ಜಾತ್ರೆಗಳಲ್ಲಿ ಕಳೆದು ಹೋದ ಮಗುವಿನಂತಾಗಿ ನಮ್ಮ ಮನಸ್ಸುಗಳು ನರಳುತ್ತಿದ್ದರೂ ಕೂಡ ಕೃತಕ ನಗುವನ್ನೇ ಮುಖದ ಮೇಲೆ ತಂದುಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿಕೊಂಡಿರುವುದು ಬಹುಶಃ ನಿಮ್ಮ ಗಮನಕ್ಕೂ ಬಂದಿರಬಹುದು…
ಜಾತ್ರೆಯಲ್ಲಿ ಕತ್ತೆ ಒಂದರ ಕಣ್ಣಿಗೆ ಪಟ್ಟಿ ಕಟ್ಟಿದ ಬಳಿಕವೂ ಪನ್ನಾಲಾಲ್ ಹೆಸರಿನಲ್ಲಿ ಮನರಂಜನೆ ನೀಡುತ್ತಿದ್ದ ಮತ್ತು ಕಟ್ಟಿಗೆಯಿಂದ ನಿರ್ಮಿಸಿದ ಬಾವಿಯೊಳಗೆ ತಮ್ಮ ಜೀವವನ್ನೇ ಒತ್ತೆಯಿಟ್ಟು ಬೈಕು ಕಾರುಗಳನ್ನು ಚಲಾಯಿಸುತ್ತಿದ್ದ, ಸಣ್ಣಪುಟ್ಟ ಮೋಟಾರ್ ಕಾರು,ಬೈಕ್, ರೈಲು ಅಥವಾ ಪ್ರಾಣಿಗಳ ಪ್ರತಿ ಕೃತಿಗಳಲ್ಲಿ ನಮ್ಮ ಮಕ್ಕಳನ್ನು ಕೂಡಿಸಿ ಕೈಯಿಂದಲೆ ತಿರುಗಿಸಿ ಗಿರಕಿ ಹೊಡೆಸುತ್ತಿದ್ದ, ಎರಡು ಕೈಗಳಲ್ಲಿ ಅಡ್ಡಲಾಗಿ ಬಾಯಿಗೆ ಹಿಡಿದು ತಮ್ಮ ಉಸಿರನ್ನೇ ಬಲೂನಿಗೆ ತುಂಬಿಸಿ ಮಾರಾಟ ಮಾಡುತ್ತಿದ್ದ ಹಾಗೂ ನಿಮ್ಮದೇ ಅಚ್ಚು ಮೆಚ್ಚಿನ ಪ್ರಿಯಕರ, ಪ್ರೇಯಸಿಯ ಹೆಸರಿನ ಮೊದಲ ಅಕ್ಷರವನ್ನು ಹಚ್ಚೆ ಬಟ್ಟು ಎಂದು ಕರೆಯುವ ಹಸಿರು ಬಣ್ಣದ ಟ್ಯಾಟು ಹಾಕಿ ಸೂಜಿ ಚುಚ್ಚಿದ ನೋವಿನಲ್ಲೂ ನೀವು ಸಂಭ್ರಮಿಸುವಂತೆ ಮಾಡುತ್ತಿದ್ದ ಮತ್ತು ಕ್ವಾಯಿನ್ ಒಂದನ್ನು ಹಾಕಿದ ತಕ್ಷಣವೇ ನಿಮ್ಮ ತೂಕವನ್ನು ಅಳೆದು ನೀವು ಕಿವಿಗೆ ಸಿಕ್ಕಿಸಿಕೊಂಡ ದೊಡ್ಡದಾದ ಹೆಡ್ಫೋನಿನಲ್ಲೇ ನಿಮ್ಮ ನಿಖರವೆನಿಸುವ ಭವಿಷ್ಯ ಹೇಳುತ್ತಿದ್ದ ಹಾಗೂ ಒಂದು ಎರಡು ಐದು ಹತ್ತು ರೂಪಾಯಿಗಳ ಆಸೆ ತೋರಿಸಿ ಗ್ಯಾಂಬಲಿಂಗ್ ನಡೆಸುತ್ತಿದ್ದವರು ಆಗೆಲ್ಲ ತುಂಬಿದ ಜಾತ್ರೆಗಳಲ್ಲೂ ನಮ್ಮ ಗಮನ ಸಳೆಯುತ್ತಿದ್ದರು.
ರಿಂಗ್ ಒಂದನ್ನ ಸಾಬೂನ್ ಬಾರ್ ಒಂದಕ್ಕೆ ರಬ್ಬರಿನಿಂದ ಹಾಕಿದ ನೋಟಿಗೆ ನೀವು ಎಸೆದ ತಕ್ಷಣವೇ ಅದನ್ನು ನಿಮಗೆ ಬಹುಮಾನವಾಗಿ ಕೊಡುತ್ತಿದ್ದ ಮತ್ತು ಆರು ಚೆಂಡಿನ ಎಸೆತದಲ್ಲಿ ಎಲ್ಲಾ ಗ್ಲಾಸುಗಳನ್ನು ಕೆಡವಿದರೆ ಟಿವಿ,ಮಿಕ್ಸರ್ ,ಐರನ್ ಬಾಕ್ಸ್,ಕೇರಂ ಬೋರ್ಡ್ ಮತ್ತು ಕ್ರಿಕೆಟ್ ಬ್ಯಾಟ್ ಅಥವಾ ಬಾಲನ್ನು ಬಹುಮಾನವಾಗಿ ಕೊಡುತ್ತಿದ್ದ ಸಣ್ಣ ಪುಟ್ಟ ಉದ್ಯಮಗಳು ಕೂಡ ಈಗೀಗ ತಮ್ಮ ಮನರಂಜನೆಯ ಗುಣಮಟ್ಟವನ್ನು ಕಳೆದುಕೊಳ್ಳುತ್ತಿವೆ.
ಡಮ್ಮಿ ಬಂದೂಕಿನಿಂದ ಗುರಿ ಇಟ್ಟು ಬಲೂನು ಒಡೆಯುವ, ದೊಡ್ಡದಾದ ತೊಟ್ಟಿಲಿನಲ್ಲಿ ಗೆಳೆಯರೊಂದಿಗೆ ಕೂಡುವ ಮಿಡಿಯಮ್ ಸೈಜ್ ತುಂಡುಗಳಾಗಿ ಹೆಚ್ಚಿ ಐಸ್ ಮೇಲಿಟ್ಟ ಕಲ್ಲಂಗಡಿಗೆ ಉಪ್ಪು ಹೊಡೆದು ಕೊಟ್ಟಿರುವದನ್ನೆ ಸ್ಟಿಕ್ ಅಥವಾ ಪೋರ್ಕಿನಲ್ಲಿ ತಿನ್ನುವ,ಎತ್ತಿನ ಗಾಣದಲ್ಲಿ ತೆಗೆದ ಕಬ್ಬಿನ ಹಾಲನ್ನು ಕುಡಿದು ಮನೆಗೆ ಮರಳುವ ಎಷ್ಟೋ ಜನರ ಆಸೆ ಕನಸುಗಳು ಅವರ ಬಾಲ್ಯದಲ್ಲಿ ಈಡೆರದೆ ಹಾಗೆಯೇ ಉಳಿದದ್ದು ಮತ್ತು ಇದ್ದ ಐದು ಹತ್ತು ರೂಪಾಯಿಗಳನ್ನೇ ಜಾತ್ರೆಯಲ್ಲಿ ಹರಿದ ಚೆಡ್ಡಿ ಜೇಬಿನ ಕಾರಣಕ್ಕೆ ಕಳೆದುಕೊಂಡು ಸಾಕಾಗುವ ತನಕ ನೆಲವನ್ನೆ ದಿಟ್ಟಿಸುತ್ತ ಹುಡುಕಿ ಪಕ್ಕದ ಊರಿಗೋ,ದೂರದ ಮನೆಗೋ ನಡೆದುಕೊಂಡೇ ಬಂದವರ ಹಾಗೂ ಖಾಲಿ ಕೈಯಲ್ಲಿ ಮರಳಿ ಬಂದು ಮಕ್ಕಳು ಆಟಿಕೆ ಬೇಡಿ ಅತ್ತಾಗ ತಮ್ಮ ಅಸಹಾಯಕತೆಗೆ ಕಣ್ಣೀರಾದವರ ಕಥೆಗಳನ್ನು ಕೇಳುವ ಮನಸುಗಳು ಕೂಡ ಈಗ ಇಲ್ಲದಂತಾದ ಮೇಲೆ ಮತ್ತು ಮಕ್ಕಳಿಗೆ ಖರ್ಚಿಗೆ ಇರಲಿ ಅಂತ ಬಂಧು-ಬಾಂಧವರೇ ಕೊಡುತ್ತಿದ್ದ ಹಣ ಕೂಡ ತನ್ನ ಬೆಲೆ ಕಳೆದುಕೊಂಡ ಮೇಲೆ ಕೇವಲ ಕಾಗದದ ನೋಟು ಗಳಿಸುವುದರಲ್ಲಿ ಎಲ್ಲರೂ ತಲ್ಲೀನರಾದ ಬಳಿಕ ವರ್ಷಕ್ಕೊಮ್ಮೆ ನಡೆಯುವ ರಂಗು ಕಳೆದುಕೊಳ್ಳದೆ ಇರುತ್ತದೆಯಾ??
ಹೀಗೆ ಊರ ಜಾತ್ರೆಯಲ್ಲಿ ತಾನು ಕಾಲೇಜು,ಅಥವಾ ಹೈಸ್ಕೂಲಿನಲ್ಲಿ ಇದ್ದಾಗ ಪ್ರಸ್ತಾಪಿಸದೆ ಉಳಿದ ಮತ್ತು ಏಕಮುಖವಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಮತ್ತು ತಮ್ಮ ಪ್ರೀತಿಗೆ ಜಾತಿ ಧರ್ಮ ಅಡ್ಡಿಯಾಗಿ ಮತ್ಯಾರದೋ ಪತಿ ಪತ್ನಿ ಆದ ಬಳಿಕವು ಅನೈತಿಕತೆಯ ಯಾವ ಸೊಂಕೂ ಇಲ್ಲದೆ ಅಪ್ಪಟ ಪ್ರೀತಿಯ ಕಾರಣಕ್ಕಾಗಿ ದೂರ ದಿಂದಲಾದರೂ ಒಬ್ಬರನ್ನೊಬ್ಬರು ನೋಡಿ ಕಣ್ಣು ತುಂಬಿಕೊಳ್ಳುವ ಕಾರಣಕ್ಕಾಗಿಯೇ ಜಾತ್ರೆಗಳಲ್ಲಿ ವಿನಾಕಾರಣ ಅಲೆಯುತ್ತಿದ್ದ ಬಗ್ನ ಪ್ರೇಮಿಗಳ ದಂಡು ಕೂಡ ಈಗೀಗ ಮಾಯವಾಗಿದೆ…
ಪ್ರೀತಿ ಅಂದರೇನೇ ಕಾಮ ಅಂದುಕೊಂಡವರಿಗೆ ಮತ್ತು ಇಂತಹ ಯಾವ ಭಾವನೆಗಳು ಇಲ್ಲದೆ ಬಿಡು ಬೀಸಾಗಿ ಜಾತ್ರೆಗಳಲ್ಲಿ ತಿರುಗುವ ಮತ್ತು ತಮಗೆ ಬೇಕೆನಿಸಿದ್ದನ್ನು ಕೈಗೆತ್ತಿಕೊಂಡು ಫೋನ್ ಪೇ,ಗೂಗಲ್ ಪೇ, ಪೇಟಿಎಂ ನಂತಹ ಯಾಪ್ ಗಳ ಮೂಲಕ ಹಣ ಸಂದಾಯ ಮಾಡುವ ಹುಡುಗ ಹುಡುಗಿಯರು ಒಬ್ಬರಿಗೊಬ್ಬರು ಋಣ ಸಂದಾಯ ಮಾಡುವುದನ್ನು ಮತ್ತೆ ಕಲಿಯಬಹುದಾ ?? ಅನ್ನುವ ನನ್ನ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿಯುತ್ತದೆ…
ಹೀಗೆ ಜಾತ್ರೆಗಳಲ್ಲಿ ಸ್ಟೇಷನರಿ ಅಂಗಡಿಗಳ ಅಕ್ಕ-ಪಕ್ಕದಲ್ಲಿ ತನ್ನ ಹಳೆಯ ಗೆಳತಿಯೊಬ್ಬಳನ್ನು ಹುಡುಕುವ ನಿರೀಕ್ಷೆ ಹೊತ್ತ ಕಣ್ಣುಗಳ ಹುಡುಗರು ಅವರು ಎದುರಾದಾಗ ಮತ್ತೇನ್ ಜಾತ್ರಿ ಜೋರಾ… ಬರ್ರೆಲ್ಲ ಕಬ್ಬಿನ ಹಾಲ್ ಕುಡಿಯೋನಂತ… ಐಸ್ ಕ್ರೀಮ್ ತಿಂತೀರಿ ಎನ್… ಅಂತ ಮೊದಲಿನ ಸಲಿಗೆಯಿಂದ ಕೇಳಿದಾಗಲೂ ಬ್ಯಾಡ್ರೀ ಅಂತ ಅನಿವಾರ್ಯ ಕಾರಣದಿಂದಲೇ ನಿರಾಕರಿಸುವ ಮತ್ತು ಯಾರಾದರೂ ಪರಿಚಯದವರು ನೋಡುತ್ತಾರೆ ಎಂಬ ಭಯದಲ್ಲೇ ತುಂಬಿದ ಜಾತ್ರೆಯಲ್ಲಿ ಎಲ್ಲೋ ಕರಗಿ ಮಾಯವಾಗುವ ಅದೆಷ್ಟೋ ಜೀವಗಳ ವೇದನೆ ಯಾರ ಕಣ್ಣಿಗೂ ಕಾಣದೇ ಇರುವುದು ವಾರದೊಪ್ಪತ್ತಿನಲ್ಲೇ ಅಫೇರು ಬದಲಿಸುವ ಈಗಿನ ಹುಡುಗ ಹುಡುಗಿಯರಿಗೆ ಬಹುತೇಕ ಬೆರಗು ಹುಟ್ಟಿಸುವುದೇ ಇಲ್ಲ…
ಹಳೆಯ ಗೆಳತಿಯೊಬ್ಬಳು ಮತ್ತೊಬ್ಬ ಗೆಳತಿಗೆ ಸಿಕ್ಕು ಯಾಕ್ ಸುಜಿ ಎಷ್ಟ್ ಸೊರಗಿ ಬಿಟ್ಟೆವ್ವಾ ನೀ?? ಮತ್ ಮಕ್ಕಳಾ…ಎಷ್ಟ ಆದೂ ಇಕಿ ಸಣ್ಣಕ್ಕಿ ಎನ್ ಅಕಿ ಎಲ್ಲಿ ಅದಾಳು ದೊಡ್ಡಾಕಿ ಅಯ್ಯ ಗುರ್ತ ಸಿಗಲಿಲ್ಲ ಮತ್ತ ಮಾಮಾರ ಬಂದಿಲ್ಲ ಅಂತ ಕೇಳುತ್ತಲೇ ತನ್ನ ಹಣೆಯ ಮೇಲಿನ ಬಿಂದಿಯನ್ನೇ ತೆಗೆದು ಖಾಲಿ ಹಣೆಯಲ್ಲಿ ಬಂದ ಗೆಳತಿಯ ಹಣೆಗೆ ಅಂಟಿಸುವ ಅಥವಾ ಅವರ ಮಕ್ಕಳ ಕೈಯಲ್ಲಿ ಐವತ್ತೋ ನೂರರ ನೋಟು ಕೊಟ್ಟು ಏನು ಬೇಕ ತಗೋರ ಅಪ್ಪಿ ಅನ್ನುವ ಕಕ್ಕುಲತೆ ಹೊಂದಿದ ಕಾರುಣ್ಯದ ಮನಸುಗಳು ಕೂಡ ಮಾಯವಾಗಿ ನಾವ್ ಆಯ್ತು ನಮ್ಮ ಜಾತ್ರೆಯಾಯಿತು ಅಂತಾನೆ ಕಳೆದು ಹೋಗುತ್ತಿರುವ ಯುವ ಜನತೆಯನ್ನು ನೋಡಿದಾಗೆಲ್ಲ ನನಗೆ ತೀವ್ರ ವೇದನೆಯಾಗುತ್ತದೆ.
ದೇವರ ಪ್ರಸಾದ ಸಿಗುತ್ತದೆ ಅನ್ನುವ ಕಾರಣಕ್ಕೆ ಮನೆಯಲ್ಲಿ ಒಲೆಯನ್ನೇ ಹೊತ್ತಿಸದೆ ಮೂರು ನಾಲ್ಕು ದಿನವೂ ಜಾತ್ರೆಯ ಪ್ರಸಾದದಲ್ಲಿಯೇ ಹೊಟ್ಟೆ ಹೊರೆಯುವ ಮತ್ತು ತೆಂಗಿನ ಕಾಯಿ ಒಡೆಯಿಸುವುದಕ್ಕೂ ಹಣವಿಲ್ಲದೆ ಇರುವುದರಿಂದ ಎಂಟಾನೇ, ರೂಪಾಯಿಯ ಕರ್ಪೂರ ಖರೀದಿಸಿ ಅದನ್ನೇ ಭಕ್ತಿಯಿಂದ ದೇವರ ಬೆಳಗಿಸುವ ಇಲ್ಲವೇ ದೇವಸ್ಥಾನದ ಹೊರಗೆ ನಿಂತು ಕೈ ಮುಗಿದು ಬೇಡಿಕೊಳ್ಳುವ ಜೀವಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಸಂವೇದನಾ ಶೀಲತೆಯು ಕೂಡ ಮರೆಯಾಗುತ್ತಿರುವದು ದುರಂತವೇ ಸರಿ..
ಪ್ರತಿಯೊಂದನ್ನೂ ಹಣದಿಂದ ಅಳೆಯುವ ಮತ್ತು ಎದುರಿಗಿನ ವ್ಯಕ್ತಿಯ ಅಧಿಕಾರ,ಆಸ್ತಿ ಅಂತಸ್ತುಗಳನ್ನು ನೋಡಿಯೇ ಒಬ್ಬರನ್ನೊಬ್ಬರು ಗೌರವಿಸುವ ಗುಣಗಳು ಯಾವ ಮಾಯೆಯಲ್ಲಿ ನಮ್ಮ ಬದುಕಿಗೆ ಲಗ್ಗೆ ಇಟ್ಟವೋ ಅಂದಿನಿಂದಲೇ ಜಾತ್ರೆಗಳು ಬೆರಗು ಹುಟ್ಟಿಸುವುದನ್ನ ಮರೆತುಬಿಟ್ಟಿವೆ…
ಇಷ್ಟಕ್ಕೂ ಗಮನಿಸಿ ನೋಡಿದರೆ ಹತ್ತಾರು ವರ್ಷಗಳಿಂದ ಬಲೂನು ಮಾರುವ, ಆಟಿಕೆಯ ಸಾಮಾನುಗಳನ್ನು ಮಾರುವ,ಬಣ್ಣದ ಬಳೆ,ಆರ್ಟಿಪಿಸಿಯಲ್ ಕಿವಿಯೋಲೆ ಮಾರುವ ಅದೇ ಅಂಗಡಿಗಳು ಅದೇ ಜಾಗದಲ್ಲಿ ಇದ್ದರೂ ಕೂಡ ಬದಲಾಗಿದ್ದು ಖಂಡಿತ ಜಾತ್ರೆಗಳಲ್ಲ…
ನಾವು ಮತ್ತು ನಮ್ಮ ಮನಸ್ಥಿತಿಗಳಷ್ಟೇ ಅನ್ನುವ ಅರಿವು ನಮ್ಮಲ್ಲಿ ಯಾವಾಗ ಮೂಡುತ್ತದೆಯೋ… ಅಥವಾ ಆ ಅರಿವು ಮೂಡುವ ವೇಳೆಗಾಗಲೇ ನಮ್ಮ ಬದುಕಿನ ಜಾತ್ರೆಯೇ ಮುಗಿದು ಹೋಗುತ್ತದೆಯೋ ಬಲ್ಲವರಾರು??
ಯಾವುದಕ್ಕೂ ಸಮಯ ಸರಿದರು ಕೂಡ ನಮ್ಮ ಬದುಕುವ ಉತ್ಸಾಹ, ನಮ್ಮೊಳಗಿನ ಚೈತನ್ಯ ಮತ್ತು ಲವಲವಿಕೆಗಳು ದೂರ ಸರಿಯದಿರಲಿ ಅನ್ನುವ ಆಶಯದೊಂದಿಗೆ ಎಲ್ಲರಿಗೂ ಊರ ಜಾತ್ರೆಯ ಹಾರ್ದಿಕ ಶುಭಾಶಯಗಳು….
ದೀಪಕ ಶಿಂಧೇ
9482766018