ಬೀದರ – ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮು ಗಲಭೆ ಹೆಚ್ಚಾಗಿವೆ.ಸರ್ಕಾರದ ಹಿಡಿತ ತಪ್ಪಿದೆ. ರಾಜ್ಯದಲ್ಲಿ ತೊಘಲಕ್ ದರ್ಬಾರ ಇದೆ. ನನ್ನ ಅವಧಿಯಲ್ಲಿ ಒಂದಾದರೂ ಕೋಮುಗಲಭೆ ನಡೆದಿದೆಯಾ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನೆ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಜೊತೆ ಕಾರಂಜಾ ಸಂತ್ರಸ್ತರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ನಂತರ ನಗರದಲ್ಲಿ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ತರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ಯಾವುದೆ ಕಾರಣಕ್ಕೂ ಯೂಪಿ ಮಾದರಿಯ ಬುಲ್ಡೋಜರ್ ಸಂಸ್ಕೃತಿ ನಮ್ಮ ರಾಜ್ಯಕ್ಕೆ ಬರೋದು ಬೇಡ. ಎರಡು ಕೋಮುಗಳ ಮಧ್ಯೆ ಜಗಳ ಹಚ್ಚುವ ಕಾರ್ಯ ಬಿಜೆಪಿ, ಕಾಂಗ್ರೆಸ್ ಮಾಡುತ್ತಿವೆ ಇದರಿಂದ ಯುವಕರು ಎಚ್ಚರವಾಗಿ ಇರುವ ಅವಶ್ಯಕತೆ ಇದೆ ಎಂದರು.
ಯುವಕರು ಯಾವುದೆ ಕಾರಣಕ್ಕೆ ಸಂಘಟನೆಗಳ ಮಾತು ಕೇಳೋದು ಬೇಡ. ಕರ್ನಾಟಕ ಶಾಂತಿಯ ಕೈತೋಟವಾಗಬೇಕು. ಆದರೆ ಈಗ ನಡೆದಿರುವುದಾದರು ಏನು ? ಈ ಸರ್ಕಾರ ಎರಡು ಕೋಮುಗಳ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸುವ ಕಾರ್ಯ ಮಾಡಬೇಕಿತ್ತು ಆದ್ರೆ ಅದು ಮಾಡುತ್ತಿಲ್ಲ ಎಂದು ಎಚ್ಡಿಕೆ ಬೇಸರ ವ್ಯಕ್ತಪಡಿಸಿದರು.
ಕರಾವಳಿ ಭಾಗದಲ್ಲಿ 10 ದಿನಗಳಲ್ಲಿ ಮೂರು ಹತ್ಯೆಗಳಾಗಿವೆ.15 – 20 ವರ್ಷಗಳಿಂದ ಈ ಸಮಸ್ಯೆ ಕರಾವಳಿ ಭಾಗದಲ್ಲಿದೆ.ಈ ಭಾಗದಲ್ಲಿ ತಮ್ಮ ಶಕ್ತಿಗಳನ್ನು ವೃದ್ಧಿ ಮಾಡಲು ಸಮಾಜಗಳನ್ನು ಒಡೆಯವ ಕೆಲಸ ಮಾಡುವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಕೊಡುಗೆ ದೊಡ್ಡದಿದೆ ಎಂದು ಕುಮಾರಸ್ವಾಮಿ ಹೇಳಿದರು.
ಎನ್ಐಎ ಹಾಗೂ ಬುಲ್ಡೋಜರ್ ಸಂಸ್ಕೃತಿ ತರುವುದಾಗಿ ಸಿಎಂ ಹೇಳಿದ್ದಾರೆ. ಸಿಎಂಗೆ ಕನಿಷ್ಠ ಜ್ಞಾನವಿಲ್ಲ. ನಿನ್ನೆ ಸಿಎಂ ಎರಡೂ ಸಮಾಜಗಳಿಗೆ ಶಾಂತಿಯಿಂದ ಇರಬೇಕು ಎಂಬ ಸಂದೇಶ ನೀಡಬೇಕಿತ್ತು. ಅವರು ನೀಡಲಿಲ್ಲ. ಹತ್ಯೆಗಳಿಗೆ ಬ್ರೇಕ್ ಬೀಳಬೇಕು ಎಂದರೆ ಈ ರಾಜ್ಯದಿಂದ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತು ಬಿಸಾಡಿ ಎಂದು ಕರಾವಳಿ ಭಾಗದ ಜನರಿಗೂ ನಾನು ಮನವಿ ಮಾಡುತ್ತೇನೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಕಾನೂನು ಸುವ್ಯವಸ್ಥೆ ಉಳಿದಿಲ್ಲ, ಇಂಟೆಲಿಜೆನ್ಸ ಫೆಲ್ಯೂರ್ ಆಗಿದೆ. ಹೋಂ ಮಿನಿಸ್ಟರ್ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.
Aವರದಿ: ನಂದಕುಮಾರ ಕರಂಜೆ, ಬೀದರ