Homeಸಂಪಾದಕೀಯಕಾಂಗ್ರೆಸ್ ಬಣ್ಣ ಬಯಲಾಗುತ್ತಿದೆ

ಕಾಂಗ್ರೆಸ್ ಬಣ್ಣ ಬಯಲಾಗುತ್ತಿದೆ

    ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಇತರರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದುದು ತೀರಾ ನಾಟಕೀಯ ಹಾಗೂ ನಾಚಿಕೆಗೇಡಿನ ಸಂಗತಿ. ಅದೂ ರಾಹುಲ್ ಗಾಂಧಿಯ ಅಜ್ಜಿ ಸಂವಿಧಾನವನ್ನು ಎಲ್ಲಾ ರೀತಿಯಲ್ಲೂ ಮಗ್ಗುಲು ಮುರಿದು ತುರ್ತು ಪರಿಸ್ಥಿತಿ ಹೇರಿ ದಬ್ಬಾಳಿಕೆಯ ರಾಜಕಾರಣ ಮಾಡಿದ ಐವತ್ತನೇ ವರ್ಷದ ದಿನದಂದೇ ಈ ನಾಟಕ ಮಾಡಿದ್ದು ವಿಪರ್ಯಾಸ.
   ರಾಹುಲ್ ಗಾಂಧಿ ಮಾತು ಮಾತಿಗೂ ತಾವೇ ಸಂವಿಧಾನದ ರಕ್ಷಕರಂತೆ ಸೊಂಟ ಕಟ್ಟಿ ನಿಂತಿದ್ದು, ‘ಸಂವಿಧಾನದ ಮೇಲೆ ಪ್ರಧಾನಿ ಮತ್ತು ಅಮಿತ್ ಷಾ ನಡೆಸುತ್ತಿರುವ ದಾಳಿ(!) ನಮಗೆ ಸ್ವೀಕಾರಾರ್ಹವಲ್ಲ. ಹಾಗಾಗಲು ನಾವು ಬಿಡುವುದಿಲ್ಲ. ಯಾವುದೇ ಶಕ್ತಿಯಿಂದ ಸಂವಿಧಾನ ಮುಟ್ಟಲು ಸಾಧ್ಯವಿಲ್ಲ’ ಎಂದು ಗರ್ಜಿಸುತ್ತಾರೆ. ಅವರ ಕರ್ಕಶ ದನಿಯಲ್ಲೇ ಅವರ ಅಜ್ಜಿ ಹಾಗೂ ಅವರ ತಂದೆ ರಾಜೀವ್ ಗಾಂಧಿ ಸಂವಿಧಾನ ಬದಲಾಯಿಸುವ ಮಾತು ಆಡಿದ್ದು ಅಡಗಿ ಹೋಗುತ್ತದೆ.
ಅಷ್ಟಕ್ಕೂ ಮೋದಿಯವರು ಸಂವಿಧಾನದ ಮೇಲೆ ದಾಳಿ ಮಾಡಿದ್ದು ಯಾವಾಗ ಮತ್ತು ಯಾವ ರೀತಿಯಲ್ಲಿ ಎಂಬುದನ್ನು ಕಾಂಗ್ರೆಸ್ಸಿಗರು ಹೇಳಬೇಕು. ಒಂದು ವೇಳೆ ಮೋದಿ ಸರ್ವಾಧಿಕಾರಿಯಾಗಿದ್ದರೆ ಕೆಲವು ಕಾಂಗ್ರೆಸ್ ನಾಯಕರು ಅವರನ್ನು ಸಾವಿನ ವ್ಯಾಪಾರಿ, ನರಹಂತಕ, ನೀಚ, ಚೋರ ಎಂದೆಲ್ಲ ಸಂಬೋಧಿಸಿ ಮಾತನಾಡುವುದು ಸಾಧ್ಯವಿತ್ತೆ ? ಎಂಬುದನ್ನು ಅವರೇ ವಿಚಾರ ಮಾಡಬೇಕು. ಮೋದಿಯವರು ತನಗಾಗಿ, ತಮ್ಮ ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಶತ ಪ್ರತಿಶತ ತಮಗಾಗಿ, ತಮ್ಮ ಈಗಿನ ಕುಟುಂಬ ಅಷ್ಟೇ ಅಲ್ಲ ಮುಂಬರುವ ಪೀಳಿಗೆಗಾಗಿ ಕೂಡ ರಾಜಕಾರಣ ಮಾಡುತ್ತಿದ್ದು ಅದನ್ನೇ ಒಂದು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಿಲ್ಲದಿದ್ದರೆ ಯಾವ ಉದ್ಯೋಗ ಅಥವಾ ಉದ್ಯಮ ಇಲ್ಲದೆಯೇ ಸೋನಿಯಾ ಗಾಂಧಿ ಅತ್ಯಂತ ಶ್ರೀಮಂತ ಮಹಿಳೆ ಅನಿಸಿಕೊಳ್ಳುತ್ತಿದ್ದರೆ ?
ಕಾಂಗ್ರೆಸ್ ಪಕ್ಷದ್ದು ದ್ವಂದ್ವ ನೀತಿ ಅಥವಾ ಭಂಡ ನೀತಿ. ತಾನೇನು ಮಾಡಿದೆಯೋ ಅದನ್ನು ಇನ್ನೊಬ್ಬರು ಮಾಡಬಾರದು. ತನಗೆ ಸಿಗಲಾರದ್ದು ಇನ್ನೊಬ್ಬರಿಗೆ ಸಿಗಬಾರದು ಎಂಬ ನೀತಿ ಅದರದ್ದು. ಹೀಗಾಗಿ ಹಲವಾರು ವರ್ಷಗಳಿಂದ ಭಾರತವನ್ನು ಬಡದೇಶವೆಂಬಂತೆ ಬಿಂಬಿಸುತ್ತ ದೇಶವಾಸಿಗಳಿಗೆ ಹಲವು ಆಮಿಷ ತೋರಿಸುತ್ತ ಒಳ ಸಂಚು ಮಾಡುತ್ತಲೇ ಆಳ್ವಿಕೆ ಮಾಡುತ್ತ ಬಂದಿದ್ದೇ ಅದರ ಸಾಧನೆ. ಅದರ ಅಸಮಾಧಾನಕ್ಕೆ ಕಾರಣ ಏನೆಂದರೆ ಇತ್ತೀಚಿನ ವರ್ಷಗಳಲ್ಲಿ ಜನರು ಎಚ್ಚತ್ತಿದ್ದು  ಕಾಂಗ್ರೆಸ್ ನ ನಿಜವಾದ ಬಣ್ಣ ಬಯಲಾಗುತ್ತಿದೆ. ಅದು ಕೂಡ ಕಾಂಗ್ರೆಸ್ ಗೆ ಅಸಹನೀಯವಾಗಿದೆ.

ಉಮೇಶ ಬೆಳಕೂಡ, ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group