spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಕಿನ್ನರಿ ಬ್ರಹ್ಮಯ್ಯ

…………………………………….
12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ ಆದಯ್ಯನವರು ಅಪಘಾನಿಸ್ತಾನದಿಂದ ಬರುವ ಮರುಳಶಂಕರ ದೇವರು ಉತ್ತರ ದೇಶದಿಂದ ಸುಜ್ಞಾನಿ ಕಾಶ್ಮೀರದಿಂದ ಮೋಳಿಗೆ ಮಾರಯ್ಯ ಮಹಾದೇವಿಯವರು ಬೊಂತಾ ದೇವಿ ಮಹಾರಾಷ್ಟ್ರದಿಂದ ಸಿದ್ದರಾಮರು ಮಾಳವ ದೇಶದಿಂದ ಡೋಹರ ಕಕ್ಕಯ್ಯನವರು ಇನ್ನೂ ಸಾಕಷ್ಟು ಶರಣರು ಕಲ್ಯಾಣಕ್ಕೆ ಆಗಮಿಸಿದರು ಹೀಗೆ ಆಂಧ್ರ ಪ್ರದೇಶದ ಹುಡುಗ ಪುಡೂರು ಗ್ರಾಮದಿಂದ ಕಿನ್ನರಿ ಬೊಮ್ಮಯ್ಯನವರು ಕೂಡ ಆಗಮಿಸಿದರು.

ಪುಡೂರು ಗ್ರಾಮದಲ್ಲಿ ಕಲಿದೇವಿ ಎಂಬ ಭಕ್ತೆಯ ಪುತ್ರನಾಗಿ ಜನಿಸಿದವರು. ತಾಯಿಯಂತೆ ಇವರು ಜಂಗಮ ಪ್ರೇಮಿಗಳಾಗಿದ್ದರು. ಇವರ ಕಾಯಕ ಅಕ್ಕಸಾಲಿಗತನ. ಇವರು ಕಲ್ಯಾಣಕ್ಕೆ ಬಂದ ನಂತರ ಇವರು ಅನೇಕ ವಚನ ರಚಿಸಿದರು ಇವರ ಒಟ್ಟು 18 ವಚನಗಳು ಉಪಲಬ್ಧವಿದೆ ಇವರ ವಚನದ ಅಂಕಿತನಾಮ ಮಹಾಲಿಂಗ ತ್ರಿಪುರಾಂತಕ ದೇವಾ.
ಪುಡೂರ ದಲ್ಲಿ ಅಕ್ಕಸಾಲಿಗ ಕಾಯಕ ಮಾಡುತ್ತಿರುವಾಗ ಜಂಗಮರು ಬಂದು ದಾನ ಬೇಡುತ್ತಿರುವಾಗ ಇವರು ಜನರಿಂದ ಆಭರಣಗಳನ್ನು ತಯಾರಿಸಲು ಪಡೆದ ಚಿನ್ನದಿಂದಲೇ ಒಂದು ತುಂಡನ್ನು ಕತ್ತರಿಸಿ ದಾನ ಮಾಡುತ್ತಿದ್ದರು. ಮತ್ತೆ ಒಡೆಯವರಿಗೆ ತೂಕಕ್ಕೆ ಸರಿ ಮಾಡಿ ಕೊಡುತ್ತಿದ್ದರು

- Advertisement -

ಹೀಗೆ ಇದು ಅವರ ದಿನನಿತ್ಯದ ಕಾಯಕವಾಗಿತ್ತು. ಒಂದು ದಿನ ಕಾಯಕದಲ್ಲಿ ನಿರತರಾಗಿದ್ದಾಗ ಗುರುಗಳು ಜಂಗಮವೇಷದಿಂದ ಬಂದು ಭಿಕ್ಷೆ ಬೇಡುತ್ತಾರೆ. ದಾನ ಪಡೆದು ಗುರು ಆಶೀರ್ವದಿಸಿ ಮುಂದೆ ಹೋಗುತ್ತಾರೆ ಆಭರಣದ ಒಡೆಯ ಬಂದು ಆಭರಣ ಕೇಳಲು ಮೊದಲಿನಂತೆ ಸರಿ ಮಾಡಿ ಕೊಡುವರು ಅವರು ತೂಕ ಮಾಡದೆ ಹಾಗೆ ತೆಗೆದುಕೊಂಡು ಹೋಗುತ್ತಾರೆ ಮರೆಯಲ್ಲಿ ನಿಂತು ನೋಡುತ್ತಿದ್ದ ಜಂಗಮವೇಷ ಧರಿಸಿ ಬಂದ ಗುರುವಿಗೆ ಬ್ರಹ್ಮಯ್ಯ ಮಾಡುತ್ತಿದ್ದ ಕಾಯಕ ಸರಿಯೆನಿಸಲಿಲ್ಲವೆನಿಸುತ್ತದೆ ಬ್ರಹ್ಮಯ್ಯನನ್ನು ಈ ವೃತ್ತಿಯಿಂದ ಹೊರಗೆ ತರುವ ಪ್ರಯತ್ನ ಮಾಡುತ್ತಾರೆ. ಮತ್ತೊಂದು ದಿನ ಗುರುಗಳು ಆಭರಣ ಮಾಡಲೆಂದು ಹೊನ್ನು ಕೊಡಲು ಗುರುಗಳ ಚಿನ್ನವೆಂದು ಎಳ್ಳಷ್ಟು ಚಿನ್ನವನ್ನು ಬೇರ್ಪಡಿಸದೇ ನಿಷ್ಠೆ ಪ್ರಾಮಾಣಿಕತೆಯಿಂದ ಶ್ರದ್ಧೆ ಭಕ್ತಿಯಿಂದ ಆಭರಣ ತಯಾರಿಸಿ ಗುರುಗಳು ಮರಳಿ ಬೇಡಲು ಬಂದಾಗ ಆಭರಣಗಳನ್ನು ಕೊಡುವರು. ಆದರೆ ಗುರುಗಳು ತೂಕ ಮಾಡಿಕೊಡಲು ಹೇಳುತ್ತಾರೆ ಆವಾಗ್ಗೆ ತೂಕ ಕಡಿಮೆಯಾಗುತ್ತದೆ. ಇದರಿಂದ ಬ್ರಹ್ಮಯನಿಗೆ ಅಚ್ಚರಿಯೊಂದಿಗೆ ಮುಜುಗರ ಉಂಟಾಗುತ್ತದೆ ನಮ್ಮಲ್ಲಿ ವಂಚನೆ ಇಲ್ಲವೆಂದು ಎಷ್ಟು ಹೇಳಿದರೂ ಗುರುಗಳು ಒಪ್ಪುವುದಿಲ್ಲ ಯಾವ ವಂಚನೆ ಮಾಡದಿದ್ದರೂ ಇಂದೇಕೆ ಹೀಗಾಯಿತು ಎಂದು ವಿಚಾರ ಮಾಡುತ್ತಾ ಈ ಕಾಯಕವ ಬಿಡಿಸಲೆಂದೇ ಶಿವನು ಪರೀಕ್ಷೆ ಮಾಡಿದನು ಎಂದು ಅಕ್ಕಸಾಲಿಯ ಕಾಯಕವನ್ನು ಬಿಟ್ಟು ಕಿನ್ನರಿ ವಾದ್ಯವನ್ನು ಹಿಡಿಯುತ್ತಾನೆ

ಈ ಹೊಸ ಕಾಯಕದಿಂದ ಬಂದ ಫಲದಲ್ಲಿ ನಿತ್ಯವೂ ಗುರು ಲಿಂಗ ಜಂಗಮರಾಧನೆಯನ್ನು ಮಾಡಿಕೊಂಡು ತೃಪ್ತಿ ಜೀವನ ನಡೆಸುತ್ತಿದ್ದನು ಕಿನ್ನರಿಯನ್ನು ಬಾರಿಸುತ್ತಿರಲು ಬ್ರಹ್ಮನೇ ಮೆಚ್ಚಿ ಒಂದು ಹೊನ್ನಮುನ್ನೊಂದು ಹಣಮುನ್ನೊಂದು ಹಾಗಮ0 ದಿನಕ್ಕೊಮ್ಮೆ ಕೊಡತೊಡುಗುತ್ತಾನೆ ಶಿವ ಕೊಟ್ಟ ಕಿನ್ನರಿಯ ಭವದೊಳಗೆ ನುಡಿಸುತಲಿ, ಜನಕ್ಕೆ ಶಿವಬೋಧೆ ಮಾಡುತಲಿ, ಬೊಮ್ಮಯ್ಯ ಭವಿಗಳಿಗೆ ಊದಿ ಶಿವಮಂತ್ರಗಳ ಈ ರೀತಿ ಜನಪದರು ಇವರ ಕಾಯಕವನ್ನು ವರ್ಣಿಸಿರುವರು.

ತದನಂತರ ಕಿನ್ನರಿ ಬ್ರಹ್ಮಯ್ಯನವರು ಸಹ ಕಲ್ಯಾಣದ ಕಡೆಗೆ ತಮ್ಮ ಪ್ರಯಾಣ ಬೆಳೆಸಿದರು ಕಲ್ಯಾಣಕ್ಕೆಕಿನ್ನರಿ ಬ್ರಹ್ಮಯ್ಯನವರು ಬರುತ್ತಿರುವ ವಾರ್ತೆಯನ್ನು ತಿಳಿದ ಬಸವಣ್ಣನವರು ತುಂಬಾ ಹರ್ಷದಿಂದ ಅವರ ಬರವಿಕೆಯ ನಿರೀಕ್ಷೆಯಲ್ಲಿ ನಿಂತಿರುತ್ತಾರೆ ಹರಿಹರನು ಬಸವಣ್ಣನವರ “ಶಶಿಯ ಬರವಂ ಚಕೋರಮ್ ಬಯಸಿನಿಂದಂತೆ ಎಸೆದ ಕಾರಂ ಬಯಸಿನಿಂದ ಚಾದಗೆಯಂತೆ” ಬಣ್ಣಿಸಿರುವರು ಕಿನ್ನರಿ ತಂದೆಯು ನಡೆದು ಬಂದರು. ಶಿವಶರಣರು ಭಯ ಭಕ್ತಿಯಿಂದ ಮಹಾ ಮನೆಯೊಳಗೆ ಕರೆದೊಯ್ದರು. ಕಿನ್ನರಿ ಬ್ರಹ್ಮಯ್ಯರು ಶಿವ ಶರಣರ ಗುಂಪಿನಲ್ಲಿ ತಾವೂ ಒಬ್ಬರಾದರು ಈ ಸುಂದರ ಕ್ಷಣವನ್ನು ಜನಪದದ ತ್ರಿಪದಿಯಲ್ಲಿ….

- Advertisement -

ಸಂಗೀತ ವಿದ್ಯೆಯದು ಸಂಗಡವೇ ಬಂದದ್ದು,
ಲಿಂಗಿಗಳ ಹಿರಿಮೆ ಹಾಡುತಲಿ!
ಕಲ್ಯಾಣ ಲಿಂಗ ಮಂಟಪವ ಕೂಡಿದನು

ಎಂದು ಕೊಂಡಾಡಿದರು ಬಡ ಬಗ್ಗರಾಧಾರವಾದ ಉಳ್ಳಿಯ ಅಂದರೆ ಉಳ್ಳಾಗಡ್ಡಿ ಇವರಿಗೆ ತುಂಬಾ ಪ್ರಿಯವಾಗಿತ್ತು. ಅವತ್ತು ಪ್ರಸಾದಕ್ಕೆ ಉಳ್ಳಿಯ ಭೋಜ್ಯ ತಯಾರಿಸುತ್ತಾರೆ. ಅದೇ ಸಮಯಕ್ಕೆ ಶಿವಶರಣರೊಡಗೂಡಿ ಬಸವಣ್ಣನವರು ಮಹಾ ಮನೆಗೆ ಬರುತ್ತಾರೆ ಅವರಿಗೆ ವಾಸನೆ ಸಹಿಸಲಾಗದೆ ತಂದವರಾರೀ ಭೋಜ್ಯವನ್ನು ಎಂದು ನಿಂದಿಸುತ ಅರಮನೆಗೆ ತೆರಳುವರು. ಇದನ್ನು ಗಮನಿಸಿದ ಬ್ರಹ್ಮಯ್ಯನು ನೊಂದು ಕಣ್ಣೀರಿಟ್ಟು ಇಲ್ಲಿಗೆ ಬಂದದ್ದು ತಪ್ಪು ಎಂದು ತಿಳಿದು ಕೋಪಿಸಿಕೊಂಡು ಮಹಾ ಮನೆಯನ್ನು ತೊರೆದು ಪರ ಊರಿಗೆ ಹೋಗುತ್ತಾರೆ. ಮತ್ತೆ ಮಹಾ ಮನೆಗೆ ಬಸವಣ್ಣನವರು ಬರುತ್ತಾರೆ ಬ್ರಹ್ಮಯ್ಯನು ಕಾಣಿಸದಿದ್ದಕ್ಕೆ ಎಲ್ಲಿ ಎಂದು ಕೇಳುತ್ತಾರೆ ಅವರು ಇಲ್ಲಿಂದ ಹೊರಟು ಹೋದದ್ದನ್ನು ತಿಳಿದು ಅವರ ಕೋಪವನ್ನು ಇಳಿಸಿ ಮತ್ತೆ ಮರಳಿ ಮಹಾಮನೆಗೆ ಕರೆದು ತರುತ್ತಾರೆ.

ಕಿನ್ನರಿ ಬ್ರಹ್ಮಯ್ಯ ಒಬ್ಬ ಅನುಪಮ ಶರಣ ಬಸವಣ್ಣನವರಿಗೆ ಆಪ್ತಮಿತ್ರರಾದ ಇವರು ಮೇಲೆ ವಿವರಿಸಿದ ಉಳ್ಳೆಯ ಮೆರವಣಿಗೆ ಹೊರಡಿಸಿದ ಪ್ರಸಂಗ,ಹರಕೆಯ ಕುರಿಯ ಸಂಗತಿ, ಕಲಿಕೇತ ಬ್ರಹ್ಮಯ್ಯನ ಪವಾಡ, ಪ್ರಭುದೇವರು ಹಾಗೂ ಸಿದ್ದರಾಮಯ್ಯರನ್ನು ಮಹಾ ಮನೆಗೆ ಬರಮಾಡಿಕೊಳ್ಳುವ ಪ್ರಸಂಗ, ವೈರಾಗ್ಯ ನಿಧಿ ಅಕ್ಕಮಹಾದೇವಿಯನ್ನು ಅನುಭವ ಮಂಟಪಕ್ಕೆ ಕರೆತರುವ, ಮರುಳ ಶಂಕರ ದೇವರ ನಿಲವು ಬಯಲಾದ ಸನ್ನಿವೇಶ,ಹರಳಯ್ಯ ಮದುವರಸರ ಎಳ ಹೂಟಿಯ ತರುವಾಯ “ಶರಣಗಣದ” ಹಾಗು ವಚನ ಸಾಹಿತ್ಯದ ರಕ್ಷಣೆ ಗೈದು ಯುದ್ಧ ಮಾಡಿದ ಪ್ರಸಂಗ ಮುಂತಾದ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ಕಿನ್ನರಿ ಬ್ರಹ್ಮಯ್ಯನವರು ಶರಣ ಗಣದಲ್ಲಿಯೇ ವಿಶಿಷ್ಟ ವ್ಯಕ್ತಿತ್ವದ ವೀರಶರಣರಾಗಿದ್ದರು.

ಒಂದು ದಿನ ಕಿನ್ನರಿ ಬ್ರಹ್ಮಯ್ಯನ ಪ್ರಾಣಪಕ್ಷಿ ಹಾರಿ ಹೋಗಿರಲು ಬಸವಣ್ಣನವರು ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತೆ ರೋಧಿಸುತ್ತಾರೆ. ಬಸವಣ್ಣನವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರಾಣಸಖನನ್ನು ಮತ್ತೆ ಪಡೆಯುತ್ತಾರೆ. ಕಿನ್ನರಯ್ಯನು ಇದಕ್ಕೆ ತಕ್ಕಂತೆಯೇ ವರ್ತಿಸುತ್ತಾನೆ. ಎಳಹೂಟಿಯ ನಂತರ ಉಳಿವೆ ಕಡೆ ಚನ್ನಬಸವಣ್ಣ ಮಡಿವಾಳ ಮಾಚಿದೇವರ ಜೊತೆಗೂಡಿ ಶರಣರ ರಕ್ಷಾಮಣಿಯಾಗಿದ್ದು ಯುದ್ಧ ಮಾಡುತ್ತಾರೆ. ಶಿವಶರಣರ ಗಣನಾಯಕನಾಗಿ ಮಹಾ ಮನೆಯ ಮುಂದೆ ಅಳಿಯ ಬಿಜ್ಜಳನ ಸೈನ್ಯದೊಡನೆ ಕೊನೆಯ ಕಾಳಗ ಮಾಡುತ್ತಾನೆ ಅಲ್ಲಿ ಇಳಿಜಾರಿನಲ್ಲಿ ಹರಿದು ಬರುವ ಹೊಳೆಯನ್ನು ಮಹಾಮನೆಯ ಗುಹೆಯ ದ್ವಾರದಿಂದ 200 ಎತ್ತರದಲ್ಲಿ ಭೂಮಿಯನ್ನು ಒಳಕ್ಕೆ ತಿರುಗಿಸಿ ಆ ಗುಹೆಯನ್ನು ಜಲಮಾರ್ಗವನ್ನಾಗಿ ಪರಿವರ್ತಿಸುತ್ತಾನೆ. ಕೊನೆಯವರೆಗೆ ಕಲಿತನದಿಂದ ಕಾದಿ ಶರಣ ಮರಣವನ್ನು ಪಡೆಯುತ್ತಾನೆ

ಇಂದಿಗೂ ಕಿನ್ನರಿ ಬ್ರಹ್ಮಯ್ಯನ ಹೊಳೆ ಎಂದು ಹೆಸರಾಗಿರುವ ಆ ಹೊಳೆ ಜನಪದ ಗೀತೆಯಲ್ಲಿ ಕಿನ್ನರಯ್ಯನ ಕೀರ್ತಿಯನ್ನೇ ಹಾಡುತ್ತಲಿದೆ. ಹಾಗೆ ಮಹಾ ಮನೆಗೆ ಸಮೀಪದಲ್ಲಿರುವ ಕಿನ್ನರಿ ಬ್ರಹ್ಮಯ್ಯನ ಸಮಾಧಿಯ ಮೇಲೆ “ಕಿನ್ನರಯ್ಯ “ಎಂಬ ಉಲ್ಲೇಖವಿರುವ ಶಿಲಾಶಾಸನವೂ ಇದೆ. ಇಡೀ ಜಗತ್ತಿಗೆ ಕಿನ್ನರಿ ಬ್ರಹ್ಮಯ್ಯನ ನಿರ್ಮಲ ಚರಿತ್ರೆಯನ್ನು ಸಾರಿ ಸಾರಿ ಹೇಳುತ್ತಲಿದೆ

ಕಿನ್ನರಿ ಬ್ರಹ್ಮಯ್ಯ ನವರು ಬಸವಣ್ಣನವರಿಂದ “ಅಣ್ಣನೋ ನಮ್ಮ ಕಿನ್ನರಿ ಬೊಮ್ಮಯ್ಯ ” ಎಂದು ಹೊಗಳಿಸಿಕೊಂಡರೆ ಮಹಾದೇವಿಯಕ್ಕಳಿಂದ ಕಿನ್ನರ ನoತಪ್ಪ ಸೋದರ ನನಗೆ ಎಂದು ಧನ್ಯತೆಯನ್ನು ಪಡೆದ ಇವರು ಅವಸ್ಮರಣೆಯ ಶ್ರೇಷ್ಠ ಶರಣರಾಗಿದ್ದಾರೆಂದು ಹೇಳಬಹುದು.

ಒಂದು ವಚನ

ತನು ಸಜ್ಜೆ ಮನ ಲಿಂಗವಾದ ಬಳಿಕ
ಅನುವ ಮತ್ತೆ ಬೇರೆ ಅರಸಲುಂಟೆ?
ತನುವೇ ಬಸವಣ್ಣ ಮನವೇ ಪ್ರಭುದೇವರೆಂಬ ಘನವೊಳ ಕೊಂಡಿರ್ದ ಬಳಿಕ
ಗುಣಾವಗುಣವ ಸಂಪಾದಿಸುವರೆ? ಮಹಾಲಿಂಗ ತ್ರಿಪುರಾಂತಕ ದೇವಾ
ಸಂಗನ ಬಸವಣ್ಣನಲ್ಲಿ ನಿಮ್ಮಡಿಗಳಲ್ಲಿ ಸಂದು ಸಂಶಯ ಉಂಟೆ? ಬಿಜಯಂಗೈ ಯುವುದಯ್ಯ ಪ್ರಭುವೇ.

ವಿಶ್ಲೇಷಣೆ

ಈ ವಚನದಲ್ಲಿ ಕಿನ್ನರಿ ಬ್ರಹ್ಮಯ್ಯನವರು ತನು ಸಜ್ಜೆ ಮನ ಲಿಂಗ ಎಂದಿರುವರು ತನು ಕರಗಿಸಿ ಅಂದರೆ ಸ್ತೂಲ ತನುವಿನಲ್ಲಿ ಆಣವಮಲ ಕಳೆದುಕೊಂಡು ಈ ದೇಹವನ್ನು ಸದ್ಗುರುವಿನ ಕೃಪೆಯಿಂದ, ದೀಕ್ಷೆಯ ಮುಖಾಂತರ ನಮ್ಮ ತನುವನ್ನು ಪರಿ ಶುದ್ಧಿಗೊಳಿಸಿಕೊಳ್ಳಬೇಕು. ಆವಾಗೆ ನಮ್ಮ ಇಷ್ಟ ಲಿಂಗವನ್ನು ಇಡುವ ಕರಡಿಗೆಯಾಗುತ್ತದೆ. ಕಾರಣ ತನುವನ್ನು ಸಜ್ಜೆ ಎಂದರು ಕಿನ್ನರಿ ಬ್ರಹ್ಮಯ್ಯ ಶರಣರು. ಹಾಗೆಯೇ ಮನಕ್ಕೆ ಲಿಂಗವೆಂದಿರುವರು ಲಿಂಗವಾಗಬೇಕಾದರೆ ನಮ್ಮಲ್ಲಿರುವ ಅಂತಃಕರಣಗಳು ಅಂದರೆ ಚಿತ್ತ ಬುದ್ಧಿ ಮನ ಮತ್ತು ಅಹಂಕಾರ ಇವುಗಳನ್ನು ಶುದ್ಧೀಕರಿಸಿಕೊಂಡು ಅಂದರೆ ಬುದ್ಧಿಯನ್ನು ಸುಬುದ್ಧಿಯನ್ನಾಗಿ ಮಾಡಿ ಮನ ಸುಮನವಾಗಿ ನಾನು ನನ್ನದು ಅನ್ನುವ ಅಹಂಕಾರ ಮಮಕಾರಗಳನ್ನು ಕಳೆದುಕೊಂಡು ನಿರಹಂಕಾರವಾಗಬೇಕು. ಆವಾಗ್ಗೆ ನಮ್ಮ ಮನ ಲಿಂಗವಾಗಲು ಸಾಧ್ಯವಾಗುತ್ತದೆ. ಈ ರೀತಿ ಪರಿಶುದ್ಧವಾದ ಮನವುಳ್ಳವರಾಗುವುದು ಸಹಜ ಸಾಧ್ಯವಿಲ್ಲ ಶರಣರ ಸಂಗ ಶಿವಾನಭವ ಗೋಷ್ಠಿ ಸ್ವಾನುಭಾವದೊಳು ತೊಡಗಿದಾಗ ಮಾತ್ರ ಸಾಧ್ಯ ಹೀಗೆ ತನ್ನ ತನು ಮನಗಳನ್ನು ಶುದ್ದಿಕರಿಸಿ ತನ್ನ ಮನವನ್ನು ಲಿಂಗವನ್ನಾಗಿ ಮಾಡಿದ ಮೇಲೆ ಬಾಹ್ಯ ರೂಪವಾಗಿರುವ ಭೌತಿಕ ಕುರುಹು ಆದ ಲಿಂಗವನ್ನು ಆರಾಧಿಸುವುದಿಲ್ಲವೆಂದು ತಿಳಿಸುತ್ತಾರೆ ಬ್ರಹ್ಮಯ್ಯನವರು.
ತುನುವೆ ಬಸವಣ್ಣ ಮನವೇ ಪ್ರಭುದೇವರೆಂಬ ಮಹಾಘನವನ್ನು ಒಳಗೊಂಡ ಬಳಿಕ ಗುಣಾವಗುಣವ ಸಂಪಾದಿಸುವರೆ?

ತನ್ನ ದೇಹವು ಬಸವಣ್ಣನ ಕಾಯಕ ಮತ್ತು ದಾಸೋಹದ ತತ್ವಗಳನ್ನು ಅಳವಡಿಸಿಕೊಂಡಿರುವುದರಿಂದ ತನುವೆ ಬಸವಣ್ಣನಲ್ಲಿ ಅಧೀನವಾಗಿದೆ ಮನದ ಎಲ್ಲ ವ್ಯಾಪಾರಗಳನ್ನು ಜಯಿಸಿದ ಪ್ರಭುದೇವರ ತತ್ವ ವಿಚಾರಗಳು ತನ್ನ ಮನಸನ್ನು ಪ್ರಭಾವಿಸುವುದರಿಂದ ಪ್ರಭುದೇವರ ಮಹಾಘನ ದೊಳಗೆ ತಾನು ಸೇರಿರುವುದರಿಂದ, ತನು ಮನದಲ್ಲಿ ನನ್ನದನ್ನುವ ಅಸ್ತಿತ್ವವು ಅಳಿದು ಹೋಗಿರುವಾಗ ತಾನು ತನ್ನಲ್ಲಿ ಗುಣವಗುಣಳನ್ನು ಎಣಿಸುವುದು ಸರಿಯೇ ಎಂದು ಪ್ರಶ್ನಿಸುತ್ತಾರೆ.

ಮಹಾಲಿಂಗ ತ್ರಿಪುರಾಂತಕ ದೇವಾ ಸಂಗನ ಬಸವಣ್ಣನಲ್ಲಿ ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ?
ಬಿಜಯಂಗೈಯುವದಯ್ಯ ಪ್ರಭುವೇ.
ಮಹಾಲಿಂಗ ತ್ರಿಪುರಾಂತಕ ದೇವ ನೀನು ಕೃಪೆ ತೋರಲು ಯಾತಕ್ಕೆ ಸಂಶಯ ಪಡುತ್ತಿರುವೆ ಪ್ರಭುವೇ ನಾನು ನಿನ್ನಲ್ಲಿ ಸಂಗನ ಬಸವಣ್ಣನಲ್ಲಿ ಶರಣನಾದವನು ತನ್ನ ಮೇಲೆ ದಯೆ ತೋರಿಸು, ಸಂಶಯಪಡುವ ಅಗತ್ಯವಿಲ್ಲ ನಾನು ನಿನ್ನ ಕೃಪೆಗೆ ಪಾತ್ರನಾಗಲು ಯೋಗ್ಯನಾದವನೆಂದು ಪರಿಗಣಿಸು ಎಂದು ನಿವೇದನೆ ಮಾಡಿಕೊಳ್ಳುತ್ತಾರೆ

ಭಕ್ತನೊಬ್ಬ ತನ್ನ ಆರಾಧ್ಯ ದೈವಕ್ಕೆ ತನಗೆ ಕೃಪೆ ತೋರಲು ಪ್ರಮಾಣಿಸಿ ಕೊಳ್ಳುವ ವಚನ ಅದಕ್ಕೆ ಬಸವಣ್ಣ ಮತ್ತು ಪ್ರಭುದೇವರಂತೆ ಘನ ಮಹಿಮರ ಆಧಾರಗಳನ್ನು ನೀಡುತ್ತಾರೆ ಕಿನ್ನರಿ ಬ್ರಹ್ಮಯ್ಯನವರು.
ಚಿತ್ರ : ಫೇಸ್ ಬುಕ್ ಕೃಪೆ

ಸೌ.ಶಾಂತಾದೇವಿ ಸಿ. ದುಲಂಗೆ, ಸೋಲಾಪೂರ.           ಅಕ್ಕನ ಅರಿವು ವಚನ ಅಧ್ಯಯನ ವೇದಿಕೆ,             ಬಸವಾದಿ ಶರಣರ ಚಿಂತನ ಕೂಟ

 

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group