spot_img
spot_img

ಮತ್ತೆ ಬರುತ್ತಿದೆ ಗೌರಿ ಗಣೇಶ ಹಬ್ಬ

Must Read

- Advertisement -

 

ಶರಣು ಶರಣುವಯ್ಯ ಗಣನಾಯ್ಕ                              ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ
ಗೊನೆ ಮೇಗ್ಲ ಬಾಳೆಹಣ್ಣು ಗಣನಾಯ್ಕ
ನಿಮ್ಗೆ ಕಳಿ ಅಡ್ಕೆ ಚಿಗುರೆಲೆ ಗಣನಾಯ್ಕ

ಭಾರತ ಒಂದು ಜಾತ್ಯತೀತ ರಾಷ್ಟ್ರ. ವಿವಿಧ ಜಾತಿಗಳ ಜನ ಒಟ್ಟಾಗಿ ಸಹಬಾಳ್ವೆ ನಡೆಸುತ್ತಿರುವುದು ಅದರ ಹಿರಿಮೆ. ಹಬ್ಬಗಳಿಗೆ ತೌರೂರು ನಮ್ಮ ಭಾರತ. ನಾವು ಹಬ್ಬಗಳನ್ನು ಆಚರಿಸುವುದಕ್ಕೆ ಹಲವು ಕಾರಣಗಳಿವೆ. ಪ್ರತಿವರ್ಷ ಹಬ್ಬವನ್ನು ಆಚರಿಸುವುದರಿಂದ ಆಯಾ ಹಬ್ಬಕ್ಕೆ ಸಂಬಂಧಿಸಿದ ವಿಶೇಷ ಮಹತ್ವ ಘಟನೆ ಸದಾ ನಮ್ಮ ನೆನಪಿನಲ್ಲಿರುತ್ತದೆ. ವರ್ಷಕ್ಕೊಮ್ಮೆ ಬರುವ ಹಬ್ಬಕ್ಕಾಗಿ ಅಬಾಲವೃದ್ದರಾದಿ ಯಾಗಿ ಎಲ್ಲರೂ ಕಾತುರ ಉತ್ಸಾಹದಿಂದ ಕಾಯುತ್ತಿರುತ್ತಾರೆ.

- Advertisement -

ಯುಗಾದಿಯಲ್ಲಿ ವಸಂತನ ಬರುವಿಕೆಯಲ್ಲಿ ಗಿಡಮರಗಳು ಚಿಗುರಿ ಎಲೆ ಮೊಗ್ಗು ಹಸಿರು ಹೂವುಗಳ ಲಾಸ್ಯ ಸೃಷ್ಟಿಯ ಸೊಬಗು ಕಣ್ಮನ ಸೆಳೆಯುತ್ತದೆ. ನಂತರ ಬರುವ ಹಿಂದುಗಳ ಪ್ರಮುಖವಾದ ಗಣೇಶನ ಹಬ್ಬ ಹತ್ತಿರವಾದಂತೆ ಮಳೆಯ ಅಬ್ಬರ ಕಡಿಮೆಯಾಗಿ ಹಬ್ಬದ ಸಡಗರ ಗರಿಗೆದರುತ್ತದೆ. ಗಣೇಶ ಹಬ್ಬವು ಗ್ರಾಮೀಣರ ದೃಷ್ಟಿಯಲ್ಲಿ ಪ್ರಕೃತಿಯಿಂದ ರೂಪುಗೊಂಡ ಹಬ್ಬ. ಮಳೆ ಬಿದ್ದು ಕೆರೆಕಟ್ಟೆ ತುಂಬಿ ಭೂಮಿಯು ಹದವಾಗಿ ನೆನೆದು ರೈತ ಉತ್ತು ಬಿತ್ತಿ ಬೀಜ ಮೊಳೆತು ಪೈರಾಗಿ ಪೈರಿನಿಂದ ಹಚ್ಚ ಹಸುರಾಗಿ ಕಂಗೊಳಿಸುತ್ತಾ ಆ ಪೈರು ತೆನೆಯ ಹಂತವನ್ನು ತಲುಪುವ ಸ್ಥಿತಿಯಲ್ಲಿರುತ್ತದೆ. ಪ್ರಕೃತಿಯ ಹಸಿರು ಕ್ರಾಂತಿಯನ್ನೆಬ್ಬಿಸಿದ ಸಸ್ಯಶ್ಯಾಮಲೆಯೇ ಗೌರಿ. ಸಸ್ಯದಿಂದ ಹೊರಟ ತೆನೆಯೇ ಗಣೇಶ.

ಗೌರಿ ಹಬ್ಬದೊತ್ಗೆ ಮುಳ್ಗೋ ಪೈರು
ಮಗೆ ಹೊತ್ಕೊಂಡು ಉಬ್ಬೆ ಮೆತ್ಕೊಂಡು
ಗೌರಮ್ಮ ಬರ‍್ತಾಳೆ..
ಎಂದು ಆ ಸಂದರ್ಭದ ಮಗೆ ಮತ್ತು ಉಬ್ಬೆ ಮಳೆಯನ್ನು ಕೃಷಿಕರು ಹೆಸರಿಸುತ್ತಾರೆ. ಸೌಭಾಗ್ಯ ಸಂಕೇತವಾದ ಮಗೆ ಎಂದರೆ ಕಳಶ ಹೊತ್ತು ಗೌರಮ್ಮ ಬರುತ್ತಾಳೆಂಬುದು ಅವರ ಭಾವ. ಗೌರಿಯು ಭಾದ್ರಪದ ಮಾಸದ ಶುಕ್ಲಪಕ್ಷ ತೃತೀಯದಂದು ಗಂಡನ ಮನೆಯಿಂದ ತವರು ಮನೆಗೆ ಬರುತ್ತಾಳೆಂದು ಶಿವಪುರಾಣದಲ್ಲಿ ನಿರೂಪಿತವಾಗಿದೆ. ಗೌರಿಯ ತಂದೆ ಪರ್ವತರಾಜನು ತನ್ನ ಮಗಳಿಗೆ ತವರು ಭಾಗ್ಯವೆಂದು ಅರಿಶಿಣ ಕುಂಕುಮ ಸೀರೆ ಕುಪ್ಪಸ ಫಲಪುಷ್ಪ ತಾಂಬೂಲದೊಂದಿಗೆ ಬಾಗಿನ ನೀಡಿ ತವರು ಮನೆಗೆ ಕರೆತರುವೆನೆಂದು ಪ್ರತೀತಿ. ಹಿಂದೂ ಸಂಪ್ರದಾಯದಲ್ಲಿ ಬಾಗಿನ ನೀಡಿ ಗಂಡನ ಮನೆಯಲ್ಲಿರುವ ಹೆಣ್ಣು ಮಗಳನ್ನು ತೌರಿಗೆ ಕರೆತರಲು ಬಾಗಿನದೊಂದಿಗೆ ಹೋಗುವುದು ಅದರಲ್ಲೂ ಹೊಸದಾಗಿ ಮದುವೆಯಾಗಿ ಹೋದ ಹೆಣ್ಣು ಮಗಳನ್ನು ಕರೆಯಲು ಹೋಗುವುದು ರೂಢಿ. ನೆಂಟು ಹಳೆಯದಾದಂತೆ ಅರಿಶಿಣ ಕುಂಕುಮಕ್ಕೆಂದು ಅವರವರ ಶಕ್ತ್ಯಾನುಸಾರ ಹಣವನ್ನು ಎಂ.ಒ.ಮಾಡುತ್ತಾರೆ. ನಮ್ಮ ಹಳ್ಳಿಗಾಡಿನಲ್ಲಿ ಈ ಸಂಪ್ರದಾಯ ನೆಂಟು ಎಷ್ಟೇ ಹಳೆಯದಾದರೂ ಮಗಳು ಕೊಟ್ಟ ಮನೆಗೆ ಹೋಗಿ ಬಾಗಿನ ಕೊಟ್ಟು ಬರುವ ವಾಡಿಕೆ ಇಂದಿಗೂ ಇದೆ.

ಗೌರಿಯ ಹಬ್ಬಕ್ಕೆ ತೌರಿಗೆ ಬಾರೇ
ಗಣೇಶನ ಕೂರಿಸಿ ಕುಣಿಯುವ ಬಾರೇ
ಅಣ್ಣಯ್ಯ ನೀ ಬರುವಾಗ ಬಾಗಿನ ತಾರೋ
ನೇಯ್ಗೆ ಸೀರೆಯ ಮರೆಯದೆ ತಾರೋ
‘ರೀ ಏಳ್ರೀ ಮೇಲೇ. ಎದ್ದು ಬಾಗಿಲಿಗೆ ಮಾವಿನ ಸೊಪ್ಪು ಕಟ್ಟಿ.. ಎಂಬ ಮಡದಿಯ ಕೂಗಿಗೆ ಎಚ್ಚರಗೊಂಡೆ. ಒಳಗೆ ಮಿಕ್ಸಿ ಕೂಗುತ್ತಿದೆ. ನನ್ನಾಕೆ ಖುಷಿಯಾಗಿದ್ದರೇ ಹಬ್ಬವನ್ನು ಬಹಳ ಸಂತೋಷದಿಂದಲೇ ಆಚರಿಸುತ್ತಾಳೆ. ಆಕಳಿಸುತ್ತಾ ಎದ್ದು ಹಲ್ಲುಜ್ಜಿಕೊಂಡೆ. ಬಿಸಿ ನೀರು ಕಾಯಿಸಿದ್ದಿಯೇನೇ.. ಕೇಳುವ ಮೊದಲೇ ಟೇಬಲ್ ಮೇಲಿತ್ತು. ಕಾಫಿ ಫ್ಲೀಸ್..
‘ಕಾಫಿ ತಿಂಡಿ ಆದಮೇಲೆ. ಬಿಸಿನೀರಿಗೆ ಉಪ್ಪು ಬೆರೆಸಿ ಬಾಯಿಗೆ ಸುರಿದುಕೊಂಡು ಗಂಟಲವರೆಗೂ ಎಳೆದುಕೊಂಡು ಬಾಯಿ ಮುಕ್ಕಳಿಸಿ ಉಗಿಯಿರಿ. ಗಂಟಲಿನಲ್ಲಿ ಕಫ ಇದ್ದರೇ ಹೋಗಲಿ.. ನನ್ನಾಕೆಯ ನಾಟಿ ವೈದ್ಯವನ್ನು ಪಾಲಿಸಿ ಮಾವಿನಸೊಪ್ಪಿನ ತೋರಣ ಕಟ್ಟಲು ಸಿದ್ಧನಾದೆ. ‘ಇದೇನೇ ಮಾವಿನಸೊಪ್ಪು ಅಷ್ಟು ನೀಟಾಗಿಲ್ಲ. ಚೆಂದದ ಮಾವಿನಸೊಪ್ಪು ಮಾರ್ಕೆಟಿನಲ್ಲಿ ಸಿಗಲಿಲ್ಲವೇ..
ಮಾವಿನಸೊಪ್ಪಿಗೂ ಮಾರ್ಕೆಟಿನಲ್ಲಿ ಬೇಡಿಕೆ ಇರುವುದು ಸರಿಯಷ್ಟೇ. ಅದರ ರೇಟೀಗ ಇಪ್ಪತ್ತು. ಹತ್ತು ರೂ.ಗೆ ಕೇಳಿದರೆ ಉತ್ತರವೇ ಇರುವುದಿಲ್ಲ. ಇತ್ತ ಮಡದಿಯಿಂದಲೂ ಉತ್ತರವಿಲ್ಲ. ನಗರದಲ್ಲಿ ಮಾವಿನಸೊಪ್ಪು ಕೊತ್ತಂಬರಿ ಸೊಪ್ಪಿನಷ್ಟೇ ಬೆಲೆ ಬಾಳುತ್ತದೆ. ನಾನು ಗೊರೂರಿನಲ್ಲಿದ್ದಾಗ ಮಾವಿನ ಸೊಪ್ಪು ತರಲು ನಮ್ಮಮ್ಮ ಬೆಳಿಗ್ಗೆಯೇ ಏಳಿಸಿ ಪೂಸಿ ಮಾಡಿ ಕಳಿಸುತ್ತಿದ್ದರು. ನಮ್ಮೂರ ಯೋಗನರಸಿಂಹಸ್ವಾಮಿ ದೇವಸ್ಥಾನದ ಗುಂಡುತೋಪಿನಲ್ಲಿ ಮಾವಿನ ಮರಗಳು ಎತ್ತೆತ್ತರವಾಗಿ ಬೆಳೆದು ನಿಂತಿವೆ. ಅಲ್ಲಿಗೆ ಹೋದರೇ ಊರಿನ ಸಾಹಸಿ ಪುರುಷರು ಯಾರಾದರೂ ಮರ ಹತ್ತಿ ಕೊಂಬೆಗಳನ್ನು ಕತ್ತರಿಸಿ ಕೆಳಗೆ ಹಾಕಿದರೆ ನಾವು ಒಂದು ತುಂಡನ್ನು ಕಾಡಿಬೇಡಿ ಪಡೆದು ಆಂಜನೇಯ ಸಂಜೀವಿನಿ ಪರ್ವತ ಹೊತ್ತು ತಂದಷ್ಟೇ ಖುಷಿಯಿಂದ ತಂದು ಅಮ್ಮನಿಗೆ ಒಪ್ಪಿಸಿ ಗೌರಿಹಬ್ಬಕ್ಕೆ ಆಗಲೇ ಮಾಡಿದ್ದ ಕಾಯಿ ಒಬ್ಬಟ್ಟನ್ನು ಭಕ್ಷಿಸು ಪಡೆಯುತ್ತಿದ್ದೆನು.

- Advertisement -

‘ಲೇ ಇದ್ಯಾಕೆ, ಸ್ನಾನ ಮಾಡದೇ ಪೂಜೆ ಮಾಡದೆ ಮಗನಿಗೆ ಒಬ್ಬಟ್ಟು ಕೊಟ್ಟೆ..! ಬೆಳವಣ್ಣನನ್ನು ಇಟ್ಟು ಪೂಜೆಗೆ ಅಣಿಯಾಗುತ್ತಿದ್ದ ಅಪ್ಪ ದೇವರ ಮನೆಯಿಂದ ಕೂಗಿದರೇ ‘ಇಲ್ಲ ಕಣ್ರೀ, ಮಗನಿಗೆ ಎಣ್ಣೆ ಸ್ನಾನ ಮಾಡಿಸಲು ಕೈಯಣ್ಣೆ ಕಾಯಿಸುತ್ತಿದ್ದೇನೆ.. ಅಮ್ಮ ಸುಳ್ಳು ಹೇಳಿ ‘ಹೋಗೋ ಹಿತ್ತಲು ಕಡೆ ಹೋಗಿ ತಿಂದು ಬಾ.. ಎಂದು ದಾರಿ ತೋರಿಸುತ್ತಿದ್ದರು. ಹಬ್ಬದ ದಿನ ಪೂಜೆ ಮುಗಿದು ಕಡಬು ತಿನ್ನುವ ಕಾಲಕ್ಕೆ ಒಂದು ಗಂಟೆ ಅಲಾರಂ ಹೊಡೆದು ನಮ್ಮ ಎರಡೂ ಕಣ್ಣು ಹಸಿವಿನ ನಿರೀಕ್ಷೆಯಲ್ಲಿ ಜೋತು ಬಿದ್ದಿರುತ್ತಿದ್ದವು. ಬೆಳಿಗ್ಗೆ ಎಂಟಕ್ಕೆಲ್ಲಾ ತಿಂಡಿ ತಿಂದು ಅಭ್ಯಾಸವಾಗಿದ್ದ ನನಗೆ ಹಸಿವು ತಡೆಲಾಗದೇ ಚಡಪಡಿಸುತ್ತಿದ್ದೆನು. ಕದ್ದಮುಚ್ಚಿಯಾದರೂ ಒಬ್ಬಟ್ಟು ಅದೂ ಸಿಗದಿದ್ದರೇ ಕಾಯಿ ಚೂರನ್ನಾದರೂ ಕೆಚ್ಚಿಕೊಂಡು ತಿನ್ನುತ್ತಿದ್ದೆ. ನಾವು ಚಿಲ್ಲರೆ ಅಂಗಡಿ ಇಟ್ಟಿದ್ದೆವಾಗಿ ಅಂಗಡಿಯಲ್ಲಿ ಕುಳಿತು ವ್ಯಾಪಾರಕ್ಕಿಂತ ಹೆಚ್ಚಾಗಿ ಪುರಿಕಾರ ಮುಕ್ಕುತ್ತಿದ್ದೆನು.
ಮೊದಲೆ ನೆನೆದವು ಸ್ವಾಮಿ ಲಿಂಗನ
ಬೆನಮಕ ಶಿವಗಂಗೆ ಬೆನಮನಾ..

ವೈಶಾಖ ಪೂರ್ಣಿಮೆ, ಮಾಘಶುದ್ದ ಚತುರ್ಥಿ, ಭಾದ್ರಪದ ಶುದ್ದ ಚತುರ್ಥಿ ಈ ರೀತಿಯಾಗಿ ಗಣೇಶನಿಗೆ ಜನ್ಮ ದಿನಗಳು ಬೇರೆ ಬೇರೆಯಾಗಿ ಇದ್ದರೂ ಕೂಡ ಭಾದ್ರಪದ ಶುದ್ದ ಚತುರ್ಥಿಯನ್ನೇ ಹೆಚ್ಚಾಗಿ ಆಚರಿಸಿಕೊಂಡು ಬರಲಾಗಿದೆ. ಪ್ರಾರಂಭದಲ್ಲಿ ಸರ್ವಾಂಗ ಪೂರ್ಣ ಪುರುಷ ರೂಪದಿಂದ ಪ್ರಕಟವಾಗಿ ವಿಕೋಪದ ಕಾರಣ ತಲೆಯು ಕಡಿದುಹೋಗಿ ಅನಂತರ ಬೇರೊಂದು ಜಂತುವಿನ ತಲೆಯನ್ನು ಧರಿಸಿದ ದೇವತೆಗಳಲ್ಲಿ ಹಯಗ್ರೀವ ಹಾಗೂ ಗಣೇಶ ಪ್ರಮುಖರು. ಪರಮ ಪುರುಷಾರ್ಥನಾದ ಮೋಕ್ಷದೊಡನೆ ಹೋಲಿಸಿದರೆ ಬುದ್ದಿ ಸಿದ್ದಿಗಳು ಮಲ ಮಲಿನವೆನಿಸುತ್ತದೆ. ಗಣಪತಿಯು ಸಿದ್ದಿ ಬುದ್ದಿಗಳ ಪತಿಯಾದುದರಿಂದ ಪಾರ್ವತಿಯ ಮೈಯ ಕೆಸರಿನಿಂದ ಹುಟ್ಟಿದನೆಂದು ಕಥೆ ಹೆಣೆಯಲಾಗಿದೆ. ಗಣಪತಿಯನ್ನು ಮಾಯೆ ಮತ್ತು ಮಾಯನ ಯೋಗವಾಗಿರುವುದರಿಂದ ಆತ ಏಕದಂತ ಎಂದು ಮುದ್ಗಲ ಪುರಾಣ ತಿಳಿಸುತ್ತದೆ. ಗಣಪತಿಯನ್ನು ಸ್ಮರಿಸಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಜಯ ಆಗುವುದೆಂದು ನಂಬಿಕೆ ಮಾನವರದು. ಬದುಕು ಸಾಗುವುದೇ ನಂಬಿಕೆಯಿಂದ. ನಂಬಿಕೆಯೆನ್ನುವುದು ಮಾನಸಿಕ ಧೈರ್ಯ ಕೊಡುವ ಸಾಧನ. ಈ ನಿಟ್ಟಿನಲ್ಲಿ ಗಣಪ ಮನಶಾಸ್ತ್ರಜ್ಞನ ಪಾತ್ರ ವಹಿಸುತ್ತಾನೆ.

ಆನೆಯ ತಲೆಯ ಮಾನವ ದೇಹಾಕೃತಿಯ ಗಣಪನು ವಿಘ್ನಗಳ ನಿವಾರಣೆಗೆ ವಿಘ್ನದ ಹಾದಿಯಲ್ಲಿ ವಿಕಟವಾಗಿ ಉಪಸ್ಥಿತನಿರುವನು. ಆದ್ದರಿಂದ ಆತ ವಿಕಟಮೇವ. ಭಯವನ್ನು ನಿವಾರಿಸಿ ಅಮೃತತ್ವವನ್ನು ಕೊಡುವವ. ಅನೇಕ ಭಯಗಳ ಗೂಡು ಈ ಮನಸ್ಸು. ಹಿಡಿದ ಕೆಲಸ ಪೂರ್ತಿಯಾಗುವವರೆಗೆ ಆತಂಕ ಗೊಂದಲ ಕಾಡುತ್ತಿರುತ್ತದೆ. ಭಯದ ನಿಗ್ರಹ ಯೋಗ ಬೇಕಾದರೆ ಬೇಕು ವಿಘ್ನೇಶ್ವರನ ಅನುಗ್ರಹ. ಗಣಪತಿಯ ಆರಾಧನೆಯು ಅನಾದಿ ಕಾಲದಿಂದಲೂ ಭಾರತದಲ್ಲಿ ನಡೆಯುತ್ತಿದೆ. ಧಾರ್ಮಿಕ ಕಾರ್ಯಗಳು ಗಣೇಶ ಪೂಜೆ ಇಲ್ಲದೇ ಪ್ರಾರಂಭವಾಗುವುದಿಲ್ಲ. ಗಣೇಶನು ವಿಘ್ನರಾಜನಾದ್ದರಿಂದ ಈ ಪ್ರಥಮ ಪೂಜೆ ಸಂಪ್ರದಾಯವು ಸಹಜವಾಗಿದೆ.
ಮತ್ಸ್ಯ ಪುರಾಣದಂತೆ ಪಾರ್ವತಿಯು ಒಂದು ಮೂರ್ತಿಯನ್ನು ನಿರ್ಮಿಸಲಾಗಿ ಅದು ಗಜಾಕೃತಿಯಂತಿತ್ತು. ಆ ಮೂರ್ತಿಯನ್ನು ಗಂಗೆಯಲ್ಲಿ ವಿಸರ್ಜಿಸಲು ಗಂಗೆ ಮಗನೇ ಎಂದು ಸಂಬೋಧಿಸಿದಳು. ಪಾರ್ವತಿಯು ಏಕಕಾಲದಲ್ಲಿ ಕಂದಾ ಎಂದಳು. ಆ ಕ್ಷಣವೇ ಗಜಾಕೃತಿಗೆ ಜೀವ ಬಂದಿತು. ಗಣೇಶನ ಜನನಕ್ಕೆ ಮಾತೃ ಸ್ವರೂಪಿಗಳು ಕಾರಣರಾದ್ದರಿಂದ ಗಣಪತಿಗೆ ದ್ವೈಮಾತುರ ಎಂಬ ಹೆಸರೂ ಇದೆ. ಗಣಪತಿಯ ಪುರಾಣ ಮಹತ್ವವನ್ನು ಅರಣ್ಯವಾಸಿಗಳಾದ ಪಾಂಡವರಿಗೆ ಸೂತ ಪುರಾಣಿಕರು ಉಪದೇಶಿಸಿ ತಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಹಾಗೂ ಪುನಃ ರಾಜ್ಯಪ್ರಾಪ್ತಿಗಾಗಿ ಗಣಪತಿ ಸಂಕಷ್ಟ ಚತುರ್ಥಿಯ ವಿಧಿವಿಧಾನ ತಿಳಿಸಿದ್ದಾರೆ.
ದಮಯಂತಿಯು ಅಗಲಿದ ನಳಮಹಾರಾಜನನ್ನು ಪುನಃ ಸಂಧಿಸಿದ್ದು, ಶ್ರೀಕೃಷ್ಣನು ಜಾಂಬವತಿ ಯನ್ನು ಕೂಡಿಕೊಂಡು ಶಮಂತಕ ಮಣಿಯನ್ನು ಪಡೆದಿದ್ದು, ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ಬಿಡಿಸಿದ್ದು, ಭಗೀರಥನು ಗಂಗೆಯನ್ನು ಧರೆಗೆ ತಂದಿದ್ದು, ಇಂದ್ರನು ವೃತ್ತಾಸುರನನ್ನು ಕೊಂದಿದ್ದು ಈ ಸಂಕಷ್ಟ ಚತುರ್ಥಿ ವ್ರತದ ಫಲದಿಂದಾಗಿಯೇ ಎಂದು ಪುರಾಣ ಕಥೆಗಳು ಹೇಳುತ್ತವೆ.
ಗಜಮುಖದವಗೆ ಗಣಪತಿಗೆ
ಚೂಲ್ವತ್ರಿಜಗವಂದಿತ ಗಾರುತಿ ಎತ್ತಿರೋ..

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ೧೮೮೩ರಲ್ಲಿ ಬಾಲಗಂಗಾಧರ ತಿಲಕರಿಂದ ರೂಢಿಗೆ ಬಂದ ಸಾರ್ವಜನಿಕ ಗಣೇಶೋತ್ಸವ ಇತಿಹಾಸ ಮಹತ್ವ ಪಡೆದಿದೆ. ೧೮೮೩ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಬಾರಿಗೆ ನಿಜವಾದ ಅರ್ಥದಲ್ಲಿ ಸಾರ್ವಜನಿಕರ ಸಹಾಯದಿಂದ ಗಣೇಶೋತ್ಸವ ಆಚರಿಸಲಾಯಿತು. ಭಾದ್ರಪದ ಚತುರ್ಥಿಯಂದು ಗಣೇಶೋತ್ಸವವನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಗಳಿಂದ ಆಚರಿಸುತ್ತಿದ್ದರೆ ಪುಣೆಯ ಪೇಶ್ವೆಯರು ಅದನ್ನು ಸಾಮೂಹಿಕ ಸಮಾರಂಭ ಸ್ವರೂಪದಲ್ಲಿ ಆಚರಿಸುತ್ತಿದ್ದರು. ಆಗ ಅದಕ್ಕೆ ನಿಜವಾದ ಅರ್ಥದಲ್ಲಿ ಸಾರ್ವಜನಿಕ ಗಣೇಶೋತ್ಸವದ ಸ್ವರೂಪ ಬಂದಿರಲಿಲ್ಲ. ನಿಜವಾದ ಅರ್ಥದಲ್ಲಿ ಗಣೇಶೋತ್ಸವಕ್ಕೆ ಸಾರ್ವಜನಿಕ ಸ್ವರೂಪಕೊಟ್ಟು ಐತಿಹಾಸಿಕ ಮಹತ್ವ ನೀಡಿದ ಶ್ರೇಯಸ್ಸು ಸ್ವರಾಜ್ಯವೇ ನನ್ನ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸಿದ ಲೋಕಮಾನ್ಯ ತಿಲಕರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ಅವರಿಗೆ ಸಾರ್ವಜನಿಕ ಗಣೇಶೋತ್ಸವದ ಜನಕ ಎಂದು ಕರೆಯುತ್ತಾರೆ. ತಿಲಕರು ತಮ್ಮ ಕೇಸರಿ ಪತ್ರಿಕೆಯಲ್ಲಿ ರಾಷ್ಟ್ರ ಜಾಗೃತಿ ಸಂಪಾದಕೀಯ ಬರೆದಿದ್ದಾರೆ. ಕೊನೆಯ ದಿನ ಅನಂತ ಚತುದರ್ಶಿಯಂದು ಭಾಷಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಅದು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಕ್ಕೆ ಬಲವನ್ನು ಕೊಟ್ಟಿತು.
ಗಣೇಶ ಬಂದ ಕಾಯಿ ಕಡಬು ತಿಂದ
ಚಿಕ್ಕೆರೆಯಲ್ಲಿ ಬಿದ್ದ ದೊಡ್ಕೆರೆಯಲ್ಲೆದ್ದ

ಬಾಲ್ಯದಲ್ಲಿ ನಾವು ಹಾಡುತ್ತಿದ್ದ ಈ ಹಾಡು ಮತ್ತೆ ನೆನಪಾಗುತ್ತಿದೆ. ಮತ್ತೆ ಮರಳಿ ಬಂದಿರುವ ಗೌರಿ ಗಣೇಶ ಹಬ್ಬ ನಾಡಿಗೆ ಸಮೃದ್ಧಿಯನ್ನು ತರಲಿ.

ಗೊರೂರು ಅನಂತರಾಜು
ಮೊಬೈಲ್: ೯೪೪೯೪೬೨೮೭೯.
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ, ಹಾಸನ.೫೭೩೨೦೧.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group