spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಅಂಬಿಗರ ಚೌಡಯ್ಯ

12ನೇ ಶತಮಾನದ ಚಳವಳಿಯಲ್ಲಿ ಸಾಮಾನ್ಯವಾಗಿ ಕೆಳವರ್ಗದ ವಚನಕಾರರು ಶೋಷಿತ ವರ್ಗಗಳಿಂದಲೇ ಬಂದು ಶರಣತತ್ವಕ್ಕೆ ಆಕರ್ಷಿತರಾಗಿ ಅಂದಿನ ಕಠಿಣ ವರ್ಣಾಶ್ರಮ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತರು, ಅಸ್ಪೃಶ್ಯರು. ತಳವಾರರು, ವಾಲಿಕಾರರು, ಊರಾಚೆಗಿನ ಕೇರಿಗಳಲ್ಲಿ ವಾಸ ಮಾಡುತ್ತಲೇ ಸಮಾಜದಿಂದ ತಿರಸ್ಕೃತರಾಗಿದ್ದರು. ಪ್ರಾಣಿ ಪಕ್ಷಿಗಳಿಗಿಂತ ಕಡೆಯಾಗಿ ಅವರನ್ನು ಕಾಣಲಾಗುತ್ತಿತ್ತು.ಹರಿದು ಹಂಚಿಹೋಗಿದ್ದ ಸಮಾಜವನ್ನು ಒಂದುಗೂಡಿಸುವದು ಅವಶ್ಯವಾಗಿತ್ತು. ಈ ವ್ಯವಸ್ಥೆಯೇ ಶರಣರ ಚಳವಳಿಗೆ ಕಾರಣವಾಯಿತು.

ಕೆಳವರ್ಗದವರಿಗೆ ಮಾನಸಿಕ ಧೈರ್ಯ ತಂದು ಕೊಟ್ಟು ವಚನಕಾರರು ಸಮಾಜದ ತಪ್ಪುಗಳನ್ನು ತಿದ್ದುವಲ್ಲಿ ತೋರಿದ ಎದೆಗಾರಿಕೆಯನ್ನು ಅಂದಿನ ಶರಣರು ಸರಿದಾರಿಗೆ ತರುವಲ್ಲಿ ಪ್ರಯತ್ನಿಸಿದ್ದಾರೆ. ಈ ಚಳವಳಿಯಲ್ಲಿ ಸಮಾಜದ ಎಲ್ಲಾ ಕಾಯಕ ಜೀವಿಗಳು ಭಾಗವಹಿಸಿದ್ದಾರೆ. ಅವರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ. ಶೋಷಣೆಗೆ ಒಳಪಟ್ಟ ತಳಸಮುದಾಯಕ್ಕೆ ಮಾನಸಿಕ ಧೈರ್ಯ ಮತ್ತು ಸೈರ್ಯ ತಂದು ಕೊಟ್ಟ ವಚನಕಾರರಲ್ಲಿ ಅಂಬಿಗರ ಚೌಡಯ್ಯ ನವರು ಪ್ರಮುಖ ವಚನಕಾರರು.

- Advertisement -

ಅಂಬಿಗರ ಚೌಡಯ್ಯನವರು ಜನಿಸಿದ ಗ್ರಾಮ ಚೌಡದಾನಪುರ.ಹೆಂಡತಿ -ಕರಿಯವ್ವ ಮಗ-ಪುರವಂತ ಚೌಡದಾನಪುರ ಗ್ರಾಮದಲ್ಲಿ ಕಂಡು ಬರುವ ಶಾಸನಗಳಲ್ಲಿ ಮಣಂಬೆ ನಾಯಕನ ಹೆಸರಿದ್ದು ಆತನೇ ಅಂಬಿಗರ ಚೌಡಯ್ಯ ಎಂದು ಹೇಳುವರು.ಚೌಡದಾನಪುರದ ನದಿಯ ದಡದಲ್ಲಿಯೇ ಆತನ ಸಮಾಧಿಯಿದೆ.

ಹನ್ನೆರಡನೆಯ ಶತಮಾನದ ಎಲ್ಲಾ ವಚನಕಾರರು ಸಾಮಾನ್ಯವಾಗಿ ದೇವರು, ಧರ್ಮ, ಭಕ್ತರು, ಲಿಂಗ ಜಂಗಮ, ಕಾಯಕ ದಾಸೋಹ ಅಲ್ಲದೇ ಸಾಮಾಜಿಕ ವಿಷಮತೆ, ಮಾನವ ಸಮಾನತೆಯನ್ನು ಪ್ರಮುಖವಾಗಿ ಕಾಣುತ್ತವದಲ್ಲದೆ ಬಂಡಾಯ ಪ್ರತಿಜ್ಞೆ ಬಿಸಿ ಹೆಚ್ಚಾಗಿದೆ. ಅವರ ನಡುವೆ ಇದ್ದ. ಚೌಡಯ್ಯ ತನ್ನ ಹೆಸರನ್ನು ಮತ್ತು ಜಾತಿಯನ್ನು ತನ್ನ ಅಂಕಿತವಾಗಿರಿಸಿಕೊಂಡು ಸ್ವಾಭಿಮಾನದಿಂದ ಮೆರೆದಿದ್ದಾನೆ. ಉದಾಹರಣೆಗಾಗಿ ಬಸವಣ್ಣನವರು “ಕೂಡಲಸಂಗಮದೇವ” ಪ್ರಭುದೇವರು “ಗುಹೇಶ್ವರ” ಚೆನ್ನಬಸವಣ್ಣನವರು “ಕೂಡಲಚೆನ್ನಸಂಗಮದೇವ” ಸಿದ್ದರಾಮನ “ಕಪಿಲಸಿದ್ಧಮಲ್ಲಿಕಾರ್ಜುನ” ಇಂತಹ ಹಲವಾರು ವಚನಾಂಕಿತವನ್ನು ಇಟ್ಟುಕೊಂಡದ್ದು ಕಂಡುಬರುತ್ತದೆ. ಆದರೆ ಚೌಡಯ್ಯನವರ ಅಂಕಿತ ಹಾಗಲ್ಲ. “ನನ್ನಂತೆ ನಾನಾಗುವೆ ಸಾಧನೆಯ ಪ್ರತೀಕದಂತೆ ಕಾಣುತ್ತದೆ. ನಿನ್ನ ಅರಿವಿನ ಕುರುಹಾಗಿರುವ ಇಷ್ಟಲಿಂಗವನ್ನು ಅನು ಸಂಧಾನಗೈದು, ನಿನ್ನ ಸ್ವರೂಪವನ್ನು ಕಂಡುಕೊಂಡು ನಿನ್ನಂತೆ ನೀನಾಗು” ಎಂದು ಅರುಹುತ್ತದೆ. ಇಂತಹ ಜ್ಞಾನದ ಸಂಕೇತವಾಗಿ ಕಾಣುತ್ತದೆ. ಅಂಬಿಗರ ಚೌಡಯ್ಯನ ಅಂಕಿತನಾಮ. ವಚನಾಂಕಿತಗಳನ್ನು ತನ್ನನ್ನು ತಾನು ತಿಳಿದುಕೊಳ್ಳುವ ಮೂಲಕ ಬೇರೆಯವರನ್ನು ತಿಳಿಯಬೇಕು. ಅನ್ಯರನ್ನು ಪ್ರೀತಿ ಗೌರವದಿಂದ ಕಾಣಬೇಕು. ಅನ್ಯರ ಬದುಕಿಗೂ ಆಸರೆಯಾಗಿ ನಿಂತುಕೊಳ್ಳಬೇಕು ಎನ್ನುವ ಉದಾತ್ತ ವಿಚಾರಗಳು ಅವನಲ್ಲಿವೆ.

ಬಸವಣ್ಣನವರು ಕೂಡಲಸಂಗಮದಿಂದ ಮಂಗಳವೇಡೆಗೆ ಹೋಗುವಾಗ ಅವರೊಂದಿಗೆ ಅಂಬಿಗರ ಚೌಡಯ್ಯನು ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದು ಶಿವಶರಣನಾಗಿ ವಚನಗಳನ್ನು ಬರೆದಿದ್ದಾನೆ. ಕಲ್ಯಾಣದ ಹತ್ತಿರದಲ್ಲಿ ಅಂಬಿಗರ ಚೌಡಯ್ಯನು ತಪಸ್ಸು ಗೈದ ಗವಿಮಠವಿದ್ದು, ಆ ತ್ರಿಪುರಾಂತಕ ಕೆರೆಯ ಗ್ರಾಮವೇ ಅಂಬಿಗರ ಚೌಡಯ್ಯನ ಕಾಯಕಕ್ಕೆ ಆಧಾರ ತಾಣವಾಗಿದೆ. ಅಂಬಿಗರ ಚೌಡಯ್ಯನು ಬಸವಣ್ಣನವರ ಕರೆಯ ಮೇರೆಗೆ ತಾನು ಹುಟ್ಟಿದ ನೆಲೆಯನ್ನು ಬಿಟ್ಟು ಬಸವಾದಿ ಶಿವಶರಣರೊಂದಿಗೆ ಕಲ್ಯಾಣದಲ್ಲಿ ಬಂದು ನೆಲೆಸಿದ್ದಾನೆ. ಕಲ್ಯಾಣದಲ್ಲಿ ವೃತ್ತಿಪರರಾದ ಕಾಯಕ ಜೀವಿಗಳೊಂದಿಗೆ ಬಸವಣ್ಣ ಅಲ್ಲಮ ಪ್ರಭು ಸಾರಥ್ಯದಲ್ಲಿ ಅವರೊಡನೆ ಅನುಭವ ಮಂಟಪದಲ್ಲಿ ತನ್ನ ವಿಚಾರಗಳನ್ನು ಹಂಚಿಕೊಂಡ ಕಾರಣದಿಂದಲೇ ಗುಮ್ಮಳಾಪುರದ ಸಿದ್ಧಲಿಂಗನು ತನ್ನ ಶೂನ್ಯ ಸಂಪಾದನೆಯಲ್ಲಿ ಚೌಡಯ್ಯನಿಗೆ ಸ್ಥಾನವನ್ನು ನೀಡಿದ್ದಾನೆ. ಬಸವಾದಿ ಶಿವಶರಣರ ಗಾಢವಾದ ಪ್ರಭಾವವು ಚೌಡಯ್ಯನ ಮೇಲೆ ಆಗಿದೆ. ತರುಣನೂ ಸಾಮಾಜಿಕ ಬದಲಾವಣೆಗೆ
ತಹತಹಿಸುವವನೂ ಆದ ಚೌಡಯ್ಯನು ಆ ಸಮಾಜ ಚಿಂತಕರ ಚಳವಳಿಗಾರರ ಜತೆ ಸೇರಿ ಸಮಾಜ ಪರಿವರ್ತನೆಯ ಜಂಗಮ ದಾಸೋಹಗಳಲ್ಲಿಯೂ ಕೆಲಕಾಲ ತನ್ನ ಜೀವನ ಸವೆಸಿದ್ದಾನೆ.

- Advertisement -

ಬಸವಣ್ಣನವರ ಕಾಲಮಾನ ಕ್ರಿ.ಶ.1160. ಅದೇ ಚೌಡಯ್ಯನವರು ಬದುಕಿದ ಕಾಲವೆಂದೂ ಗುರುತಿಸುತ್ತಾರೆ. ಶರೀಫ್ ಸಾಹೇಬರು ರಚಿಸಿದ ಶಿವದೇವ ವಿಜಯ ಗ್ರಂಥದಲ್ಲಿ ಚೌಡಯ್ಯನವರು ಕುರುವತ್ತಿಯಲ್ಲಿ ಜನಿಸಿದನೆಂದು ಹೇಳಲಾಗಿದೆ.

ಅಂಬಿಗರ ಚೌಡಯ್ಯನವರನ್ನು ಕುರಿತು ಆಳವಾಗಿ ಅಧ್ಯಯನ ಕೈಗೊಂಡು ಕ್ಷೇತ್ರಕಾರ್ಯ ಮಾಡಿದ ಡಾ. ಎಂ.ಎಂ ಕಲ್ಬುರ್ಗಿ, ಡಾ. ಬಸವರಾಜ ಸಿದ್ಧಾಶ್ರಮರವರು ಚೌಡಯ್ಯ, ಚೌಡದಾನಪುರ(ಶಿವಪುರ)ದಲ್ಲಿ ಜನಿಸಿದವರೆಂದು ಹೇಳಿದ್ದಾರೆ. ಪ್ರೊ ಎಸ್ ಎಸ್ ಭೂಸರೆಡ್ಡಿ, ಪ್ರೊ ಎಸ್.ಎಸ್.ಒಡೆಯರ, ಡಾ ಎಸ್ ವಿದ್ಯಾ ಶಂಕರ, ದಬಾಲೆ, ವಿ.ಎಸ್.ಶ್ರೇಷ್ಠಿ ಮುಂತಾದವರೆಲ್ಲ ಅಂಬಿಗರ ಚೌಡಯ್ಯನವರು ಹಿರೇಕುರುವತ್ತಿಯಲ್ಲಿಯೇ ಜನಿಸಿದ್ದಾನೆಂದು ಒಮ್ಮತಕ್ಕೆ ಬಂದಿರುತ್ತಾರೆ. ಇಲ್ಲೇ ಸಮೀಪ ತುಂಗಭದ್ರಾ ನದಿ ದಡದಲ್ಲಿಯೇ ಅಂಬಿಗರ ಚೌಡಯ್ಯ ದೋಣಿ ಹರಿಗೋಲು ನಡೆಸುತ್ತಿದ್ದನ್ನು ಅದೇ ಗ್ರಾಮದ ಮಠದಲ್ಲಿ ಆತನ ವಿದ್ಯಾಭ್ಯಾಸ ನಡೆದದ್ದು ಎಂದು ದಾಖಲಿಸುತ್ತಾರೆ.

ಒಂದು ಸಲ ಮಳೆಗಾಲದಲ್ಲಿ ಜನರನ್ನು ತನ್ನ ಹರಿಗೋಲಲ್ಲಿ ದಾಟಿಸುವಾಗ ಮಳೆಗಾಳಿಯಿಂದ ದೋಣಿ ಬಿರುಗಾಳಿಗೆ ಸಿಕ್ಕು ಅಪಾಯ ಉಂಟಾದಾಗ ಚೌಡಯ್ಯನ ಭಕ್ತಿಯಿಂದ ದೋಣಿಯಲ್ಲಿ ಎಲ್ಲರೂ ಪಾರಾದರು. ಆ ದೋಣಿಯಲ್ಲಿ ಗುತ್ತಲ ರಾಜನ ಮಗನಿದ್ದನು. ಇದರಿಂದ ರಾಜ ತನ್ನ ಮಗನ ಪ್ರಾಣ ಕಾಪಾಡಿದ ಕಾರಣ ಶಿವಪೂರದ ಹೊಲವನ್ನು ದಾನ ಮಾಡಿದನೆಂದು ಪ್ರತೀತಿ. ಚೌಡಯ್ಯನವರ ಒಂದು ವಚನ ವಿಶ್ಲೇಷಣೆಯನ್ನು ಈ ರೀತಿಯಾಗಿ ಹೇಳಬಹುದು.

ಅಂಬಿಗನು ಜಗದೊಳಗೆ ಇಂಬಿಲೋಲಾಡುವನು ತುಂಬಿದ ಸಾಗರದೊಳಗೆ ನೋಡಯ್ಯ! ನಿಂದ ದೋಣಿಯನೇರಿ ದಂದಿನ ಹುಟ್ಟ ಕಡಿವಂದವನರಿದಾತ ತೊಳಸುತ್ತಿದ್ದನು ಚೆಂದಗೆಟ್ಟವರೆಲ್ಲ ಬಂದೇರಿ ದೋಣಿಯನು ಶಿವನ ಠಾವಿಗೊಯಿದಿಳುಹುವೆನೆಂದನಂಬಿಗರ ಚೌಡಯ್ಯ

ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿದ್ದುಕೊಂಡೆ ಅದರ ಎಲ್ಲಾ ಎತ್ತಿ ಹೇಳಿ ವಿಡಂಬಿಸಿದವರು ಅಂಬಿಗರ ಚೌಡಯ್ಯನವರು. ನೇರವಾಗಿ ಇದ್ದುದ್ದನ್ನು ಇದ್ದಂತೆ ಹೇಳುವ ಗುಣ ಹೊಂದಿರುವ ಅಪರೂಪದ ಶರಣ.

ಅಂಬಿಗ ಎಂಬುದು ಅದೊಂದು ಸಾಮಾನ್ಯ ಕೀಳು ಕುಲವಲ್ಲ, ನಂಬಿದವರನ್ನು ಭವಸಾಗರದಿಂದ ದಾಟಿಸಬಲ್ಲ ಪರಿಹಾರಕ ಶಕ್ತಿಯದು.ಅಂಬಿಗನಿಗೂ ಜಲಕ್ಕೂ ಅನ್ನೋನ್ಯ ಸಂಬಂಧ. ಅವನು ದಿನನಿತ್ಯ ಈ ದಡದಿಂದ ಆ ದಡಕ್ಕೆ ಜನರನ್ನು ಸೇರಿಸಬೇಕೆಂದು ಹಂಬಲಿಸಿ ಬಂದು ನೆರೆದನು ದಡದಿಂದ ಹತ್ತಿಸಿಕೊಂಡು ಹುಟ್ಟು ಹಾಕುತ್ತಾ ಹೋಗುತ್ತಾನೆ. ಅವರೆಲ್ಲರನ್ನು ನದಿಯ ಆಚೆ ದಾಟಿಸಿ ಬಿಡುತ್ತಾನೆ. ಈ ಕ್ರಿಯೆ ಭೌತಿಕ ವಲಯದಲ್ಲಿ ಇದನ್ನೇ ಆಧ್ಯಾತ್ಮಿಕ ಸಾಧನೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರು ಹೇಳುವರು. ನಮ್ಮ ನಿಜಶರಣ ಅಂಬಿಗರ ಚೌಡಯ್ಯ ಕಾಯಕ ನಿಷ್ಠನಾದ ಶರಣ ಚೌಡಯ್ಯ ಭೌತಿಕವಾಗಿ ದಿನನಿತ್ಯ ನೂರಾರು ಜನರನ್ನು ತುಂಬಿ ಬಂದ ಪ್ರವಾಹದಿಂದ ದೋಣಿಯೇರಿಸಿಕೊಂಡು ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುತ್ತಿದ್ದ. ಈ ಕಾಯಕ ಕೇವಲ ಉಪಜೀವನಕ್ಕಲ್ಲ, ಆಧ್ಯಾತ್ಮಿಕ ಸಾಧನೆಗ ಸಾಧಕವಾಗಿತ್ತು.

‘ಅಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನು’ ಎಂಬ ಮಾತು ಧ್ವನಿಪೂರ್ಣವಾಗಿದೆ. ಅಂದಿನ ವರ್ಣಾಶ್ರಮ ವ್ಯವಸ್ಥೆಯಲ್ಲಿ ಮೇಲು ಕುಲದ ಜನತೆ ಸಕಲ ಸೌಲಭ್ಯಗಳಿಂದ ಮೇಲಂತಸ್ತಿನ ಉಪ್ಪರಿಗೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತಮ್ಮ ಬದುಕನ್ನು ಅನುಭವಿಸುತ್ತಿದ್ದರು. ಕೆಳ ವರ್ಗದ ಶೋಷಿತರು ಮೇಲಿನವರ ಸೇವೆಗಾಗಿಯೇ ಬದುಕುವಂತಿತ್ತು, ಅವರ ಬದುಕು ಪ್ರಾಣಿಗಳಿಗಿಂತಲೂ ಕಷ್ಟಕರವಾಗಿತ್ತು. ಇದನ್ನು ಕಣ್ಣಾರೆ ಕಂಡ ಚೌಡಯ್ಯ ನಿಮ್ಮನ್ನೆಲ್ಲ ಆಧ್ಯಾತ್ಮಿಕ ದೋಣಿಯೇರಿಸಿಕೊಂಡು ಶಿವನ ಪೂಜೆಗೆ ಕರೆದೊಯ್ಯುತ್ತೇನೆ ಬನ್ನಿರಿ ಎಂದು ಆಶ್ವಾಸನೆ ನೀಡುತ್ತಾನೆ.

ಚೌಡಯ್ಯ ತನ್ನ ವೃತ್ತಿಯಾದ ಅಂಬಿಗ ತನ್ನ ತನವನ್ನೇ ಆಧ್ಯಾತ್ಮಿಕ ಅರ್ಥವಲಯಕ್ಕೆ ಹೋಲಿಸಿ ತಾನುವೆಂಬುವುದು ಹರಿಗೋಲು, ವರ್ತನ ಎಂಬ ಹುಟ್ಟು ಹಿಡಿದು ಮಾಟ ಕೂಟವೆಂಬ ಹೊಳೆಯಲ್ಲಿ ಕೂತ ದಾತುತೈದಾರು ಹುಟ್ಟು ಸಾವುಗಳೆಂಬ ಭವಬಂಧನದಿಂದ ಪಾರು ಮಾಡುವ ಅಂಬಿಗನು ಆ ಪರಮಾತ್ಮ ಅವನನ್ನು ನಂಬಿ ನಡೆದರೆ ಒಂದೇ ಹುಟ್ಟಲಿ ಕಡೆಯ ಹಾಯಿಸುವ ಈ ಬಂಧನದಿಂದ
ಪಾರಾಗಲು ಶರೀರವು ಒಂದು ಮಾಧ್ಯಮ. ಅದನ್ನೇ ಹರಿಗೋಲು ಎಂದು ಪರಿಭಾವಿಸುವನು. ಇಲ್ಲಿ ಸದಾಚಾರವೇ ಹುಟ್ಟು ಅರಿವು ಕ್ರಿಯೆಗಳೇ ಹೊಳೆ, ಇದರ ನೆರವಿನಿಂದ ಲೋಕದ ಜನ ಈ ಭವ ಸಮುದ್ರವನ್ನು ದಾಟುತ್ತಿದ್ದಾರೆ. ಈ ಜಗತ್ತು ತುಂಬಿದ ಸಾಗರ, ಭವ ಸಾಗರವನ್ನು ದಾಟಿಸುವ ಅಂಬಿಗ ಹರಿಗೋಲನ್ನು ಏರಿ ಹುಟ್ಟನ್ನು ಹಿಡಿದಿರುವನು.

ಚೌಡಯ್ಯನ ಕಾಲದ ಪರಿಸರದಲ್ಲಿ ಈ ಜಾತಿಪದ್ಧತಿ ಸಮಾಜದಲ್ಲಿ ಜೀವಂತವಾಗಿದ್ದಿತು. ಚೌಡಯ್ಯ ಹೀಗೆ ಹೇಳಬೇಕಾದರೆ ಅಪಮಾನದ ಕಹಿ ಉಂಡಿರಲೇಬೇಕು. ಜೀವನದಲ್ಲಿ ನೊಂದು ಬೆಂದಿರಲೇಬೇಕು

ಶರಣ ಚೌಡಯ್ಯನಿಗೂ ಈ ವ್ಯವಸ್ಥೆಯ ಜಾತಿ ಬಿಸಿ ತಾಗದೇ ಹೋಗಿರಲಿಕ್ಕಿಲ್ಲ. ಸಮಾಜದಲ್ಲಿ ಬದುಕುವ ವ್ಯಕ್ತಿ ನಡೆ -ನುಡಿಯಲ್ಲಿ ಹೊಂದಬೇಕಾಗಿರುವ ಸತ್ಯವನ್ನು ಅಂತರಂಗದ ಪರಿಶುದ್ಧತೆಯನ್ನು ವಚನಕಾರರು ಮತ್ತೆ ಮತ್ತೆ ಬಲವಾಗಿ ಪ್ರತಿಪಾದಿಸಿದ್ದಾರೆ.

ಚೌಡಯ್ಯ, ಮನುಷ್ಯ ತಾನು ಗಳಿಸಿದ ಸಂಪತ್ತಿನಲ್ಲಿ ನೆರೆ ಹೊರೆಯವರೂ ಸುಖದಿಂದ ಬದುಕಲೆಂಬ ಭಾವದಿಂದ ಉಪಯೋಗಿಸಬೇಕು. ಇದುವೆ ಜಂಗಮ ದಾಸೋಹವಾಗಿದೆ. ಭಕ್ತಿ ಸಂಪನ್ನರಾಗಿ ಅಷ್ಟಾವರಣ ನಿಷ್ಠನಾಗಿ ಬದುಕುವ ಬದುಕು ಸರ್ವಾಂಗ ಸುಂದರವಾದ ಶಿವನ ಪಾದವನ್ನು ಹೊಂದಿ ಶಿವ ರೂಪನೇ ಆಗುತ್ತಾನೆ. ಇಷ್ಟಲಿಂಗಾರ್ಚನೆ ಮತ್ತು ಲಿಂಗಾಂಗ ಸಾಮರಸ್ಯ ಸಿದ್ದಿಯೇ ಪರಮಶ್ರೇಷ್ಠವಾದವುಗಳೆಂದು ಅರುಹುತ್ತಾನೆ. ದೇವರನ್ನು ಕಾಣಲು ನೀರಲ್ಲಿ, ಕಾಡಲ್ಲಿ, ಗುಡಿಗುಂಡಾರಗಳಿಗೆ ಹೋಗಬೇಕಾಗಿಲ್ಲ. ಅವ ತನುವಿನೊಳಗೆ ಹುದಗಿದ್ದ ಲಿಂಗದಲ್ಲಿಯೇ ದೇವರಿದ್ದಾನೆ. ನಿಜವಾದ ಸಾತ್ವಿಕತೆ – ಸೌಂದರ್ಯವು ಹುಟ್ಟಿನಿಂದ ಬರುವುದಿಲ್ಲ ಅದು ಸಾಧನೆಯ ಸಿದ್ದಿಯಿಂದ ಬರುತ್ತದೆಂದು ಎಚ್ಚರಿಸುತ್ತಾನೆ. ತಾಯಿಯ ಅಂಡಾಣು ತಂದೆಯ ವೀರ್ಯಾಣುಗಳ ಬಿಂದುವಿನಿಂದ ಪಿಂಡವು ರೂಪಿತವಾಗುತ್ತದೆಂಬುದು ವೈಜ್ಞಾನಿಕ ಸತ್ಯ, ಕೀಳು ಕುಲದವರ ಪಿಂಡ ಗರ್ಭದಿಂದ ಹುಟ್ಟಿನಲ್ಲಿ ಆತನಿಗೆ ಕೀಳು ಜಾತಿಯ ಗುರುತೇ ಶಾಶ್ವತವಾಗುತ್ತದೆ. ಮೇಲು ಜಾತಿಯಲ್ಲಿ ಹುಟ್ಟಿದವರೆಲ್ಲರಿಗೆ ಮೇಲು ಕುಲವೇ ನಿಶ್ಚಿತವಾಗುತ್ತದೆ. ಮೇಲು ಜಾತಿಯವರಲ್ಲ ಅಂದವಂತರಾಗಿದ್ದು, ಕೀಳರೆಲ್ಲರು ಅಂದಗೇಡಿಗಳಾಗಿದ್ದರು. ಈ ಜನರನ್ನೆಲ್ಲ ಕುರಿತು “ಅಂದಗೆಟ್ಟವರೆಲ್ಲಾ ಬಂದೇರಿ ಹರಿಗೋಲು” ಎಂದು ಕರೆಯುತ್ತಾನೆ. ಅವರನ್ನೆಲ್ಲ ತನ್ನಂತೆ ನಿಜಶರಣರಾಗಲು ಕರೆಕೊಡುತ್ತಾನೆ. ಮತ್ತು ಹರಿಗೋಲು ಮುಂದೆ ಸಾಗಿ ಹೋಗಲು ಹುಟ್ಟು ಸಹಾಯಕವಾಗುವಂತೆ ಜಾತಿ ಭ್ರಮೆಯೆಂಬ ಸಮುದ್ರ ದಾಟಬೇಕೆಂಬ ಭರವಸೆ ನೀಡುತ್ತಾನೆ .

ಅಡವಿಯ ಹೊಗಿಸಿತ್ತು, ಹುಡುಕುನೀರಲದ್ದಿತ್ತು, ಜಡೆಗಟ್ಟಿ ಭಸ್ಮವ ತೊಡೆಸಿತ್ತು, ಉಡೆವುಚ್ಚುಗೊಳಿಸಿತ್ತು, ಹಿಡಿದೊತ್ತಿ ಕೇಶವ ಕೀಳಿಸಿತ್ತು, ಪಡಿಪುಚ್ಚಗೊಳಿಸಿತ್ತು ಊರೊಳಗೆಲ್ಲ     ಈ ಬೆಡಗಿನ ಮಾಯೆಯ ಬಡಿಹಾರಿ ಸಮಯಿಗಳ ನುಡಿಗೆ ನಾಚುವನೆಂದ ಅಂಬಿಗ ಚೌಡಯ್ಯ

ಇದು ಒಂದು ಬೆಡಗಿನ ವಚನವಾಗಿದ್ದು
ಈ ಪ್ರಪಂಚದಲ್ಲಿ ರಹಸ್ಯಗೂಢವಾದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ವಿರಕ್ತಿಯನ್ನು ಬಯಸಿ, ಈ ಶರೀರ ಹಾಗೂ ಮನಸ್ಸಿಗೆ ವ್ಯತಿರಿಕ್ತವಾದ ಸಂಪ್ರದಾಯಗಳಿಗೆ ಮನಸೋತು ಒಣಜಂಬ ಕೊಚ್ಚಿಕೊಳ್ಳುವುದನ್ನು ಈ ವಚನದಲ್ಲಿ ಅಂಬಿಗರ ಚೌಡಯ್ಯನವರು ಮಾರ್ಮಿಕವಾಗಿ ವಿಡಂಬಿಸಿದ್ದಾರೆ.

ಈ ಪ್ರಪಂಚವೇ ಒಂದು ಮಾಯೆ ಮಾಯೆಯಿಂದಲೇ ಕೂಡಿರುವ ಈ ಪ್ರಪಂಚ . ಈ ಮಾಯೆಯನ್ನು ಎದುರಿಸಿಕೊಂಡು ಅದಕ್ಕೆ ಅಂಟಿಯೂ ಅಂಟದಂತೆ ಬದುಕಬೇಕಾದುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಆದರೆ ಆ ಮಾಯೆಗೆ ಅಂಜಿಕೊಂಡು ಈ ಸಮಾಜವ್ಯವಸ್ಥೆಯಿಂದಲೇ ಹೊರಹೋಗಿ ನಿಶ್ಚಿಂತೆಯಿಂದ ಬದುಕುತ್ತೇನೆ ಎಂಬುದು ಮೂರ್ಖತನ ಎಂಬುದು ಅಂಬಿಗರ ಚೌಡಯ್ಯನ ಅಭಿಪ್ರಾಯ.

ಕೆಲವು ಮಾನವರು ತಾವು ಉಳಿದವರಿಗಿಂತ ಮೇಲಿನವರು, ಮಾಯೆಯನ್ನು ಗೆದ್ದವರು, ತಾವು ಮಾತ್ರ ಸದ್ಭಕ್ತರಾಗಿರುವವರು, ತಾವು ಮಾತ್ರ ಶಿವಾನುಗ್ರಹಕ್ಕೆ ಪಾತ್ರರಾಗಿರುವವರು ಎಂದು ಒಣಜಂಬ ತೋರುವವರು ಅದನ್ನು ಸಾಧಿಸುವುದಕ್ಕೆ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ.

ಮೊದಲನೆಯದು, ಮಾಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅಥವಾ ಮಾಯೆಯಿಂದ ದೂರವಿರುವುದಕ್ಕೆ ನಾಡನ್ನು ಬಿಟ್ಟು ಕಾಡುವಾಸಿಯಾಗುವುದು. ಕಾಡುವಾಸಿಯಾದ ಮಾನವ ಮಾನವನೆ ಅಲ್ಲ .

ಎರಡನೆಯದು, ತಾನು ತನ್ನ ದೇಹ, ಮನಸ್ಸುಗಳನ್ನು ದಂಡಿಸಿ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವವನು ಎಂದು ತೋರಿಸುವುದಕ್ಕೆ ತಣ್ಣೀರನ್ನು ಬಿಟ್ಟು ಕುದಿನೀರನ್ನು ಎರೆದುಕೊಳ್ಳುವುದು.

ಮೂರನೆಯದು, ಉಳಿದವರಿಗಿಂತ ಭಿನ್ನನೆಂದು ತೋರಿಸಿಕೊಳ್ಳುವುದಕ್ಕೆ ಕೂದಲನ್ನು ಜಟೆಕಟ್ಟಿಕೊಳ್ಳುವುದು.

ನಾಲ್ಕನೆಯದು, ತಾನು ಪರಮಾತ್ಮ ನ ಪರಮ ಶಿವಭಕ್ತನೆಂದು ಬೇರೆಯವರನ್ನು ನಂಬಿಸಲಿಕ್ಕೆ ಶರೀರದ ತುಂಬ ವಿಭೂತಿಯನ್ನು ಲೇಪಿಸಿಕೊಳ್ಳುವುದು .

ತಾನೊಬ್ಬ ವಿರಕ್ತನೆಂದು ಬಿಂಬಿಸುವುದಕ್ಕೆ ಕಾವಿಬಟ್ಟೆಯ ವ್ಯಾಮೋಹವನ್ನು ಬೆಳೆಸಿಕೊಳ್ಳುವುದು.

ಐದನೆಯದು, ತಾನು ಸನ್ಯಾಸಿ, ವಿರಕ್ತ, ಮೋಕ್ಷವನ್ನು ಅಪೇಕ್ಷಿಸುವವನು ಎಂದುಕೊಂಡು ತಲೆಯನ್ನು ಬೋಳಿಸಿಕೊಂಡು ದೇಹವನ್ನು ದಂಡಿಸುವುದು.

ಆರನೆಯದು,ಮಾನವನಿಗೆ ಸಹಜವಾಗಿರುವ ದೈಹಿಕ, ಮಾನಸಿಕ ವ್ಯಾಪಾರಗಳನ್ನು ನಿರ್ಲಕ್ಷಿಸಿ ಊರೊಳಗೆ ಲೋಕವ್ಯವಹಾರಕ್ಕೆ ಅಡ್ಡಿಪಡಿಸುವುದು.

ಮೇಲಿನ ಎಲ್ಲವೂ ಒಂದರ್ಥದಲ್ಲಿ ಮಾಯೆಗಳೇ. ಈ ಮೊದಲಾದ ರಹಸ್ಯಮಾಯೆಗೆ ಒಳಗಾಗಿ ಒಣಜಂಬ ತೋರುವ ಸಮಯಸಾಧಕರ ಮಾತುಗಳನ್ನು ಕೇಳಿದಾಗ ತನಗೆ ನಾಚಿಕೆಯಾಗುತ್ತದೆ ಎಂದು ಅಂಬಿಗರ ಚೌಡಯ್ಯ ಸ್ಪಷ್ಟಪಡಿಸುತ್ತಾನೆ.

ಮನುಷ್ಯ ಒಂದು ಮಾಯೆಯಿಂದ ದೂರವಿರುತ್ತೇನೆ ಎಂದು ಹೊರಟು ಇನ್ನೊಂದು ಮಾಯೆಯೊಳಗೆ ಸಿಕ್ಕಿಹಾಕಿಕೊಂಡರೂ ತಾನು ಶ್ರೇಷ್ಠ, ಸದ್ಭಕ್ತ, ಸಾಧಕ, ಶಿವಾನುಗ್ರಹಕ್ಕೆ ಪಾತ್ರನಾದವನು ಎಂದೆಲ್ಲ ಭಾವಿಸಿಕೊಂಡು ದೇಹ, ಮನಸ್ಸುಗಳನ್ನು ವಂಚಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಇದು ಬರೀ ಬೂಟಾಟಿಕೆ ಮಾತ್ರವಲ್ಲ, ಡಾಂಭಿಕತೆ ಎನಿಸಿಕೊಳ್ಳುತ್ತದೆ ಎಂಬುದು ಅಂಬಿಗರ ಚೌಡಯ್ಯನ ನಿಲುವು.ಹಾಗಾಗಿಯೇ ಈ ರೀತಿಯ ವರ್ತನೆಗಳನ್ನು, ಆಚರಣೆಗಳನ್ನು ಆತ ಖಂಡಿಸುತ್ತಾನೆ.

ಅಂಬಿಗರ ಚೌಡಯ್ಯನ ಕಾಲದಲ್ಲಿಯೇ ಇಂತಹ ಬೂಟಾಟಿಕೆಯವರಿಂದ ಸಾಮಾಜಿಕ ಅಸಮತೋಲನ ಉಂಟಾಗುತ್ತಿತ್ತೆಂದು ತೋರುತ್ತದೆ. ಇಂದಿನ ಆಧುನಿಕಕಾಲದಲ್ಲಂತೂ ಇಂತಹವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ.

ಅಗ್ನಿ ದಿಟವೆಂದರೆ ತಾ ಹುಸಿ ಕಾಷ್ಠವಿಲ್ಲದೆ; ಕಾಷ್ಠದಲ್ಲಡಗಿ ಸುಡದಿಪ್ಪ ಭೇದವನರಿತಡೆ ಪ್ರಾಣಲಿಂಗಿ ಎಂದೆಂಬೆನೆಂದನಂಬಿಗರ ಚೌಡಯ್ಯ

ಈ ಲೋಕದಲ್ಲಿ ಪ್ರತಿಯೊಂದು ಕ್ರಿಯೆಗೂ ತನ್ನ ಅಸ್ತಿತ್ವವನ್ನು ತೋರಿಸುವುದಕ್ಕೆ ಒಂದು ಅಥವಾ ಹಲವು ಮಾಧ್ಯಮಗಳು ಬೇಕಾಗುತ್ತವೆ. ಅದನ್ನು ಅರಿಯುವುದಕ್ಕೆ ಪ್ರಯತ್ನಿಸಿದವರು ಮಾತ್ರ ಪ್ರಾಣಲಿಂಗಿ ಎನಿಸಿಕೊಳ್ಳುತ್ತಾರೆ ಎಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ.

ಕಟ್ಟಿಗೆಯೇ ಇಲ್ಲದೆ ಬೆಂಕಿಗೆ ಅಸ್ತಿತ್ವವಿದೆ ಎನ್ನುವುದಾದರೆ ಅದು ಸುಳ್ಳು. ಬೆಂಕಿ ಉರಿಯುವುದಕ್ಕೆ ಕಟ್ಟಿಗೆ ಅತ್ಯಂತ ಅಗತ್ಯ. ಅಲ್ಲದೆ ಕಟ್ಟಿಗೆಯೊಳಗೆ ಬೆಂಕಿ ಕಾಣಿಸದ ರೂಪದಲ್ಲಿ ಅಡಗಿಕೊಂಡಿದ್ದರೂ ಅದು ತನ್ನಿಂದ ತಾನೇ ಮರವನ್ನು ಸುಡುವುದಿಲ್ಲ.

ಹಾಲಿನೊಳಗೆ ಬೆಣ್ಣೆ ಅಡಗಿಕೊಂಡಿರುವಂತೆ,
ನೀರಿನಲ್ಲಿ ಬೆಂಕಿ ಹುದುಗಿಕೊಂಡಿರುವಂತೆ. ಅವುಗಳಿಗೆ ಕಾರ್ಯ, ಕಾರಣಗಳು ಒದಗಿದಾಗ ಬೆಂಕಿ ಕಾಣಿಸಿಕೊಳ್ಳುತ್ತದೆ. ಬೆಂಕಿಯು ಕಟ್ಟಿಗೆಯಲ್ಲಿ ಸೂಕ್ಷ್ಮರೂಪದಲ್ಲಿ ಅಡಗಿಕೊಂಡಿದ್ದರೂ ಅದು ಕಟ್ಟಿಗೆಯನ್ನು ಸುಡುವುದಿಲ್ಲ. ಆದರೆ ಕಟ್ಟಿಗೆಯೊಳಗೆ ಬೆಂಕಿ ಅಡಗಿಕೊಂಡಿರುವ ಬಗೆಯನ್ನು ಅರಿತುಕೊಳ್ಳುವುದು ಸುಲಭದ ಮಾತಲ್ಲ. ಅದು ಎಲ್ಲರಿಗೆ ಸಾಧ್ಯವಾಗುವುದೂ ಇಲ್ಲ.

ಪ್ರಾಣಲಿಂಗಿ ಎನಿಸಿಕೊಳ್ಳುವುದೂ ಸುಲಭದ ಮಾತಲ್ಲ. ಮೋಕ್ಷಸಾಧನೆಯ ಸಂದರ್ಭದಲ್ಲಿ ಸಾಧಕನು ಏರಬೇಕಾದ ಹಂತಗಳನ್ನು ಸ್ಥಲಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ ಭಕ್ತಸ್ಥಲ,
ಮಾಹೇಶ್ವರಸ್ಥಲ
ಪ್ರಸಾದಿಸ್ಥಲ,
ಪ್ರಾಣಲಿಂಗಿಸ್ಥಲ
ಶರಣಸ್ಥಲ ಮತ್ತು
ಐಕ್ಯಸ್ಥಲಗಳು.
ಇವುಗಳನ್ನು ಒಟ್ಟಾಗಿ ಷಟ್ಸ್ಥಲಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ನಾಲ್ಕನೆಯದು ಪ್ರಾಣಲಿಂಗಿಸ್ಥಲ. ಈ ಹಂತವನ್ನು ತಲುಪಬೇಕಾದರೆ ಮೊದಲ ಮೂರನ್ನು ದಾಟಿಬಂದಿರಬೇಕು. ಪ್ರಾಣಲಿಂಗಿಸ್ಥಲವನ್ನು ತಲುಪಿರುವವನು ತಾನು, ತನ್ನದು ಎಂಬ ಮೋಹವನ್ನು ತೊರೆದು ಎಲ್ಲವನ್ನೂ ಲಿಂಗಮಯವೆಂದು ಭಾವಿಸಬೇಕಾಗುತ್ತದೆ.

ಹಾಗಾಗಿಯೇ ಈ ಹಂತಗಳಲ್ಲಿ ಒಂದೊಂದನ್ನು ದಾಟಿ ಬರುವಾಗ ಸಾಧನೆಯಲ್ಲಿ ಕಠಿಣತೆ, ನಿಷ್ಠೆ, ಅನುಷ್ಠಾನಗಳಲ್ಲಿ ತಾದಾತ್ಮ್ಯಗಳು ಅತ್ಯಂತ ಅಗತ್ಯ. ಇವೆಲ್ಲವನ್ನೂ ಸಮರ್ಪಕವಾಗಿ ಸಾಧಿಸಿದಾಗ ಮಾತ್ರ ಒಬ್ಬ ಪ್ರಾಣಲಿಂಗಿ ಎನಿಸಿಕೊಳ್ಳುತ್ತಾನೆ. ನಿಜವಾದ ಪ್ರಾಣಲಿಂಗಿಯನ್ನು ಗೌರವಿಸಬಹುದಲ್ಲದೆ, ತಾನು ಪ್ರಾಣಲಿಂಗಿ ಎಂದು ಹೇಳಿಕೊಳ್ಳುವವನನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಎಂಬುದು ಅಂಬಿಗರ ಚೌಡಯ್ಯನ ಪ್ರಶ್ನೆ. ಹಾಗಾಗಿಯೇ

ಆತ ಕಾಷ್ಠ ದಲ್ಲಿರುವ ಅಗ್ನಿಯು ಕಟ್ಟಿಗೆಯನ್ನು ಸುಡದಿರುವ ಬಗೆ ಅಥವಾ ರೀತಿಯನ್ನು ತಿಳಿದಿರುವವನನ್ನು ಮಾತ್ರ ತಾನು ಪ್ರಾಣಿಲಿಂಗಿ ಎಂದು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾನೆ.

ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ಕೆಲವರು ಏನೂ ಸಾಧನೆ ಮಾಡದೆ, ಷಟ್ಸ್ಥಲಗಳ ಬಗ್ಗೆ ಏನನ್ನೂ ಅರಿತುಕೊಳ್ಳದೆ ತಮ್ಮನ್ನು ತಾವು ಭಕ್ತನೆಂದೋ, ಮಾಹೇಶ್ವರನೆಂದೋ, ಪ್ರಾಸಾದಿಗಳೆಂದೋ, ಪ್ರಾಣಲಿಂಗಿ ಎಂದೋ ಹೇಳಿಕೊಂಡು ಅನ್ಯರನ್ನು ನಂಬಿಸಿ, ವಂಚಿಸುತ್ತಿದ್ದರೆಂದು ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಈ ರೀತಿಯ ವರ್ತನೆಯನ್ನು ಖಂಡಿಸಿದ್ದಾನೆ.

ಅರಿವನರಿದಲ್ಲಿ ತಾನೆನ್ನದೆ, ಇದಿರೆನ್ನದೆ, ಮತ್ತೇನುವ ಸಂಪಾದಿಸದೆ ಅರುಣನ ಕಿರಣದಲ್ಲಿ ಅರತ ಸಾರದಂತೆ    ಕಾದ ಹಂಚಿನ ಮೇಲೆ ಬಿಟ್ಟ ನೀರಿನಂತೆ ಬಧಿರನ ಕಾವ್ಯದಂತೆ, ಚದುರನ ಒಳ್ಪಿನಂತೆ ತಲೆದೋರದೆ ನಿಂದಾತನಡಿಗೆ ಎರಗುನೆಂದಾತ ಅಂಬಿಗರ ಚೌಡಯ್ಯ

ಸಮಾಜದಲ್ಲಿ ಸಾಧಕನೆನ್ನುವ
ಪರಿಪೂರ್ಣನಾದ ಮಾನವ ಹೇಗಿರುತ್ತಾನೆ ಎಂಬುದನ್ನು ಅಂಬಿಗರ ಚೌಡಯ್ಯನವರು ತಮ್ಮ ಕೆಲವು ಉದಾಹರಣೆಗಳ ಮೂಲಕ ಈ ವಚನದಲ್ಲಿ ವಿವರಿಸಿದ್ದಾರೆ .

ಯಾರು ಅರಿವಿನ ಜ್ಞಾನ ತಿಳಿವಳಿಕೆಯನ್ನು ಪಡೆದಿದ್ದಾನೋ ಪಡೆದುಕೊಂಡಿದ್ದಾನೆಯೋ ಅಂಥವನು ಪರಿಪೂರ್ಣವ್ಯಕ್ತಿ ಎನಿಸಿಕೊಳ್ಳುತ್ತಾನೆ. ಎಂದು ಅಂಬಿಗರ ಚೌಡಯ್ಯನವರು ಅರುಹುತ್ತಾರೆ .ಅಂಥ ಅರಿವನ್ನು ಹೊಂದಿದ ವ್ಯಕ್ತಿಯಲ್ಲಿ ತಾನು, ತನ್ನದು ಎಂಬ ಅಹಂಕಾರದ ಭಾವವೇ ಇರುವುದಿಲ್ಲ. ಆತನು ಅನ್ಯ ವಿಷಯಗಳನ್ನು ವಿರೋಧಿಸಿ ತನ್ನ ವಿಚಾರಗಳೇ ಸರ್ವ ಶ್ರೇಷ್ಠವೆಂದು ಸಾಧಿಸುವ ಹಠವೂ ಆತನಲ್ಲಿ ಇರುವುದಿಲ್ಲ. ತಾನು ತನಗಾಗಿ ಇನ್ನಷ್ಟನ್ನು ಸಂಪಾದಿಸಬೇಕು, ಸಾಧಿಸಬೇಕು ಎಂಬ ಸ್ವಾರ್ಥಮನೋಭಾವವೂ ಆತನಲ್ಲಿ ಇರುವುದಿಲ್ಲ. ನಾಲ್ಕು ಬಗೆಗಳಲ್ಲಿ ಆತನ ಇರುವಿಕೆಯನ್ನು ನಾವು  ಗುರುತಿಸಿಕೊಳ್ಳಬಹುದು.

ಮೊದಲನೆಯದಾಗಿ, ಅವನು ಸೂರ್ಯನ ಕಿರಣಗಳನ್ನು ಸ್ವೀಕರಿಸಿ ತೃಪ್ತವಾಗುವ ಸತ್ವದಂತೆ ತಾನು ಆರ್ಜಿಸಿರುವ ಸ್ವೀಕರಿಸಿದ ಸಾಧನೆಯ ಬಗ್ಗೆ ತೃಪ್ತಿಯನ್ನು ಸಮಾಧಾನವನ್ನು ಹೊಂದಿರುತ್ತಾನೆ.

ಎರಡನೆಯದಾಗಿ, ಕಾದ ಕಾವಲಿಯ ಮೇಲೆ ಬಿಟ್ಟ ನೀರಿನಂತೆ ತನ್ನಲ್ಲಿ ಬರುವ ಸಮಸ್ತರನ್ನೂ ತನ್ನೊಳಗೆ ಒಳಗೊಳಿಸಿಕೊಳ್ಳುತ್ತಾನೆ. ಆತನಿಗೆ ತನ್ನವರು ಇವರು ಪರರು ಎಂಬ ಭೇದವೇ ಇರುವುದಿಲ್ಲ.

ಮೂರನೆಯದಾಗಿ,ಕಣ್ಣು ಕಾಣದ ಅಂಧಕನ ಕಾವ್ಯದಂತೆ ಎಲ್ಲಿಯೂ ದೋಷಗಳನ್ನು ಗುರುತಿಸದೆ, ಎಲ್ಲೆಲ್ಲೂ ಆತ ಸೌಂದರ್ಯವನ್ನೇ, ಒಳಿತನ್ನೇ ಕಾಣುತ್ತಾನೆ.

ನಾಲ್ಕನೆಯದಾಗಿ, ಜಾಣನ ಚೆಲುವಿನಂತೆ ಎಲ್ಲವೂ ನೈತಿಕವಾಗಿದ್ದು ಆತ್ಮವಿಶ್ವಾಸದಿಂದ ಕೂಡಿಕೊಂಡಿರುತ್ತದೆ. ಕೈಗೊಳ್ಳುವ ಪ್ರತಿಯೊಂದು ಕ್ರಿಯೆಯಲ್ಲಿಯೂ ಪರಿಪೂರ್ಣತೆಯಿರುತ್ತದೆ.

ಇಂತಹ ಗುಣಗಳನ್ನು, ಲಕ್ಷಣಗಳನ್ನು ಮೈಗೂಡಿಸಿಕೊಂಡು ಯಾವುದೇ ಕ್ಷುಲ್ಲಕವಾದುದನ್ನು ತನ್ನಲ್ಲಿ ಇರಗೊಡದೆ ಅಥವಾ ಪ್ರದರ್ಶಿಸದೆ ದೃಢತೆಯಿಂದ ಬದುಕುವವನ ಪಾದಗಳಿಗೆ ತಾನು ನಮಸ್ಕರಿಸುತ್ತೇನೆ ಎನ್ನುತ್ತಾನೆ ಅಂಬಿಗರ ಚೌಡಯ್ಯ.

ಅಂಬಿಗರ ಚೌಡಯ್ಯನ ಕಾಲದಲ್ಲಿ ವಿವಿಧ ರೀತಿಯಲ್ಲಿ ಜನರಿಗೆ ಮೋಸಮಾಡಿ ವಂಚಿಸುವ ತಾವು ಮೇಧಾವಿಗಳು, ಭಕ್ತರು, ಶರಣರು, ಪ್ರಾಣಲಿಂಗಿಗಳು, ಪ್ರಾಸಾದಿಗಳೆಂದು ಹೇಳಿಕೊಂಡು ತಿರುಗುವ ಅನ್ಯರಿಂದ ಎಷ್ಟು ಸಾಧ್ಯವೋ ಅಷ್ಟನ್ನು ಪಡೆದುಕೊಳ್ಳುವ ಸ್ವಾರ್ಥಿಗಳ ಡಂಭಾಚಾರಿಗಳ ಹಾವಳಿ ಹೆಚ್ಚಾಗಿತ್ತು ಎಂದೆನಿಸುತ್ತದೆ. ಒಂದು ಕಡೆ ಯಾವ ಸಾಧನೆ, ಅನುಷ್ಠಾನಗಳಿಲ್ಲದೆ, ಇನ್ನೊಂದೆಡೆ ಧಾರ್ಮಿಕತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತ, ಇನ್ನೊಂದೆಡೆ ಜನರನ್ನು ಬಗೆಬಗೆಯಲ್ಲಿ ನಂಬಿಸುತ್ತ ಅವರನ್ನು ಮೂರ್ಖರನ್ನಾಗಿ ಮಾಡುತ್ತಿದ್ದರೆಂದು ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಸಾಧಕರ, ಮತ್ತು ಪರಿಪೂರ್ಣವ್ಯಕ್ತಿಗಳ ಲಕ್ಷಣಗಳನ್ನು ಉಲ್ಲೇಖಿಸಿ ತಾನು ಅಂತಹವರಿಗೆ ಮಾತ್ರ ಎರಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾನೆ.

ಇಂದಿನ ಕಾಲದಲ್ಲಂತೂ ಡಂಭಾಚಾರ ವ್ಯಕ್ತಿಗಳು ಹೆಚ್ಚಾಗಿ ಕಂಡುಬರುವ ಏನೂ ಸಾಧಿಸದೆ; ಮನಸ್ಸು,ಮತ್ತು ದೇಹಗಳನ್ನು ಶುದ್ಧವಾಗಿಟ್ಟುಕೊಳ್ಳದೆ; ಯಾವ ಕೆಲಸವನ್ನೂ ಮಾಡದೆ ಹಿಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡದೆ ಅನ್ಯರನ್ನು ಕೊಳ್ಳೆಹೊಡೆಯುವ, ಮೋಸದಿಂದ ನಯವಂಚನೆಯಿಂದ ಇಷ್ಟಬಂದಂತೆ ಬದುಕುವ ಪ್ರವೃತ್ತಿ. ಹಾಗೂ ಹತ್ತಾರು ವಿಧಗಳಿಂದ ಇತರರಿಗೆ ಮೋಸಮಾಡಿ ತಾವೇ ಮೆರೆಯುವ, ಸಾಧಕರನ್ನು ಮಟ್ಟಹಾಕುವ ಇಂತಹ ಎಡೆಬಿಡಂಗಿ ವ್ಯಕ್ತಿಗಳಿಂದಲೇ ಈ ಸಮಾಜ ತುಂಬಿತುಳುಕುತ್ತಿದೆ. ಇಂತಹವರ ಮಧ್ಯೆ ನಿಜವಾದ ಸಾಧಕರನ್ನು ಗುರುತಿಸಿ ಕಾಲಿಗೆರಗುವುದಕ್ಕೆ ಸಾಧ್ಯವೇ? ಎಂಬ ದೊಡ್ಡ ಸವಾಲು ನಮ್ಮ ಮುಂದಿದೆ. ಹಾಗಾಗಿ ಅಂಬಿಗರ ಚೌಡಯ್ಯನ ಮಾತುಗಳು ಇಂದಿಗೂ ಪ್ರಸ್ತುತ.

ಒಟ್ಟಿನಲ್ಲಿ ಕಾಯಕ ಜೀವಿಗಳಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದರು ವೃತ್ತಿಯಿಂದ ಅಂಬಿಗ ಪ್ರವೃತ್ತಿಯಲ್ಲಿ ಅನುಭಾವಿ. ಬಸವಣ್ಣನವರ ಅನುಭವ ಮಂಟಪದಲ್ಲಿ ಸೇರಿಕೊಂಡು ಅನೇಕ ವಚನಗಳನ್ನು ಬರೆದು ಸಮಾಜದ ವಿಡಂಬನೆಯ ವ್ಯಾಗ್ರ ದೃಷ್ಟಿ ಎದ್ದುಕಾಣುವ ಇವರ ವಚನಗಳು ಬೇರೆ ವಚನಕಾರರಲ್ಲಿ ಕಾಣುವುದು ಕಡಿಮೆ ಎಂದೇ ಹೇಳಬಹುದು. ಅಂಬಿಗರ ಚೌಡಯ್ಯನವರ ವಚನಗಳ ಒಟ್ಟು ಭಾಷೆ ಶೈಲಿ ಗಮನಿಸಿದರೆ, ಕೆಚ್ಚೆದೆಯ ನಿಷ್ಠುರತೆ ಒರಟು ಸಮಾಜದಲ್ಲಿ ಕಂಡುಬರುವ ಅವ್ಯವಸ್ಥೆಯ ಚಿತ್ರ ಕಾಣುತ್ತೇವೆ .ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ ವಾಗ್ರತೆ ಬಹುಶಃ ಸರ್ವಜ್ಞ ಮತ್ತು ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಣಬಹುದು. ಅಂಬಿಗ ಚೌಡಯ್ಯನವರ ಮಾತು ಕಟುವಾದರೂ ದಿಟವನ್ನೇ ನುಡಿದ ನಿತ್ಯಶರಣ. ನುಡಿದಂತೆ ನಡೆದವನು ನಡೆದಂತೆ ನುಡಿದವನು.

ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿ ದ ಧೈರ್ಯವನ್ನು ಕಾಣಬಹುದಾಗಿದೆ. ಸುಮಾರು 278 ವಚನಗಳು ದೊರೆತ್ತಿದ್ದು. ಆಳವಾದ ಅನುಭವ ಸಾಮಾಜಿಕ ಪ್ರಜ್ಞೆ ಇವರ ವಚನಗಳಲ್ಲಿ ಎದ್ದು ಕಾಣುತ್ತದೆ.

ಡಾ.ಸಾವಿತ್ರಿ ಕಮಲಾಪೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group