spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಉರಿಲಿಂಗ ಪೆದ್ದಿ

ಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ ಚೋರ ವೃತ್ತಿಯವನು. ಆದರೆ ಗುರು ಉರಿಲಿಂಗದೇವನ ಮಾರ್ಗದರ್ಶನದಿಂದಾಗಿ ಅವನು ಘನ ವಿದ್ವಾಂಸನಾಗಿಯೂ,ಅನುಭಾವಿಯಾಗಿಯೂ ಬೆಳೆಯುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಅವನ ಜೀವನ ಒಂದು ಘಟನೆಯನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಉರಿಲಿಂಗಪೆದ್ದಿಯ ಗುರು ಉರಿಲಿಂಗದೇವ ಪುಲಿಗೆರೆಯ ಮಹಾಲಿಂಗದೇವನ ಗುರುಪರಂಪರೆಯಲ್ಲಿ ಐದನೆಯವನು. ಒಮ್ಮೆ ಉರಿಲಿಂಗದೇವನು ನಂದಿವಾಡದ ಸೂರಯ್ಯ ಭಕ್ತನಿಗೆ ಗುಪ್ತರೀತಿಯಲ್ಲಿ ಲಿಂಗದೀಕ್ಷೆ ನೀಡುತ್ತಿದ್ದನು. ಇದನ್ನು ಕಂಡು ಉರಿಲಿಂಗಪೆದ್ದಿಯ ಮನ ಪರಿವರ್ತನೆಯಾಗುತ್ತದೆ. ಪ್ರತಿನಿತ್ಯವೂ ಉರಿಲಿಂಗದೇವನ ಮನೆಗೆ ಹುಲ್ಲು-ಕಟ್ಟಿಗೆ ಹೊತ್ತು ತರುತ್ತಿದ್ದ ಉರಿಲಿಂಗಪೆದ್ದಿ ತನಗೂ ಕೂಡ ಲಿಂಗದೀಕ್ಷೆ ನೀಡಬೇಕೆಂದು ಪದೇ ಪದೇ ಕೇಳುತ್ತಾನೆ. ಇದರಿಂದ ಸಿಟ್ಟಿಗೆದ್ದ ಉರಿಲಿಂಗದೇವ “ಘೇ ದಗಡಿ ಜಾ” ಎಂದು ಗದರಿಸಿ ಕಲ್ಲನ್ನು ಎಸೆಯುತ್ತಾನೆ. ಸಿಟ್ಟಿನಲ್ಲಿ ಆಡಿದ ಆ ಮಾತೇ ಉರಿಲಿಂಗಪೆದ್ದಿಗೆ ಮಂತ್ರವಾಗಿ, ಎಸೆದ ಕಲ್ಲೇ ಲಿಂಗವಾಗಿ ಅವನು ಶಿವಭಕ್ತನಾಗಿ ಪರಿವರ್ತನೆಯಾಗಿ, ಗುರುವಿಗೆ ತಕ್ಕ ಶಿಷ್ಯನಾಗಿ ಗುರುಪೀಠವನೇರುತ್ತಾನೆ. ಇವನ ವಚನಾಂಕಿತ “ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ”

- Advertisement -

ಇವನ ಸತಿ ಕಾಳವ್ವೆ. ಇವನ ವಚನಗಳು ವೈಶಿಷ್ಟ್ಯತೆಯಿಂದ ಕೂಡಿದ್ದು ಅಧ್ಯಾತ್ಮ,ಭಕ್ತಿ, ಗುರು ಮಹಿಮೆ, ಧರ್ಮ, ವೈಚಾರಿಕತೆ, ಸಾಮಾಜಿಕ ವಿಡಂಬನೆ,ಜಾತಿ ಪದ್ಧತಿ, ಲಿಂಗ-ಜಂಗಮ, ಅಂತರಂಗ- ಬಹಿರಂಗ ಮೊದಲಾದ ಅತ್ಯುತ್ತಮ ವಿಚಾರಗಳು ಮೂಡಿ ಬಂದಿವೆ. ಹಾಗೂ ಇವನ ವಚನಗಳಲ್ಲಿ ಸಂಸ್ಕೃತ ಹೆಚ್ಚಾಗಿ ಬಳಕೆಯಾಗಿದ್ದು ಅವನ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ ನಿಂತಿದೆ.

ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೆ ಲಿಂಗ, ಜೀವಾತ್ಮನೆ ಅಂಗ, ಸಂಗವೆ ಏಕಾತ್ಮ.
ತತ್ ಪದವೆ ಪರಮಾತ್ಮ,
ತ್ವಂ ಪದವೇ ಜೀವಾತ್ಮ,
ಅಸಿ ಪದವೆ ತಾದಾತ್ಮ್ಯವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಭಗವಂತನ ಲೀಲೆಯಿಂದ ಏನೆಲ್ಲ‌ ಆಗಬಹುದು. ಪರಮಾತ್ಮನ ಲೀಲೆಯಿಂದ ಜೀವಾತ್ಮನ ಸೃಷ್ಟಿ. ಜೀವಾತ್ಮನಲ್ಲಿ ಪರಮಾತ್ಮನೇ ಲಿಂಗ ಜೀವಾತ್ಮನೆ ಅಂಗ.ಇವೆರಡರ ಸಂಯೋಗವೇ ಏಕಾತ್ಮ. ಅಂದರೆ ಈ ವಚನದಲ್ಲಿ “ತತ್” ಎಂಬುದು ಪರಮಾತ್ಮ ರೂಪ, “ತ್ವಂ” ಎಂಬುದು ಜೀವಾತ್ಮ ರೂಪ. ಪರಮಾತ್ಮ ಮತ್ತು ಜೀವಾತ್ಮ ಒಂದಾಗಿರುವುದೇ “ಅಸಿ”.ಅದುವೇ ಏಕಾತ್ಮ. “ತತ್ವಮಸಿ” ಎಂಬುದು ಜೀವಾತ್ಮನೊಂದಿಗೆ ಪರಮಾತ್ಮನ ಸಂಗವು ಬೆಸೆದಿರುವುದನ್ನು ವಿವರಿಸುತ್ತದೆ. ಶರಣರ ಲಿಂಗಾಂಗ ಸಾಮರಸ್ಯ ತತ್ವವೇ ಈ ವಚನದ ತಿರುಳಾಗಿದೆ.

- Advertisement -

ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು. ಅದೆಂತೆಂದಡೆ,
ಫಲಭೋಗಂಗಳ ಬಯಸುವನಾಗಿ,
ಇದು ಕಾರಣ,
ಅರಿದು ಮುಕ್ತಿಯ ಹಡೆವಡೆ ಅನುಭವವೇ ಬೇಕು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಅರಿವಿದ್ದೂ ಮಾಡಲಾಗದ ಭಕ್ತಿ ನಮ್ಮನ್ನು ಭವಕ್ಕೆ ತಂದಿಡುತ್ತದೆ. ಎಂದರೆ ಎಲ್ಲದರ ತಿಳಿವಳಿಕೆ ಇದ್ದೂ ಭಕ್ತಿಮಾಡಲಾರದವರು( ಭಕ್ತಿಯಿಂದ ಕೂಡಿದ ಯಾವುದೇ ಕಾರ್ಯ) ಮತ್ತೆ ಭೂಮಿಯಲ್ಲೇ ಸಂಭವಿಸುತ್ತಾರೆ. ಇದಕ್ಕೆ ಕಾರಣ ಅವರ ಫಲಾಪೇಕ್ಷಿತ ಭಾವ. ತಿಳಿವಳಿಕೆಯಿಂದ ಕಾರ್ಯ ಮಾಡಿ ಮುಕ್ತಿ ಪಡೆಯಬೇಕಾದರೆ ಅನುಭವಬೇಕು. ಯಾವುದೇ ಅಪೇಕ್ಷೆ ಇಲ್ಲದೆ ಶ್ರದ್ಧೆ -ಭಕ್ತಿಯಿಂದ ಮಾಡಿದ ಕಾರ್ಯದಿಂದ ಅನುಭವದ ಜೊತೆಗೆ ಮುಕ್ತಿ ದೊರೆಯುತ್ತದೆ. ನಿಜ ಭಕ್ತಿಯ ನಿಲವನ್ನು ಈ ವಚನ ವಿವರಿಸುತ್ತದೆ.

ಪ್ರೊ.ಇಂದಿರಾ ಪಿ.ಹೆಚ್.                                            ಕನ್ನಡ ಉಪನ್ಯಾಸಕರು,   ಆರ್.ಪಿ.ಡಿ. ಮಹಾವಿದ್ಯಾಲಯ, ಬೆಳಗಾವಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group