spot_img
spot_img

Kannada Rajyotsava: ಹೆಮ್ಮೆಯಿಂದ ಆಚರಿಸೋಣ ಕನ್ನಡ ರಾಜ್ಯೋತ್ಸವ

Must Read

- Advertisement -

ಇಂದು ಕನ್ನಡ ರಾಜ್ಯೋತ್ಸವ. ಇದು ಕನ್ನಡಾಂಬೆಯ ಮಹೋತ್ಸವ. ತಾಯಿ ಭುವನೇಶ್ವರಿಯ ಉತ್ಸವ.

ಕನ್ನಡ ನಾಡು ನುಡಿಯ ವೈಭವವು ವೈಶಿಷ್ಟ್ಯಪೂರ್ಣವಾದುದು.

ಇಂದು ನಾವು ಶ್ರೀಗಂಧದ ಬೀಡು, ಶಿಲ್ಪಕಲೆಯ ತವರೂರು, ಸಂಸ್ಕ್ರತಿಯ ನೆಲೆವೀಡು, ಹಚ್ಚ ಹಸುರಿನ ಸುಂದರ ಬೆಟ್ಟಗಳ, ಪವಿತ್ರ ನದಿಗಳ ನಾಡು, ಕರುನಾಡು ಎಂದು ಕರೆಯಲ್ಪಡುವ ಕರ್ನಾಟಕದ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ – ಸಂಭ್ರಮ ಹಾಗೂ ಹೆಮ್ಮೆಯಿಂದ ಆಚರಿಸುತ್ತೇವೆ.

- Advertisement -

ಕನ್ನಡ ನುಡಿಯು ಪ್ರಾಯಶಃ 2000 ವರ್ಷಗಳ ಇತಿಹಾಸವನ್ನು ಹೊಂದಿದೆ. 

ಕದಂಬರ ಕಾಲದ ಹಲ್ಮಿಡಿ ಶಾಸನದಲ್ಲಿ  ಹುಟ್ಟಿ …

ರಾಷ್ಟ್ರಕೂಟರ ಕಾಲದ ಕವಿರಾಜ ಮಾರ್ಗದಲ್ಲಿ ಬೆಳೆದು .. 

- Advertisement -

ರನ್ನ- ಪಂಪರಿಂದ ಪೋಷಿಸಲ್ಪಟ್ಟು.. 

ಪೂರ್ವದ ಹಳಗನ್ನಡ – ನಡುಗನ್ನಡ – ಹೊಸಗನ್ನಡವಾಗಿ ರೂಪಾಂತರಗೊಂಡು ಸಂವಿಧಾನದಲ್ಲಿ ಲಿಖಿತಗೊಂಡ 18 ಭಾಷೆಗಳಲ್ಲಿಯೇ ಕನ್ನಡ ಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ವಿಶಾಲ ಸಮೃದ್ಧ ಸಾಹಿತ್ಯವಾಗಿ ಬೆಳೆದು ನಿಂತಿದೆ.

ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಕಡಲತೀರದ ಭಾರ್ಗವ ಶಿವರಾಮ ಕಾರಂತ, ಕನ್ನಡದ ಆಸ್ತಿ ಮಾಸ್ತಿ, ಭಾರತ ಸಿಂಧೂ ರಶ್ಮಿಯ ವಿ.ಕೃ. ಗೋಕಾಕ್, ಸಮಗ್ರ ಸಾಹಿತ್ಯದ ಅನಂತಮೂರ್ತಿ, ನಾಟಕಕಾರ ಗಿರೀಶ್ ಕಾರ್ನಾಡು, ಚಂದ್ರಶೇಖರ ಕಂಬಾರ ಹಾಗೂ ಇನ್ನೂ ಅನೇಕ ಮಹಾನ್ ವಿದ್ವಾಂಸರು, ಸಾಹಿತಿಗಳು, ಕವಿಗಳು, ಲೇಖಕರು ಹಾಗೂ ಬರಹಗಾರರಿಂದ ಕನ್ನಡ ನುಡಿ ಪ್ರಜ್ವಲಿಸಿದೆ. 

ರನ್ನ – ಪಂಪ ಜನಿಸಿದ ಪುಣ್ಯಬೀಡು ಈ ಕರ್ನಾಟಕ.  ಹೊಯ್ಸಳ, ಚಾಲುಕ್ಯ, ಕದಂಬರು, ಗಂಗರು ಹಾಗೂ ಇನ್ನೂ ಅನೇಕ ರಾಜಮನೆತನಗಳು ಆಳಿದ ತ್ಯಾಗ ಭೂಮಿ ಈ ಕರ್ನಾಟಕ. ಈ ಮಣ್ಣಿನಲ್ಲಿ ಪ್ರೀತಿ ಇದೆ, ತ್ಯಾಗವಿದೆ, ಪರೋಪಕಾರ ಗುಣವಿದೆ, ಧೈರ್ಯವಿದೆ, ಶೌರ್ಯವಿದೆ, ಕರುಣಿಯಿದೆ. ಇಂತಹ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯಶಾಲಿಗಳು.

ಕರುನಾಡನ್ನು ಹಲವು ಸಾಮ್ರಾಜ್ಯಗಳು ಹಾಗೂ ರಾಜ ವಂಶದವರು ಆಳಿದ್ದಾರೆ. ಕನ್ನಡದ ಮೊದಲ ರಾಜವಂಶ ಬಹುಶಃ ಬನವಾಸಿಯ ಕದಂಬರು, ಶಿಲ್ಪಕಲೆಯನ್ನು ಹುಟ್ಟುಹಾಕಿದ ಹೊಯ್ಸಳರು, ತಲಕಾಡಿನ ಗಂಗರು, ಚರಿತ್ರೆಯ ಪುಟಗಳಲ್ಲಿ ಸುವರ್ಣ ಯುಗವನ್ನು ಬರೆದು ಹೋಗಿರುವ ವಿಜಯನಗರ ಸಾಮ್ರಾಜ್ಯದ ಅರಸರು, ಮೈಸೂರು ಸಂಸ್ಥಾನ ದವರು ಇನ್ನೂ ಅನೇಕ ರಾಜಮನೆತನದವರು  ಕನ್ನಡದ ವೈಭವೋಪೇತ ಇತಿಹಾಸಕ್ಕೆ ಮತ್ತು ಶ್ರೀಮಂತ ಶಿಲ್ಪಕಲೆ, ಸಾಹಿತ್ಯ, ಸಂಸ್ಕೃತಿಯ, ಹುಟ್ಟು ಹಾಗೂ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಹುಟ್ಟಿನ ಬಗ್ಗೆ ತಿಳಿಯುವುದಾದರೆ  1905 ರಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಟರಾವ್ ರವರು ಕರ್ನಾಟಕ ಏಕೀಕರಣ ಚಳುವಳಿ ಪ್ರಾರಂಭಿಸಿದರೆ ಜೊತೆಗೂಡಿ ಹೋರಾಡಿದವರು ಕೋಟಿ ಕೋಟಿ ಕನ್ನಡಿಗರು.

1950 ರಲ್ಲಿ ಭಾರತವು ಗಣರಾಜ್ಯವಾಗಿ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರೂಪುಗೊಂಡವು. ಮದ್ರಾಸ್, ಮುಂಬಯಿ ಹೈದರಾಬಾದ್.. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ 1956 ನವಂಬರ್ 1 ರಂದು ಏಕೀಕೃತ ಕನ್ನಡ ನಾಡು ಮೈಸೂರು ರಾಜ್ಯ ಎಂಬ ಅಭಿದಾನದೊಂದಿಗೆ ಉದಯವಾಯಿತು. 

1956 ರಲ್ಲಿ ಡಾ: ಬಾಬು ರಾಜೇಂದ್ರ ಪ್ರಸಾದ್ ರವರಿಂದ ಉದ್ಘಾಟನೆಗೊಂಡ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾಗಿ ಎಸ್. ನಿಜಲಿಂಗಪ್ಪನವರು ಹಾಗೂ ರಾಜ್ಯಪಾಲರಾಗಿ ಜಯಚಾಮರಾಜೇಂದ್ರ ಒಡೆಯರ್ ರು ಆಯ್ಕೆಯಾದರು.

ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಏಕೀಕರಣ ಚಳುವಳಿಯ ಹೋರಾಟಗಾರರು, ಕನ್ನಡ ಸಾಹಿತಿಗಳು, ಕನ್ನಡಿಗರು ಹಾಗೂ ಕನ್ನಡ ಪರ ಸಂಘಟನೆಗಳ ಆಶಯದಂತೆ ದೇವರಾಜ ಅರಸರ ಕಾಲದಲ್ಲಿ 1973 ನವಂಬರ್ 1 ರಂದು ಮೈಸೂರು ರಾಜ್ಯ *ಕರ್ನಾಟಕ* ಎಂಬ ಅಭಿದಾನ ಪಡೆಯಿತು. ಇಂದಿಗೆ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಗಿ ರೂಪುಗೊಂಡು 50 ವರ್ಷಗಳು. ಆದುದರಿಂದ ನಮ್ಮ ಕರ್ನಾಟಕ ಸರ್ಕಾರವು ಇಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಆದ ಅಂದಿನಿಂದ ಪ್ರತಿ ವರ್ಷ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ನಾಡು ನುಡಿಗೆ ಗೌರವ ಸಲ್ಲಿಸುತ್ತೇವೆ.

ಕರ್ನಾಟಕ ಶಿಕ್ಷಕರ ಬಳಗ

ಕರ್ನಾಟಕ ಪದದ ಮೂಲವೂ ಸಾಮಾನ್ಯವಾಗಿ ಕರು ಮತ್ತು ನಾಡು ಸೇರಿ ಎತ್ತರದ ಭೂಮಿ ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ.

ಕರು ಎಂದರೆ ಕಪ್ಪು , ನಾಡು ಎಂದರೆ ಪ್ರದೇಶ ಅಂದರೇ .. ಬಯಲು ಸೀಮೆಯ ಕಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಕರ್ನಾಟಕ ಎಂಬ ಹೆಸರು ಬಂದಿದೆ.

ಕೃಷ್ಣ ನದಿಯ ದಕ್ಷಿಣಕ್ಕೆ ಎರಡು ಕಡೆ ಜಲಾವೃತವಾದ ಪ್ರದೇಶವಾದುದರಿಂದ ಬ್ರಿಟಿಷರ ಕಾಲದಲ್ಲಿ ಕರ್ನಾಟಿಕ್ ಅಥವಾ ಕರ್ನಾಟಕ ಎಂದು ಹೆಸರು ಬಳಕೆಗೆ ಬಂದಿತು.

ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಬಣ್ಣದ ಕನ್ನಡ ಧ್ವಜವು ಕನ್ನಡ ನಾಡಿನ ಹಿರಿಮೆ ಗರಿಮೆಯ ಸಂಕೇತವಾಗಿದೆ. ಈ ಬಣ್ಣವು ಕನ್ನಡಾಂಬೆಯ ಅರಿಷಿನ ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ ಸೌಹಾರ್ಧತೆ ಸೂಚಿಸಿದರೆ ಕೆಂಪು ಬಣ್ಣವು ಕ್ರಾಂತಿಯ ಸಂದೇಶ ನೀಡುತ್ತದೆ ಅಂದರೆ *ಕನ್ನಡಿಗರು ಶಾಂತಿಗೂ ಬದ್ಧ, ಕ್ರಾಂತಿಗೂ  ಸಿದ್ಧ* ಎಂಬ ಸಂದೇಶ ನೀಡುತ್ತದೆ. 

ಕನ್ನಡ ಬಾವುಟವನ್ನು ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿಯವರು ಸಿದ್ಧಪಡಿಸಿದರು. ಕನ್ನಡ ಧ್ವಜವನ್ನು ಕರ್ನಾಟಕದ ಎಲ್ಲೆಡೇ ಸ್ಥಿರವಾಗಿ ಕರ್ನಾಟಕ ಹಾಗೂ ಕನ್ನಡವನ್ನು ಪ್ರತಿನಿಧಿಸಲು ಬಳಸುತ್ತಾರೆ. ರಾಜ್ಯೋತ್ಸವದಂದು ಎಲ್ಲಾ ರೀತಿಯ ವಾಹನಗಳ ಮೇಲೂ ಕನ್ನಡ ಬಾವುಟ ರಾರಾಜಿಸುತ್ತದೆ.

ಕರ್ನಾಟಕದ ಮಾತೃಭಾಷೆ ಕನ್ನಡವೇ ಆದರೂ ಅದರಲ್ಲಿ ಹಲವು ವಿಶೇಷತೆಗಳನ್ನು ನಾವು ಕಾಣಬಹುದು. ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಕನ್ನಡದ ಬಗ್ಗೆ ಕವಿವಾಣಿಗಳು

ಕುವೆಂಪು:

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು . ಕನ್ನಡಕ್ಕಾಗಿ ಕೊರಳೆತ್ತಿದರೆ ಅದು ಪಾಂಚಜನ್ಯವಾಗುವುದು. ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ ಅದು ಗೋವರ್ಧನಗಿರಿಯಾಗುವುದು.

ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೇ ನೀ ನಮಗೆ ಕಲ್ಪತರು.

ಜಿ.ಪಿ. ರಾಜರತ್ನಂ:

ಹೆಂಡ ಹೋಗ್ಲಿ, ಹೆಂಡ್ತಿ ಹೋಗ್ಲಿ, ಎಲ್ಲಾ ಕೊಚ್ಕೊಂಡು ಹೋಗಲಿ, ಪರ್ ಪಂಚ ಇರೋತನಕ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ.

ಮಹಲಿಂಗರಂಗ:  

ಸುಲಿದ ಬಾಳೆಯ ಹಣ್ಣಿನಂದದಿ , ಕಳಿದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಸುಲಭವಾಗಿರ್ಪ ,

ಲಲಿತವಹ ಕನ್ನಡದ ನುಡಿಯಲ್ಲಿ , ತಿಳಿದ ತನ್ನೋಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲ್ಲಿನ್ನೇನಿದೆ .

ಡಿ.ಎಸ್. ಕರ್ಕಿ:

ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ

ಸಿರಿನುಡಿಯ ದೀಪ 

ಒಲವೆತ್ತಿ ತೋರುವಾ ದೀಪ

ಕನ್ನಡದ ರವಿಮೂಡಿ ಬಂದ

ಮುನ್ನಡೆವ ಬೆಳಕನ್ನೇ ತಂದ
ರಾಜ್ಯೋತ್ಸವ , ನಮ್ಮ ರಾಜ್ಯೋತ್ಸವ

ನಾವಾಡುವ ನುಡಿಯೇ ಕನ್ನಡ ನುಡಿ. ನಾವಿರುವ ತಾಣವೇ ಗಂಧದ ಗುಡಿ .

ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ, ನಾ ಆರಾಧಿಸುವೆ.

ಇಂತಹ ಅರ್ಥಪೂರ್ಣ ಕನ್ನಡ ಮಾಧುರ್ಯ ಗೀತೆಗಳನ್ನು ರಚಿಸಿದ ಹಾಗೂ ರಚಿಸುವಂತಹ ಕವಿಗಳು ಕೋಟಿ ಕೋಟಿ ಉದಯಿಸಲಿ. ನಾವೆಲ್ಲಾ ಅವುಗಳನ್ನು ಸಂಭ್ರಮದಿಂದ ಹಾಡೋಣ.

ಸತ್ತಂತಿಹರನು ಬಡಿದೆಚ್ಚರಿಸು.

ಕಚ್ಚಾಡುವವರನು ಕೂಡಿಸಿ ಒಲಿಸು  ಎಂಬ ಕವಿವಾಣಿಯ ಆಶಯದಂತೆ ಕಾರ್ಯ ಪ್ರವೃತ್ತರಾಗೋಣ.

ಕನ್ನಡ ಉಳಿಸಿ ಬೆಳೆಸೋಣ.

ಇತ್ತೀಚಿನ ದಿನಗಳಲ್ಲಿ  ಕನ್ನಡ ನಾಡಿನಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.

ಹಾಗಾಗಿ ನಾವೆಲ್ಲಾ ಅಖಂಡ ಕರ್ನಾಟಕದ ಉಳಿವಿಗಾಗಿ ಹೋರಾಡಬೇಕು. ಇಲ್ಲದಿದ್ದರೆ ಮುಂದೆ ನಮ್ಮ ಭಾಷೆಯನ್ನು ಕಳೆದುಕೊಳ್ಳುವ ಆತಂಕ ಬರುವುದು ಬೇಡ. ಕನ್ನಡ ಭಾಷೆ ಈ ನಾಡಿನ ಸಮಸ್ತ ಕನ್ನಡಿಗರ ಆಸ್ತಿ.

ಕನ್ನಡ ನಾಡು ನುಡಿಯ ಅಭಿಯಾನ ಇಂದಿನ ಜನತೆಯ ನರ ನರಗಳಲಿ ಮಿಡಿಯುವಂತಾಗಲಿ ಎಂದು ಶಾಂತದೇವಿ ಮಾಳವಾಡ ಅಭಿಪ್ರಾಯ ಪಟ್ಟಿದ್ದಾರೆ. 

ಕನ್ನಡ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷಾಭಿಮಾನ, ಭಾಷೆಯ ಬಗ್ಗೆ ಅಪಾರವಾದ ಜ್ಞಾನ, ಭಾಷೆಯನ್ನು ಶ್ರೀಮಂತಗೊಳಿಸುವ, ಮುನ್ನಡೆಸುವ ಇಚ್ಚಾ ಶಕ್ತಿ ಬೇಕು. ಅನ್ಯಭಾಷಿಗರಿಗೆ ಕನ್ನಡ ಕಲಿಸೋಣ. 

ಕನ್ನಡಿಗರೆಲ್ಲರೂ ಕನ್ನಡ ಭಾಷೆಯನ್ನು ಹೆಬ್ಬಾಗಿಲಿನಂತೆ ಬಳಸಿ ಇತರ ಭಾಷೆಗಳನ್ನು. ಗಾಳಿ, ಬೆಳಕಿಗೆ ಬೇಕಾದ ಕಿಟಕಿಗಳಂತೆ ಉಪಯೋಗಿಸಬೇಕು. ಅದರಲ್ಲಿರುವ ಉತ್ತಮಾಂಶಗಳನ್ನು ನಾವು ಸ್ವೀಕರಿಸಬೇಕು.

ಮಗು ಭಾಷೆಯನ್ನು ಅನುಕರಣೆಯ ಮೂಲಕ ಕಲಿಯುತ್ತದೆ. ಆದುದರಿಂದ ಮಗುವಿಗೆ ಮೊದಲು ಮಾತೃಭಾಷೆಯ ಮೂಲಕ ಶಿಕ್ಷಣ ಕೊಡಬೇಕು. ಅಗತ್ಯವಿದ್ದರೆ ಪರಭಾಷೆಯನ್ನು ಕಲಿಸಬೇಕು. ಭಾಷೆ ಮಕ್ಕಳ ಸರ್ವಾಂಗೀಣ ಸಾಧನೆಯಾಗಬೇಕು.  

ಮನೆಯೇ ಮೊದಲ ಪಾಠಶಾಲೆ. ಇಲ್ಲಿಂದಲೇ ಮಕ್ಕಳಿಗೆ ಮಾತೃಭಾಷಾ ಕಲಿಕೆ ಮತ್ತು ಭಾಷಾಭಿಮಾನ ಬೆಳಸುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ ಪಡುವಂತಹ ಕಲಿಕೆಯನ್ನು ಪ್ರೋತ್ಸಾಹಿಸಬೇಕು. ಕನ್ನಡ ಕಲಿಕೆಯನ್ನು ಒತ್ತಾಯವಾಗಿ ಹೇರುವ ಪರಿಸ್ಥಿತಿ ಬದಲಾಗಿ ಕನ್ನಡ ಭಾಷೆ ನಮ್ಮ ತಾಯಿ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂಬ ಭಾವಾನಾತ್ಮಕ ಅಂಶಗಳನ್ನು ಬಿತ್ತುವ ಕಾರ್ಯ ಮಾಡಬೇಕು. ಈ ಕಾಯಕದಲ್ಲಿ ಪ್ರತಿಯೊಬ್ಬ ಕನ್ನಡಿಗನು ಕಂಕಣ ಬದ್ಧವಾಗಿ ಕಾರ್ಯನಿರ್ವಹಿಸಿದರೆ ಕನ್ನಡಿಗರಷ್ಟೆ ಅಲ್ಲದೆ ಇತರರು ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸಿ ಅವರು ಅಳವಡಿಸಿಕೊಳ್ಳಲು ಪ್ರಯತ್ನಿಸುವರು. 

ಇಂದು ಕನ್ನಡದ ಅಭಿವೃದ್ಧಿಯು ಕೇವಲ ನವಂಬರ್ ತಿಂಗಳಲ್ಲಿ ನಡೆದರೆ ಸಾಲದು . ಸಾಮಾನ್ಯ ಪ್ರಜೆಯಿಂದ ಹಿಡಿದು… ವಿಧಾನಸೌಧದವರೆಗೂ ವರ್ಷದಾದ್ಯಂತ ನಡೆಯಬೇಕು. ರಾಷ್ಟ್ರೀಯ ಐಕ್ಯತೆಗೆ ಭಂಗ ಬರದಂತೆ ಕನ್ನಡ ರಾಜ್ಯೋತ್ಸವ ಆಚರಿಸೋಣ. ಅದಕ್ಕಾಗಿ ಕಂಕಣ ಬದ್ಧರಾಗಿ ನಿಲ್ಲೋಣ .

ರಾಷ್ಟ್ರಕವಿ ಕುವೆಂಪುರವರು ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಹಾಡಿ ಹೊಗಳಿದ್ದಾರೆ. ಭಾರತಾಂಬೆ ತಾಯಿಯಾದರೆ ಕನ್ನಡಾಂಬೆ ಮಗಳಾಗಿದ್ದಾರೆ. ಅಮ್ಮ ಮಗಳ ಸಂಬಂಧಕ್ಕೆ ಯಾವುದೇ ತೊಡಕಾಗದಂತೆ ನಾವು ನಮ್ಮ ಹೆಜ್ಜೆಯಿಡಬೇಕು.

ಗಡಿನಾಡೆ ಇರಲಿ …

ನಡುನಾಡೆ ಇರಲಿ…

ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಸಾಧ್ಯವೋ ಅಲ್ಲೆಲ್ಲಾ ..

ಕನ್ನಡದ ಪರಿಮಳವನ್ನು ಚೆಲ್ಲೋಣ. ಕನ್ನಡದ ಕೀರ್ತಿ ಪತಾಕೆ ಹಾರಿಸೋಣ.

ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು …

ಎಲ್ಲೆಡೆ ಮೊಳಗಲಿ ..ಕನ್ನಡದ ನಾದ.. ಕನ್ನಡದ ಪದ .

ಕನ್ನಡವೇ ಸತ್ಯ

ಕನ್ನಡವೇ ನಿತ್ಯ 

ಸಿರಿಗನ್ನಡಂ ಗೆಲ್ಗೆ

ಸಿರಿಗನ್ನಡಂ ಬಾಳ್ಗೆ

ಸರ್ವರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಹೇಮಂತ ಚಿನ್ಬು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕೂಗಿನ ಮಾರಯ್ಯ ಶರಣರ ವಚನಾನುಸಂಧಾನ

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ ಶರ ಚರಿಸುವುದಕ್ಕೆಡೆಯಾಯಿತ್ತು. ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ ವಸ್ತುವನರಿವುದಕ್ಕೆ ಒಡಲಾಯಿತ್ತು.                       ...
- Advertisement -

More Articles Like This

- Advertisement -
close
error: Content is protected !!
Join WhatsApp Group