spot_img
spot_img

ನೆನಪು ಕೆದಕುವ ಆತ್ಮೀಯ ಬರಹ

Must Read

spot_img
- Advertisement -

ಇದು ವಾಟ್ಸಾಪ್ ನಲ್ಲಿ ಬಂದಿದ್ದು ಅಂತ ಮೊದಲೇ ಹೇಳುತ್ತೇನೆ. ಆದರೆ ಎಲ್ಲ ವಯಸ್ಸಿನವರೂ ಓದಬೇಕಾದದ್ದು, ಈ ಕಾಲದವರು ಇರಬೇಕು ಅಂದುಕೊಂಡರೂ ಇರಲಾರದಂಥ ಕ್ಲಿಷ್ಟ ಜೀವನ ಅನುಭವಿಸಿದವರು ಬರೆದ ಒಂದು ನೆನಪು ಕೆದಕುವ ಆತ್ಮೀಯ ಬರಹ.

ನನ್ನ ಈ ಬರಹ  ಇಸವಿ 1950 ರಿಂದ 1965ರ  ನಡುವೆ  ಜನಿಸಿದವರಿಗಾಗಿ.

ಒಂದೆರೆಡು ವರ್ಷ ಆ ಕಡೆ, ಈ ಕಡೆ ಆದರೂ ಪರವಾಗಿಲ್ಲ. ಇಂತಹವರಿಗೆ ನನ್ನ  ನಮನಗಳು. ಏಕೆಂದರೆ ನಾನೂ ಈ ಪೀಳಿಗೆಗೆ ಸೇರಿದವನೇ.

- Advertisement -

ನೀವು ಅನ್ಯಥಾ ಭಾವಿಸಿದರೂ ಸರಿ, ನಮ್ಮದು ವಿಶೇಷ, ಅವಿಸ್ಮರಣೀಯ ಪೀಳಿಗೆ. ನಾವು ಅರವತ್ತರ ಸಮೀಪದವರಿಂದ ಹಾಗೂ ಎಪ್ಪತ್ತು ದಾಟಿದವರವರೆಗೆ ಇದ್ದೇವೆ. ನಮ್ಮ ಪೀಳಿಗೆಯ ಹೆಚ್ಚುಗಾರಿಕೆ ಏನೆಂದರೆ, ಬದಲಾಗುತ್ತಿರುವ ಈ ಕಾಲಮಾನದಲ್ಲಿ ನಮಗೆ ನಾವೇ ಬದಲಾಗುತ್ತಾ ಬದಲಾವಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಬದುಕು ಸಾಗಿಸುತ್ತಿರುವುದು !

ನಾವು ಎಂತಹ ಜನ ಅಂತೆಂದರೆ ಮನೆಯೊಳಗೂ ಅಲ್ಲದೆ, ಹೊರಗೂ ಅಲ್ಲದೆ, ಹೊಸ್ತಿಲ ಮೇಲೆಯೇ ಇಡೀ ‌ಜೀವನವನ್ನು ಸವೆಸುತ್ತಿರುವ ಜನ.

ನಾವು ಕಾಸು, ಆಣೆ, ಪಾವಲಿಗಳನ್ನೂ ನೋಡಿದ್ದೇವೆ, ನಂತರ ನಯಾಪೈಸೆ, ಪೈಸೆಗಳನ್ನೂ ಕಂಡಿದ್ದೇವೆ. ನಾಣ್ಯಗಳೇ ಮಾಯವಾದ ಕಾಲಘಟ್ಟವನ್ನೂ ಮುಟ್ಟಿದ್ದೇವೆ.

- Advertisement -

ನಾವು ಒಂದು ರೀತಿ ಅದೃಷ್ಟವಂತರು. ಏಕೆಂದರೆ ನಾವು ಎಲ್ಲ ರೀತಿಯ ದುಡ್ಡಿನ ಬೆಲೆಯನ್ನೂ ತಿಳಿದವರು.

ಹತ್ತು ಪೈಸೆಗೆ‌ ಒಂದು ಕಪ್ ಕಾಫಿ ಕುಡಿದದ್ದೂ ಉಂಟು ; ಈಗ ಹತ್ತು ರೂಪಾಯಿ ಕೊಟ್ಟು ಅಷ್ಟೇ ಪ್ರಮಾಣದ ರುಚಿಯಿಲ್ಲದ ಕಾಫಿ ಕುಡಿದು ಮುಖ ಸಿಂಡರಿಸಿದುದೂ ಉಂಟು.

ನಾವು ಬರವಣಿಗೆ ಆರಂಭಿಸಿದ್ದು ಬಳಪದಿಂದ ( ಹಾಗೆಂದರೆ ಏನು ಅಂದು ಕೇಳಬೇಡಿ, ಉತ್ತರಿಸಲು ನನಗೂ ಗೊತ್ತಿಲ್ಲ). ನಂತರ ಪೆನ್ಸಿಲ್, ಸ್ಕ್ರೂ ಪೆನ್ಸಿಲ್, ಇಂಕ್ ಪೆನ್, ಕೊನೆಗೆ ಬಾಲ್ ಪೆನ್ ಎಲ್ಲವನ್ನೂ ಬಳಸಿದ್ದೇವೆ.  ಈಗ ಎಲ್ಲಾ ಹೋಯಿತು, ಕೈಗೆ smart phone ಬಂದಿದೆ. ಅಕ್ಷರಗಳು ಮರೆತುಹೋಗುತ್ತಾ ಇವೆ. ಕೆಲವರ ಕೈಗೆ laptop ಕೂಡಾ ಬಂದಿದೆ. ಅದಕ್ಕೇ ನಾನು ಹೇಳಿದ್ದು – ನಾವು ಹೊಸ್ತಿಲ ಮೇಲೆ ನಿಂತ ಜನ ಎಂದು.

ಸೈಕಲ್ ರಿಮ್‌ ಅನ್ನು ‌ತಿರುಗಿಸುತ್ತಾ ಓಡುತ್ತಾ ಇದ್ದ ‌ನಾವು ನಂತರ ಸೈಕಲ್‌ ಗೇ ಬಡ್ತಿ ಪಡೆದೆವು. ಈಗ ಈ ವಯಸ್ಸಿನಲ್ಲೂ ಕಾರ್ ಓಡಿಸಲು ಕಲಿತೆವು.

ಹಾಗೆಂದು ನಾವೇನೂ ಸುಖದ ಸುಪ್ಪತ್ತಿಗೆಯಲ್ಲೇ ನಮ್ಮ ಬಾಲ್ಯವನ್ನು ಕಳೆದಿಲ್ಲ. ಕಷ್ಟ ಕಾರ್ಪಣ್ಯಗಳೂ ಇದ್ದವು. ಎಲ್ಲೋ ಕೆಲವು ಮಂದಿ ಪುಣ್ಯಾತ್ಮರು‌ ಜೀವನದುದ್ದಕ್ಕೂ ಸಿರಿತನದಲ್ಲೇ‌ ಇದ್ದಾರೆ.

ಆದರೆ ನೋಡಿ, ಆಗ‌ ನಾವು ಹೇಗೇ ಇದ್ದರೂ, ಈಗ ಈ ಆಧುನಿಕ ‌ಜೀವನಕ್ಕೆ ಒಗ್ಗಿ ಬಿಟ್ಟಿದ್ದೇವೆ. ನಮ್ಮಲ್ಲಿ  ಕೆಲವರಂತೂ ಮೊದಲಿನಿಂದಲೂ ನಮ್ಮ ಲೈಫ್ ಸ್ಟೈಲ್ ಇದೇನೇ ಎಂದು ಭ್ರಮಿಸುತ್ತಿದ್ದೇವೆ. ಮತ್ತೆ ಹೇಳುತ್ತೇನೆ ನಮ್ಮದೊಂದು ಸುಸಂಸ್ಕೃತ ಪೀಳಿಗೆ.

ರೇಡಿಯೋ, ಟ್ರಾನ್ಸಿಸ್ಟರ್, ಗಳಲ್ಲಿ ಸಂಗೀತ ಕೇಳಲು ಸುರು ಮಾಡಿದ ನಾವು, M.P. player, DVD player ಹಂತ ದಾಟಿ, home theatre ಅನ್ನು ತಲುಪಿದ್ದೇವೆ.‌ ಆದರೆ ಕೇಳುವುದು ಮಾತ್ರ ‌ಅದೇ ಎಂ.ಎಸ್.ಸುಬ್ಬುಲಕ್ಷ್ಮಿ, ಬಾಲಮುರಳಿಕೃಷ್ಣರನ್ನೇ. ಹಳೆಯ ಪಿ.ಬಿ.ಶ್ರೀನಿವಾಸ್ ‌ಜಮಾನಾದ‌ ಹಳೆಯ ಸಿನಿಮಾ ಹಾಡುಗಳನ್ನೇ.‌  ಇಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ.

ಸೈಕಲ್ ನ ಹಳೆಯ ಟೈರ್ ಅನ್ನೇ ಆಟದ ಚಕ್ರದಂತೆ  ಬಳಸುತಿದ್ದ ನಮ್ಮ ಪೀಳಿಗೆ. ಅದು ಬಡವ, ಬಲ್ಲಿದ ಇಬ್ಬರಿಗೂ ಇಷ್ಟವೇ ಆಗಿತ್ತು.

ಬೇಸಿಗೆ ದಿನಗಳಲ್ಲಿ, ಮಾವಿನ ಮರದಿಂದ  ಮಾವಿನ ಕಾಯಿ ಕದಿಯುವುದು ನಮಗೆ ಎಂದೂ ಕಳ್ಳತನ  ಅನಿಸಿರಲೇ ಇಲ್ಲ.

ನಾವು‌ ಯಾವಾಗ ಬೇಕಾದರೂ ನಮ್ಮ ಗೆಳೆಯರ ಮನೆಗೆ ಹೋಗುತ್ತಿದ್ದೆವು. ಅವರ ಜೊತೆ  ಹರಟೆ, ಊಟ, ಆಟ ಆಡುವುದು… ಇದಕ್ಕೆಲ್ಲಾ ಯಾವುದೇ time table ಇರಲಿಲ್ಲ. ‌

ಶಾಲೆಯಲ್ಲಿ ಅಥವಾ ನಮ್ಮ ಮನೆಗಳ ಓಣಿಗಳಲ್ಲಿ, ಪರಸ್ಪರ ಎದುರಾದಾಗ‌  ಅಕ್ಕನ ಗೆಳತಿಯರ ಜೊತೆ ಮನ ಬಿಚ್ಚಿ ಹರಟೆ ಹೊಡೆಯುತ್ತಿದ್ದೆವು. ನಮಗೆ ಎಂತಹ ನಾಚಿಕೆ, ಕೆಟ್ಟ ಭಾವನೆ ಇರುತ್ತಿರಲಿಲ್ಲ. ಇದೇ ಈ ಪೀಳಿಗೆಯ ವಿಶೇಷವಾಗಿತ್ತು.  ಮನೆಯ ಹಿರಿಯರೂ ಏನೂ ಆಕ್ಷೇಪ ಮಾಡುತ್ತಿರಲಿಲ್ಲ.

ನಮ್ಮ ರಸ್ತೆಯಲ್ಲಿ ಯಾರದೇ  ಮನೆಯಲ್ಲಿ ಮದುವೆ, ಮುಂಜಿ ಅಥವಾ ಇನ್ನಿತರ  ಹಬ್ಬ ಹರಿದಿನಗಳಲ್ಲಿ ಯಾವ ಸಂಕೋಚವಿಲ್ಲದೆ ಅವರ ಮನೆಗಳಲ್ಲಿ  ದುಡಿಯುವುದು ಒಂದು ಹೆಮ್ಮೆಯ ಸಂಗತಿ ಆಗಿತ್ತು.

ಶಾಲೆಯ interval ವೇಳೆಯಲ್ಲಿ ಜೂಟಾಟ, ಐಸ್ ಪೈಸ್, ಗುಲ್ಟೋರಿಯಾ ಆಡೋದು ಅಂದರೆ ಏನು ಮಜಾವಾಗಿರುತ್ತಿತ್ತು ಗೊತ್ತಾ ?

ಸಂಜೆಯ ಹೊತ್ತು ನಾವು ಗೆಳೆಯರೆಲ್ಲಾ ನಮ್ಮ ನಮ್ಮಲ್ಲೇ ಎರಡು ಟೀಮ್ ಮಾಡಿಕೊಳ್ಳುತ್ತಿದ್ದೆವು. ಒಂದು ಎಂ.ಜಿ.ಆರ್. ಪಾರ್ಟಿ, ಇನ್ನೊಂದು ವೀರಪ್ಪನ್ ಪಾರ್ಟಿ. ಸರಿ, ಎರಡು ಟೀಮ್ ಗಳಿಗೂ ಯುದ್ಧ. ಯಾರೂ ಸೋಲುತ್ತಿರಲಿಲ್ಲ, ಗೆಲ್ಲುತ್ತಿರಲಿಲ್ಲ. ಹೀಗಿತ್ತು ನೋಡಿ ಸಿನೆಮಾ ಪ್ರಭಾವ ನಮ್ಮ ಮೇಲೆ.

ಇನ್ನು ಹೆಣ್ಣು ಮಕ್ಕಳಾದರೋ 10,20,30…..ಅಂತ ಕಣ್ಣು ಮುಚ್ಚಿ, ಮುಖ ಆ ಕಡೆ ಮಾಡಿ ಕೂಗಿ.. ಬಂದೇ.. ಎನ್ನುತ್ತ ಕಣ್ಣಾ ಮುಚ್ಚಾಲೆ ಆಡೋದು.. ಅವರ  ಆಟ ಆಗಿತ್ತು.

ಆಗ ನಮಗೆ ಗಂಭೀರವಾದ ಚರ್ಚೆ ಅಂದರೆ  ಪಟೌಡಿ, ಚಂದೂ ಬೋರ್ಡೆ, ಸಲೀಮ್ ದುರಾನಿ, ದಿಲೀಪ್ ‌ಸರ್ದೇಸಾಯಿ ಇವರನ್ನು ಕುರಿತೇ ಆಗಿರುತ್ತಿತ್ತು. ಸ್ವಲ್ಪ ‌ಕಾಲಾನಂತರ ಇವರ ಸ್ಥಾನವನ್ನು  ಗವಾಸ್ಕರ್, ವಿಶ್ವನಾಥ್ ಆಕ್ರಮಿಸಿಕೊಂಡರು.‌  ವಿಷಯ ಅದೇ-  ಇವರ ಆಟದ ಚರ್ಚೆ .. ಈ ಇಬ್ಬರಲ್ಲಿ ಯಾರು ಶ್ರೇಷ್ಠ ರು…? ಇದರ ಬಗ್ಗೆ ಗಂಟೆ ಗಟ್ಟಲೆ ಚರ್ಚೆ  ಆಗುತಿತ್ತು… ಆದರೆ ಯಾವ ನಿರ್ಣಯವೂ ಆಗುತ್ತಿರಲಿಲ್ಲ. ಮಾರನೆಯ ದಿನವೂ ಇದೇ ಚರ್ಚೆ. ನಮಗೆ ಬೇಜಾರೇ ಆಗುತ್ತಿರಲಿಲ್ಲ.

ಇನ್ನು ಸಿನೆಮಾ ವಿಷಯಕ್ಕೆ ಬಂದರೆ ರಾಜ್ ಕಪೂರ್, ದಿಲೀಪ್ ಕುಮಾರ್, ದೇವಾನಂದ್, ಎಂ.ಜಿ.ಆರ್., ಶಿವಾಜಿ ಗಣೇಶನ್ ಇವರುಗಳೇ ನಮ್ಮ ಆರಾಧ್ಯ ದೈವ. ನಂತರ ಬಂದವರು, ಧರ್ಮೇಂದ್ರ, ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್.

ಕನ್ನಡದ ರಾಜ್ ಕುಮಾರ್ ಹೆಸರು ಮೇಲಕ್ಕೆ ಬರುವ ವೇಳೆಗೆ ನಾವು ಬಾಲ್ಯ ಕಳೆದುಕೊಂಡು ಪ್ರೌಢರಾಗಿದ್ದೆವು ( ವಯಸ್ಸಿನಲ್ಲಿ ಮಾತ್ರ). Blackನಲ್ಲಿ ಟಿಕೆಟ್ ಕೊಂಡು ಸಿನೆಮಾ ನೋಡುತ್ತಿದ್ದ ನಾವು ಬಾಡಿಗೆಗೆ VCR ತಂದು  ಒಂದೇ ರಾತ್ರಿ ಮೂರು/ನಾಲ್ಕು‌‌‌ ಸಿನೆಮಾ ನೋಡುವ ಹುಚ್ಚಿಗೆ ತಲುಪಿದ್ದೆವು.

ನಮ್ಮ ಜಮಾನಾದ ಸಮಾನ ಗುಣ ಧರ್ಮ ಏನೆಂದರೆ, ನಮ್ಮ ಟೀಚರ್ಸ್ ನಮಗೆ ಎಷ್ಟೇ ಹೊಡೆದಿದ್ದರೂ, ನಾವು ಮನೆಯಲ್ಲಿ ದೂರು ಹೇಳುತ್ತಿರಲಿಲ್ಲ.( ಇದರಲ್ಲಿ ನನಗೆ ಮಾತ್ರ ರಿಯಾಯಿತಿ ಇತ್ತು. ‌ಯಾರೂ ನನಗೆ ಹೊಡೆಯುತ್ತಿರಲಿಲ್ಲ. ಏಕೆಂದರೆ ನಾನು ಮೇಷ್ಟ್ರ ಮಗ).

ನಮ್ಮ ಪೀಳಿಗೆಯ ಅಂದಿನ ದಿನಗಳಲ್ಲಿ ಅನೇಕರ ಮನೆಗಳಲ್ಲಿ ಪಾಲಕರು ಮಕ್ಕಳಿಗೆ (ನಮಗೆ) ಭಗವದ್ಗೀತೆ, ಅಮರಕೋಶ ಬಾಯಿಪಾಠ ಮಾಡಿಸುತ್ತಿದ್ದರು. ನಮಗೆ ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಕಲಿಯುತ್ತಿದ್ದೆವು.

ಇಂತಹ ಜಮಾನಾದಲ್ಲಿ ಹುಟ್ಟಿದ್ದರಿಂದಲೇ ನಮ್ಮದು ವಿಶೇಷ ಪೀಳಿಗೆ.

ಈಗ ಇದೆನ್ನೆಲ್ಲಾ ನೆನಸಿಕೊಂಡರೆ… ಕನಸೋ, ಭ್ರಮೆಯೋ, ಅಥವಾ ಶಿವಲೀಲೆಯೋ ! ಹೀಗೆಂದು ಅನಿಸುತ್ತದೆಯಲ್ಲವೇ ?
ಆದರೆ ಇಂದಿನ ಪೀಳಿಗೆ ಮಾತ್ರ ರೀಲ್ ಬಿಡ್ತಿದ್ದಾನೆ, ಸುತ್ಕೊಳ್ಳಿ ಎಂದು ಗೇಲಿ ಮಾಡುತ್ತಿದ್ದಾರೆ.

ಯಾರು ನಂಬದಿರಲಿ, ಗೇಲಿ ಮಾಡಲಿ, ನಮಗೆ ಮಾತ್ರ ಒಂದು ರೀತಿ ಧನ್ಯತಾಭಾವ, ಹೆಮ್ಮೆ ಇದೆ. ಏಕೆಂದರೆ ನಾವು ಆ ವಿಶೇಷ ಪೀಳಿಗೆಗೆ ಸೇರಿದವರು.ನೆನಪಿಗೆ ಬರುತ್ತಿದೆ Charles Lambನ “Old familiar faces “.


ವಾಟ್ಸಾಪ್ ಕೃಪೆ

- Advertisement -
- Advertisement -

Latest News

ರವಿರಾಜ ಗಲಗಲಿಗೆ ಪ್ರಶಸ್ತಿ

ಬಾಗಲಕೋಟೆ :ಅತ್ಯುತ್ತಮ "ಮಾನವೀಯ ವರದಿಗೆ" ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪಟೇಲ್ ಭೈರಹನುಮಯ್ಯ ಪ್ರಶಸ್ತಿಯು ಬಾಗಲಕೋಟೆ ಜಿಲ್ಲಾ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ರವಿರಾಜ ಗಲಗಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group